ಹೂಬಳ್ಳಿ ಚಿಗುರಿ
ತಣ್ಣನೆಯ ಮೊಗ್ಗೊಂದು
ಮಂಜುಹನಿಯ ಮುಡಿದು
ಬಿಡಿಸುವ ಬೆರಳಿಗಾಗಿ ಕಾಯುತ್ತಾ
ಇಷ್ಟಿಷ್ಟೇ ಅರಳಿ
ಮೂಡುಗಾಳಿಗೆ ತೊನೆಯುತ್ತಿದ್ದರೆ
ಅದೇ ನೋಡು ಶ್ರಾವಣ…

ಅಂಗಳದಿ ರಂಗೋಲಿ
ಬಣ್ಣ ತುಂಬಿಸಿಕೊಂಡು
ಎಳೆರವಿಯು ಬಂದಾಗ
ಇಷ್ಟಗಲ ಹಿಗ್ಗಿ
ಅವನಿಗಿಷ್ಟು ರಂಗು ಬಳಿದು
ಮಿರಮಿರನೆ ಮಿರುಗಿದರೆ
ತಿಳಿ ಅದುವೇ ಶ್ರಾವಣ…

ಹಬ್ಬದ ಮೈತೊಳೆದು
ಸಾಂಬ್ರಾಣಿ ಕಾವಿಟ್ಟು
ಮಡಿಯುಡಿಸಿ ಮುಡಿಕಟ್ಟಿ
ಹಣತೆ ಬೆಳಕಿನ ಮೇಲೆ
ಹೆಜ್ಜೆ ಮೂಡದೆ ನಡೆವಾಗ
ಗೆಜ್ಜೆನಾದಕೆ ಕೈಬಳೆಯು ನಕ್ಕರದು
ಶ್ರಾವಣವಲ್ಲದೇ ಮತ್ತೇನು…

ತುಳಸಿ ಹಸಿರನು ಉಟ್ಟು
ಹಣೆಗೆ ಕುಂಕುಮದ ಬೊಟ್ಟು
ಅರಿಸಿನವು ಹರಸಿರಲು
ಬಂಗಾರ ಬೆಳಕಲ್ಲಿ
ಮುತ್ತೈದೆ ಕಾಡಿಗೆಗೆ ಸೇವಂತಿ
ಜೊತೆಯಾದರದೇ ತಾನೇ ಶ್ರಾವಣ…

ಚಕ್ಕುಲಿಯ ಸುರುಳಿಯಲಿ
ಪಾಯಸಕೆ ಹೋಳಿಗೆಯು
ಉಂಡೆ ಬಯಕೆಯ ಅರುಹಿ
ತಂಬಿಟ್ಟು ಮಡಿಲಕ್ಕಿ ಉಡಿದುಂಬಿರುವಾಗ
ಸೀರೆ ನೆರಿಗೆಗೆ ಉಸಿರಿದ್ದು
ಇದು ಶ್ರಾವಣವೆಂದು…

ಗಿಜಿ ಗಿಜಿಯ ಸೋನೆ ಮಳೆ
ಬಿಡದೆ ಸುರಿಯುವ ಸಂಜೆ
ಕೈಗೆ ಕಂಕಣ ಕಟ್ಟಿ
ಕಳಸ ಹಿಡಿದ ಕೈಯೋಳು
ಸೋಬಾನೆ ಹಾಡಿದರೆ
ಅದು ತಾನೆ ಶ್ರಾವಣ…

ಹಸಿರು ರವಿಕೆಯ ಕಣವ
ಕುಂಕುಮದ ಜೊತೆ ಮಾಡಿ
ಅರಿಸಿನ ಕೆನ್ನೆಯವಳಿಗೆ ನೀಡಿ
ಆರತಿಯ ಎತ್ತಿರಲು
ಅಕ್ಷತೆಯ ಹಿಡಿದು
ಮಗ್ಗುಲಲಿ ಕುಳಿತದ್ದು ಶ್ರಾವಣವಲ್ಲವೇ..

ಹಬ್ಬಗಳ ಸರಮಾಲೆ
ಭೀಮನಿಂದಲೆ ಶುರುವು
ಗೌರಿ ಲಕ್ಷ್ಮಿಯರು ಕೂಡಿ
ಬಾಗೀನ ಕೊಟ್ಟು ವರವ ನೀಡಿರುವಾಗ
ಶ್ರಾವಣವದು ಬದುಕ ಬೆಳಕಲ್ಲವೇ
ಮನದಿರುಳ ಕಳೆವ ಪರಿಯಲ್ಲವೇ..

✍️ಸೌಮ್ಯ ದಯಾನಂದ
ಡಾವಣಗೆರೆ