ಹೆಣ್ತನದ ಅಭಿವ್ಯಕ್ತಿಗೆ ಶಕ್ತಿ ತುಂಬುವ ಅಪರಿಮಿತದ ಬೆಳಕು: ಹತ್ತಿಕ್ಕಲಾರದ ಬಂಡಾಯದ ಭಿನ್ನ ಧ್ವನಿ “ಒಮ್ಮೆ ಹೆಣ್ಣಾಗು ಪ್ರಭುವೇ !”

ಬಾನು ಮುಷ್ತಾಕ್‌ರವರ ಬುಕರ್ ಪ್ರಶಸ್ತಿ ವಿಜೇತ “ಎದೆಯ ಹಣತೆ” ಕಥಾ ಸಂಕಲನದ ಈ ಕಥೆ ಮುಸ್ಲಿಂ ಸಮುದಾಯ ದ ಸಮಾಜೋಧಾರ್ಮಿಕ ಕಟ್ಟುಪಾಡಿಗೆ ಒಳಗಾಗಿ ನಲುಗಿದ ಹೆಣ್ಣುಮಗಳ ಜೀವನದ ಹೃದಯ ವಿದ್ರಾವಕ ಕಥೆ ಅತ್ಯಂತ ಮನಂಬುಗುವಂತಹುದಾಗಿದೆ. ಈ ಕಥಾ ನಾಯಕಿ ಕೌಟುಂಬಿಕ ಸಂಘರ್ಷದ ನಡುವೆ ತನ್ನ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುವ ಹೆಣ್ಣುಮಗಳು.ಮುಸ್ಲಿಂ ಸಮುದಾಯದ ಹಾಗೂ ಬಡ ವರ್ಗದ ಹೆಣ್ಣುಮಕ್ಕಳ ಜೀವನದ ಹೋರಾಟದ ಹಾದಿಗಳನ್ನು ಕಥೆ ಸಮರ್ಥವಾಗಿ ಕಟ್ಟಿಕೊಟ್ಟಿದೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು, ಅದಕ್ಕೆ ಇರುವ ಏಕೈಕ ಮಾರ್ಗ ವೆಂದರೆ ಅದು ಬಿಡುಗಡೆ ಯೆಂಬ ಅರಿವು ಮತ್ತು ಶಿಕ್ಷಣ.
ಧರ್ಮದೊಳಗಿನ ದ್ವಂದ್ವಗಳು ಮತ್ತು ಅದರಿಂದ ಹೆಣ್ಣಿನ ಮೇಲೆ ಆಗುವ ದೌರ್ಜನ್ಯ, ಅನಿಷ್ಟ ಆಚರಣೆಯ ಹಿಂದಿನ ನಿಲುವುಗಳು, ಧರ್ಮದ ಒಳಗೆ ಗಂಡಿಗಿರುವ ಸ್ವಾತಂತ್ರ ಮತ್ತು ಹೆಣ್ಣಿನ ಬಲ ಹೀನತೆ, ಧರ್ಮದ ಒಳಗೆ ಹೊರಗೆ ನಡೆಯುವ ಹೋರಾಟ ಅದನ್ನು ಮೀರಿ ಬದುಕುವ ಹಾಗೂ ಇಂತಹ ಸಂದಿಗ್ಧತೆಯನ್ನು ಎದುರಿಸುವ ಈ ಕಥೆ ವಿಭಿನ್ನವಾದ ವಿಷಯ ವಸ್ತು ಒಳಗೊಂಡಿವೆ.
ತಾತ್ಪರ್ಯ; ಬಾನು ಮುಸ್ತಾಕ್‌ರ ಕಥೆಗಳಲ್ಲಿ ಸ್ತ್ರೀ ಪಾತ್ರಗಳಿಗಿಂತ ಹೆಣ್ಣಿನ ಸಂವೇದನೆ ಮುಖ್ಯವಾಗಿದೆ. ಅಚ್ಚಗನ್ನಡ ದೇಶಿ ಪದ ಹೆಣ್ಣು . ಈ ಶಬ್ದವನ್ನು ನಾವು ಬರವಣಿಗೆಯಲ್ಲಿ ಬಳಸುವಾಗ ತುಂಬಾ ಜಾಗೃತಿ ಯಿಂದ ಬಳಸಬೇಕು.ಕಾರಣ, ಸ್ತ್ರೀ ಪದ ಸಂಸ್ಕೃತದ ಪದ ಇದು, ಶ್ರೀಮಂತ, ಸುಶಿಕ್ಷಿತ, ಸಂರಕ್ಷಿತ ವಲಯದಲ್ಲಿ ಗುರುತಿಸಿಕೊಳ್ಳುವ ಮಹಿಳೆಯನ್ನು ಕುರಿತಾಗಿ ಬಳಸುವ ಸಂಬೋಧನಾ ಪದ. ಹೆಣ್ಣು ಎಂಬ ಪದದ ಬಳಕೆ ಗಮನಿಸಿದಾಗ ತೀರ ದೇಶಿಯ ನೆಲೆಯಲ್ಲಿ ಗ್ರಹಿಸಬೇಕು. ಈ ಪದವು ತುಳಿತಕ್ಕೆ ಒಳಗಾದ ದಮನಿತ, ಅಬಲೆ ಹಾಗೂ ಸಮಾಜದಲ್ಲಿನ ಅನಿಷ್ಟಗಳಿಗೆ ಬಲಿಯಾದ ಸಂತ್ರಸ್ತೆ, ಶೋಷಿತೆ ಎಂಬ ಪರಿಭಾಷೆಗಳಿಗೆ ಅನ್ವಯಿಸುವ ಶಬ್ದ ಧ್ವನಿಯಾಗಿ ಬಳಕೆಯಾಗುತ್ತದೆ. ಬಾನು ಕಥೆಗಳಲ್ಲಿ ಬರುವ ಹೆಣ್ಣು ಈ ಮಾದರಿಯ ಸಾಮಾಜಿಕ ಸಂಘರ್ಷಕ್ಕೆ ಮುಖಾ- ಮುಖಿಯಾದವಳು ಎಂಬುದು ಗಮನಾರ್ಹ. ಹೆಣ್ಣು ಎಂಬ ಪದ ಬಳಕೆಯಲ್ಲಿಯೇ ವಿಶೇಷತೆ ಇದೆ. ಸಿಮೊನ್ ದಿ ಬೋವಾ ಹೇಳುವಂತೆ “ಹೆಣ್ಣು ಹುಟ್ಟಿ ನಿಂದ ಹೆಣ್ಣಾಗುವುದಿಲ್ಲ ಸಮಾಜ ಅವಳನ್ನು ಹೆಣ್ಣಾಗಿ ಮಾರ್ಪಡಿಸುತ್ತದೆ.” ಸ್ತ್ರೀ ಪದ ಸುಶಿಕ್ಷಿತ ಸಂರಕ್ಷಿತ ಹೆಣ್ಣೆಂಬ ಅರ್ಥ ನೀಡಿದರೆ, ಹೆಣ್ಣು ದೇಶಿ ಪದವು ತುಳಿತಕ್ಕೊಳಗಾದ ಹೆಣ್ಣು ಎಂಬ ನೇರವಾದ ಸರಳ ವಿಶ್ಲೇಷಣೆಯನ್ನು ನೀಡುತ್ತದೆ. ಬಾನು ಅವರು ಬರೆದುದು ಸ್ತ್ರೀ ಕುರಿತಾಗಿಲ್ಲ,ಅದು ಹೆಣ್ಣಿನ ಕುರಿತಾಗಿ ಅನ್ನೊದು ಬಹಳ ಸ್ಪಷ್ಟವಾಗಿದೆ.

ಮುಸ್ಲಿಂ ಸಮುದಾಯದ ಸಮಾಜೋಧಾರ್ಮಿಕ ಕಟ್ಟುಪಾಡಿಗೆ ಒಳಗಾಗಿ ನಲುಗಿದ ಹೆಣ್ಣುಮಕ್ಕಳ ಜೀವನದ ಹೃದಯ ವಿದ್ರಾವಕ ಕಥೆಯಾಗಿದೆ. ಪ್ರಗತಿಪರ ಜೀವನವನ್ನು ಸೂಚಿಸಬಲ್ಲ ಹೆಣ್ಣು ಎಂಬ ಪದವೇ ಇಲ್ಲಿ ಬಂಡಾಯದ ದನಿಯಾಗಿದೆ. ಹೆಣ್ಣಿನ ಸಹನೆಯ ಹಿಂದೆ ಇರುವ ಧಾರಣಾ ಶಕ್ತಿ ಮತ್ತು ದಾರುಣತೆಯ, ಶೋಷಣೆಯ ಹಲವು ಮುಖಗಳ ಅನಾವರಣ ಈ ಕಥೆ ವಿಶೇಷತೆ. ಹೆಣ್ಣಿನ ಕಣ್ಣಲ್ಲಿ ಲೋಕದ ಸಂಕಟಗಳನ್ನು ಕಾಣಿಸುವ ಕಥೆಯಿದು. ಸುಳಿದೆಗೆದು ಬೆಳೆಯಬೇಕೆಂಬ ಹಂಬಲದ ಬೇರನ್ನು ಕತ್ತರಿಸುವ ಲೋಕದ ಕ್ರೌರ್ಯವನ್ನು ಕಾಣಿಸುತ್ತಲೇ ತನ್ನ ಆಂತರ್ಯವನ್ನು ಒಳಗಿಳಿದು ನೋಡುವ ವ್ಯವಧಾನ ಈ ಕಥೆಗಿದೆ. ಗಂಡು ಹೆಣ್ಣೆಂಬ ಗೆರೆಯನ್ನು ಅಳಿಸಿ, ಮನುಷ್ಯರ ಮನೋಲೋಕದ ಅಸಂಗತತೆ ಯನ್ನೂ ಕಥೆಯಾಗಿಸಿ, ಹೆಣ್ಣಿನ ಅಂತಃಸತ್ವದ ನೋವು- ನಲಿವನ್ನು ಬಾನು ಇಲ್ಲಿ ಕಾಣಿಸಬಲ್ಲರು. ಈ ನೆಲದ ಸ್ಥಾಪಿತ ಮೌಲ್ಯಗಳ ದಟ್ಟವಾದ ವ್ಯವಸ್ಥೆ ಯೊಂದಿಗೆ ಹೆಣ್ಣು ಅನುಭವಿಸುವ ಕೆಲವು ಸಮಾಜೋ ಧಾರ್ಮಿಕ ವೈರುಧ್ಯಗಳು, ಸಮಾಜ ರೂಪಿಸುವ ಸೂಕ್ಷ್ಮ ಸಂವೇದನೆಯೊಂದಿಗೆ ಹೆಣ್ಣಿನ ತಳಮಳಗಳನ್ನೂ ಕಾಣಿಸುವ ಕಥೆ ಬಾನುರವರ ಭಾವಲೋಕದ ಬಗೆಗೆ ಕುತೂಹಲ ಹುಟ್ಟಿಸುತ್ತವೆ. ಕಥೆಯೆಂಬುದು ಭಾಷೆಯ ಮೂಲಕ ಇಂತಹ ಹಲವು ಲೋಕಗಳನ್ನು ಶೋಧಿಸುವ ಉತ್ಖನನವು ಆಗಬಲ್ಲದು ಎಂಬುದಕ್ಕೆ ಈ ಕಥೆ ಸಾಕ್ಷಿ.
ಹೆಣ್ತನದ ಅಭಿವ್ಯಕ್ತಿಗೆ ಶಕ್ತಿ ತುಂಬುವ ಅಪರಿಮಿತದ ಬೆಳಕು: ಅನನ್ಯ ಕಥೆ

ಪ್ರಸ್ತುತ ಕಥೆ ನಿರೂಪಣಾ ಮಾದರಿಯ ಭಿನ್ನ ಕಥೆ ಯಾಗಿದೆ. ಕಥಾ ಜಗತ್ತಿನಲ್ಲಿಯ ಬರವಣಿಗೆಯ ಎಲ್ಲಾ ನಿಯಮಗಳನ್ನು ಅಭಿಪ್ರಾಯಗಳ ಗಂಟನ್ನು ಛಿದ್ರ ಗೊಳಿಸಿದ ಕಥೆಯಿದು.ಅನೇಕ ಕಥೆಗಳಲ್ಲಿ ಪಾತ್ರಗಳು ಮಾತನಾಡುವ ಹಾಗೂ ವ್ಯವಸ್ಥೆ ಮತ್ತು ವ್ಯಕ್ತಿಗಳೊಂದಿ ಗೆ ಮುಖಾಮುಖಿಯಾಗುವ ಸಂದರ್ಭಗಳನ್ನು ಸರ್ವ ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಈ ಕಥೆಯಲ್ಲಿ ಲೇಖಕಿಯೇ ಪ್ರಧಾನ ಪಾತ್ರದಲ್ಲಿದ್ದುಕೊಂಡು ಸಮುದಾಯವನ್ನು ವಿರೋಧಿಸುವ ನೆಲೆಗಿಂತ ಪ್ರಶ್ನಿಸುವ ಕಲೆ ಭಿನ್ನವಾಗಿದೆ. ಕೆಡಕುಗಳನ್ನು ಕಟ್ಟಿ ಕೊಡುವ ಬಗೆ ವಿಭಿನ್ನವಾಗಿದೆ. ಹಾಗೆಯೇ ಗಂಡಾಳಿಕೆಯ ದೌರ್ಜನ್ಯವನ್ನು ಇದು ಗಟ್ಟಿಯಾಗಿ ವಿರೋಧಿಸುವ ಅಂತರಂಗದ ದನಿಯಾಗಿದೆ. ಸಮುದಾಯದ ಆಂತರಿಕ ಒಳ ಬಿಕ್ಕಟ್ಟುಗಳು ಸೂಕ್ಷ್ಮ ವಾಗಿ ಗುರುತಿಸಿರುವುದನ್ನು ಕಾಣಬಹುದು. ಲೋಕಕ್ಕೆ ಪ್ರಶ್ನೆಗಳನ್ನು ಕೇಳುವ ಬಗೆ ಒಂದಾದರೆ ಸಾತ್ವಿಕ ಬಂಡಾಯದ ಧ್ವನಿ ಮೂಲಕವಾಗಿ ಸಮಾಜದ ಅನಿಷ್ಟ ಪದ್ಧತಿಗಳನ್ನು ವಿರೋಧಿಸುವ, ಕೆಡಕುಗಳನ್ನು ಕಾಣಿಸುವಂತೆ ಹೆಣೆದ ಕಥೆಯಾಗಿದೆ.

