ಮಂಕುತಿಮ್ಮನ ಕಗ್ಗ ಹೀಗೆನ್ನುತ್ತದೆ: 

ಕಾರಿರುಳಾಗಸದಿ ತಾರೆ ನೂರಿದ್ದೇನು?! ದಾರಿಗರ ಕಣ್ಗೆ ಬೇಕೊಂದು ಮನೆ ಬೆಳಕು॥ ದೂರದಾ ದೈವವಂತಿರಲಿ ಮಾನುಷ ಸಖನ। ಕೋರುವುದು ಬಡಜೀವ _ಮಂಕುತಿಮ್ಮ 

ದಟ್ಟವಾದ ಕತ್ತಲೆಯಲ್ಲಿ ನಡೆಯುತ್ತಿರುವಾಗ ಆಕಾಶದಲ್ಲಿರುವ ನಕ್ಷತ್ರಗಳೋ ದಾರಿ ತೋರಿಸ ಬಹುದು. ಬೆಳಕು ಸಾಕಾಗಬಹುದು ಆದರೆ ಮನೆ ತಲುಪಿದಾಗ ಒಂದು ಮೊಂಬತ್ತಿಯೋ ಬುಡ್ಡಿ ಯೋ ಅಂತಹ ಬೆಳಕು ಬೇಕಾಗುತ್ತದೆ. ಹಾಗೆಯೇ ಭಗವಂತನು ಜಗನ್ಮಿತ್ರ. ಅವನು ಕರೆದಾಗ ಬರು ತ್ತಾನೆ. ಆದರೆ ತನ್ನಂತೆಯೇ ಮನುಷ್ಯನಾದ ತನ್ನಂತೆಯೇ ರಾಗ ದ್ವೇಷಗಳ ನ್ನು ಹೊಂದಿದ ಮನುಜನ ಸಖ್ಯ ಬೇಕಾಗು ತ್ತದೆ, ಬೆಂಬಲ ಒತ್ತಾಸೆ ಬೇಡುತ್ತದೆ ಮನುಜ ಮನ. ಹಾಗೆ ಎಂಥಾ ಕವಿ ಮನವೂ ಅಷ್ಟೆ ತನಗೆ ಪ್ರಿಯರಾದ ಬೇಕೆನಿಸಿ ದವರ ಸಖ್ಯಕ್ಕೆ ಹಾತೊರೆಯುತ್ತದೆ, ಅವರ ಬಗ್ಗೆ ಬರೆಯುತ್ತದೆ. ಗುರು ಮಾರ್ಗದರ್ಶಿ ಸ್ನೇಹಿತ ಅಥವಾ ಒಂದು ರೀತಿಯಲ್ಲಿ ಪ್ರತಿಸ್ಪರ್ಧಿ ಆದರೂ ಮನುಜನ ಸಹಜ ಗುಣಗಳ ಬಗ್ಗೆ ಕವಿ ಖಂಡಿತಾ ತನ್ನ ಮನದಾಳವನ್ನು ತೋಡಿಕೊಂಡೆ ಇರುತ್ತಾನೆ. 

ಈ ನಿಟ್ಟಿನಲ್ಲಿ ನೋಡಿದಾಗ ಸುಮತೀಂದ್ರ ನಾಡಿಗರು ತಮ್ಮ ಮಿತ್ರ ಕವಿಗಳ ಬಗ್ಗೆ ಬರೆದ ಕೆಲವೊಂದು ಕವನಗಳು ಗಮನ ಸೆಳೆದವು. ಅವುಗಳನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ. 
ಪ್ರಸಿದ್ಧ ಕವಿಗಳನ್ನು ನಾವು ಕವಿ ಎಂಬ ದೃಷ್ಟಿ ಯಲ್ಲಿ  ನೋಡುತ್ತಿರುತ್ತೇವೆ. ಹಾಗೆಯೇ ಅವರನ್ನು ತಮ್ಮ ಸಮಕಾಲೀನ ಸ್ನೇಹಿತ ಎಂಬ ಪರಿಯಲ್ಲಿ ನೋಡಿದವರ ಅನಿಸಿಕೆಗಳು ಹೊಸ ಆಯಾಮವನ್ನೇ ನೀಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರೋಚಕ ಕುತೂಹಲಕಾರಿಯಾಗಿ‌ ಯಂತೂ ಇರುತ್ತದೆ. 

ಭಾವಲೋಕ ಕವನ ಸಂಕಲನದಲ್ಲಿ ಬೇಂದ್ರೆ ಯವರ ಬಗ್ಗೆ ಬೇಂದ್ರೆ ಮತ್ತು ಅಂಬಿಕಾತನಯ ಎಂಬ 02 ಕವನ ಬರೆದು ವರಕವಿಗಳನ್ನ ನೆನಪಿಸಿಕೊಳ್ಳುತ್ತಾರೆ. ಬೇಂದ್ರೆಯವರ ಅಗಲಿಕೆ ಯ ನೋವನ್ನು ಈ ರೀತಿಯಾಗಿ ತೋಡಿಕೊಳ್ಳು ತ್ತಾರೆ.

ಇಲ್ಲೇ ಇದ್ದವರು ನಮ್ಮ ಜತೆಯಲ್ಲಿ 
ಮಾತು ಮಾತು ಮಥಿಸಿ 
ಇಲ್ಲದಿದ್ದರೂ ಇದ್ದ ಹಾಗೆ ಇದೆ 
ನಿಮ್ಮ ಮಾತು ಧ್ವನಿಸಿ 
ನಿಮ್ಮ ಮಾತಿಗಿನ್ನೂನು ಕೂಡ
ಓಗೊಡುತ್ತಿಹವು ಹೃದಯ
 ಓ ಎಲ್ಲ ಕೂಡಿ ಓಂಕಾರವಾಗಿ 
ಮರೆತೇವೇ ನಿಮ್ಮ ದನಿಯಾ 

ಬೇಂದ್ರೆಯವರ ಕವಿತೆಗಳ ಶೀರ್ಷಿಕೆಗಳ ಸಾಲು ಗಳ ಭಾವಗಳನ್ನು ತೆಗೆದಿಟ್ಟುಕೊಂಡು ಎಲ್ಲಿ ಹೋಗಿ ಹೋದಿರಿ ಮಾತುಮಾತಿನಲ್ಲಿ ಮಿಂಚಿ ದವರು ಮಿಂಚಿನಲ್ಲಿ ಸೇರಿ ಹೋದಿರಾ ಎಂದೇ ಹೇಳಿಕೊಳ್ಳುತ್ತಾರೆ. ಬೇಂದ್ರೆಯವರ ಮಾತಿನ ಸೊಗಸು ಭಾವಗಳ ಅನುಭಾವವನ್ನು ಇಡೀ ಕವನದ ತುಂಬ ವರ್ಣಿಸುತ್ತಾರೆ. ಈ ಕಡೆಯ ಸಾಲುಗಳಂತೂ ತುಂಬಾ ಅರ್ಥಪೂರ್ಣ ಹಾಗೂ ವಿದಾಯದ ಧ್ವನಿಯ ಸಮರ್ಥ ಅಭಿವ್ಯಕ್ತಿ.

ನಾಡಿನಲ್ಲಿ ಮನೆಮಾತು ಆದವರು 
ರಸ ಗಂಗೆಯನ್ನೇ ಹರಿಸಿ 
ಹೋದಹೋದ ಕಡೆ ಹಾಡಿ ಬಂದವರು ಜನಮನದ ಕಣ್ಣು ತೆರೆಸಿ 
ಮಣ್ಣ ದೋಣಿಯಲಿ ಭವದ ಸಾಗರವ 
ನೀಸ ಹೊರಟ ಧೀರಾ 
ನಿಮ್ಮ ದೋಣಿ ಕಣ್ಮಾಯವಾಗಿ 
ಭಣಭಣಾ ನಮ್ಮ ತೀರ

ಆ ಧೀಮಂತ ವ್ಯಕ್ತಿತ್ವಕ್ಕೆ ತಕ್ಕನಾದ ಕಣ್ಣ ಹನಿಗಳೆ ಕಾಣಿಕೆ ತಾನೇ ಇದು?

ಮತ್ತೊಂದು ಕವನ ಅಂಬಿಕಾತನಯದಲ್ಲಿ ಬೇಂದ್ರೆಯವರ ಕವನ ಗಳನ್ನೇ ಆಧಾರವಾಗಿ ಇಟ್ಟುಕೊಂಡು,

ಗಿಡಗಂಟೆಗಳ ಕೊರಳಲ್ಲಿ ನಂದನದ ನಕಲಿ ಮಲ್ಲಿಗೆಯು  ಸುರರ ಗಂಗೆಯಲ್ಲಿ ಮಸೆದ ಗಾಳಿಯು ತಕ್ಕ ಪಡೆಯುವಲ್ಲಿ ಒಲವು ಬದುಕಬೇಕಾದಲ್ಲಿ ಹುಣಸೀ ಕೂತಲ್ಲಿ ನಿನ್ನ ಗಾರುಡಿ ಅಂಬಿಕಾತನಯ

