ಹೋಗುನು ಉಳವಿ ಜಾತ್ರಿಗೆ
ಚೆನ್ನ ಬಸವಗ ಶಿರಬಾಗಿ
ನಡಿಬೇಕ ಶಿರಬಾಗಿ
ಇಂಥಾ ಸದ್ದುಳ್ಳ ಶರಣರಿಗೆ
ಮರಗಬ್ಯಾಡ ನೀ ಕೊರಗಿ ತಮ್ಮಾ
ಹೋಗುನು ನಡಿ ಉಳವಿ ಜಾತ್ರಿಗೆ….

ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲ್ಲೂಕಿನ ಸೂಪಾದ ದಕ್ಷಿಣಕ್ಕೆ ೩೫ ಕಿ.ಮೀ ದೂರ ಮತ್ತು ಯಲ್ಲಾಪುರಕ್ಕೆ ಸಮೀಪದಲ್ಲಿರುವ ಒಂದು ಪುಟ್ಟ ಗ್ರಾಮ. ಪುರಾತನ ಸ್ಥಳವಾಗಿದ್ದು, ದುರ್ಗಮ ಪ್ರದೇಶ ಹೊಂದಿದೆ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ.

ಉಳವಿ ಕ್ಷೇತ್ರದ ಬಗ್ಗೆ ದಂತ ಕಥೆಗಳು ಸತ್ಯ ಅಸತ್ಯಗಳ ಪರಾಮರ್ಶೆಗೆ ಒಳಪಡದೆ ಮೊದಲಿನಿಂದಲೂ ನಂಬಿ ಬಂದಿರುವ ನಂಬಿಕೆಗಳಿಗೆ ಇಂಬು ಕೊಡುವಂತಿವೆ. ಪುರಾಣಗಳು, ಭಗವಾನ್ ಶಿವನ ಹಲವಾರು ಕಥೆಗಳನ್ನು ಓದಿದ್ದೆವೆ ಹಾಗೂ ಬಹಳ ಭಕ್ತಿಯಿಂದ ಪ್ರಾರ್ಥಿಸಿದಾಗ ಸುಲಭವಾಗಿ ಭಗವಂತ ಒಲಿಯುವನೆಂದು ಹಿರಿಯರಿಂದ ಆಲಿಸಿದ್ದೆವೆ. ಅಂತೆಯೇ, ಲಂಕಾದ ಹತ್ತು ತಲೆಯ ಶಿವನ ಭಕ್ತ ಮತ್ತು ರಾಕ್ಷಸನಾದ ರಾವಣನ ಪ್ರಾರ್ಥನೆಯಿಂದ ತೃಪ್ತನಾದ ಶಿವನು ಅವನಿಗೆ ತನ್ನ ಆತ್ಮಲಿಂಗವನ್ನು ಅನುಗ್ರಹಿಸಿದನು. ಉಳವಿಯ ಶ್ರೀಚನ್ನಬಸವೇಶ್ವರರ ದರ್ಶನಕ್ಕೆ ಬರುವ ಭಕ್ತರು ಗುಹೆಯಲ್ಲಿರುವ ಆತ್ಮಲಿಂಗವು ರಾವಣನಿಗೆ ನೀಡಿದ ಶಿವನ ಆತ್ಮಲಿಂಗವೆಂದು ನಂಬಿದ್ದಾರೆ. ರಾವಣನು ಗೋಕರ್ಣಕ್ಕೆ ಹೋಗುವಾಗ ಇಲ್ಲಿ ಆತ್ಮಲಿಂಗವನ್ನು ಪೂಜಿಸಿದ್ದ ಎಂಬ ಬಲವಾದ ನಂಬಿಕೆ ಸ್ಥಳೀಯರಲ್ಲಿದೆ.

ಹೈದರಿನಿಗಿಂತ ಪೂರ್ವದಲ್ಲಿ ಈ ಪ್ರದೇಶವನ್ನು ಒಬ್ಬ ಹರಿಜನ ಆಳುತ್ತಿದ್ದ. ವೀರಭದ್ರ ಹೊಂಡದ ಹತ್ತಿರ ಇರುವ ಆತನ ಮನೆಯನ್ನು ಇಂದೂ ಗುರುತಿಸಬಹುದು. ಹೈದರ್ ಈತನನ್ನು ಗೆದ್ದು ಈ ಪ್ರದೇಶವನ್ನು ತನ್ನ ವಶಕ್ಕೆ ತೆಗೆದು- ಕೊಂಡ ಎಂಬ ಪ್ರತೀತಿಯಿದೆ.

ಟಿಪ್ಪುವಿನ ತರುವಾಯ ಬಾರ್ಡೆ ಬಾಬುರಾವ್ ಎಂಬಾತ ಇಲ್ಲಿ ತುಂಬ ಪ್ರಭಾವ ಬೀರಿದ. ಆತ ಕಟ್ಟಿಸಿದ ಒಂದು ಸಣ್ಣ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಇದೆ ಸಮೀಪದಲ್ಲಿರುವ ಬಾಝೂರ ಕುಣಂಗ ಎಂಬ ಹಳ್ಳಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು ಎಂಬ ಉಲ್ಲೇಖವಿದೆ.

ಉಳವಿ ಕ್ಷೇತ್ರದ ವ್ಯಾಪ್ತಿಯಲ್ಲಿ ದುರ್ಗಮ ಕಾಡಿದ್ದು, ಇದು ಕಾಡುಪ್ರಾಣಿಗಳ ಅಭಯ ಕ್ಷೇತ್ರವೆಂದರೆ ತಪ್ಪಿಲ್ಲ. ಉಳವಿ ಬಗ್ಗೆ ಮಾಹಿತಿ ಕಲೆಹಾಕುತ್ತ ಹೋದಂತೆಲ್ಲ, ಉಳುವಿ ಶಬ್ದದ ಅರ್ಥ “ನಾನು ಇಲ್ಲಿ ಉಳಿಯುವೆ” ಎಂದಾಗುತ್ತದೆ. ಆದರೆ ಇದರ ಬಗೆಗೆ ಇತಿಹಾಸದಲ್ಲಿ ಸ್ಪಷ್ಟವಿಲ್ಲ. ಒಂದಿಷ್ಟು ಅಂಶಗಳನ್ನು ಗಮನಿಸಿದಾಗ, ೧೨ನೇ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ನಂತರ ಯಲ್ಲಾಪುರ ಮತ್ತು ಗಣೇಶನ ಗುಡಿ ಮಾರ್ಗವಾಗಿ‌ ಉಳುವಿಯನ್ನು ಪ್ರವೇಶಿಸಿದರು. ಆ ಕಾಲದಲ್ಲಿ ಇದಕ್ಕೆ “ವೃಶಾಪುರ” ಎನ್ನಲಾಗುತ್ತಿತ್ತು. ವಲಸೆ ಬಂದ ಶರಣರ ಮಾರ್ಗದರ್ಶಿ ಗಳಾದ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶಿವಶರಣರೂ, ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ಲಿಂಗಾಯತ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಲಿಂಗಾಯತ ಧರ್ಮದ ಪ್ರಚಾರ ಕೈಗೊಳ್ಳಲಾಯಿತೆಂಬ ಪ್ರತೀತಿಯಿದೆ.

12 ನೇ ಶತಮಾನದಲ್ಲಿ, ಕಲ್ಯಾಣದಲ್ಲಿ ರಾಜನಾಗಿದ್ದ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ ಬಸವೇಶ್ವರರು ಸಾಮ್ರಾಜ್ಯದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರತೊಡಗಿ ದರು. ಬಸವೇಶ್ವರರ ವಿರುದ್ಧ ಇದ್ದ ಕೆಲವು ಮಂತ್ರಿಗಳು ಇದನ್ನು ಬಸವೇಶ್ವರರ ಪ್ರತಿಷ್ಠೆಗೆ ಕಳಂಕ ತರಲು ಉತ್ತಮ ಅವಕಾಶವೆಂದು ಭಾವಿಸಿದರು ಮತ್ತು ರಾಜನಿಗೆ ತಪ್ಪು ಮಾರ್ಗದರ್ಶನ ಮಾಡಿದರು.ರಾಜನು ಶಿವಶರಣರೆಂದು ಕರೆಯಲ್ಪಡುತ್ತಿದ್ದ ಶ್ರೀಬಸವೇಶ್ವರರನ್ನು ಮತ್ತು ಅವರ ಅನುಯಾಯಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾರಂಭಿಸಿ ದನು. ಬಸವಣ್ಣ ಮತ್ತು ಅವರ ಅನುಯಾಯಿಗಳು ಸುರಕ್ಷಿತ ಸ್ಥಳಗಳ ಹುಡುಕಾಟದಲ್ಲಿ ಬಲವಂತವಾಗಿ ಹೊರ ನಡೆದರು. ಶ್ರೀಬಸವೇಶ್ವರರು ಕೂಡಲಸಂಗಮವನ್ನು ತಮ್ಮ ವಾಸಸ್ಥಾನವಾಗಿ ಆರಿಸಿಕೊಂಡರು ಮತ್ತು ಅಂತಿಮವಾಗಿ ಅಲ್ಲಿಯೇ ಮಹಾಸಮಾಧಿಯನ್ನು ಹೊಂದಿದರು. ಅವರ ಭಕ್ತರಿಂದ ರಚಿಸಲ್ಪಟ್ಟ ವಿವಿಧ ಗುಂಪುಗಳು ದೇಶದಾದ್ಯಂತ ಅನೇಕ ದಿಕ್ಕುಗಳಲ್ಲಿ ಹರಡಿತು.

ಚೆನ್ನಬಸವಣ್ಣ, ೧೨ನೇ ಶತಮಾನದ ವಚನಕಾರರು. ಇವರು ಬಸವಣ್ಣನ ಅಕ್ಕ ನಾಗಲಾಂಬಿಕೆ ಮತ್ತು ಶಿವ ಸ್ವಾಮಿಯ ಪುತ್ರ. ಕ್ರಿ.ಶ.೧೧೪೪ರಲ್ಲಿ ಜನನ ಎಂದು ಸಿಂಗಿರಾಜ ಪುರಾಣದಲ್ಲಿ ಉಲ್ಲೇಖವಿದೆ. ೧೧೭೪ ವಚನಗಳನ್ನು ರಚಿಸಿರುವ ಚೆನ್ನಬಸವಣ್ಣನವರು ಕಲ್ಯಾಣ ಕ್ರಾಂತಿಯ ನಂತರದಲ್ಲಿ ವಚನಗಳ ಸಂಗ್ರಹವನ್ನು ಹೊತ್ತು ಕಲ್ಯಾಣ ದಿಂದ ಉಳವಿಗೆ ತೆರಳಿದರು.ಚೆನ್ನಬಸವಣ್ಣನವರ ಶ್ರಮದ ಫಲವಾಗಿ, ವಚನಸಂಗ್ರಹ ಇಂದಿಗೂ ಉಳಿದಿದೆ. ಷಟ್ ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖ ವಚನಕಾರರು.

“ಅಂಗದ ಮೇಲೊಂದು ಲಿಂಗವು
ಲಿಂಗದ ಮೇಲೊಂದು ಅಂಗವು.
ಆವುದು ಘನವೆಂಬೆ ? ಆವುದು ಕಿರಿದೆಂಬೆ ?
ತಾಳೋಷ್ಠಸಂಪುಟಕ್ಕೆ ಬಾರದ ಘನ
ಉಭಯಲಿಂಗವಿರಹಿತವಾದ ಶರಣ.
ಕೂಡಲಚೆನ್ನಸಂಗಾ ಲಿಂಗೈಕ್ಯವು”.

ಬಸವಣ್ಣನ ಸೋದರಳಿಯ ಚನ್ನಬಸವಣ್ಣ, ಅವರ ತಾಯಿ ಅಕ್ಕನಾಗಮ್ಮ ಮತ್ತು ಹಲವಾರು ಶಿಷ್ಯರೊಂದಿಗೆ ಕಲ್ಲಿನ ಪರ್ವತ ಭೂಪ್ರದೇಶವನ್ನು ದಾಟಿದ ನಂತರ ಉಳವಿಗೆ ಆಗಮಿಸಿದರು. ಬೆಟ್ಟಗಳು ಅವರಿಗೆ ಆಶ್ರಯವನ್ನು ಒದಗಿಸಿದವು. ಬಂಡೆಗಳು ಮತ್ತು ಗುಹೆಗಳು ರಕ್ಷಣೆಯಾಗಿ ಕಾರ್ಯನಿರ್ವಹಿಸಿದವು ಮತ್ತು ಅವರ ಪವಿತ್ರ ವಚನಗಳ ಗ್ರಂಥಗಳನ್ನು ಅವುಗಳ ಹಿಂದೆ ಇದ್ದ ಬಿಜ್ಜಳನ ಪಡೆಗಳಿಂದ ರಕ್ಷಿಸಿದವು.ಶೀಘ್ರದಲ್ಲೇ ಚನ್ನಬಸವಣ್ಣನವರ ಬೋಧನೆ ಗಳು ಸ್ವೀಕಾರವನ್ನು ಗಳಿಸಿದವು ಮತ್ತು ದೂರದಿಂದಲೂ ಅನುಯಾಯಿಗಳನ್ನು ಆಕರ್ಷಿಸಿದವು. ಚನ್ನಬಸವಣ್ಣನ ಕಾಲದ ಹಲವು ವರ್ಷಗಳ ನಂತರ ಉಳವಿಯಲ್ಲಿ ಅವರಿಗೆ ಸಮರ್ಪಿತ ವಾದ ಸಮಾಧಿ ಮತ್ತು ದೇವಾಲಯವನ್ನು ನಿರ್ಮಿಸಲಾಯಿತು ಮತ್ತು ಇದು ಕರ್ನಾಟಕದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ.

ಚನ್ನಬಸವಣ್ಣನವರ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.ಅವರು ಬರುವ ಅರಣ್ಯ ದಾರಿಗಳು, ಉಳವಿ ಅಣಶಿ ಘಟ್ಟದ ಹಾಗೂ ಸೂಪಾದ ಮೇಲಿಂದ ಇಲ್ಲಿಗೆ ಬರಲು ಎರಡು ಅರಣ್ಯ ಮಾರ್ಗಗಳಿವೆ. ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ವೀರಶೈವ ಸಾಧುಗಳದಾಗಿರಬೇಕು. ಒಂದಕ್ಕೆ ಬಸವಣ್ಣನವರ ಸಹೋದರಿ ಎನ್ನಲಾದ ಅಕ್ಕನಾಗಮ್ಮನ ಗವಿ ಎನ್ನುತ್ತಾರೆ. ವಡ್ಕಲದಲ್ಲಿ ಒಂದು ಹಳೆಯ ಕಟ್ಟಡವಿದೆ. ಇದರ ಬದಿಗೆ ಕೆರೆಯಿದ್ದು ಸದಾಕಾಲ ನೀರು ತುಂಬಿರುತ್ತದೆ. ಪೂರ್ವಕ್ಕೆ ಇನ್ನೊಂದು ಕೆರೆಯಿದೆ. ಇದರಲ್ಲಿ ಸದಾಕಾಲ ನೀರಗುಳ್ಳೆಗಳು ಮೇಲಕ್ಕೆ ಬರುತ್ತಿರುತ್ತವೆ ಇದಕ್ಕೆ ಹರಳಯ್ಯನ ಚಿಲುಮೆ ಎಂದು ಕರೆಯುತ್ತಾರೆ,ಯಾತ್ರಿಕರು ಈ ಚಿಲುಮೆಯಲ್ಲಿ ಸ್ನಾನ ಮಾಡುತ್ತಾರೆ.

ಉಳವಿ ಚೆನ್ನಬಸವಣ್ಣನ ದೇವಾಲಯದ ಒಳ ನೋಟ

ಉಳವಿ ಚನ್ನಬಸವೇಶ್ವರ ದೇಗುಲವು ಗುಡ್ಡಗಾಡು ಮತ್ತು ಕಲ್ಲಿನ ಭೂಪ್ರದೇಶದ ಮಧ್ಯದಲ್ಲಿದೆ. ದೇಗುಲದ ಮುಂಭಾಗದಲ್ಲಿ ಮೊದಲು ಕಣ್ಣಿಗೆ ಬೀಳುವುದು ಕಮಲದ ಹೂವುಗಳಿಂದ ತುಂಬಿರುವ ಸುಂದರವಾದ ಕೊಳ.  ಭಾರತದಾದ್ಯಂತ ಭಕ್ತರು ತಮ್ಮ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಲು ಕೊಳದ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಇಲ್ಲಿಗೆ ಬರುತ್ತಾರೆ.

