ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುರ್ಹರೇತ್। 
ಪಾಪಂ ತಾಪಂ ಚ  ದೈನ್ಯಂಚ ಸದ್ಯಃ  ಶ್ರೀಗುರು ದರ್ಶನಂ॥

ಗಂಗೆಯು ಪಾಪವನ್ನು ಚಂದ್ರನು ಸೆಕೆಯನ್ನು ಕಲ್ಪತರು ದಾರಿದ್ರವನ್ನು ಪರಿಹಾರಮಾಡು ವವು ಆದರೆ ಗುರುವಿನ ದರ್ಶನವಾದರೂ ಪಾಪತಾಪ ದೈನ್ಯಗಳೆಲ್ಲವನ್ನು ಒಮ್ಮೆಲೇ ಪರಿಹರಿಸಿ ಬಿಡುವುದು.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೈವದ ಸ್ಥಾನ

ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಾ 
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ  

ಪ್ರತಿಯೊಬ್ಬರು ಚಿಕ್ಕಂದಿನಿಂದಲೂ ಕೇಳಿ ಹೇಳಿ ಬೆಳೆದ ಶ್ಲೋಕ ಇದು. ಹಿಂದಿನ ಗುರುಕುಲ ಪದ್ಧತಿ ಅಳಿದು ಈಗ ಶಾಲೆ ಕಾಲೇಜುಗಳು ವಿಶ್ವವಿದ್ಯಾ ನಿಲಯಗಳು  ಬಂದಿರುವಾಗ ಗುರುವಿನ ಸ್ಥಾನ ವನ್ನು ತೆಗೆದುಕೊಂಡಿರು ವುದು ಶಿಕ್ಷಕರು. ಅವರಿಗೆ ಗುರು ಸ್ಥಾನ ಕೊಟ್ಟು ಆರಾಧಿಸುವ ರಿವಾಜು ಈಗ.  ಲೌಕಿಕ ಶಿಕ್ಷಣಕ್ಕೆ ಶಿಕ್ಷಕರಾದರೆ ಆಧ್ಯಾತ್ಮಿಕ ವಾಗಿ ಇನ್ನೂ ಗುರು ಪರಂಪರೆ ನಡೆದೇ ಬಂದಿದೆ. ಜೀವನದ ಅತ್ಯಂತ ಮಹತ್ವದ ಅಂಗವಾಗಿರುವ ಗುರುವನ್ನು ಕವಿ ಭಾವ ಹೇಗೆ ಕಂಡಿದೆ ಎಂದು ನುಡಿದ ಹೊರಟಾಗ …….


ಬೇಂದ್ರೆಯವರ ಸಮಗ್ರ ಕವನಗಳ ಕಾವಿಯ ಔದುಂಬರಗಾಥೆಯ ಸಂಪುಟ ೧ ನಮನ
ಭಾಗ ೩ ರಲ್ಲಿ ಗುರು,ಗುರು ನಮನ, ಗುರು ಶಿಷ್ಯ ಸಂಬಂಧ ಇತ್ಯಾದಿಗಳ ಬಗ್ಗೆಯೇ  ಒಟ್ಟು ೨೨೧ ಕವನಗಳಿವೆ ಎಂದರೆ ಅವರಿಗಿದ್ದ ಗುರುತಿಯ ಆಳವನ್ನು ಸ್ವಲ್ಪಮಟ್ಟಿಗಾದರೂ ತಿಳಿಯಬಹುದು. ಗುರು ಬ್ರಹ್ಮ ಚೈತನ್ಯ ಶ್ರೀರಾಮ ಕೃಷ್ಣಾರವಿಂದ ವಿವೇಕಾನಂದರ ಶಾರದಾ ಮಾತೆ ಕವಿ ರವೀಂದ್ರ ಸಾಯಿಬಾಬಾ ಒಬ್ಬರೇ ಇದ್ದರೆ ತಮ್ಮ ಗುರು ಪರಂಪರೆ ಗಳನ್ನೆಲ್ಲಾ ತಮ್ಮಲ್ಲಿ ಭಕ್ತಿಭಾವ ಉದ್ದೀಪನ ಗೊಳಿಸಿದವರನ್ನೆಲ್ಲಾ ಸ್ಮರಿಸಿಕೊಂಡಿದ್ದಾರೆ ಕವಿವರ್ಯರು ಈ ಕವನಗಳಲ್ಲಿ. ಪ್ರಾತಿನಿಧಿಕ ವಾಗಿ ಕೆಲವೇ  ಕೆಲವೊಂದು ಕವನ ಗಳನ್ನು ಈ ಲೇಖನದಲ್ಲಿ ಪರಿಚಯಿಸುವ  ಸಣ್ಣ ಪ್ರಯತ್ನ.

