ನೀನು ಹೊರಟ ದಾರಿಯ ನೋಡುತ್ತ ನನ್ನ ನೋಟ ಬದಲಿಸದೆ ನಿಂತಿತು/
ಮನದಲಿ ವಿಚಾರ ಸುಳಿಸುಳಿದು ಹೊರಬರದೇ ಅಲ್ಲೇ ಕುಳಿತಿತು//

ಸುಳ್ಳಿಗರ ಆ ಊರಿನಲಿ ಮಿಥ್ಯದ ದರ್ಬಾರು ಕೇಕೇ ಹಾಕಿತು/
ಸತ್ಯ ಹೇಳುವವರ ಕೂಗು ಆ ಭೀಡುಗಳಲಿ ಕೇಳದೆ ಸೋತಿತು//

ಕಗ್ಗತ್ತಲ ಕಾಡಿನಲಿ ಮಿಂಚುಹುಳು ಬೆಳಕನರಸಿ ನಡೆಯಿತು/
ಬಯಲು ಬಾನಿನ ಹಕ್ಕಿ ಹಾರುವುದಕೆ ನೆಲದಲಿ ಸುಂಕವ ತೆತ್ತಿತು//

ಹಗಲು ವೇಷ ಧರಿಸಿ ನಡೆದ ಬುದ್ಧಿ ಬಿಸಿಲ
ಚುರುಕು ಪಡೆಯಿತು/
ಮುಖವಾಡ ನಿರಾಕರಿಸಿದ ಬದುಕು ಒಂಟಿಯಾಗಿ ಬೆಂದಿತು//

ಕಳಿಸಿದ ದುವಾ ನಿನ್ನ ತಲುಪದೆ ಮೋಡಕೆ ಡಿಕ್ಕಿಯಾಗಿ ಮರಳಿತು ಅನು/
ಕಾಳಿದಾಸನ ಮೇಘಗಳಿಲ್ಲ ಈಗ ನನ್ನ ಸಂದೇಶಕೆ ಅದೇ ತಡೆ ಒಡ್ಡಿತು//

✍️ಶ್ರೀಮತಿ ಅನಸೂಯ ಜಹಗೀರದಾರ
ಕೊಪ್ಪಳ