ದೇಗುಲದ ಹೊರಭಾಗದಲ್ಲಿರುವ ಮಂಟಪವನ್ನು ಆಕರ್ಷಕ ವಾಗಿ ಅಲಂಕರಿಸಲಾಗಿದೆ. 23 ಶರಣರನ್ನು ಚಿತ್ರಿಸಿರುವ ಸೂಕ್ಷ್ಮವಾಗಿ ಕಾಣುವ ಗೋಪುರವೂ ಸಹ ಅಲಂಕಾರಿಕ ಅಂಶಗಳಿಂದ ಅಲಂಕರಿಸಲ್ಪಟ್ಟಿದೆ. ಗರ್ಭ ಗುಡಿಯ ಬಾಗಿಲು ಪೂರ್ವಕ್ಕಿದ್ದರೆ ಗರ್ಭಗುಡಿಯ ಪೂರ್ವ ಮತ್ತು ದಕ್ಷಿಣಕ್ಕೆ ಬಾಗಿಲುಗಳಿವೆ. ಪೂರ್ವಾಭಿಮುಖವಾಗಿ ರುವ ಮಹಾಸಮಾಧಿಗೆ ದಿನಕ್ಕೆ ಮೂರು ಬಾರಿ ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ. ಸಮಾಧಿಯಮೇಲೆ ನಂದಿಯ ಮುಖವನ್ನು ಕಾಣಬಹುದು. ಚನ್ನಬಸವಣ್ಣನ ಸಮಾಧಿಯ ಎಡಭಾಗದಲ್ಲಿ ಸಂಗಮೇಶ್ವರ ದೇವರು ಮತ್ತು ಬಲಭಾಗದಲ್ಲಿ ಮಲ್ಲಿಕಾರ್ಜುನ ದೇವರು. ಮಲ್ಲಿಕಾರ್ಜುನನ ಬಲ ಭಾಗ ದಲ್ಲಿ ಬಸವಣ್ಣನವರ ಗುಡಿ ಇದೆ. 

ದೇವಾಲಯದ ಸಮೀಪವಿರುವ ಒಂದು ಗುಹೆಯು ಇಲ್ಲಿ ತಪಸ್ಸು ಮಾಡಿದ ಅರ್ಪಿತ ಭಕ್ತೆಯಾದ ಅಕ್ಕ ನಾಗಮ್ಮ ನವರ ಹೆಸರನ್ನು ಇಡಲಾಗಿದೆ. ಅವರು ಬಸವಣ್ಣನವರ ಸಹೋದರಿ ಮತ್ತು ಚನ್ನಬಸವಣ್ಣನವರ ತಾಯಿ ವೀರಶೈವ ತತ್ವಶಾಸ್ತ್ರದ ಷಟ್ಪದಿ ಪದ್ಧತಿಯ ಪ್ರಚಾರಕರು. ಉಳವಿಯ ಚನ್ನ ಬಸವೇಶ್ವರ ದೇವಾಲಯದ ಸಂಕೀರ್ಣದ ಸುತ್ತಲೂ ವಿಭೂತಿ ಕಣಜದಂತಹ ಕೆಲವು ಗುಹೆಗಳಿವೆ, ಇದರರ್ಥ ಪವಿತ್ರ ಬೂದಿಯನ್ನು ಇಡುವ ಸ್ಥಳ. ಈ ರಚನೆಯನ್ನು ಸುಣ್ಣದ ಕಲ್ಲಿನಿಂದ ಮಾಡಲಾಗಿದೆ. ಅಕ್ಕನಾಗಮ್ಮನ ಗವಿ ಮತ್ತು ರುದ್ರಾಕ್ಷಿ ಮಂಟಪದಂತಹ ಇತರ ಗುಹೆಗಳಿವೆ. ಕೊನೆಯ ಮುಖ್ಯ ಗುಹೆ ಅಕಾಲ ಗವಿ.ಈ ಗವಿ ಎತ್ತರದಲ್ಲಿದೆ. ಕಬ್ಬಿಣದ ಏಣಿಯನ್ನು ಹತ್ತಿ ಗುಹೆಯನ್ನು ಪ್ರವೇಶಿಸಬೇಕು. ಉಳವಿಯು ಪಶ್ಚಿಮ ಘಟ್ಟಗಳಲ್ಲಿದ್ದು ಇಲ್ಲಿನ ದಟ್ಟವಾದ ಕಾಡುಗಳಲ್ಲಿ ಹುಲಿ, ಕಪ್ಪುಚಿರತೆ, ಆನೆ, ಸಾರಂಗ, ಜಿಂಕೆ ನಾಗರಹಾವು, ಕಾಳಿಂಗ ಸರ್ಪ ಮತ್ತು ಇತರ ಹಲವಾರು ವನ್ಯಜೀವಿಗಳಿವೆ.

ಉಳವಿಯ ಚನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಮಾಘ ಪೂರ್ಣಿಮೆಯಂದು ಆಚರಿಸುವರು. ಉಳವಿ ಜಾತ್ರೆಯು ಹತ್ತು ದಿನಗಳ ಕಾಲ ಕರ್ನಾಟಕ ದಾದ್ಯಂತದ ಯಾತ್ರಾರ್ಥಿಗಳನ್ನು ತನ್ನತ್ತ ಆಕರ್ಷಿಸುತ್ತದೆ.ಪಂಚಮಸಾಲಿ ಲಿಂಗಾಯತ ಸಮುದಾಯ ದವರು ಚೆನ್ನಬಸವಣ್ಣನನ್ನು ತಮ್ಮ ಆರಾಧ್ಯ ದೈವವೆಂದು ನಂಬಿದ್ದು ಭಕ್ತ ಸಮೂಹ ಇಲ್ಲಿಗೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿಯ ವಿಶೇಷ ಆಕರ್ಷಣೆ ವಾರ್ಷಿಕ ರಥೋತ್ಸವ. ಅಲ್ಲದೆ 02 ವಾರಗಳು ಸಾಂಸ್ಕೃತಿಕ, ಜಾನಪದ ಕಲೆಗಳು, ಶರಣ ವಾಚನದ ಆಧ್ಯಾತ್ಮಿಕ ಪ್ರವಚನ, ಸಂಗೀತ ಮತ್ತು ಭಜನಾ ಕಾರ್ಯಕ್ರಮ ಗಳು ಅವ್ಯಾಹತವಾಗಿ ನಡೆಯುತ್ತವೆ. ಇಂಥಹ ಸಾತ್ವಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಆಗಮಿಸಿ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಈ ಸಂದರ್ಭ ದಲ್ಲಿ ಕುಸ್ತಿ ಸ್ಪರ್ಧೆಯು ಒಂದು ದೊಡ್ಡ ಆಕರ್ಷಣೆಯಾಗಿದೆ.

ಅಂತರಂಗದ ಅರಿವು
ಬಹಿರಂಗದ ಕ್ರಿಯೆ- ಈ ಉಭಯಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ
ಹಿಂಗಿತ್ತು ಮನಸೂತಕ. ಕೂಡಲಚೆನ್ನಸಂಗಯ್ಯಲ್ಲಿ ಸಂಗವಾದುದು ಸರ್ವೇಂದ್ರಿಯ.

ಇಂತಹ ಮನಸ್ಸು ಸಮಾಧಾನ ಹಾಗೂ ನಿರ್ಮೋಹದಿಂದ ಬಯಸುವ ಭಕ್ತಿ ಪರಮಾತ್ಮನಿಗೂ ಅರ್ಪಿತವಾಗುತ್ತದೆ. ಹಾಗೆಯೇ ಸಂತರ ಶರಣರ ಸಂಘದಿಂದ ಮೂರ್ತದಿಂದ ಅಮೂರ್ತದೆಡೆಗೆ ಸಾಗಲು ಅವಕಾಶ ದೊರಕಿದಂತೆ. ಶರಣರು ಬಾಳಿದ್ದು ಲೋಕದ ಉದ್ಧಾರಕ್ಕಾಗಿ. ಅವರ ನಡೆನುಡಿಗಳನ್ನು ಅನುಸರಿಸುತ್ತ ಬಾಳುವ ಭಾಗ್ಯ ನಮ್ಮದಾಗಬೇಕು.

✍️ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