ನೀನು ಮರೆಯದೇ ನನ್ನ” 2ಪ್ಯಾರಾಗಳ ಈ ಕವನ ಗುರುಶಿಷ್ಯರ ಸಂಬಂಧದ ಕುರಿತು ಹೇಳು ತ್ತದೆ. ಅವರ ನಡುವಿನ ಅವಿನಾಭಾವ ಸಂಬಂಧ ವರ್ಣಿಸುವ ಈ ಕವನದಲ್ಲಿ ಕವಿ ರವಿ ಹಾಗೂ ಶಶಿಯನ್ನು ಗುರು ಕೊಟ್ಟ ಅರಿವಿನ ಬೆಳಕಿನಲ್ಲಿ ಗುರುತಿಸಿವೆ ಎಂದು ಹೇಳುತ್ತಾರೆ.  ಹಾಗೆಯೇ ಗುರುಶಿಷ್ಯರು ಆಡುವ ಪಗಡೆ ಆಟದಲ್ಲಿ ಚಿಕ್ಕೆಗಳಲ್ಲಿ ಲೆಕ್ಕವನ್ನು ಎಣಿಸಿ ಗುಣಿಸು ತ್ತಾರೆ. ಬೆಟ್ಟಗಳನ್ನು ಬಳಸಿ ಬರುವ ಮೂಡಣದ ಗಾಳಿ ಹಸಿರು ಬಯಲಿಗೆ ಬರುವ ಪಡುವಣದ ಗಾಳಿ ಒಂದನ್ನೊಂದು ನೀಡುವುದನ್ನು ನೋಡುವೆ ಎಂದು ಹೇಳುವ ಕವಿ ಹಸಿನೆಲದಲ್ಲಿ ಅಂಕುರ್  ಬೀಜಗಳನ್ನು ನೋಡುತ್ತಾ ನಿನ್ನನ್ನು ನಾನು ಬೇಕಾದರೆ ಮರೆತುಬಿಡಬಹುದು.  ಆದರೆ ನೀನು ಮಾತ್ರ ನನ್ನನ್ನು ಮರೆಯಲಾಗದು ಮರೆಯಬಾರ ದು ಎನ್ನುವ ಸಾತ್ವಿಕ ಆದೇಶ. 

ಎರಡನೆಯ ಭಾಗದಲ್ಲಿ 

ನುಡಿಸುತಿರು ಏಕನಾದವ ಗುರುವೇ! ಜೀವ ಲಹ 
ರಿಯ ಭೇದ ಒಡೆದು ಕಾಣಲಿ, ಅಭೇದದ ಕಟ್ಟ 
ಡವು ಇಟ್ಟಳಿಸಿ ಬರಲಿ, ಭೂತ ಜಾತದ ವೇದ
ತುದಿ ಕಳಿಸಿ ನಾಲಿಗೆಗೆ ಇಮ್ಮು ಚಿಮ್ಮಲಿ ಶರಣು 
ಗುರುಪಾದ, ಜಯ ಪರಾಕು! ಹಸಾದ! ಗತಿ ಯೆನಗೆ 
ನಿನ್ನ ಶ್ರುತಿಯ ವಿದಾಯ. ನೀನು ಮರೆವುದೇ ನನ್ನ 

ಗುರುವಿಗೆ ಏಕನಾದವನ್ನು ನುಡಿಸುತ್ತಲೇ ಇರು ಅದರಿಂದ ನನ್ನಲ್ಲಿನ ಜೀವಲಹರಿ ವ್ಯತ್ಯಾಸ ಎದ್ದು ಕಾಣಲೇ ನಮ್ಮಿಬ್ಬರ ನಡುವಿನ ಅಬೇಧದ ಮಾಧುರ್ಯವೂ ಹೊಮ್ಮಲಿ  ಅದರಿಂದ ಜಾತ ವಾದ ವೇದದ ಇಂಪು ನಾಲಿಗೆಯಿಂದ ಹೊರ ಹೊಮ್ಮಲಿ ಎಂದು ಆರ್ತರಾಗಿ ಹೇಳುತ್ತಾ ಗುರುಪಾದವನ್ನು ಹಿಡಿದು ಇದೆ ನನಗೆ ಪ್ರಸಾದ ಎಂದು ಜಯ ಪರಾಕು ಹಾಡುತ್ತಾರೆ ನಿನ್ನ ಏಕ ನಾಥ ಶ್ರುತಿಯ ಸೊಗಸೆ ನನಗೆ ಗತಿ ಎಂದು ಹಲುಬುತ್ತಾ ನೀನು ಮರೆವುದೇ ನನ್ನ ಎಂದು ದೈನ್ಯವಾಗಿ ಪ್ರಶ್ನಿಸುತ್ತಾರೆ. 

ಗುರುವಿನ ಗುಲಾಮನಾಗುವ ತನಕ ದೊರೆಯ ದಣ್ಣ ಮುಕುತಿ ಎಂದು ದಾಸವರೇಣ್ಯರು ಹಾಡಿ ದ್ದಾರೆ. ಶರಣಾಗತಿಯ ಭಾಗದಲ್ಲಿ ಗುರುವನ್ನು ಸೇವಿಸಿದಾಗ ಮಾತ್ರ ನಿಜ ಮುಕ್ತಿ ದೊರಕು ವುದು ಎಂಬುದನ್ನೂ ಗುರುವು ತನ್ನನ್ನು ಮರೆಯ ಬಾರದು ಎಂಬ ಪ್ರಾರ್ಥನೆಯನ್ನು ಈ ಕವನದಲ್ಲಿ ಕಾಣ ಬಹುದು. 

ಬೇಂದ್ರೆಯವರು ಶ್ರೀ ರಾಮಕೃಷ್ಣ ಪರಮಹಂಸ ರ ಅನುಯಾಯಿಗಳು. ಅವರ ಶ್ರೀರಾಮ ಕೃಷ್ಣೋದಯ ಕವನದಲ್ಲಿ ಗುರುವಿನ ವ್ಯಕ್ತಿತ್ವದ ಬಗ್ಗೆ ಗೌರವದಿಂದ ಹಾಡಿ ಹೊಗಳಿರುವುದನ್ನು ಕಾಣ ಬಹುದು ಆ ಕವನದ ಕಡೆಯ ಭಾಗ: 

ಗುರು ಗಂಗೆಯಲ್ಲಿ ನೆರೆದಿತ್ತು ಶಿಷ್ಯ ಮಂಡಲದಖಂಡ ಜಮುನೆ 
ಗುಪ್ತ ಶಾರದೆಯ ಸುಪ್ತ ವಾಹಿನಿಯು ಕರುಣೆ ಮಂದಗಮನೆ 
ತ್ಯಾಗ ಭೋಗದಾ ಪೂರ್ಣಯೋಗವಾಗಿರಲಿ ಈ ತ್ರಿವೇಣಿ 
ಕಟ್ಟುತಿರಲಿ ಸೋಪಾನಮಾರ್ಗ ಆ ದಿವ್ಯ ಜನ್ಮಶ್ರೇಣಿ 

  

ಗುರು ಅರವಿಂದರ ಕುರಿತು ಅರವಿಂದನಾಭನ ಪಾದಾರವಿಂದಕ್ಕೆ ಎಂದು ಬರೆದಿರುವ ಈ ಕವನ ದಲ್ಲಿ ಉಪಯೋಗಿಸಿರುವ ಅರವಿಂದ ಶಬ್ದದ ಪುನಃ ಪ್ರಯೋಗದ ಸೊಗಸನ್ನು ನೋಡಿ:

ಅರವಿಂದನಾಭನ
ಪಾದಾರವಿಂದಕೆ  
ಹಸ್ತಾರವಿಂದವು  ಬಾಗುತಿರೆ 
ನಯನಾರವಿಂದವು 
ಮುಚ್ಚಿಕೊಂಡಿರುವಾಗ 
ಹೃದಯಾರವಿಂದವು ಅರಳಲಿರೆ 

ಆಸ್ಯಾರವಿಂದವು  
ನಲಿವನು ಸೂಸುವ 
ತೆರ ನಿನಗೆ ಸೂಸಲಿ ಮಂಗಲವು 
ಎಂದಿತು ಅರವಿಂದ  
ಪದಭೃಂಗ ಅರವಿಂದು 
ಅರವಿಂದ ಮಯವಾದ ಮಾನಸವು

“ಅರಿವೆಂಬ ರವಿಯು ಮೂಡಲು 
ಗುರುವೆಂಬಾತ್ಮಾರವಿಂದವರಳಿತು ನನ್ನೊಳ್” ಎನ್ನುವ ಕವಿ ಬೇಂದ್ರೆಯವರ ಗುರು ನಮನ ವನ್ನು ಓದಿ ಅರ್ಥೈಸಿಕೊಂಡರೇ ಸಾಕು.  ಕವಿ ಗುರುಗಳ  ವರಕೃಪೆಯು ನಮಗಾಗುವುದು. ಆ ಭಕ್ತಿಭಾವದ ಉತ್ಕಟ ಅನಂದವನ್ನು ಕವನ ಗಳ  ಶಬ್ದದ ಮುಖೇನ ಆಸ್ವಾದಿಸುವ ಭಾಗ್ಯ ನಿಜಕ್ಕೂ ಕನ್ನಡಿಗರ ಸೌಭಾಗ್ಯ.  

ವಂದೇಹಂ ತದ್ ಗುರುಪರಂಪರಾಂ 

✍️ಸುಜಾತಾ ರವೀಶ್ 
ಮೈಸೂರು