ಎಂದು ಶೋಕಿಸುತ್ತಾರೆ. ಹಾಗೆಯೇ

ಮಾಯಾ ಕಿನ್ನರಿಯಲ್ಲಿ ಕನಸಲ್ಲಿ ಕನ್ಯೆಯರು ಏಳು ಎಂದಲ್ಲಿ ಪ್ರೀತಿ ಕಪ್ಪುರ ಗೊಂಬೆ ಹೊತ್ತಿ ಉರಿದಲ್ಲಿ ನಲ್ಲೇ ನಲ್ಲರಿರುಳ ಗುಜುಗುಜುವಿನಲ್ಲಿ ನಿನ್ನ ಗಾರುಡಿಯುಂಟು

ಎನ್ನುತ್ತಾರೆ.ಕಡೆಯ ಸಾಲಿನಲ್ಲಿ ಪರಿಪರಿಯಾಗಿ ಬಾ ಎಂದು ಆಹ್ವಾನಿಸುತ್ತಾ,

ನಾ ನಿನ್ನ ಕೊರಳಾಗಿ ಹಾಡುವೆನು ಬಾರೋ ನೀ ಬಿಟ್ಟ ಕಿನ್ನರಿಯ ನುಡಿಸುವೆನು ಬಾರೋ 

ಎಂದು  ಕರೆಯುತ್ತಾರೆ.   

ಸುಮತೀಂದ್ರರ “ಅಡಿಗರ ನೆನಪಿನಲ್ಲಿ” ಎಂಬ ಕವಿತೆ ಸ್ವಲ್ಪ ಸುದೀರ್ಘವಾದದ್ದು, 3 ಭಾಗಗಳಲ್ಲಿ ಸಾಗುತ್ತದೆ. ಅಡಿಗ ಮತ್ತು ನಾಡಿಗ ಇವರ ಮನೆತನದ ಹೆಸರುಗಳಲ್ಲಿ ಸಾಮ್ಯತೆ ಇರುವಂತೆ ಅವರ ಕಾವ್ಯ ಬೆಳವಣಿಗೆ ಯ ದೃಷ್ಟಿಯಲ್ಲಿಯೂ ಬಹಳಷ್ಟು ಹೋಲಿಕೆ ಗಳು ಕಂಡುಬರುತ್ತವೆ.  ಅಡಿಗರು ತಮ್ಮ ಮೂರನೆಯ ಕವನ ಸಂಕಲನದ ನಂತರ ನವೋದಯ ಕಾವ್ಯ ಧೋರಣೆ ಗಳಿಂದ ವಿಮುಖರಾದಂತೆ ನಾಡಿಗರು ಸಹ ತಮ್ಮ ಮೂರನೇ ಕವನ ಸಂಗ್ರಹಕ್ಕೆ ಉದ್ಘಾಟನೆ ಎಂದೇ ಹೆಸರಿಟ್ಟು ನವೋದಯ ನವ್ಯ ಕಾವ್ಯದ ಧೋರಣೆಗಳಿಂದ ಬಿಡುಗಡೆ ಪಡೆಯುತ್ತಾರೆ. ಅಂತೆಯೇ ಈ ಕವನದಲ್ಲಿ ಸಹ ತಮ್ಮಿಬ್ಬರ ಮನೆತನದ ಹೆಸರುಗಳ ಸಾಮ್ಯತೆಯ ಬಗ್ಗೆ ಮೊದಲ ಭಾಗದಲ್ಲಿ ಹೇಳುತ್ತಾರೆ. ನಾ+ಅಡಿಗ ಎಂಬ ಸವರ್ಣ ದೀರ್ಘಸಂಧಿಯಾಗಿ ನಾಡಿಗ ಆದಂತೆ  ನ ಅಡಿಗ ಎಂಬ ಬಹುವ್ರೀಹಿ ಸಮಾಸ ವಾಗಿ ಅಡಿಗನಲ್ಲದವನು  ನಾಡಿಗ ಎನ್ನುತ್ತಾರೆ. ಈ ರೀತಿಯ ಪದ ಚಮತ್ಕಾರ ಗಳಿಂದ ಕವನ ವನ್ನು ಆರಂಭಿಸಿ ಅಡಿಗರ ದೇಹಾಂತ್ಯದ ನಂತರ ಈಗಿರುವ ಸಾಮಾಜಿಕ ಪರಿಸ್ಥಿತಿಯ ದಾರುಣ ವಿವರಣೆಯನ್ನೂ ಕೊಡುತ್ತಾ ಹೋಗುತ್ತಾರೆ. ದೇಶದ ರಾಜಕೀಯ ಅವನತಿಗಳ ಮೌಲ್ಯಗಳ ಪತನಗಳ ಬಗ್ಗೆ ವಿವರಿಸುತ್ತಾರೆ. ಮೊದಲನೆಯ ಭಾಗದ ಈ ಕಡೆಯ ಸಾಲು ತುಂಬಾ ಅರ್ಥ ಪೂರ್ಣ. 

