* ತಾಳ್ಮೆ‌ *

ತಾಳುವಿಕೆಗಿಂತ ತಪವು ಇಲ್ಲ
ಕಹಿಯಾದ ತಾಳ್ಮೆಗೆ ಸಿಹಿಯಾದ ಫಲವು
ತಾಳ್ಮೆ, ಸತ್ಯದ ಎದುರು ದೇವನೆ ಶರಣು
ಆಯುಷ್ಯವದು ಕಡಿಮೆ ಮುಖವಾಡಗಳಿಗೆ
ತಾಳ್ಮೆಯಿರಲಿ ಬಣ್ಣ ಕಳಚುವ ಗಳಿಗೆ
ಅವಮಾನಗಳೆ, ಬಹುಮಾನವಾಗಿ
ಸನ್ಮಾನಗಳವರೆಗೆ ತಾಳ್ಮೆ ಕರೆದೊಯ್ಯುವುದು
ನೋಡ ಎಂದ ರಾಮದಾಸ

* ಹುಲಿ ತೊಗಲಿನ ಮಾಯೆ *

ಮಾಯೆಯೊಳ ಸಿಕ್ಕಿರುವ ತೊಗಲು|
ಹುಲಿಯದಾದರೇನು, ಹುಲ್ಲೆಯದಾದರೇನು,|
ಮನದೊಳಗಿನ ಬಂಧನದ ಭಾವ ಪಾರತಂತ್ರ್ಯವೇ ತಾನೆ|
ಹಮ್ಮು ಬಿಮ್ಮು ದೌಲತ್ತಿನಮಲಿನಲಿ|
ಬೀಗುತಿರುವ ಹುಲಿ ತೊಗಲಿನ ಮಾಯದ ಜನರ|
ತೊಗಲ ಕಳಚಿ, ಅಂತರ್ ಚಕ್ಷು ತೆರೆಸಿ|
ಮೇಧಿನಿಯಲಿ ಮುದದಿ ಎಲ್ಲರೊಳು ಬೆರೆವ|
ದಿಟ ಮನವ ನೀಡಯ್ಯಾ ತಂದೆ ರಾಮದಾಸ||

* ಸಂತೆಯೊಳಗೆ ಚಿಂತೆ ಬೇಡ *

ಬದುಕೆಂದರೆ ಹಾಗೆ ಹುಚ್ಚರ ಸಂತಿ ಅಂದುಕೊಂಡಂತೆ ನಡೆಯದಿರೆ, ಮನಕೆಲ್ಲ ಚಿಂತಿ| ಅವರಿವರ ಮಧ್ಯೆ ಅರಿವಿನ ಹುಡುಕಾಟದಲ್ಲಿ| ನಿನ್ನನ್ನೇ ಮರೆತು ಯಾಕಪ್ಪ ಕುಂತೀ| ನಿನ್ನ ಮರೆತು ಅರಿವ ಹುಡುಕಲು ಬೇಡ|ಸಂತೆಯೊಳಗಿನ ಬದುಕ ಅನುಭವಿಸಿ ನೋಡು| ಎಂದ ನಮ್ಮ ರಾಮದಾಸ

  • ಸಂಸ್ಕಾರ *

ಎದೆಗೊತ್ತಿಸಾಕಿದರು,| ಮುತ್ತಿಟ್ಟು ಬೆಳೆಸಿದರು| ಸಂಸ್ಕಾರ ಕೊಡಬೇಕು| ಸಾಕಿ ಸಲಹುವ ನಡುವೆ|ಸಂಸ್ಕಾರ_ಅಹಂಕಾರಗಳ ಅಂತರದ|ಅರಿವನ್ನು ನೀಡಬೇಕು ಎಂದ ರಾಮದಾಸ

* ಆಚಾರ *

ಆಚಾರ ಸುವಿಚಾರ ಒಳಗೊಂಡ ಜೀವನ|
ಆಧಾರವಾಗುವುದು ಬಾಳಿಗದು ಭೂಷಣವು|
ಆಚಾರ ವಿಚಾರ ಬಿಟ್ಟು, ಅನಾಚಾರ ಮಾಡಿದವನ|
ಗ್ರಹಚಾರ ಬಿಡಿಸು ಎಂದ ನಮ್ಮ ರಾಮದಾಸ||

* ಕರದಲ್ಲಡಗಿದ ಜೀವನ *

ದುಡಿದು ತಿನ್ನು ಇನ್ನೊಬ್ಬರ
ಅನ್ನ ಕಸಿಯ ಬೇಡ
ತುತ್ತಿಟ್ಟು ಸಾಕಿದವರ
ವೃದ್ಧಾಶ್ರಮಕ್ಕೆ ದೂಡಬೇಡ
ಗಳಿಸಲು ಸಾಧ್ಯವಾಗದಿದ್ದರೂ
ಲಂಚದಾಮಿಷಕ್ಕೆ ಒಳಗಾಗಬೇಡ
ನಿಮ್ಮ ಜೀವನ ನಿಮ್ಮ ಕರದಲ್ಲಡಗಿದೆ
ನೋಡ ಎಂದ ನಮ್ಮ ರಾಮದಾಸ

  • ಬಯಸಿದ ಫಲ *

ಅಧಿಕಾರದ ಜೊತೆ ಮಾನವೀಯತೆ
ಅಂತಸ್ತಿನ ಜೊತೆ ಸಮಾನತೆ
ನುಡಿಯ ಜೊತೆ ನಡತೆ
ಪಾಲಿಸುತ್ತಾ ಹೋಗು ಬಯಸಿದ್ದು
ತಾನಾಗಿಯೇ ಫಲಪ್ರದವಾಗುವುದು
ನೋಡು ಎಂದ ನಮ್ಮ ರಾಮದಾಸ

  • ನಿಸರ್ಗದ ನಿಯಮ *

ಹಂಚಿ ತಿಂದ ಹಣ್ಣು
ಬಿಚ್ಚಿ ಹಂಚುವ ವಿದ್ಯೆ
ಏನ ಬಯಸದೆ ಮಾಡಿದುಪಕಾರ
ಬೇಡುವ ಮೊದಲೇ ನೀಡಿದ ದಾನ
ಪ್ರಕೃತಿಯ ತತ್ವಗಳು ನಿಮ್ಮೊಳಗಿರಲಿ
ಎಂದ ನಮ್ಮ ರಾಮದಾಸ

  • ಬದುಕು/ ಜೀವನ *

ಸಗ್ಗದ ಸುಗ್ಗಿಯ ಬದುಕಿದು,
ಹಿಗ್ಗದೆ ಗೆಲುವಿಗೆ,
ಕುಗ್ಗದೆ ಸೋಲಿಗೆ,
ನುಗ್ಗಿ ಬರುವ ನಾಳೆಯನ್ನು,
ಜಗ್ಗಿ ಕಾಯ ಬೇಕು, ಎಂದ ನಮ್ಮ|
ರಾಮದಾಸ
🌺🌺🌺

✍️ಶ್ರೀಮತಿ.ಗುಲಾಬಿ ರಾಘವೇಂದ್ರ
‌‌ ಕೋಲಾರ, ಕೆಜಿಎಫ್