ಯಾವ ಕವಿತೆ ಓದುವೆ
ಎಂದು
ಕೇಳುತ್ತಾನೆ ಅವ
ನನ್ನನ್ನು..
ಬರೆಯಬೇಕು ಒಂದು
ಕವಿತೆ
ಅವನ ಸಾವಿಗಾಗಿ..
ಎಲ್ಲವನ್ನೂ ನಾನು
ಎತ್ತಿಟ್ಟು
ಅವನ ಬದುಕ ಬಿಚ್ಚಿ
ನಾನು ತೊಟ್ಟುಕೊಂಡು
ಕಿಸೆಯನ್ನು ತಡಕಾಡಬೇಕು
ಸಿಗಬಹುದು ನನಗೆ
ಚೂರಾದ ನೀಲಿ ಗೋಲಿ
ಒಣಗಿದ ಗುಲಾಬಿಯ ಪಕಳೆ
ಬಚ್ಚಿಟ್ಟ ಅಂಕಪಟ್ಟಿ
ಅವಳಿಗೆ ತಂದಿದ್ದ ಮೂಗುತಿ
ದೋಸೆ, ಮೈಸೂರುಪಾಕ್ ನ ಬಿಲ್ಲು
ಫೀಜಿನ ರಸೀದಿ
ಕಿಸೆಯ ಮೂಲೆಯಲ್ಲೊಂದು ತೂತು..
ಗೊತ್ತಿಲ್ಲ ಅವನಿಗೆ
ಅವನು ಮಾತಾಡಿದರೆ
ಕವಿತೆ ಕೇಳಿಸುತ್ತದೆಂದು
ನಡೆದಾಡಿದರೆ
ಪದಗಳು ಮೂಡುತ್ತವೆಂದು..
ಕಂಡೂ ಕಾಣದಂತೆ
ಇಲ್ಲದೆಯೂ ಇರುವಂತೆ
ಥೇಟ್ ಕವಿತೆಯಂತೆ
ಬದುಕುತ್ತಿರುವ ಅವನು
ತನ್ನ ಸಾವು ಕವಿಗೋಷ್ಠಿಯೋ
ಎಂಬಂತೆ ಕೇಳುತ್ತಾನೆ..
ಅಂದು
ಯಾವ ಕವಿತೆ ಓದುವೆ
ನನಗಾಗಿ ಎಂದು..
ಓದುವೆ
ಓದುವೆ ನಾನು..
ಹಾರವಾಗಿ ಬಂದು ಪದಗಳಾಗಿಬಿಟ್ಟ
ಆ ಹೂಗಳನೇ ನೇಯ್ದು
ನಿನ್ನ ನೆನಪಲ್ಲಿ ಹರಿದ ಕಣ್ಣೀರು
ಕರವಸ್ತ್ರದಲ್ಲಿ ಮೂಡಿಸಿದ
ಭಾವಗಳ ಪೋಣಿಸಿ
ಅವನ ಕಡೆಯುಸಿರ ಹೊತ್ತ
ಗಾಳಿ ತೂಗುವ ಲಯದಲ್ಲಿ..
ಅವನೇ ಬರೆದ
ಸಾವಿರಾರು ಕವಿತೆಗಳು
ಅವನ ಹೊತ್ತು ಹೆಜ್ಜೆ ಹಾಕುತ್ತಿರುವಾಗ
ಅವು ತೊಟ್ಟ ಗೆಜ್ಜೆಯ
ನಾದ ಕಿಂಕಿಣಿಸಿ ಮೂಡಿದ
ಕವಿತೆಯನ್ನೇ ಓದುವೆ..
ದುಃಖ ಉಮ್ಮಳಿಸಿ
ಪ್ರಜ್ಞಾಹೀನಗೊಳ್ಳುವ
ಆ ನಿನ್ನ ಮೊದಲ ಕವಿತೆಯನ್ನೇ
ಓದುವೆ ಕೊನೆಯದಾಗಿ..

✍️ಸೌಮ್ಯ ದಯಾನಂದ
ಡಾವಣಗೆರೆ