ಕಾಲರಾಯನ ಕೈಯ್ಯ ದಾಳ ಉರುಳುವ ಕಡೆಗೆ 
ನೆಟ್ಟಿರುವ ಕಣ್ಣಲ್ಲಿ ಭಯದ ನೆರಳು ಯುಗದ ಕೊನೆಯೇ ಹೀಗೆ, ಮತ್ತೆ ಮತ್ತೆ ಯುಗಾದಿ 
ಮತ್ತೊಮ್ಮೆ ಆ ಭಾಗ್ಯ ಚಕ್ರದುರುಳು. 

ಕವನದ ಎರಡನೆಯ ಭಾಗದಲ್ಲಿ ಕನಸಿನಲ್ಲಿ ಅಡಿಗರ ಜತೆ ಸಂವಾದ ನಡೆದ ಹಾಗೆ ಭಾವಿಸುತ್ತ ಸುತ್ತಲಿನ ಪ್ರಪಂಚವನ್ನು ಕಾವ್ಯಕ್ಕೆ ತರುವುದು ಹೇಗೆ ಎಂಬ ಪ್ರಶ್ನೆಗೆ ಕಾವ್ಯ ರಚನೆಯ ಕವಿತೆಯ ಜನನದ ಬಗ್ಗೆ ಅಡಿಗರ ವಿವರಣೆಯನ್ನು ಪ್ರತಿ ಪಾದಿಸುತ್ತಾ ಹೋಗುತ್ತಾರೆ. ಕವಿತೆ ಹುಟ್ಟುವ ಸಮಯ ದ ಆ ಅನುಭಾವ ತನ್ಮಯತೆ ತಲ್ಲೀನತೆ ಯನ್ನು ಕವನ ಓದಿಯೇ ಅನುಭವಿಸಬೇಕು. 

ಕವನಕ್ಕೆ ಅಂಥದೇ ಸಿದ್ಧತೆ ಅಂಥದ್ದೇ ಸಂಕಲ್ಪ ಜಾಗರ 
ಅದೇ ಗೋಳು, ನರಗಳ ಬಿಗಿತ, ಉದ್ವೇಗ ತನ್ಮಯತೆ, ಸ್ಫೋಟ”

ಎಂಬ ಅಡಿಗರ ವರ್ಣನೆ ನಾಡಿಗರ ಪದಗಳಲ್ಲಿ.  

ಇನ್ನು ಇದೇ ಕವನದ ಮೂರನೆಯ ಭಾಗದಲ್ಲಿ ಅಡಿಗರು ಆರಂಭಿಸಿ ಹೋದ ಕಾರ್ಯವನ್ನು ತಾವೆಲ್ಲ ಮುಂದುವರಿಸುತ್ತಿರುವ ಬಗ್ಗೆ ಹೇಳು ತ್ತಾರೆ.

ಇರುವುದೆಲ್ಲವ ಬಿಟ್ಟು ಎಲ್ಲೋ ಹೋಗಿದ್ದೀಯಾ 
ಮೂಕವಾಗಿದ್ದಾಳೆ  ನಮ್ಮ ಕವಿತೆ

ಎಂದು ಹಲುಬುವ ಜತೆಜತೆಗೆ   

ನಾನಾಗುವೆನು ಬಾಯಿ ನೀನು ಸ್ವರಶ್ರೇಣಿ ಕೊಡು 
ಹಾಡುವೆನು ಜಗವೆದ್ದು ಕೂಡುವಂತೆ 

ಎಂಬ ಆಶಾವಾದದ ಸಂದೇಶವನ್ನು ನೀಡಿದ್ದಾರೆ. 

ಅಡಿಗರ ಬಗೆಗಿನ ಗುರು ಭಾವವನ್ನು ಅವರ ಕಾವ್ಯದಿಂದ ತಮ್ಮ ಮೇಲಾಗಿರುವ ಪ್ರಭಾವ ವನ್ನು ಹೇಳಹೇಳುತ್ತಲೇ ಅವರು ಆರಂಭಿಸಿದ ಸದುದ್ದೇಶದ ಸಾಹಿತ್ಯ ರಥವನ್ನು ತಾವು ಮುಂದಕ್ಕೊಯ್ಯುವ ಅಭಿಲಾಷೆ ವ್ಯಕ್ತಪಡಿ ಸುವ ಈ ಕವನ ತುಂಬ ಮಹತ್ವಪೂರ್ಣವಾಗಿ ತೋರುತ್ತದೆ.

✍️ಸುಜಾತಾ ರವೀಶ್, ಮೈಸೂರು