‘ಭೋಗ ಸಾಧನೆಯ ಕವನ ಭಾಂಡಾರವು ಇದೆ. ಯೋಗ ಸಾಧನೆಯ ಕವನ ಮಾರ್ಗವೂ ಇದೆ’. ಸಾಮಾನ್ಯತೆಯ ಅಜ್ಞಾನ ಅಹಂಕಾರಗಳಿಗೆ ನಾವು ಪಟ್ಟಗಟ್ಟಿ ಅದನ್ನು ಶಿಲಾಶಾಪಕ್ಕೆ ಗುರಿಪಡಿಸ ಬಾರದು. ರಾಮ ಪಾದ ಸ್ಪರ್ಶ ಅದಕ್ಕೂ ಬೇಕು. ಆ ದಿವ್ಯ ದರ್ಶನದಲ್ಲಿ ವ್ಯಾಧನು ವಾಲ್ಮೀಕಿಯಾಗು ತ್ತಾನೆ. ಇಂಥ ಹುತ್ತದ ಸುತ್ತ ‘ಆನು,ತಾನು, ನಾನು ನೀನಿನ’ ‘ನಾಕುತಂತಿ’ ಯ ಈ ಚೌದಂತ ವೀಣೆ ಮಿಡಿಯು ತ್ತದೆ. “ಬೇಕಾದರಾಲಿಸುವದು ಬೇಡವಾದರೆ ಪರಾಕು ಮಾಡುವದು” ಎನ್ನುವುದು ಔದ್ಧತ್ಯ ಎನಿಸಿಕೊಳ್ಳ ಬಾರದು. ಭವ್ಯರು ಲಾಲಿಸ ಬಹುದು. ಭವಿ ಭಕ್ತರನ್ನು ಜೋಡಿಸುವ ಭವ್ಯ ಪಥ ಇದು.’

ಈ ಸಾಲುಗಳು ಬೇಂದ್ರೆಯವರು ‘ನಾಕು ತಂತಿ’ ಕವನ ಸಂಗ್ರಹದ ಮೊದಲು ಮುದ್ರಣಕ್ಕೆ ಬರೆದ ಮುನ್ನುಡಿಯಲ್ಲಿವೆ. ಇದು ೧೯೬೪ರಲ್ಲಿ ಪ್ರಕಟವಾ ಯಿತು. ೧೯೭೪ ನವ್ಹಂಬರ ಎಂಟರಂದು ‘ನಾಕುತಂತಿ’ ಗೆ ‘ಜ್ಞಾನಪೀಠ’ ಪ್ರಶಸ್ತಿ ದೊರೆಯಿತು. ಅದು ಈಗ ‘ಚಿನ್ನದ ನೆನಪು’.

ಹದಿನಾರನೆ ಮುದ್ರಣದಲ್ಲಿ ಡಾ.ವಾಮನ ಬೇಂದ್ರೆ ಯವರು ಬರೆದ ಭೂಮಿಕೆಯಲ್ಲಿ ಹೀಗೆ ಹೇಳುತ್ತಾರೆ. ‘ಅಂಬಿಕಾತನಯದತ್ತರು ಮಿಡಿಯುವ ವೀಣೆಗೆ ನಾನು, ನೀನು,ಆನು,ತಾನು ಎಂಬ ನಾಕೇ ನಾಕು ತಂತಿ ಎಂದು ಅವರೇ ಹೇಳಿದ್ದಾರೆ. ನಾನು- ತಂದೆ, ನೀನು- ತಾಯಿ, ಆನು – ಇವರಿಬ್ಬರ ಆಧಾರವಾಗಿ ಬರುವ ಮಗು – ಮತ್ತು ಈ ಕುಟುಂಬ ಸಂಸ್ಥೆಗೆ ಸ್ವಸ್ತಿ ಶುಭಂ ಎನ್ನುವ ಪರಮಾತ್ಮ ಶಕ್ತಿ. ತಾನು ಎಂಬುದು ಕವಿಯ ಭಾವ. ತಂದೆ, ತಾಯಿ, ಮಗು ಬಿಟ್ಟರೆ ಜಗತ್ತಿನಲ್ಲಿ ಬೇರೆ ಏನೂ ಇಲ್ಲ. ಇವರ ಕಲಹವೇ ಇತಿಹಾಸ. ಇವರಲ್ಲಿ ಶಾಂತಿ ಪ್ರತಿಷ್ಠಾನಗೊಳ್ಳುವದೇ ದೇವಜನ್ಮ, ನವಯುಗ. ಈ ಸೂತ್ರ ವನ್ನು ಅನುಸರಿಸಿ ‘ನಾಕು ತಂತಿ’ಯೊಳಗಿನ ಅನೇಕ ಕವನಗಳು ರೂಪ ಗೊಂಡಿವೆ. ಈ ಕವನ ಸಂಕಲನದಲ್ಲಿ ‘ನಾಕುತಂತಿ’ ಕವಿತೆ ನಾಲ್ಕು ಭಾಗಗಳಲ್ಲಿವೆ.ಈ ನಾಕು ತಂತಿಗಳು ಕವಿಯ ವ್ಯಕ್ತಿತ್ವದ ನಾಲ್ಕು ಮಗ್ಗುಲುಗಳನ್ನ ನಿರೂಪಿಸು ತ್ತವೆ. ಕವಿ ಮನುಷ್ಯನ ಅಂತರಂಗವನ್ನು ರೂಪಕಗಳ ಮೂಲಕ ವರ್ಣಿಸುತ್ತ ತಿಳಿ ಹೇಳಿದ್ದಾರೆ. ಬೇಂದ್ರೆ ಯವರು ಆ ನಾಲ್ಕು ಮಗ್ಗುಲುಗಳಿಗೆ ನಾನು, ನೀನು, ಆನು,ತಾನು ಎಂದು ಹೆಸರು ಕೊಟ್ಟಿದ್ದಾರೆ. ಆ ಹೆಸರಿನಲ್ಲಿ ಉಸಿರು ತುಂಬಿ ಕಾವ್ಯ ಗಂಗೆ ಯನ್ನು ಹರಿ ಬಿಟ್ಟಿದ್ದಾರೆ. ಅದು ತೊರೆ, ತೊರೆ ಯಾಗಿ ಹರಿಯುತ್ತಾ ಓದುಗನನ್ನು ಮುಳುಗೇಳಿಸುತ್ತದೆ.

-ಒಂದು-
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS.

ಆವು ಎಂದರೆ ಆಕಳು. ಗೋ, ಕಾಮಧೇನು. ನಮ್ಮಲ್ಲಿ ಆಕಳಿಗೆ ‘ಗಾವೋ ವಿಶ್ವಸ್ಯ ಮಾತರ:’ ಎಂದು ಹೇಳುತ್ತಾರೆ. ಆವಿನ ಗುಣ ಧರ್ಮ ಈಯುವದು, ಹಾಲುಣಿಸುವದು. ಈಯುವದು ಎಂದರೆ ಪ್ರಸವಿಸು ವದು. ಕರು ಹಾಕುವುದು ಎಂದರ್ಥ. ಈ ಆವನ್ನು ಕವಿ, ಕಾವ್ಯ ಸೃಜನ ಹಾಗೂ ಮಾನವ ಸೃಜನದ ರೂಪಕದೊಂದಿಗೆ ಮುನ್ನಡೆಯುತ್ತಾನೆ.

ನಾನು ಹಾಗೂ ನೀನು ಎಂದರೆ ಗಂಡ, ಹೆಂಡತಿ ಆನು ಎಂದರೆ ಅವರಿಬ್ಬರೂ ಕೂಡಿರುವ ದೇವ ಚೈತನ್ಯ. ನಾನು ಎಂದರೆ ಅವನು ಪುರುಷ. ನೀನು ಎಂದರೆ ಪ್ರಕೃತಿ. ಈ ಪ್ರಕೃತಿ ಪುರುಷರಲ್ಲಿ ದೈವಿ ಚೈತನ್ಯದ ಮಿಥುನವಾಗಿ ಅವರಿಂದ ಬರುವ ಸೃಷ್ಟಿಯೇ ಕೂಸು, ಕಂದ. ಭಾರತೀಯ ಪರಂಪರೆ ಯಲ್ಲಿ ದಾಂಪತ್ಯ ಎನ್ನುವುದು ಶಿವಪಾರ್ವತಿಯರ ಉಪಾಸನೆ ಇದ್ದ ಹಾಗೆ. ನಾನು ಎಂದರೆ ಕವಿ. ನೀನು ಎಂದರೆ ಕಾವ್ಯ ಪ್ರಜ್ಞೆ. ಕವನ ಇವರೀರ್ವರ ಸೃಷ್ಟಿ. ಅದು ಆನು. ತಾನು ಎಂದರೆ ಸಂಗೀತದ ನಾದ. ಅದು ತನನನಾS.ಅದುವೇ ಜೀವನದ ಆನಂದ ಲಹರಿ.

ಚಾರು ಎಂದರೆ ನಾಲ್ಕು. ಚಾರು ಎಂದರೆ ಸುಂದರ ವಾದ.ಈ ಸುಂದರವಾದ ನಾಲ್ಕು ತಂತ್ರಗಳನ್ನು ಹೊಂದಿದ ಕಾವ್ಯ ಸೃಷ್ಟಿ ಪ್ರತಿ ಚರಣದಲ್ಲೂ ಹೊಮ್ಮಿಸುವ ನಾದ ಓಂಕಾರದಿಂದ ಕೂಡಿದೆ. ಈ ಓಂಕಾರ ಬೇಂದ್ರೆಯವರಿಗೆ ಶ್ರಾವಣದ ಮೋಡಗಳ ಆಲಿಂಗನದಿಂದ ಉಂಟಾಗುವ ಶಬ್ದದ ಮೂಲಕ ಕೇಳಿ ಬರುವ ದಿವ್ಯ ಧ್ವನಿ. ಶ್ರವಣೋಪಾಸಕರು ಬೇಂದ್ರೆ. ಶ್ರವಣದಿಂದ ಮುಂದೆ ಮನನ ನಿಧಿ ಧ್ಯಾಸನ. ಅವರ ಎಲ್ಲ ಆಗು ಹೋಗುಗಳು ಶ್ರಾವಣದಲ್ಲಿಯೇ. ಆದ್ದರಿಂದ ಬೇಂದ್ರೆ ‘ಶ್ರಾವಣ’ದ ಕವಿ. ಮೋಡಗಳನ್ನು ಘನ ಎಂದು ಕರೆಯುತ್ತಾರೆ. ಈ ಘನ ಘನೀತ ನೀಡುವ ಚತುರಸ್ವನಾ ಎಂದರೆ, ನಾನು, ನೀನು, ಆನು, ತಾನು, ಎನ್ನುವ ಶಬ್ದಗಳು.  ಈ ಶಬ್ದಗಳಿಗೆ ಪರಾ, ಪಶ್ಯಂತಿ, ಮಧ್ಯಮ ಮತ್ತು ವೈಖರಿ ಎನ್ನುವ ನಾಲ್ಕು ಹಂತಗಳು. ಮೂಲಾಧಾರ ಚಕ್ರದಲ್ಲಿ ರುವ ನಿಷ್ಪಂದ ಶಬ್ದ ಬ್ರಹ್ಮಕ್ಕೆ ‘ಪರಾ ವಾಕ್‘ ಎನ್ನುತ್ತಾರೆ. ಅದು ವಾಯುವಿನ ಜೊತೆ ಕೂಡಿ ನಾಭಿಯವರೆಗೆ ಹೋಗಿ ಸ್ವಾಧಿಷ್ಠಾನ ಚಕ್ರ ದಲ್ಲಿ ಮನಸ್ಸಿನ ಜೊತೆ ಕೂಡಿ ‘ಪಶ್ಯಂತಿ ವಾಕ್‘ ಎನಿಸು ತ್ತದೆ. ಆ ಶಬ್ದ ಬ್ರಹ್ಮವು ಹೃದಯದವರೆಗೆ ಹೋಗಿ, ಅನಾಹತ ಚಕ್ರದಲ್ಲಿ ನಾದಮಯವಾಗಿ ‘ಮಧ್ಯಮಾ ವಾಕ್’ ಎಂದಾಗುತ್ತದೆ. ಕಂಠ ಪ್ರದೇಶದಲ್ಲಿ, ವಿಶುದ್ಧಿ ಚಕ್ರದಲ್ಲಿ ಅದು ಕೇಳಲು ಯೋಗ್ಯವಾದ ‘ವೈಖರಿ ವಾಕ್‘ ಆಗುತ್ತದೆ. ನಾಭಿ ಯಲ್ಲಿ ಮೊಳಕೆಯೊಡೆದು ಕಂಠದ್ವಾರದಿಂದ ಪಂಚ ಭೂತಗಳಿಂದ ಕೂಡಿದ ವಾತಾವರಣಕ್ಕೆಬರುವಾಗ, ಬಂದಾಗ ಅದು ಅಂದರೆ ಆ ವಾಕ್ ‘ಮಾತು’ ಎಂದು ಕರೆಸಿಕೊಳ್ಳುತ್ತದೆ. ಅದನ್ನು ‘ಧ್ವನಿ’ ಎನ್ನು ತ್ತಾರೆ. ಈ ಧ್ವನಿ ಕಂಠದಿಂದ ವದನಕ್ಕೆ ಬಂದು ಕಂಠ್ಯ,ತಾಲವ್ಯ,ಮೂರ್ಧನ್ಯ,ದಂತ್ಯ ಮತ್ತು ಓಷ್ಠ್ಯ ಎಂಬ ರೂಪಾಕ್ಷರಗಳ ಮೂಲಕ ಶಬ್ದಗಳ ಸ್ಫುರಣ ವಾಗತ್ತದೆ.

ಇಲ್ಲಿ ನಾನು, ನೀನು, ಆನು,ತಾನು ಎನ್ನುವ ಭಾವನೆ ಗಳನ್ನು ಹೊರಡಿಸುವ ನಾಲ್ಕು ತಂತಿಗಳಾಗಿವೆ. ಬೇಂದ್ರೆಯವರು ಅರವಿಂದರಿಂದ ಪ್ರಭಾವಿತರಾದ ವರು.ಅವರ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಕಾವ್ಯ ನಾಲ್ಕು ಸೌಂದರ್ಯಗಳಿಂದ ಕೂಡಿರುತ್ತದೆ. ಐಂದ್ರಿಯಕ  ಸೌಂದರ್ಯ, ಬೌದ್ಧಿಕ ಸೌಂದರ್ಯ, ಭಾವನಾತ್ಮಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯ. ಈ ನಾಲ್ಕು ತಂತ್ರಗಳು ಇಲ್ಲಿ ನಾಲ್ಕು ತಂತಿಗಳಾಗಿವೆ. ಭಾರತೀಯ ತತ್ವಜ್ಞಾನದ ಆಳಕ್ಕೆ ಇಳಿದಂತೆ ಇನ್ನೂ ಅನೇಕ ಹೊಸ ಹೊಳೆಯುತ್ತ ಹೋಗುತ್ತವೆ.

ಹತವೋ ಹಿತವೋ
ಆ ಅನಾಹತ
ಮಿತಿ ಮಿತಿಗೆ ಇತಿ
ನನನನಾ’.

ಅನಾಹತ ಎನ್ನುವುದು ಒಂದು ಚಕ್ರ. ಇದು ಎದೆಯ ಮಧ್ಯದಲ್ಲಿ ಹೃದಯಕ್ಕೆ ಅತ್ಯಂತ ಆಪ್ತ ವಾಗಿದೆ. ಇದರ ಮಂತ್ರ ‘ಯಮ್‘ ಇದು ಹೊರಡಿಸುವ ನಾದ ‘ಸೋಹಂ’ ಆದ್ದರಿಂದಲೇ ಬೇಂದ್ರೆ ಯವರ ಕಾವ್ಯ ‘ನಾದಲೀಲೆ. ಅನಾಹತ ಚಕ್ರದಲ್ಲಿ ಹೊಮ್ಮುವ ನಾದಕ್ಕೆ ‘ಆಹತ‘ ತಾಡನ ಬೇಕಾಗಿಲ್ಲ. ಆ ಕಾರಣ ದಿಂದಲೇ ಅದಕ್ಕೆ ಅನಾಹತ ಚಕ್ರ ಎನ್ನುವರು. ಅನಾಹತ ಚಕ್ರದಿಂದ ಅಂದರೆ ಹೃದಯ ಭಾಗದಿಂದ ಹೊರಡುವ ನಾದ ಶರೀರಿಯಾದ ಈ ಕಾವ್ಯವು ಹತವೋ, ಹಿತವೋ. ಒಳ್ಳೆಯದೋ ಕೆಟ್ಟದ್ದೋ ಎಂದು ಅರಿತವರಾರು?.ಏನೇ ಆಗಲಿ ಅದು ಸ್ವಾತ್ಮಾ ಸಂತೋಷವನ್ನು ಸೂಚಿಸುತ್ತದೆ. ಮನೋನಂದವನ್ನು ನೀಡುವ ಸಂಗೀತಕ್ಕಿದೆ. ನಾದ ಸಂಗೀತದ ಒಂದು ರೂಪ.


‘ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ
ತಸ್ವನಾ’

ಈನು ಸಹಜ ಪ್ರಸವವನ್ನು ಧ್ವನಿಸುತ್ತದೆ. ಪ್ರಸವಿ ಸುವ ಸ್ತ್ರೀ ಬೆನ್ನಿಗೆ ಆನಿಕೆಯನ್ನು ಪಡೆದುಕೊಂಡು ಸಹಜ ಪ್ರಸವವನ್ನು ಮಾಡುತ್ತಾಳೆ. ಜನನದ ಜಾನಿಕೆಯಾಗಿ ಮನನದಿಂದ ತನ್ನ ಶಿಶುವಿಗೆ ಮೊಲೆಯುಣಿಸುತ್ತಾಳೆ. ಜನನದ ಧ್ಯಾನವೇ ಜಾನಿಕೆ. ಬೆನ್ನಿಗೆ ಆನಿಕೆ ಅದುವೆ ಆಧಾರ. ಇದು ಕವಿಯ ಕಾವ್ಯ ಸೃಷ್ಟಿಯ ಅವಸ್ಥೆ. ಕವಿಯ ಮನಸ್ಸಿ ನಲ್ಲಿ ಕಾವ್ಯ ಸೃಷ್ಟಿ,ಅದು ಪ್ರಕಟವಾಗುವ ವಿಚಾರ ಇಲ್ಲಿದೆ. ಕಾವ್ಯದ ಮನನ ಇಲ್ಲಿ ಸ-ಹಿತ-ಸ್ವನಾ ಆಗಿದೆ. ಕಾವ್ಯ ಶಿಶುವಿಗೆ ಸಾಹಿತ್ಯ ಮತ್ತು ಸಂಗೀತ ಜೋಡು ಮೊಲೆಗಳಿದ್ದ ಹಾಗೆ. ಕಾವ್ಯ ದೇವತೆ ಗಳಿಂದ ವರ ಪ್ರಸಾದ ರೂಪದಲ್ಲಿ ಸ್ತನ್ಯ ಪಾನದ ಅಲೌಕಿಕ ಅನುಭವ ಪಡೆದು, ಸಂಸ್ಕಾರ ಸಂಪನ್ನ ರಾದವರು ಬೇಂದ್ರೆ. ಬೇಂದ್ರೆಯವರ ದೃಷ್ಟಿಯಲ್ಲಿ ಇದು ಪಡೆದುಕೊಂಡು ಬಂದದ್ದು.

✍️ಡಾ. ಕೃಷ್ಣ ಕಟ್ಟಿ, ಧಾರವಾಡ. 
ವಿಶ್ರಾಂತ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು
ಕನ್ನಡ ವಿಶ್ವವಿದ್ಯಾಲಯ, ಹಂಪಿ