ಮುಸ್ಲಿಂ ಲೋಕದ ಅದರಲ್ಲೂ ಹೆಣ್ಣುಮಕ್ಕಳ ಆತಂಕ ವನ್ನೂ, ಸಂಕಷ್ಟಗಳನ್ನೂ, ಅಕ್ಷರ ಲೋಕದ ವಂಚನೆ ಯಿಂದ ತೊಡಗಿ ಆಹೆಣ್ಣುಮಕ್ಕಳ ಎಲ್ಲಾ ಕನಸುಗಳೂ ನುಚ್ಚುನೂರಾಗಿ ಅವರು ಸಾಮಾಜಿಕ, ಧಾರ್ಮಿಕ, ಸಾಂಸಾರಿಕ ವ್ಯವಸ್ಥೆಯೊಳಗೆ ಶೋಷಣೆಗೆ ಒಳಗಾಗು ವುದನ್ನು ತೋರಿಸಿದೆ. ಆದರೆ ಇಲ್ಲಿನ ಹೆಣ್ಣು ಮಕ್ಕಳೂ ಕೇವಲ ಮುಸ್ಲಿಂ ಲೋಕದ ಪ್ರತಿನಿಧಿಗಳಾಗದೆ, ಎಲ್ಲ ಸಮಾಜದ ಹೆಣ್ಣಿನ ಸಂವೇದನೆಯ ಪ್ರತಿನಿಧಿಗಳಾಗಿ ದ್ದಾರೆ.
ಕಥಾಹಂದರ ಗಮನಿಸಿದಾಗ ಹೆಣ್ಣೊಬ್ಬಳ ಛಿದ್ರವಾದ ಸರಳ ಸಾಂಸಾರಿಕ ಕನಸು, ಅದರ ಬಗ್ಗೆ ಯಾವ ಸಹಾನುಭೂತಿಯೂ ಇಲ್ಲದ ಗಂಡು ಲೋಕ ಹಾಗೂ ಅಸಹಾಯಕ ಹೆಣ್ಣುಗಳ ಸ್ಥಿತಿಗತಿ ಕಾಣಬಹುದು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಹಿನ್ನೆಲೆ ಯಿಂದ ಬಂದ ಒಬ್ಬ ಮಹಿಳೆ ತನ್ನದೇ ಧರ್ಮದ ಹೆಸರಿನಲ್ಲಿ ನಡೆಯುವ ಆಚರಣೆಗಳಲ್ಲಿ ಹೆಣ್ಣು ಪಡುವ ನೋವು ಬಿಚ್ಚಿಡುವ ದಿಟ್ಟತನವನ್ನು ಲೇಖಕಿಯೇ ನಿರೂಪಕಿಯಾಗಿದ್ದು, ಕಥನದ ರೂಪ ದಲ್ಲಿ ಹೆಣೆದುದು ವಿಶೇಷ. ಇದು ವಿಶಿಷ್ಟ ಮಾದರಿಯ ಕಥೆ.ಸಮಾಜದ ಪ್ರಥಮ ಲಿಂಗಿ ಪುರುಷ. ಸಮಾಜದ ಆಗು ಹೋಗುಗಳ ಬಗ್ಗೆ ಮೇಲ್ಪಂಕ್ತಿಯಲ್ಲಿ ಆಲೋಚಿ ಸುವ, ತಿದ್ದುವ,ಹೊಸ ಕಾನೂನು ಮಾಡುವ ಹಕ್ಕನ್ನು ಪುರುಷನಿಗೆ ಕೊಟ್ಟವರು ಯಾರು? ಎಲ್ಲಾ ಧರ್ಮ ದಲ್ಲಿಯೂ ಹೀಗೆ ಪುರುಷ ಪ್ರಾಬಲ್ಯವಿದೆ. ಒಳ್ಳೆಯದು ಕೆಟ್ಟದ್ದು ಎಂದು ನಿರ್ಧರಿಸುವ ಹಾಗೂ ಸಮನಾಗಿ ಜೀವಿಸುವ ಹಕ್ಕು ಹೆಣ್ಣಿಗೂ ಇದೆ. ಈ ದೃಷ್ಟಿಯಿಂದ ಈ ಕಥೆ ಹೆಣ್ಣಿನ ಅಂತರಂಗದ ಧ್ವನಿಯಾಗಿ ವೈರುಧ್ಯಗಳ ಮನೋಗತ ಇಂತಹುದನ್ನೆ ಪ್ರಶ್ನಿಸುವ ಪ್ರತಿಮಾತ್ಮಕತೆಯಾಗಿ ಮೂಡಿಬಂದಿವೆ. ಪ್ರಶ್ನೆಗಳನ್ನು ಕೇಳುವ ಬಗೆ ಒಂದಾದರೆ ಸಾತ್ವಿಕ ಬಂಡಾಯದ ಧ್ವನಿ ಮೂಲಕವಾಗಿ ಸಮಾಜದ ಅನಿಷ್ಟ ಪದ್ಧತಿ- ಗಳನ್ನು ವಿರೋಧಿಸುವ ಈ ಕಥೆ ಕೆಡಕುಗಳನ್ನು ಎದೆಯ ಒಳಗಣ್ಣಿಗೂ ಕಾಣಿಸುವಂತೆ ಹೆಣೆದ ಕಥೆ ಯಾಗಿದೆ. ಕೆಟ್ಟದಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ ಎಂಬುದನ್ನು ಈ ಕಥೆ ಸಮರ್ಥವಾಗಿ ಪ್ರತಿನಿಧಿಸುತ್ತದೆ. ಈ ಸಮುದಾಯದ ಹೆಣ್ಣುಮಕ್ಕಳು ತಮ್ಮ ಕೌಟುಂಬಿಕ ವಲಯ ರೂಪಿಸಿದ ಚೌಕಟ್ಟಿನಲ್ಲಿ ಯೇ ಬದುಕಬೇಕು ಎನ್ನುವ ಸ್ಥಾಪಿತ ಮೌಲ್ಯಗಳು, ಸಾಮಾಜಿಕ ವ್ಯವಸ್ಥೆ ಮತ್ತು ಈ ಜನಾಂಗ ಸೃಷ್ಟಿಸಿದ ತೊಡಕುಗಳನ್ನು ಬಿಚ್ಚಿಟ್ಟಿರುವುದು ಗಮನಾರ್ಹವಾ ಗಿದೆ. ಸಮುದಾಯದ ಆಂತರಿಕ ಒಳ ಬಿಕ್ಕಟ್ಟುಗಳು ಹೆಣ್ಣಿನ ಒಳ ಬಿಕ್ಕಟ್ಟುಗಳಾಗಿರುವುದನ್ನು ಇಲ್ಲಿ ಕಾಣಬಹುದು.

ಸಮಕಾಲೀನ ಸಾಮಾಜಿಕ ಸಂಘರ್ಷದ ನೆಲೆಗಳನ್ನು ಅರಿಯುವ ಸಮಕಾಲೀನ ಪ್ರಜ್ಞೆಯ ತಿಳುವಳಿಕೆಯ ಹೆಣ್ಣು ಈ ಕಥೆಯ ನಾಯಕಿ. ಮುಸ್ಲಿಂ ಧರ್ಮದಲ್ಲಿ ರುವ ಅಂಧಾನುಕರಣೆ, ಷರೀಯತ್ತು ಹೇರಿಕೆ, ಗಂಡಾಳಿಕೆಯ ಅಮಾನವೀಯ ನಡೆ, ಸಾಮಾಜಿಕ ವೈರುದ್ಯಗಳು ರೂಪಿಸುವ ಸಂಘರ್ಷ ಹಾಗೂ ಹೆಣ್ಣಿನ ಪ್ರತಿರೋಧದ ನೆಲೆ ಸಕಾಲಿಕ ಪ್ರಶ್ನೆಯಾಗಿದೆ. ಇದು ಸಾಮಾಜಿಕ ಬದಲಾವಣೆಯ ಅಂತರಂಗದ ಕಾಳಜಿ ಅಲ್ಲದೇ ಮತ್ತೆನಲ್ಲಾ ಎಂಬುದನ್ನು ಸಾಬೀತುಪಡಿಸಿ- ದಂತಾಗಿದೆ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಧರ್ಮಾಂಧತೆ, ದೈನಂದಿನ ಪರೀಕ್ಷೆಗಳು, ಪಿತೃ ಪ್ರಭುತ್ವದ ದಬ್ಬಾಳಿಕೆ, ಲಿಂಗ ಅಸಮಾನತೆ, ಪುರುಷ ಪ್ರಾಬಲ್ಯ, ವರ್ಗ-ವರ್ಣ-ಲಿಂಗ ರಾಜಕಾರಣಗಳಿಂದ ನಲುಗಿದ ಹೆಣ್ಣುಮಗಳ ಜೀವನದ ಕಥೆಯಾಗಿದೆ. ಈ ಕಥೆಯ ನಾಯಕಿಯ ತಣ್ಣನೆಯ ಪ್ರತಿರೋಧವು ಮಾನವಪರ ಧ್ವನಿಯಾಗಿದೆ. ಮುಸ್ಲಿಂ ಷರೀಯತ್ತು ಪ್ರಕಾರ ಹೆಣ್ಣು ಯಾವಾಗಲೂ ಪರಾವಲಂಬಿಯಾ- ಗಿರ ಬೇಕು, ಅದಕ್ಕಾಗಿ ಮಹಿಳೆಯರನ್ನು ಹೆದರಿಸಿ, ಮೂಲೆಗೊತ್ತರಿಸಿ ಬಿಡಲು ಗಂಡಾಳಿಕೆ ಸದಾ ಸಿದ್ಧ. ಧರ್ಮದ ಹೆಸರಿನಲ್ಲಿ ಕೆಸರು ಎರಚಿ ವಿಕೃತ ಆನಂದ ಪಡುವ ಪ್ರವೃತ್ತಿಯ ಮಧ್ಯೆ ಬಾನು ತಮ್ಮ ಸೃಜನಶೀಲ ಅಭಿವ್ಯಕ್ತಿಯ ಜೊತೆ ಈ ಕಥೆ ಮೂಲಕ ಇಂತಹ ವಿಕೃತಿಗಳ ವಿರುದ್ಧ ದನಿ ಎತ್ತುತ್ತಿರುವುದು ಸತ್ಯ ಮತ್ತು ವಾಸ್ತವಿಕ ಹೋರಾಟವಾಗಿದೆ.

ಈ ಕಥೆ ಕೇವಲ ಮುಸ್ಲಿಂ ಹೆಣ್ಣುಮಕ್ಕಳ ಕಥೆ-ವ್ಯಥೆ ಗಳಲ್ಲ. ಅವು ಸಮಾಜದಲ್ಲಿನ ತುಳಿತಕ್ಕೊಳಗಾದ ಎಲ್ಲಾ ಹೆಣ್ಣುಮಕ್ಕಳ ಧ್ವನಿಯಾಗಿದೆ. ಸಮಾಜದ ವೈರುಧ್ಯತೆಗಳಿಗೆ ಇವರ ಕಥಾ ಸಾಹಿತ್ಯ ಲಿಂಗತ್ವದ ಆಚೆಯ ಅನೇಕ ವರ್ತಮಾನದ ಸವಾಲುಗಳನ್ನು ನಾವು ಎಷ್ಟರ ಮಟ್ಟಿಗೆ ಎದುರಿಸುತ್ತಿದ್ದೇವೆ ಎಂಬುವ ದನ್ನು ಸಾಕ್ಷೀಕರಿಸುತ್ತವೆ. ನಮ್ಮೊಳಗಿನ ಬೇಗುದಿಗಳಿಗೆ ಉತ್ತರವನ್ನು ನೀಡಿದೆ. ಒಟ್ಟಾರೆ ಮಾಯಲಾರದ ಗಾಯದ ಕಥೆಯಿದು. ಮಾಗಿದ ಮನಸ್ಸುಗಳ ಹೆಣ್ಣಿನ ಒಡಲ ಉರಿಯ ಕಥನ. ಬಾನು ಅವರ ಆತ್ಮಕಥೆ ಯಂತೆ ಬರೆಯಲ್ಪಟ್ಟ ಹೆಣ್ತನದ ಅಭಿವ್ಯಕ್ತಿಯ ಬಗೆಯದು ಈ ಕಥೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಒತ್ತಡಗಳಿಗೆ ಒಳಗಾಗುತ್ತಿರುವ ಲೋಕದ ಎಲ್ಲ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸ್ತ್ರೀಶೋಷಣೆ ಯ ಹಲವು ಮುಖಗಳ ಇಲ್ಲಿ ಅನಾವರಣವಾಗಿವೆ. ಅನುಭವಲೋಕಕ್ಕೆ ದಕ್ಕಿದ ಘಟನೆಗಳನ್ನು ಜೀವಂತ ಕತೆಯಾಗಿಸಿದ್ದು ಈ ಕಥೆಯ ಯಶಸ್ವಿನ ಹಿಂದಿನ ಶಕ್ತಿಯಾಗಿದೆ.
ಹತ್ತಿಕ್ಕಲಾರದ ಬಂಡಾಯದ ಭಿನ್ನ ಧ್ವನಿ “ಒಮ್ಮೆ ಹೆಣ್ಣಾಗು ಪ್ರಭುವೇ ! “

ಕಥಾ ನಾಯಕಿ ಕೌಟುಂಬಿಕ ಸಂಘರ್ಷದ ನಡುವೆ ತನ್ನ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುವ ಕಥನ ಅತ್ಯಂತ ಮನಂಬುಗುವಂತಿದೆ. ಮುಸ್ಲಿಂ ಸಮುದಾ ಯದ ಹಾಗೂ ಬಡವರ್ಗದ ಹೆಣ್ಣುಮಕ್ಕಳ ಜೀವನದ ಹೋರಾಟದ ಹಾದಿಗಳನ್ನು ಈ ಕಥೆ ಸಮರ್ಥವಾಗಿ ಕಟ್ಟಿ ಕೊಟ್ಟಿದೆ. ಸಮಾಜದಲ್ಲಿರುವ ಕೆಡುಕುಗಳನ್ನು ಮಹಿಳೆ ಸಂಯಮದಿಂದ ಗೆದ್ದು ಬರುತ್ತಾಳೆ. ಈ ಸಂಯಮ ಎಲ್ಲಿಯವರೆಗೆ? ಎಂದು ಪ್ರಶ್ನಿಸುವ ನಾಯಕಿಯ ಬದುಕೇ ಉರಿಯುವ ಬೆಂಕಿ ಇದ್ದ ಹಾಗೆ.ತೃತೀಯ ಜಗತ್ತಿಗೆ ಮಹಿಳೆಯರ ಭಾವಾಭಿವ್ಯಕ್ತಿ ಯನ್ನು ತೆರೆದಿಡುವ ಈ ಕಥೆ ಮಾನವತೆಯ ಕಡೆ ಹೋಗುವುದನ್ನು ಕಲಿಸುವ ಸಾಹಿತ್ಯಭಿವ್ಯಕ್ತಿಯಾಗಿದೆ. ವಿಚ್ಛಿದ್ರಕಾರಿ ಶಕ್ತಿಗಳು, ಮತಾಂಧತೆ ಹಾಗೂ ಮೂಲ ಭೂತವಾದ ಒಟ್ಟಾಗಿ ಬೆಸೆದುಕೊಂಡು ಜಗತ್ತನ್ನು ನಾಶ ಮಾಡುತ್ತಿರುವ ಹೊತ್ತಲ್ಲಿ, ಮಾನವೀಯತೆಯ ಬೆಸುಗೆ ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳ ಮೋಕ್ಷದಂತಿದೆ. ಇದು ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿ ರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಕೂಡ ಆಗಿದೆ. ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯಲ್ಲಿ ಅಂತ:ಕರಣವಿರುವ ದೇವರೂ ಸಹ ಗಂಡಾಳ್ವಿಕೆ ಯನ್ನು ಎತ್ತಿ ಹಿಡಿಯುವುದಾದರೇ ಅವನು ದೇವರಾಗಲು ಹೇಗೆ ಸಾಧ್ಯ? ಹೆಣ್ಣನ್ನು ಮನುಷ್ಯಳು ಎಂದು ಒಪ್ಪಿಕೊಳ್ಳುವ ಶಕ್ತಿ ಇರುವ ದೇವರನ್ನು ಒಪ್ಪಿಕೊಳ್ಳಬಹುದು, ಇಂತಹ ಶಕ್ತಿಯನ್ನು ನಾವು ಅಂತಿಮ ಶಕ್ತಿಯೆಂದು ಒಪ್ಪಿಕೊಳ್ಳಬಹುದು. ಹೆಣ್ಣಿನ ಸಂವೇದನೆಯನ್ನು ಬೆಳೆಸಿಕೊಳ್ಳಲು ದೈವವಾದರೂ ಪ್ರೇರೇಪಿಸಲಿ ಎಂಬ ಭಾವವನ್ನು ಕಥಾ ನಾಯಕಿ ವ್ಯಕ್ತಪಡಿಸಿದ್ದು ಗಮನಾರ್ಹ.

ಅನಿಷ್ಟ ಪದ್ದತಿ ವಿರುದ್ಧವಾಗಿ ಹೆಣ್ಣು ಬದುಕಬೇಕು. ದಿಟ್ಟತನದಿಂದ ಶೋಷಣೆಯ ವಿರುದ್ದ ಹೋರಾಟ ಮಾಡಬೇಕು. ಅಲಕ್ಷಿತ ಸಮಾಜದಿಂದ ತುಳಿತಕ್ಕೆ ಒಳಗಾದ ಹೆಣ್ಣಾಗಿ ಕಥಾ ನಾಯಕಿ ಅನಾವರಣ ಗೊಳ್ಳುತ್ತಾಳೆ.ಮದುವೆಯಾದ ದಿನದಿಂದಲೇ ಗಂಡನ ಕ್ರೌರ್ಯವನ್ನು ಸಹಿಸಿಕೊಂಡು ಬಂದರು, ಹಣದ ಆಮಿಷಕ್ಕೆ ಒಳಗಾಗಿ ಆಕೆಯನ್ನು ಶೋಷಿಸುತ್ತಾನೆ. ಹಣ ತರದಿದ್ದರೆ ತನಗೂ ಆಕೆಯೂ ಯಾವುದೇ ಸಂಬಂಧವಿಲ್ಲ ಎಂದು ಅಮಾನವೀಯವಾಗಿ ಹೇಳುತ್ತಾನೆ. ತವರಿನವರು ಕಡಿಮೆ ಹಣ ಕೊಟ್ಟಿದ್ದ ರಿಂದ ಅವರೊಂದಿಗೆ ಈಕೆ ಯಾವ ಸಂಬಂಧವನ್ನೂ ಮುಂದುವರೆಸದಂತೆ ತಾಕೀತು ಮಾಡುತ್ತಾನೆ. ಮಗಳು ಹೇಳಿದಂತೆ ಹಣ ಹೊಂದಾಣಿಕೆ ಮಾಡಿ ಕೊಂಡು ಬರುತಿದ್ದ ಆಕೆಯ ತಾಯಿ ಅಪಘಾತದಲ್ಲಿ ಸಾವನ್ನಪ್ಪಿದರೂ ಶವ ಸಂಸ್ಕಾರಕ್ಕೆ ಕಳಿಸದೇ ದರ್ಪ ಮೆರೆಯುತ್ತಾನೆ. ಹೊಕ್ಕಳು ಬಳ್ಳಿಯ ಸಂಬಂಧ ಹರಿದುಕೊಂಡು, ತಾಯಿಯನ್ನು ಕಳೆದುಕೊಂಡ ಕಥಾ ನಾಯಕಿ ಒಳಗೊಳಗೆ ಕುದ್ದು ಬೆಂದರೂ, ಸ್ವಲ್ಪವೂ ಕನಿಕರ ತೋರದೇ ಗಂಡಾಳಿಕೆಯ ಅಹಂ ನಿಂದ ಕ್ರೂರವಾಗಿ ನಡೆದುಕೊಳ್ಳುತ್ತಾನೆ. ನಾಯಕಿ ಮೊದಲು ಹೆಣ್ಣು ಮಗುವನ್ನು ಹೆತ್ತಾಗಲೂ ನಿಕೃಷ್ಟ ವಾಗಿ ಕಾಣುತ್ತಾನೆ. ಮೊದನೇಯ ಮಗು ಸಣ್ಣದಿರು ವಾಗಲೇ ಆಕೆ ಮತ್ತೆ ಗರ್ಭಿಣಿಯಾಗುತ್ತಾಳೆ. ಎರಡನೇ ಮಗು ಹೆರುವ ಸಾಮರ್ಥ್ಯ ಸದ್ಯ ತನ್ನಲ್ಲಿಲ್ಲ ಎಂದಾಗ ಕಠೋರವಾಗಿ ವರ್ತಿಸುತ್ತಾನೆ. ನಿತ್ಯವು ಅವನ ಅಮಾನವೀಯ ನಡೆಯನ್ನು ಮೌನವಾಗಿ ಆಕೆ ಸಹಿಸುತ್ತಾಳೆ ಕಾರಣ, ಆಕೆಗೆ ತಾಯಿ ಹೇಳಿಕೊಟ್ಟ ನೀತಿ ನಿಯಮಗಳಂತೆ ನೋವು ನುಂಗಿ ಬದಕುವು ದನ್ನು ರೂಢಿಸಿಕೊಂಡಿರುತ್ತಾಳೆ.

ಎರಡನೇ ಹೆರಿಗೆಯಲ್ಲಿ ಗಂಡು ಮಗು ಹೆತ್ತಾಗಲೂ ಸಂತೋಷ ಪಡದೆ ಆಕೆ ತವರುಮನೆಯವರು ಕಡಿಮೆ ಹಣನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿ ಸುತ್ತಾನೆ. ಕಾಲಾಂತರದಲ್ಲಿ ಆಕೆಗೆ ಹೊಟ್ಟೆಯಲ್ಲಿ ದೊಡ್ಡ ಗಂಟು ಕಾಣಿಸಿಕೊಳ್ಳುತ್ತದೆ. ಇದೆ ನೆಪ ಮಾಡಿ ಆಕೆಯನ್ನು ತಿರಸ್ಕರಿಸಿ ಮತ್ತೊಂದು ಮದುವೆಯನ್ನು ಮಾಡಿಕೊಳ್ಳವ ಕುರಿತಾಗಿ ಆಕೆಗೆ ಹೇಳುತ್ತಾನೆ. ಮುಸ್ಲಿಂ ಷರೀಯತ್ ಹೇಳುವಂತೆ ಆತ ಮತ್ತೊಂದು ಮದುವೆಯಾಗಲು ಯಾವುದೇ ಕಾನೂನು ಕಟ್ಟಲೆ ಅಡ್ಡಿಪಡಿಸಲಾರವು. ಕಾಯಿಲೆಯಿಂದ ಆಸ್ಪತ್ರೆ ಸೇರಿದ ಆಕೆ ‘ಎರಡನೆಯ ಮದುವೆ ಈಗ ಯಾಕೆ’? ಎಂದು ತನ್ನ ಗಂಡನಿಗೆ ಕೇಳುತ್ತಾಳೆ. ಆಗ ಗಂಡ “ಇನ್ನು ಕೇಳಬೇಕೇನು? ನಿನ್ನಿಂದ ನನಗೆ ಯಾವ ಸುಖ ಸಿಕ್ಕಿದೆ? ಮುಟ್ಟಿದಾಗಲೆಲ್ಲ ಹೆಣದಂತೆ ಬಿದ್ದು ಕೊಂಡಿರ್ತಿದ್ದೆ-ಯಲ್ಲ ಅದಕ್ಕೆ ಇನ್ನೊಂದು ಮದುವೆ ಯಾಗ್ತಿರೋದು” ಎಂದು ಹಾಸಿಗೆಯಿಂದ ಏಳಲು ಸಾಧ್ಯವಾಗದ ಹೆಂಡತಿಯ ಮುಂದೆ ಅಮಾನವೀಯ ವಾಗಿ ನುಡಿಯುತ್ತಾನೆ. ನೋವನ್ನು ಸಹಿಸಲಾರದ ನಾಯಕಿ ‘ಷರೀಯತ್ ನಿಯಮ ನಿರ್ಮಿಸಿದ ದೇವರು ಸಹ ಗಂಡಸು;ಈ ಸಮಾಜ ಕೂಡ ಪುರುಷ ಪ್ರಧಾನವಾ ಗಿದ್ದು, ಬಹುಪತ್ನಿತ್ವದ ಹೆಸರಿನಲ್ಲಿ ಸ್ತ್ರೀಯರನ್ನು ಶೋಷಿಸುತ್ತಿದೆ. ನೀನು ಈ ನೋವು, ಸಂಕಟ, ಕಟ್ಟಳೆ, ಬಂಧನಗಳನ್ನು ಅನುಭವಿಸಿದರೆ ಮಾತ್ರ ಹೆಣ್ಣಿನ ತಳಮಳ ಗೊತ್ತಾಗಲು ಸಾಧ್ಯ, ಹೀಗಾಗಿ ‘ಒಮ್ಮೆ ಹೆಣ್ಣಾಗು ಪ್ರಭುವೇ‘ ಎಂದು ಬೇಡಿ ಕೊಳ್ಳುತ್ತಾಳೆ. ಹೆಣ್ಣಾದರೆ ಆಕೆಯ ಅಳಲು ತಿಳಿಯುತ್ತೆ ಎಂಬುದು ಕಥಾ ನಾಯಕಿ ಮತ್ತು ಲೇಖಕಿಯ ಹತ್ತಿಕ್ಕಲಾರದ ಬಂಡಾಯ ಧ್ವನಿಯಾಗಿ ಇಲ್ಲಿ ಮೂಡಿ ಬಂದಿದೆ.

ಕಥೆಯ ಕೊನೆಯಲ್ಲಿ ಆತ ಮತ್ತೊಂದು ಮದುವೆ ಯಾಗಿ ನಿಬ್ಬಣದೊಂದಿಗೆ ಮನೆಗೆ ಬರುತ್ತಾನೆ. ತನ್ನ ಮಕ್ಕಳೊಂದಿಗೆ ಅಸಹಾಯಕಳಾಗಿ ನೊಂದು ಕುಳಿತ ನಾಯಕಿಯ ಅಂತರಂಗ ಕದಲುತ್ತದೆ. ಕಣ್ಣುಗಳು ಮಂಜುಗಟ್ಟುತ್ತವೆ, ಕೈಯಲ್ಲಿದ್ದ ಹಸಿಗೂಸು ಚರಂಡಿ ಯಲ್ಲಿ ಬಿದ್ದಾಗ, ನೋವಿನಿಂದ ನರಳಿದ ಆಕೆ ವಾಸ್ತವ ಜಗತ್ತಿಗೆ ಕಣ್ತೆರೆಯುತ್ತಾಳೆ. ಕರುಳಿನ ಕೂಗು ಕೇಳಿ ಚರಂಡಿಯಲ್ಲಿ ಬಿದ್ದ ತನ್ನ ಮಗುವನ್ನು ಎದೆಗೆ ಅವುಚಿ ಕೊಳ್ಳುವುದರ ಮೂಲಕ ಮೌನ ರೋದನೆಯ ತಾಯ್ತನದ ಕೂಗು ಕರಳನ್ನು ಹಿಂಡುತ್ತದೆ. ಆಕೆಯ ತಣ್ಣನೆಯ ಪ್ರತಿರೋಧದ ಹಿಂದೆ ತಾಯ್ತನ ಮಾತ್ರ ಗೆದ್ದಿರುವುದು ಕಥೆಯ ಯಶಸ್ಸು.

ಎಲ್ಲರ ಆಶ್ರಯದಾತ ಕರುಣಾಮಯಿ ಎಂದು ಕರೆಯಲ್ಪಡುವ ದೇವರು ಹೆಣ್ಣಿನ ಬದುಕು ಹಿಂಸಾತ್ಮಕವಾಗಿರುವ ಬಗ್ಗೆ ಯಾವುದೇ ಸಾಂತ್ವನ ಹೇಳುವುದಿಲ್ಲ. ಹೀಗಾಗಿ ತನಗೆ ಮುಂದೆ ಉತ್ತಮ ಬದುಕು ಸಿಗಬಹುದೇ? ಎಂಬ ಆಸೆಯೂ ಚಿಗುರೊಡೆದ ಭಾವವನ್ನು ಹೊಂದುವ ಕಥಾ ನಾಯಕಿ ಲೋಕದ ಜೊತೆಗೆ ನಡೆಸುವ ಮಾತುಗಳು ಕಥೆಯ ಮಹೋನ್ನತಿಯನ್ನು ಎತ್ತಿಹಿಡಿದಿದೆ. ಅಂತ್ಯ ದಲ್ಲಿ ಕಥಾ ನಾಯಕಿ ದೇವರಿಗೆ ಸವಾಲು ಒಡ್ಡುತ್ತಾಳೆ.
“ಗಂಡು-ಹೆಣ್ಣು ಸೃಷ್ಟಿ ಮಾಡುವ ನೀನು ಮೂರ್ಖನಂತೆ ಹೆಣ್ಣು ಜೀವಿಗಳನ್ನು ಸೃಷ್ಟಿಸದೇ; ನೀನೇ ಒಮ್ಮೆ ಹೆಣ್ಣಾಗಿ ನೋಡು, ಹೆಣ್ಣಾಗಿ ಹುಟ್ಟಿದ್ದಕ್ಕಾಗಿ ಆಕೆ ಎಷ್ಟೆಲ್ಲಾ ಕ್ರೌರ್ಯವನ್ನು ಅನುಭವಿಸುತ್ತಾಳೆ” ಮತ್ತು “ನೀನು ಇನ್ನೊಮ್ಮೆ ಪ್ರಪಂಚ ನಿರ್ಮಿಸುವುದಾದಲ್ಲಿ ಗಂಡು, ಹೆಣ್ಣು ಸೃಷ್ಟಿಸುವುದಾದಲ್ಲಿ ಅನುಭವ-ವಿಲ್ಲದ ಕಂಬಾರನಾಗಬೇಡ. ಬಾ.. ಭೂಮಿಗೆ ಒಮ್ಮೆ ಹೆಣ್ಣಾಗು ಪ್ರಭುವೇ ! ಒಮ್ಮೆ ಹೆಣ್ಣಾಗು”

ಎನ್ನುವ ಸಾಲುಗಳಿಂದ ಕಥೆ ಮುಗಿಯುತ್ತದೆ. ಈ ಕಥೆಯಅಂತ್ಯ ನಿಜಕ್ಕೂ ಹೆಣ್ಕರುಳಿನ ಅಂತಃಕರಣದ ಸಂವೇದನೆಗೆ ಹಿಡಿದ ಕನ್ನಡಿಯಾಗಿದೆ. ಹೆಣ್ಣು ಬೆಂಕಿ ಯಂಥ ವದಂತಿಗೆ ಮೇಣದಂತೆ ಕರಗುವವಳಲ್ಲ, ಕಲ್ಲಿನಲ್ಲಿ ಕೆತ್ತಿದ ಶಾಸನದಂತೆ ಯುಗ ಯುಗಕೂ ಹೆಣ್ತನದ ಗೆಲುವಿಗೆ ಸಾಕ್ಷಿಯಾಗುತ್ತಾಳೆ. ಮಹಿಳೆಗೆ ಕಾಲಘಟ್ಟಗಳು ನೆಯ್ದು ರೂಪಿಸುವ ನೋವು, ಅವಮಾನ, ಹತಾಶೆ ,ನಿರಾಶೆ, ಸೋಲುಗಳು ಆಯಾ ಕಾಲವು ಸ್ತ್ರೀಗೆ ತಂದೊಡ್ಡಿದ ಸವಾಲುಗಳಾಗಿವೆ. ಇಂತಹ ಸವಾಲುಗಳನ್ನು ಪ್ರತಿರೋಧದ ನೆಲೆಯಲ್ಲಿ ಸಮಯೋಚಿತವಾಗಿ ಸಕಾರಾತ್ಮಕ ನಿಲುವಿನಿಂದ ನಿಭಾಯಿಸುವ ಛಾತಿ ಹೆಣ್ಣಿಗಿದೆ. ಇಂತಹ ವೈರುದ್ಯ ಗಳನ್ನು ಹೆಣ್ಣೊಬ್ಬಳು ಮಾತ್ರ ಸಮರ್ಥವಾಗಿ ಎದುರಿಸ ಬಲ್ಲಳು ಎಂಬುದಕ್ಕೆ ನಾಯಕಿ ಪಾತ್ರದ ಮೂಲಕ ಬಾನು ಸಹೃದಯರ ಅಂತರಂಗದಲ್ಲಿ ದಾಖಲಿಸಿ ದ್ದಾರೆ.
ಈ ಮೂಲಕ ಉಭಯಲಿಂಗಿ ಸಮಾಜದಲ್ಲಿನ ಬಿಕ್ಕಟ್ಟುಗಳಿಗೆ ಹೆಣ್ಣುಮಕ್ಕಳು ತಮ್ಮ ಅಸ್ಮಿತೆಯನ್ನು ಪಣಕ್ಕಿಟ್ಟು ಬಿಡುಗಡೆಯ ದಾರಿ ಕಂಡುಕೊಂಡ ಪಯಣವನ್ನು ಅತ್ಯಂತ ಮನಂಬುಗುವಂತೆ ಬಾನು ಈ ಕಥೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅರಿವೆಂಬುದು ಹೆಣ್ಣೊಳಗಿನ ಸಾಂತ್ವನವು ಹಾಗೆಯೇ ಆಕ್ರೋಶದ ನೆಲೆಯೂ ಆಗಬಲ್ಲದು ಎಂಬುದು ಗಮನಾರ್ಹ. ಭೂತಕಾಲದ ಪಾತ್ರಗಳಿಗೆ ವರ್ತಮಾನದೊಂದಿಗೆ ಮುಖಾಮುಖಿಯಾಗಿ ಯಾಗಿಸುವ ಮೂಲಕ ಭವಿಷ್ಯತ್ತಿನ ಸ್ವಾವಲಂಬಿ ಹೆಣ್ಣನ್ನು ಹುರಿಗೊಳಿಸುವ ಆಶಯ ಈ ಕಥೆ ಈಡೆರಿಸಿದೆ.

ಫಲಿತ, ಸ್ಥಾಪಿತ ಮೌಲ್ಯಗಳ ವ್ಯವಸ್ಥೆಯಲ್ಲಿ ಹೆಣ್ಣು ಅಗ್ನಿದಿವ್ಯಗಳನ್ನು ಎದುರಿಸುವುದು ಅವಳ ಬದುಕಿನ ಒಂದು ಭಾಗವಾಗಿಯೇ ಕಂಡಿವೆ. ಈವರೆಗೂ ನಾವು ಇಂತಹ ಜನಜನೀತ ಕಥೆಗಳನ್ನು ಓದಿದ್ದೇವೆ. ಆದರೆ ಅಂತಹ ಕಠಿಣವಾದ ಸಂದರ್ಭದಲ್ಲಿಯೂ ಸೋತು ಗೆದ್ದ ಇಂತಹ ಹೆಣ್ಣು ಪಾತ್ರಗಳಿಗೆ ಜೀವ ತುಂಬವ ಈ ಕಥೆ ಸ್ವಗತದ ಮೂಲಕ ಮತ್ತೆ ಹೆಣ್ತನದ ಧ್ವನಿ ಜೀವಂತವಾಗಿ ನಮ್ಮನ್ನು ಕಥಾ ನಾಯಕಿಯಾಗಿ ಕಾಡಿದ್ದಾಳೆ. ಈ ಕಥೆಯ ಪಾತ್ರಗಳ ನಡುವೆ ನಡೆದ ತ್ರಿಕೋನ ಸಂಘರ್ಷದ ಹತ್ತಾರು ಮಗ್ಗಲುಗಳನ್ನು ಮನೋಜ್ಞವಾಗಿ ತೆರೆದಿಡುವಲ್ಲಿ ಯಶಸ್ಸಿಯಾಗಿದೆ. ಸಂಘರ್ಷ ಮತ್ತು ಪ್ರತಿರೋಧದ ಹಿನ್ನೆಲೆಯ ಕಥನ ವಸ್ತುವಿದ್ದರೂ, ಬದಲಾದ ಕಾಲಘಟ್ಟದಲ್ಲಿನ ಹೆಣ್ಣೊಬ್ಬಳ ಅಂತರಂಗದ ತುಮುಲಗಳನ್ನು ಮರು ದರ್ಶಿಸುವ ಮೂಲಕ ಹೆಣ್ಣುಮಕ್ಕಳ ಮೂಕವೇದನೆ ಹಾಗೂ ಅಷ್ಟೇ ಗಟ್ಟಿತನದ ನೆಲಮೂಲದ ಸತ್ವ ಪಡೆದ ಇಂತಹ ಪಾತ್ರಗಳನ್ನು ಆಧುನಿಕೋತ್ತರ ಕಾಲದಲ್ಲಿ ಮರುಪರಿಶೀಲನೆ ಮಾಡುವ ತುರ್ತು ಇದೆ ಎಂಬುದನ್ನು ಕಥೆ ಸಮರ್ಥವಾಗಿ ಧ್ವನಿಸಿದೆ.

ಸದಾಕಾಲ ತ್ಯಾಗ, ಭೋಗದ ವಸ್ತುವಾಗಿ ಚಿತ್ರಿಸಲಾದ ಹೆಣ್ಣು , ತನ್ನೊಳಗನ್ನು ಬಿಚ್ಚಿಟ್ಟದ್ದು ಬಹಳ ಕಡಿಮೆ. ಅವಳ ಧ್ವನಿ ಅಡಗಿಸುವ ಹಾಗೂ ನೋವು ನುಂಗಿ ನಗುವ ಪಾತ್ರಗಳಲ್ಲಿ ಕಳೆದು ಹೋಗುವ ಜೀವನ ಪ್ರೀತಿಯ ಹೆಣ್ಣಿಗೆ ಈ ಕಥೆ ಮಾತಾಗಿದೆ. ಈ ಕಥೆ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಮಹತ್ವ ಹೊಂದಿದೆ. ಹಾಗಾಗಿ ಸಾಹಿತ್ಯ ಕೊಡುಗೆಗಳು ಮಹಿಳೆಯ ಬರವಣಿಗೆ ಅಥವಾ ಮುಸ್ಲಿಂ ಸಂವೇದನೆಗಳ ದೃಷ್ಟಿಯಿಂದ ಮಾತ್ರ ನೋಡದೆ ‘ಜೀವಪರ ಧ್ವನಿ’ ಎಂದು ಭಾವಿಸಬೇಕಿದೆ.

✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಸಾಹಿತಿಗಳು ಬೆಳಗಾವಿ
ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
