ಪ್ರತಿವರ್ಷ ಆಗಸ್ಟ್ ಹದಿನೈದರಂದು ಭಾರತದಲ್ಲಿ ಸ್ವಾತಂತ್ರ್ಯ ದಿನೋತ್ಸವ ಆಚರಿಸಲ್ಪಡುತ್ತದೆ.  ೧೫.೦೮.೧೯೪೭ ರಂದು ಬ್ರಿಟಿಷರ ಅಧಿಕಾರ ದಾಸ್ಯದಿಂದ ಹೊರಬಂದು ಸರ್ವತಂತ್ರ ಸ್ವತಂತ್ರ ವಾಗಿ ಹೊರಹೊಮ್ಮಿದ ಸುದಿನ. ಅಂದಿನ ಸವಿ ನೆನಪಿಗೆ ಇಂದು ಅಮೃತಮಹೋತ್ಸವ.  ನಾವೆಲ್ಲ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.. ದಾಸ್ಯದ ದಿನಗಳನ್ನು ಕಂಡಿಲ್ಲ,ಅನುಭವಿಸಿಲ್ಲ. ಈ ಸೌಲಭ್ಯ ವನ್ನು ಒದಗಿಸಿದ ರಾಷ್ಟ್ರದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳಿಗೂ ಮನದಾಳದ ಕೃತಜ್ಞತೆಗಳು, ಹೃತ್ಪೂರ್ವಕ ವಂದನೆಗಳು.  ಅಹಿಂಸೆಯ ಮಾರ್ಗ ಹಿಡಿದು ರಕ್ತಪಾತವಿಲ್ಲದೆ ಸುದೀರ್ಘ ಸಂಗ್ರಾಮದ ಹಾದಿಯಲ್ಲಿ ಪಡೆದ ಸ್ವಾತಂತ್ರ ಅಷ್ಟೇನೂ ಸುಲಭದ ಗೆಲುವಾಗಿರಲಿಲ್ಲ. ಆದರೆ ಅದನ್ನು ನಾವು ಸಮರ್ಪಕವಾಗಿ ಬಳೆಸಿಕೊಳ್ಳುತ್ತಿದ್ದೇವೆಯೆ ಎಂದಾಗ ಉತ್ತರ ನಕಾರಾತ್ಮಕವೇ ಎಂಬುದು ವಿಷಾದದ ಸಂಗತಿ.

ನಮ್ಮ ತಲೆಮಾರು ಕಂಡಿರದ ಆ ೧೯೪೭ ರ ದಿನದ ಬಗ್ಗೆ ಕವಿಮನಗಳು ಹಾಡಿರಲೇಬೇಕಲ್ಲವೆ? ನಂತರವೂ ಆ ದಿನದ ಸ್ಮರಣೆಯಲ್ಲಿ ಏನಾದರೂ ಬರೆದಿರಲೇಬೇಕಲ್ಲವೆ? ಅಂತಹ ಸ್ವಾತಂತ್ರ್ಯ ದಿನದಕವಿತೆಗಳ ಕಿರುಪರಿಚಯ ಈ ಲೇಖನದಲ್ಲಿ.

ಗೋಪಾಲಕೃಷ್ಣ ಅಡಿಗರು:  ಸ್ವಾತಂತ್ರ್ಯ ಗೀತ
(೧೯೪೭) 

ಅಡಿಗರ “ಕಟ್ಟುವೆವು ನಾವು” ಕವನ ಸಂಗ್ರಹದ ಸ್ವಾತಂತ್ರ್ಯ ಗೀತ ಸ್ವಾತಂತ್ರ್ಯ ಪಡೆದ ದಿನದ ಸವಿ ಸಂಭ್ರಮವನ್ನು ವರ್ಣಿಸುತ್ತದೆ.. 

ಬದುಕಿರುವೆನು ನಾನು ಆಹಾ ಇಂದು ನಾನೇ ಧನ್ಯನು 
ಇಂದು ನಾ ಸ್ವತಂತ್ರನು 

ಎಂದು ಆರಂಭವಾಗುವ ಗೀತೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಯುದ್ಧವನ್ನು ಹಡಗಿನಲ್ಲಿ ಸಾಗರ ದಾಟುವ ಪಯಣಕ್ಕೆ ಹೋಲಿಸುತ್ತಾರೆ. ದೇಶಕ್ಕಾಗಿ ಪ್ರಾಣ ತೆತ್ತವರನ್ನು ಕಡಲಾಳಕ್ಕೆ ಬಿದ್ದವರು, ಜಲ ಚರಗಳಿಗೆ ಆಹಾರವಾದವರು, ಮೌನಕಡಲಿಗಿ ಳಿದು ನೋಯುವರು, ಸಾಯುವವರು ಎನ್ನುವ ಲ್ಲಿನ ಆ ಆಕ್ರಂದನ ಅಂದಿನವರು ಬಿಟ್ಟ ನಿಟ್ಟುಸಿ ರಿನ ಸಾಕ್ಷಿಯಾಗುತ್ತದೆ. ಆದರೂ ಕಡೆಗೆ ಸ್ವಾತಂತ್ರ್ಯ ಪಡೆದೆವು ಎಂಬುದನ್ನು 

ಆಹಾ! ಅಂತು ಸೇರಿದೆವಿಂದೀ ದಿನ 
ನಾವು ಬಯಸಿ ಬೆಂದ ದಡವ 
ದೂರ ತೀರವ ಕಂಡೆವುದಯ ತೀರವ 

ಎಂಬ ಮಾತುಗಳಲ್ಲಿ ಹಿಡಿದಿಡುತ್ತಾರೆ. ಇನ್ನು ಕಷ್ಟ ಕಳೆಯಿತು ಸುಖದ ದಿನಗಳು ಮುಂದಿವೆ ಎಂಬ ಆಶಾವಾದದ 

ಇದೋ ನೋಡು ನಾಡಿನಲ್ಲಿ ಎಲ್ಲೆಲ್ಲೂ ಹೊಸತನ
ಬೆಳಕು ಹರಿಯಿತು  ಆಹಾ ಮುಂದೆ ಎಂಥ ನಂದನ 

ಎಂದು ಕಟ್ಟಿಕೊಡುತ್ತಾರೆ. ಇಡೀ ಸ್ವಾತಂತ್ರ್ಯ ಹೋರಾಟವನ್ನು ಬಣ್ಣಿಸುವ ವಿಜಯದಸಂಭ್ರಮ ವನ್ನು ಪ್ರತಿನಿಧಿಸುವ ಆಶಾವಾದದ ನಿರೀಕ್ಷೆ ಬಿತ್ತುವ ಕವನ ಅಂದಿಗೂ ಇಂದಿಗೂ ಸಾರ್ವಕಾ ಲಿಕ. 

ಕೆ ಎಸ್ ನರಸಿಂಹಸ್ವಾಮಿ  ೧೫.೦೮.೧೯೫೦
(ಇರುವಂತಿಗೆ) 

ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಬರೆದ ಕವಿತೆ ತಾಯಿ ಭಾರತಿಯನ್ನು ಭಾವನಾತ್ಮಕವಾಗಿ ವರ್ಣಿ ಸುತ್ತಾರೆ. ಅಹಿಂಸೆ ಶಾಂತಿಗಳ ಬೆಳಕಲ್ಲಿ ಭಾರತ ವನ್ನು ಕಾಣುವ ಪ್ರಯತ್ನ. ಅದೇತಾನೆ ಸ್ವತಂತ್ರ ವಾದ ದೇಶದ ಆಲಿಪ್ತ ಗುಣಗಳು ಪ್ರಪಂಚಕ್ಕೆ ತಿಳಿಯಲೆಂಬ ಹೆಬ್ಬಯಕೆ ಕವಿಯದು.  ಭಾರತದ ಪರಂಪರೆ ಸಂಸ್ಕೃತಿಯ ಹಿರಿಮೆಯ ಹಿನ್ನೆಲೆಯಲ್ಲಿ ದೇಶದ ಮುಂದಿನ ನಡೆಯನ್ನು ನೋಡುತ್ತಾರೆ. ಈ ಸಾಲುಗಳನ್ನು ಗಮನಿಸಿ,

ನೆತ್ತರಲಿ ಬರೆದ ನಾಗರಿಕತೆಯ ಕುರಿಯದಿದು
ಶಸ್ತ್ರವನು ನಂಬಿ  ಶಾಂತಿಯ ಸೋಗನು ಹಾಡದಿದು  

ಏಷ್ಯಾದ ಹಿರಿಮಗಳು ಭರತನ ಸಾಕು ತಾಯಿ
ಸಾರುತಿಹಳಿಂದು  ಎತ್ತಿದ ಕತ್ತಿಗಳ ತಡೆದು 
ಶಾಂತಿ ಮೂಡದು ರಕ್ತಪಾತದಲಿ, ಶಾಂತಿರಸ್ತು

ಜಿ ಎಸ್ ಶಿವರುದ್ರಪ್ಪ- ಬಿಡುಗಡೆಯ ನೆನಪು” (ದೀಪದ ಹೆಜ್ಜೆ)  ಆಗಸ್ಟ್ ೧೯೫೮ 

ಹನ್ನೊಂದು ವರ್ಷಗಳಾದವು ದೇಶಕ್ಕೆ ಸ್ವಾತಂತ್ರ ದೊರೆತು. ಆದರೂ ನಿರೀಕ್ಷಿಸಿದ ಪ್ರಗತಿ ಸಾಧಿಸಿಲ್ಲ ಹಾಗಾಗೇ ಶ್ರೀಸಾಮಾನ್ಯ ಸುಮ್ಮನೆ ದುಡಿಯುತ್ತಿ ದ್ದಾನೆ. ಸ್ವಾತಂತ್ರ್ಯ ಬಂದ ದಿನವನ್ನು ನೆನೆಯುತ್ತಾ ಸಂಭ್ರಮಪಡಲು ಅವನಿಗೆ ಬಿಡುವಿಲ್ಲ ಎನ್ನುತ್ತಾ ರೆ.ಸ್ವಾತಂತ್ರ್ಯ ಸಿಕ್ಕಿದ ಗಳಿಗೆಯ ವರ್ಣನೆ ಮಾಡು ತ್ತಾರೆ. ಇಷ್ಟೆಲ್ಲಾ ಭಾರವಿದ್ದರೂ ಪ್ರತಿಕೂಲ ಸ್ಥಿತಿ ಇದ್ದರೂ ಎಲ್ಲವೂ ಸರಿ ಹೋಗುವುದೆಂದು ಧನಾತ್ಮಕ ಚಿಂತನೆ ಇದೆ ಕವಿಗೆ. ಕವನದ ಕಡೆಯ ಸಾಲುಗಳು ಅದನ್ನೇ ಪ್ರತಿಧ್ವನಿಸುತ್ತದೆ.

ಹರಿಯುತಿದೆ ನಾಡನಾಡಿಯ ತುಂಬ  ನೂತ್ನ ಚೇತನ ಶಕ್ತಿ 
ಇಂದಲ್ಲ ನಾಳೆ ಮೈದುಂಬಿಕೊಂಡು ನಿಲ್ಲುವುದು ಈ ನಾಡು 
ಸಾವಧಾನದಿ ಕಾದು ನೋಡು  

ಯರ್ಮುಂಜ ರಾಮಚಂದ್ರ-ಪ್ರಭಾತಫೇರಿ 

ಸ್ವಾತಂತ್ರ್ಯ ಸಮರಕ್ಕೂ ಪ್ರಭಾತಫೇರಿಗೂ ಬಿಡಿಸ ಲಾಗದ ನಂಟು.ಬೆಳಗಿನ ಜಾವಕ್ಕೆ ದೇಶಭಕ್ತಿ ಗೀತೆ ಗಳನ್ನು ಹಾಡಿಕೊಂಡು ಊರಿನ ಬೀದಿ ಬೀದಿ ಯಲ್ಲಿ ಹೊರಡುವ ಮೆರವಣಿಗೆ ಪ್ರಭಾತಫೇರಿ. ಸ್ವಾತಂತ್ರ್ಯಾ ನಂತರವೂ ಈ ಸಂಭ್ರಮವನ್ನು ಪ್ರಭಾತಫೇರಿಯಲ್ಲಿ ಆಚರಿಸಿ ಹಾಡುತ್ತಾಹುತಾತ್ಮ ರನ್ನು ಸ್ಮರಿಸುತ್ತಾ ದೇಶಭಕ್ತಿಯ ಸೌರಭವನ್ನು ಬೀರುವ ಗೀತೆ ಇದು.  ಆರಂಭದ ಸಾಲುಗಳನ್ನು ನೋಡಿ:

ಇದೋ ಭರತಭೂಮಿಯಲ್ಲಿ ಎಳೆಯ ಹಸಿರು ಚಿಗುರಿದೆ 
ಮುತ್ತಿದಿರುಳ ಹಿಂದೆ ಮಾಡಿ ನಸು ಬೆಳಕು ಮೂಡಿದೆ
ಬಾರೊ ಬೆಳಕ ವಂದಿಸೊ
ಕವಿದ ಇರುಳ ನಂದಿಸೊ 
ಶಾಂತಿ ಸೌಖ್ಯಗಳನ್ನು ನಿನ್ನೆದೆಯೊಳಗೆ ತುಂಬಿಸೊ 

ಇವೆಲ್ಲ ಕೆಲವು ಪ್ರಾತಿನಿಧಿಕ ಕವನಗಳಷ್ಟೆ ಇನ್ನೂ ಎಷ್ಟೋ ಕವಿಮನಗಳ ಭಾವದನಾವರಣ ಆಗಿದೆ, ಆಗುತ್ತಲಿದೆ, ಮುಂದು ಆಗುತ್ತಲೇ ಇರುತ್ತದೆ.  ಹಳೆಯಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿ ಕಂಡು ಕೊಳ್ಳುವ ಸುಸಮಯ. ಹಳತಿನಿಂದ ಹೊಸತರೆ ಡೆಗೆ ಸಾಗುವ ಮನ್ವಂತರ ಎಂದೆಲ್ಲ ಅಂದುಕೊಂಡಿ ದ್ದೆವು. ಆದರೆ ಅವೆಲ್ಲ ಸಾಕಾರವಾಯಿತೇ ಎಂಬು ದು ಚರ್ಚೆಯ ವಿಷಯ.

ರಜಾದಿನವೆಂದು ವಿರಮಿಸುವುದು ರಾಷ್ಟ್ರಧ್ವಜಾ ರೋಹಣ ಮಾಡುವುದು ಬಿಟ್ಟರೆ ಇನ್ನೇನುಮಾಡು ತ್ತೇವೆ? ಹಿರಿಯರ ತ್ಯಾಗ,ಬಲಿದಾನಗಳ ದ್ಯೋತಕ ವಾದ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದರ ಜೊತೆಗೆ ದೇಶವನ್ನು ಪ್ರಗತಿಮಾರ್ಗದಲ್ಲಿ ಮುನ್ನಡೆ ಸುವ ಬಗ್ಗೆ ಯೋಚನೆ ಯೋಜನೆಗಳು ಕಾರ್ಯ ರೂಪಕ್ಕೆ ಬರಬೇಕು. ಹಿರಿಯರು ಹೊಂದಳಿಗೆಯ ಲಿ ಇಟ್ಟು ಕೊಟ್ಟ ಸ್ವಾತಂತ್ರದ ಕಿರೀಟ ಧರಿಸಿ ಮೆರೆಯುವ ಶಕ್ತಿ ಹೊಂದಬೇಕು, ತೋರಬೇಕು.

 

ಸುಜಾತಾ ರವೀಶ್, ಮೈಸೂರು