ಅಡುಗೆ ಮನೆಯ
ದಿನಸಿ ಡಬ್ಬಗಳ ಸಾಲಿನ ನಡುವೆ
ಬುದ್ಧನಿದ್ದಾನೆ
ಹಸಿದಾಗ ಅವನ ಮೊಗ ನೋಡುತ್ತೇನೆ
ಅವಧೂತ ಬುದ್ಧ ನಗುತ್ತಾನೆ

ಒಲೆ ಹೊತ್ತಿಸಿದಾಗ
ಕಾವು ಪಾತ್ರೆಗೆ ತಾಗುತ್ತದೆ
ಅಕ್ಕಿ ಅನ್ನವಾಗುವಾಗ
ಕಪಾಟಿನಲ್ಲಿದ್ದ ಬುದ್ಧ
ತಟ್ಟೆಗೆ ಬರುತ್ತಾನೆ
ಅವಧೂತ ಬುದ್ಧ ಆಹಾರವಾಗುತ್ತಾನೆ
ದೇಹಕ್ಕೆ ಶಕ್ತಿ ತುಂಬುತ್ತಾನೆ

ಉಳಿದ ಅಡುಗೆ
ಮುಸುರೆ ಸೇರುವಾಗ
ಆಕಳು ಕೂಗುತ್ತಿರುತ್ತದೆ
ಬುದ್ಧ ಕರೆದನೆಂದು
ಓಡಿ ಹೋಗುತ್ತೇನೆ
ಮುಸುರೆ ಕುಡಿದ ಆಕಳು
ಕರುವಿಗೆ ಹಾಲುಣಿಸುತ್ತದೆ
ಹಾಲಿನಲ್ಲಿ ಕಾಣುವ ಬುದ್ಧ
ಮಂದಹಾಸ ಬೀರುತ್ತಾನೆ

ಮೆದೆ ಮುಸುರೆ ಸಗಣಿಯಾಗುತ್ತದೆ
ದೇವರೆಂದು ಸಗಣಿಯನ್ನು ಪೂಜಿಸುತ್ತೇವೆ
ಅಡುಗೆ ಮನೆಯ ಕಪಾಟಿನಲ್ಲಿದ್ದ ಬುದ್ಧ
ದೇವರ ಮನೆಯ ಇಣುಕಿ ನೋಡಿ ನಗುತ್ತಾನೆ
ನಾನು ಅವನ ನಗುವಲ್ಲಿ ನಗುವಾಗುತ್ತೇನೆ

   ✍️ಡಾ.ಬೇಲೂರು ರಘುನಂದನ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ವಿಜಯನಗರ ಬೆಂಗಳೂರು