ನಾಡಿನ ದೇವಾಲಯಗಳ ನಿರ್ಮಾಣದಲ್ಲಿ ಹಲವು ಅರಸರು ತಮ್ಮದೇ ಆದ ಕೊಡುಗೆಯನ್ನ ನೀಡಿದ್ದಾರೆ. ಪ್ರಮುಖ ಅರಸರ ದೇವಾಲಯಗಳ ಬಗ್ಗೆ ವಿವರ ಸಿಕ್ಕಂತೆ ಸ್ಥಳೀಯವಾಗಿಯೂ ಪ್ರಬಲರಾಗಿದ್ದ ಅರಸರು ನಿರ್ಮಿಸಿದ ದೇವಾಲಯಗಳ ಬಗ್ಗೆ ವಿವರ ಸಿಗುವುದು ಕಡಿಮೆ. ಹೀಗೆ ಪ್ರಮುಖ ಅರಸು ಮನೆತನವಾಗಿ ಬೆಳೆದಿದ್ದ ಸೋದೆಯ ಅರಸರು ನಿರ್ಮಿಸಿದ ಕಲಾತ್ಮಕ ದೇವಾಲಯವೊಂದು ಶಿರಸಿ ತಾಲ್ಲೂಕಿನ ಹಳೆಯೂರಿನಲ್ಲಿದೆ.

ಇತಿಹಾಸ ಪುಟದಲ್ಲಿ ಸೋಂದೆ ಪ್ರಮುಖವಾಗಿ ಗುರುತಿಸಿ ಕೊಂಡಿದೆ. ಇಲ್ಲಿ ಆಳಿದ ಸೋದೆ ಅರಸರು ಸುಮಾರು 16 ನೇ ಶತಮಾನದಿಂದ 18 ನೇ ಶತಮಾನದವರೆಗೆ ಹಲವು ಕಲಾತ್ಮಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ತನ್ನ ಕಾಲದಲ್ಲಿ ಹಲವು ಪ್ರಾಂತ್ಯಗಳಿಗೆ ವಿಸ್ತಾರ ಮಾಡಿದ ಇವನ ಕಾಲದಲ್ಲಿ ಸೋಂದೆಯ ಸಮೀಪದ ಹಳೆಯೂರಿ ನಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ.

ಸುಮಾರು 17 ನೇ ಶತಮಾನ ಕೊನೆಯ ಭಾಗದಲ್ಲಿ ನಿರ್ಮಾಣವಾದ ಈ ದೇವಾಲಯ ಹಲವು ಅರಸರ ಶೈಲಿಯ ಸಮ್ಮಿಶ್ರಣ. ಕಲ್ಯಾಣ ಚಾಳುಕ್ಯರು ಮತ್ತು ವಿಜಯನಗರ ಎರಡೂ ಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ಮೂಲತಹ ದ್ವಿಕೂಟಾಚಲ ದೇವಾಲಯವಾದ ಇಲ್ಲಿ ಎರಡು ಗರ್ಭಗುಡಿ, ಅಂತರಾಳ ಹಾಗೂ ನವರಂಗ (ಸಭಾಮಂಟಪ) ಹೊಂದಿದೆ. ಒಂದು ಗರ್ಭಗುಡಿಯಲ್ಲಿ ಶಿವಲಿಂಗವಿದ್ದರೆ ಇನ್ನೊಂದರಲ್ಲಿ ಶಂಖ, ಚಕ್ರ, ಗಧಾ ಹಾಗೂ ಪದ್ಮದಾರಿಯಾದ ವಿಷ್ಣುವಿನ ಶಿಲ್ಪವಿದೆ. ಸ್ವರೂಪ ದಲ್ಲಿ ಕೇಶವನದಾದರೂ ಸ್ಥಳಿಯವಾಗಿ ನಾರಾಯಣ ಎಂದೇ ಕರೆಯಲಾಗಿದೆ. ಕಲಾತ್ಮಕವಾಗಿರುವ ಈ ಶಿಲ್ಪದ ಪ್ರಭಾವಳಿಯಲ್ಲಿ ದಶಾವತಾರದ ಶಿಲ್ಪಗಳಿವೆ. ಕೊಳಗ ಮಾದರಿಯ ಕಿರಿಟದಾರಿಯಾದ ನಾರಾಯಣ ಕೀರ್ತಿ ಮುಖ, ಕರ್ಣಕುಂಡಲಗಳು, ಕೊರಳಹಾರಗಳು, ಉಪವೀತ, ಕಾಲಿನ ಕಡಗಗಳು, ಗಮನಸೆಳೆಯುತ್ತದೆ. ಪೀಠದಲ್ಲಿ ಕಮಲದ ಕೆತ್ತನೆ ಇದೆ.

ಎರಡೂ ದೇವಾಲಯಗಳ ಅಂತರಾಳದ ಬಾಗಿಲುವಾಡ ಕಲಾತ್ಮಕವಾಗಿ ಅಲಂಕರಣಗೊಂಡಿದ್ದು ಪಂಚಶಾಖ ಮಾದರಿಯಲ್ಲಿದೆ. ಲಲಾಟದಲ್ಲಿ ಗಣಪತಿ ಮತ್ತು ದೇವಿಯ ಶಿಲ್ಪವಿದೆ. ಇಲ್ಲಿನ ಗೋಡೆಗಳಲ್ಲಿ ದೊಡ್ಡದಾದ ಉಬ್ಬು ಶಿಲ್ಪಗಳು ದೇವಾಲಯಕ್ಕೆ ಕಳಸಪ್ರಾಯದಂತಿದೆ. ಇಲ್ಲಿನ ವರಾಹ, ವಿಷ್ಣು, ಆಂಜನೇಯ, ರಸಿಕದಂಪತಿ ಹಾಗೂ ವೇಣುಗೋಪಾಲನ ಉಬ್ಬು ಶಿಲ್ಪವಿದೆ. ಇಲ್ಲಿನ ವೇಣು ಗೋಪಾಲ ತುಂಬಾ ಕಲಾತ್ಮಕವಾಗಿದೆ. ತ್ರಿಭಂಗಿಯಲ್ಲಿರುವ ಈ ಶಿಲ್ಪ ಕೊಳಲು ಊದುವಂತೆ ಇದ್ದು ಎರಡು ಬದಿಯಲ್ಲಿ ಚಕ್ರ ಮತ್ತು ಶಂಖದ ಕೆತ್ತನೆ ಇದೆ. ಮಕರ ತೋರಣದಂತೆ ಪ್ರಭಾವಳಿ ಇದ್ದು ಎರಡು ಬದಿಯಲ್ಲಿ ಮಕರದ ಕೆತ್ತನೆಗಳು, ಕೀರ್ತಿಮುಖದ ಕೆತ್ತನೆ ಗಮನ ಸೆಳೆಯುತ್ತದೆ. ಎರಡು ಬದಿಯಲ್ಲಿ ಗೋವಿನ ಕೆತ್ತನೆ ಇದೆ. ಕಮಲದ ಪೀಠವಿದೆ.

ಎರಡು ದೇವಾಲಯಕ್ಕೆ ನವರಂಗದಂತಹ ಒಂದೇ ಸಭಾಮಂಟಪ ಇದ್ದು ಎರಡು ದೇವಾಲಯದ ಎದುರು ತಲಾ ನಾಲ್ಕು ಕಂಭಗಳಿದ್ದು ಪ್ರತ್ಯೇಕ ನವರಂಗ ಇರದೇ ಒಂದಕ್ಕೊಂದು ಬೆಸೆದಿದ್ದು ಸಭಾಮಂಟಪದಂತೆ ಭಾಸ ವಾಗುತ್ತದೆ. ಇಲ್ಲಿ ಕಕ್ಷಾಸನವಿದೆ. ಆದರೆ ಎರಡಕ್ಕೂ ಪ್ರತ್ಯೇಕ ಪ್ರವೇಶ ದ್ವಾರಗಳಿವೆ. ಎರಡೂ ಪ್ರವೇಶಕ್ಕೆ ಸೋಪಾನ ಗಳಿದೆ. ನವರಂಗದ ಕಂಭಗಳಲ್ಲಿಯೂ ಉಬ್ಬು ಶಿಲ್ಪಗಳ ಕೆತ್ತನೆ ಇದೆ. ಕಾರ್ತಿಕೇಯನ ಕೆತ್ತನೆ ಗಮನ ಸೆಳೆಯುತ್ತದೆ. ಶಿವನಿಗೆ ಅಭಿಮುಖವಾಗಿ ನಂದಿ ಇದೆ.

ಹೊರಭಿತ್ತಿಯಲ್ಲಿ ಹಲವು ಉಬ್ಬು ಶಿಲ್ಪಗಳಿದ್ದು ಕೆಳ ಪಟ್ಟಿಕೆಗಳಲ್ಲಿ ಗಜಸಾಲುಗಳಿದ್ದು, ಕಮಲದ ಕೆತ್ತನೆಗಳು, ಶಿಖರದ ಮಾದರಿಗಳು ಸಾಲು ಇದ್ದು ಮೇಲಿನ ಪಟ್ಟಿಕೆ ಗಳಲ್ಲಿ ಹಲವು ಮಿಥನ ಶಿಲ್ಪಗಳು, ದರ್ಪಣ ಸುಂದರಿ, ನವನೀತ ಕೄಷ್ಣ, ನರ್ತಕಿಯರ ಶಿಲ್ಪ, ಕುದುರೆಸವಾರಿ, ಸೇರಿದಂತೆ ಹಲವು ವೀರರ ಶಿಲ್ಪಗಳ ಕೆತ್ತನೆ ಇದೆ. ದೇವಾಲಯಕ್ಕೆ ಎರಡು ಗರ್ಭಗುಡಿಗೆ ಪ್ರತ್ಯೇಕ ಶಿಖರವಿದೆ.

ನಿರ್ವಹಣೆಯ ಕೊರತೆಯಲ್ಲಿ ಸಾಗಿದ್ದ ಈ ದೇವಾಲಯ ವನ್ನು ಧರ್ಮೋತ್ಥಾನ ಟ್ರಸ್ಟ್ ಧರ್ಮಸ್ಥಳ, ಇಂಟೆಕ್ ಮತ್ತು ಜಾಗೃತವೇದಿಕೆ ಸೋಂದಾ ಅವರು ನವೀಕರಣಗೊಳಿಸಿ ಸುಸ್ಥಿಯಲ್ಲಿ ಇರಿಸಿದ್ದಾರೆ.

ತಲುಪುವ ಬಗ್ಗೆ : ಹಳೆಯೂರು ಸೋಂದಾ – ಶಿರಸಿ (ಹುಲೇಕಲ ಮಾರ್ಗ) ದಲ್ಲಿ ಸುಮಾರು ಆರು ಕಿ ಮೀ ದೂರದಲ್ಲಿದೆ. ಅರಣ್ಯದ ಮಧ್ಯದಲ್ಲಿರುವ ಕಾರಣ ಸ್ಥಳೀಯ ಸಲಹೆ ಪಡೆದು ಹೋಗುವುದು ಸೂಕ್ತ.

✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು