ರಾಜಸ್ಥಾನ ಪ್ರವಾಸದ ಆರಂಭದಲ್ಲಿ ಜೈಪುರದಲ್ಲಿ ಪದೇ ಪದೇ ಕಾಣುತ್ತಿದ್ದ ಮತ್ತು ಕಾಡುತ್ತಿದ ಕಟ್ಟದ ಎಂದರೆ ಹವಾ ಮಹಲ್. ಪದೇ ಪದೇ ಡ್ರೈವರ್ ಬಳಿ ನಿಲ್ಲಿಸಲು ಹೇಳಿದರೆ ಬೇರೆ ಸ್ಥಳ ನೋಡಿ ಸರ್ ನಂತರ ತೋರಿಸುವೆ ಎನ್ನುವ ಮಾತು. ಕೊನೆಗೂ ಹವಾ ಮಹಲ್ ಹೊರಭಾಗ ನೋಡಿದರೆ ಸಾಕು ಸರ್ ಏನೂ ಇಲ್ಲ ಎಂಬ ಮಾತು. ಅವನಿಗೆ ಕಮಿಶನ್ ಸಿಗುವ ಅಂಗಡಿ ತೋರಿಸುವ ಚಿಂತೆ, ನಮಗೆ ಹವಾ ಮಹಲ್ ಒಳ ಹೊಕ್ಕುವ ಚಿಂತೆ. ಅಂತು ಅವನಿಂದ ತಪ್ಪಿಸಿಕೊಂಡು ವಿವಿಧ ಕಾಲಘಟ್ಟದಲ್ಲಿ ಕಂಡ ಹವಾ ಮಹಲ್ ಒಳ ಹೊಕ್ಕಾಗ ತೆರೆದೆಕೊಂಡಿದ್ದು ವಿಸ್ಮಯ ಲೋಕ. ಗುಲಾಬಿ ನಗರದಲ್ಲಿ ಗುಲಾಬಿ ಕಟ್ಟಡಗಳ ನಡುವೆ ಗುಲಾಬಿ ಮೇರಿನ ಕಟ್ಟಡವಿದು.

ರಾಜಸ್ಥಾನದ ಬಿಸಿಲಿನಲ್ಲಿ ತಂಪಾದ ಪಿಂಕ್ ನಗರಕ್ಕೆ ಅನುಗಣವಾಗಿ ದೊಡ್ಡದಾಗಿ ನಿರ್ಮಾಣಗೊಂಡ ಈ ಅರಮನೆ ಜೈಪುರದ ಪ್ರಮುಖ ಪ್ರವಾಸಿ ಸ್ಥಳ. 1799 ರಲ್ಲಿ ಇಲ್ಲಿನ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಈ ಅರಮನೆಯನ್ನು ನಿರ್ಮಾಣಮಾಡಿದ್ದು ಖೇತ್ರಿ ಮಹಲ್ ಮಾದರಿಯಿಂದ ಪ್ರೇರಿತರಾಗಿ ಲಾಲ್ ಚಂದ್ ಅವರ ವಿನ್ಯಾಸದಲ್ಲಿ ಈ ಭವ್ಯವಾದ ಅರಮನೆಯನ್ನು ನಿರ್ಮಿಸಿದರು.

ಸುಮಾರು 50 ಅಡಿ ಎತ್ತರದ ಪಿರಮಿಡ್ ಆಕಾರ ದಲ್ಲಿ ನಿರ್ಮಾಣಗೊಂಡ ಈ ಅರಮನೆ ಐದು ಅಂತಸ್ತನ್ನು ಹೊಂದಿದೆ. ಇದರಲ್ಲಿ ಮೊದಲ ಎರಡು ಮಹಡಿಗಳು ಒಳಾಂಗಣವನ್ನು ಹೊಂದಿದ್ದರೆ, ಮೇಲಿನ ಮೂರು ಮಹಡಿಗಳು ಒಂದು ಮಾದರಿ ಯಲ್ಲಿದ್ದು ಹೊರಗಿನಿಂದ ಜೇನುಗೂಡಿನ ಮಾದರಿ ಯಂತೆ ಇದ್ದು ಸುಮಾರು 953 ಕಿಟಕಿಗಳನ್ನು ಹೊಂದಿದೆ. ಇಲ್ಲಿ ಜಾಲರಿಯನ್ನು ಅಳವಡಿಸಲಾಗಿದ್ದು ಆಗಿನ ಅರಮನೆಯ ಸ್ತೀಯರು ಹೊರ ಪ್ರಪಂಚನ್ನು ನೋಡುವಂತೆ ಮತ್ತು ಇದರಿಂದ ಬರುವ ಗಾಳಿ ಯಿಂದ ಬೇಸಿಗೆಯಲ್ಲೂ ತಂಪಾಗಿರುವಂತೆ ನಿರ್ಮಿಸ ಲಾಗಿದೆ. ಜೈಪುರದ ರಸ್ತೆಯನ್ನು ಕಾಣುವ ಅರಮನೆ ಯ ಹಿಂಭಾಗವೇ ಸುಂದರ ಭಾಗವಾಗಿದ್ದು, ಪ್ರವಾಸಿಗರ ಗಮನ ಸೆಳೆಯುತ್ತದೆ.

ಕೆಂಪು ಮತ್ತು ಗುಲಾಬಿ ಮರಳುಗಲ್ಲಿನಲ್ಲಿ ನಿರ್ಮಾಣ ವಾದ ಈ ಅರಮನೆಯಲಿ ಚಿಕ್ಕ ಚಿಕ್ಕ ಕಿಟಕಿಗಳು, ಗ್ರಿಲ್ ಮಾದರು ಮತ್ತು ಗುಮ್ಮಟವನ್ನು ಹೊಂದಿದೆ. ಕಟ್ಟಡದ ಒಳ ಭಾಗದಲ್ಲಿನ ಕಾರಿಡಾರನಲ್ಲಿರುವ ಕೋಣೆಗಳು ಅಲಂಕರಣಗೊಂಡಿದೆ. ಮಧ್ಯದಲ್ಲಿ ಕಾರಂಜಿ ಮಾದರಿ ಇದೆ. ಪೂರ್ವ ಭಾಗದಲ್ಲಿ ವಸ್ತು ಸಂಗ್ರಹಾಲಯವಿದೆ.2006 ರಲ್ಲಿ ಇದನ್ನು ನವೀಕರಸ ಲಾಯಿತು.

ರಾಜ ಪ್ರತಾಪ ಸಿಂಗ್ ಕೄಷ್ಣನ ಅನುಯಾಯಿಯಾದ ಕಾರಣ ಅರಮನೆ ಕಿರೀಟದ ಮಾದರಿಯಲ್ಲಿದೆ. ಆಗಿನ ಕಾಲದಲ್ಲಿ ರಾಜ ಮನೆತನದ ಹೆಣ್ಣು ಮಕ್ಕಳನ್ನು ಅಪರಿಚಿತರು ನೋಡಬಾರದು ಮತ್ತು ಅವರು ಹೊರ ಪ್ರಪಂಚ ನೋಡಬೇಕು ಎನ್ನುವ ಕಾರಣದಿಂದ ರಾಜಸ್ಥಾನದಲ್ಲಿ ಹಲವು ಅರಮನೆ ಮತ್ತು ಹವೇಲಿ ಗಳು ನಿರ್ಮಾಣಗೊಂಡಿದ್ದು, ಅವುಗಳಲ್ಲಿ ಮೆರೆಗಿನ ಕಟ್ಟಡ ಗುಲಾಬಿ ಬಣ್ಣದ ಈ ಹವಾ ಮಹಲ್. ನಂಬಿಕೆಗಳು ಏನೇ ಇರಲಿ ಸುಂದರ ವಿನ್ಯಾಸ ವಾಸ್ತು ಲೋಕದ ಸುಂದರ ನೆನಪಾಗಿ ಹಲವು ನಿಟ್ಟುಸಿರಿನಲ್ಲೂ ಭವ್ಯತೆ ಮೆರೆಯುತ್ತಿದೆ.

ಹವಾ ಮಹಲ್ ಪ್ರತಿ ದಿನ ಬೆಳಿಗ್ಗೆ 9.00 ರಿಂದ ಸಂಜೆ 4.30 ರವರೆಗೆ ಪ್ರವಾಸಿಗರಿಗೆ ಪ್ರವೇಶವಿದ್ದು, ಭಾರತೀಯರಿಗೆ 10/- ಮತ್ತು ವಿದೇಶಿಯರಿಗೆ 50/- ಪ್ರವೇಶ ದರವಿದೆ. ಸಂಜೆಯ ಬೆಳಕಲ್ಲಿ ಮತ್ತು ರಾತ್ರಿ ಸಮಯದಲ್ಲಿ ಇದರ ದೄಶ್ಯ ವರ್ಣಣಾರ್ತೀತ.

ಜೈಪುರದ ಹೃದಯ ಭಾಗದಲ್ಲಿ ಹವಾ ಮಹಲ್ ಇದ್ದು ಸುಲಭವಾಗಿ ತಲುಪಬಹುದು. ಸಮೀಪದ ಸಿಟಿ ಪ್ಯಾಲೇಸ್ ಮತ್ತು ಜಂತರ ಮಂಥರ್ ನೋಡ ಬಹುದು. ಹವಾ ಮಹಲ್ ಸುತ್ತಲೂ ಗುಲಾಬಿ ಬಣ್ಣದ ಹಲವು ಕಟ್ಟಡಗಳಿದ್ದು, ಅವು ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿದ್ದು ಗುಲಾಬಿ ನಗರಕ್ಕೆ ಪುಷ್ಟಿ ನೀಡಿದೆ. ಇಲ್ಲಿನ ಕಟ್ಟಡಗಳಲ್ಲಿ ವಿವಿಧ ಮಾರುಕಟ್ಟೆಯ ಲೋಕವೇ ಇದ್ದು, ನಿಮ್ಮ ಬಜೆಟ್ ಸರಿಯಾಗಿ ಹೊಂದಿಸಿಕೊಳ್ಳಿ.
✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು
