ಬೇಸರದ ಬೋಳುಮರ
ಕಾತರಿಸುತಿದ ಶಿಶಿರನ ಬಳಸಲು
ಹಾರಿಕೆಯ ನೆವ ಬೇಡ
ಬಳಸಿಬಿಡು ತಡಮಾಡದೆ ಎನುತ.

ಧಗೆಗೆ ಒತ್ತರಿಸಿ
ಬತ್ತಿಹೋದ ನೆಲಕೆ
ಸುಸ್ತಾದ ಹೊದಿಕೆಗೆ
ಚೇತರಿಕೆಯ ಭರವಸೆಯಾಗುತ.

ಉದುರಿದ ಕನಸುಗಳು
ಚದುರಿದ ಬಯಕೆಗಳು
ಕುದುರುವ ಆಕಾಂಕ್ಷೆ
ತರುವ ನಿನಗೆ ಆದರಿಸುವೆ.

ಜೀವರಸಕೆ ಒಲುಮೆ ಧಾರೆಯೆರೆದು
ನಿಟ್ಟುಸಿರಿಗೆ ತಡೆಮಾಡಿ
ಹಸಿರಿನೌತಣವ ಬಡಿಸಿ
ಬೇಸರವ ಕಳೆವ ಬಾಂಧವನಾಗುತ.

ಕಾಣದ ಗಾವಿಲಗೆ
ಕಣ್ಣು ತೆರೆಸಿದ ಧಾರುಣಿಯಂತೆ
ಸಾಂತ್ವನದಿ ನೇವರಿಸಿ
ಹರುಷದ ಹೊನಲಿನಂತಾಗು ಬಾ.

 ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರ