(ಆಸ್ಟ್ರೇಲಿಯಾದ ಖ್ಯಾತ ಬರಹಗಾರ್ತಿ
ರಾಬಿನ್ ಕ್ಲೇನ್ ಅವರ ಕವಿತೆ ‘ಆಮಂಡಾ’ದ
ಅನುವಾದ ಈ ವಾರ ನಿಮಗಾಗಿ)

ಉಗುರು ಕಚ್ಚದಿರು, ಅಮಂಡಾ!
ಬೆನ್ನು ಗೂನಾಗಿಸದಿರು, ಅಮಂಡಾ!
ಹಾಗೆ ಕೈಕಾಲು ಚಾಚಿ ಬಿದ್ದುಕೊಳ್ಳದಿರು ಮತ್ತು ನೇರವಾಗಿ ಕುಳಿತುಕೋ,
ಅಮಂಡಾ!

( ಅಲ್ಲೊಂದು ಜಡವಾದ ಹಸಿರು ಸಾಗರವಿದೆ
ನಾನಲ್ಲಿ ಅದರ ಏಕೈಕ ನಿವಾಸಿ
ಆನಂದದಲಿ ತೇಲುವ ಮತ್ಯಕನ್ಯೆ.)

ನಿನ್ನ ಮನೆಗೆಲಸ ಮುಗಿಸಿದೆಯಾ, ಅಮಂಡಾ?
ನಿನ್ನ ಕೋಣೆಯ ಅಚ್ಚುಕಟ್ಟಾಗಿಟ್ಟುಕೊಂಡೆಯಾ, ಅಮಂಡಾ?
ನಿನ್ನ ಪಾದರಕ್ಷೆಗಳನು ಕೂಡ ಶುಚಿಗೊಳಿಸಿಕೊಳ್ಳಬೇಕೆಂದು
ನಾನು ಹೇಳಿದ್ದೆ ಅಂದುಕೊಳ್ಳುವೆ,
ಅಮಂಡಾ!

(ನಾನೊಬ್ಬಳು ಬೀದಿ ಸುತ್ತುವ ಅನಾಥೆ.
ಮೃದು ಧೂಳಿನಲಿ ನನ್ನ ನಿಶ್ಯಬ್ದ ಬರಿಗಾಲುಗಳಿಂದ ಆಕೃತಿಗಳ ಮೂಡಿಸುವೆ.
ಮೌನ ಬಂಗಾರ ಸ್ವಾತಂತ್ರ್ಯ ಮಧುರ.)

ಆ ಚಾಕೊಲೇಟ್ ತಿನ್ನದಿರು, ಅಮಂಡಾ!
ನಿನ್ನ ಮೊಡವೆಗಳ ನೆನಪಿಟ್ಟುಕೋ, ಅಮಂಡಾ!
ನಾನು ನಿನ್ನೊಂದಿಗೆ ಮಾತಾಡುವಾಗ ದಯವಿಟ್ಟು ನನ್ನನ್ನು ನೋಡುವೆಯಾ ,
ಅಮಂಡಾ!

( ನಾನು ರಾಪುಂಝೆಲ್, ನನಗೆ ಕಾಳಜಿಯಿಲ್ಲ
ಗೋಪುರದಲ್ಲಿನ ಜೀವನ ಶಾಂತ ಮತ್ತು ಅಪರೂಪ:
ನಾನು ಖಂಡಿತ ಎಂದೆಂದಿಗೂ ನನ್ನ ಹೊಳೆವ ಕೂದಲ ಕೆಳಗೆ ಇಳಿಬಿಡುವುದಿಲ್ಲ!)

ಆ ರೀತಿ ಒಮ್ಮೆಗೇ ಬೇಸರಗೊಳ್ಳುವುದ ನಿಲ್ಲಿಸು ಅಮಂಡಾ!
ನೀನು ಯಾವತ್ತೂ ಪದೇ ಪದೇ ಬದಲಾಗುವ ಮನಃಸ್ಥಿತಿಯವಳು, ಅಮಂಡಾ!
ನಾನೇ ನಿನ್ನ ಕೆಣಕುತ್ತೇನೆಂದು ಯಾರಾದಾರೂ ತಿಳಿಯುವರು , ಅಮಂಡಾ!

🔆🔆🔆

✍️ಆಂಗ್ಲ ಮೂಲ:ರಾಬಿನ್ ಕ್ಲೇನ್. ಕನ್ನಡಕ್ಕೆ: ಕವಿತಾ ಹೆಗಡೆ ೨೭-೩-೨೦೨೧