ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಹುಟ್ಟಿದ್ದು ೩೧-೦೧-೧೮೯೬. ಗುರು ಪ್ರತಿಪದೆ ಯಂದು. ಧಾರವಾಡದ ಪೋತ್ನಿಸ ಗಲ್ಲಿಯ ಗುಣಾರಿ ಅವರ ಮನೆಯಲ್ಲಿ. ಇಂದಿಗೂ ನಮಗೆ ಆ ಮನೆ ನೋಡಲು ಸಿಗುತ್ತದೆ. ಅದೇ ಇದು ಇಂಗ್ಲೆಂಡಿನಲ್ಲಿ ಆಗಿದ್ದರೆ ಆ ಮನೆ ಒಂದು ಸ್ಮಾರಕ ವಾಗಿರುತ್ತಿತ್ತು.

ಧಾರವಾಡದ ನಿಸರ್ಗ ಸೌಂದರ್ಯವನ್ನು ಸವಿಯುತ್ತಾ,ಸಾಂಸ್ಕೃತಿಕ ಗಾಳಿಯನ್ನು ಉಸಿರಾಡಿ ಸುತ್ತಾ,ವಾಚನಾಭಿರುಚಿಯನ್ನು ಬೆಳಸಿಕೊಳ್ಳುತ್ತಾ, ಬೇಂದ್ರೆ ಬಾಲ್ಯವನ್ನು ಧಾರವಾಡದಲ್ಲಿ ಕಳೆದರು. ಹನ್ನೊಂದನೆಯ ವಯಸ್ಸಿಗೆ ತಂದೆಯವರನ್ನು ಕಳೆದುಕೊಂಡು, ತಾಯಿ ಅಂಬಿಕೆ ಹಾಗೂ ಅಜ್ಜಿ (ತಾಯಿಯ ತಾಯಿ) ಗೋದುಬಾಯಿಯ ಇವರ ಆರೈಕೆಯಲ್ಲಿ ಸ್ವಾಭಿಮಾನಿಯಾಗಿ ಬೆಳೆದರು.

‘ರೂಪದಲ್ಲಿ ವಾಮನ ಸಾಹಿತ್ಯದಲ್ಲಿ ತ್ರಿವಿಕ್ರಮ’.

ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಕವನಗಳನ್ನು ರಚಿಸಿದರು. ನಾಟಕಗಳಲ್ಲಿ ಅಭಿನಯಿಸಿದರು. ವಾಕ್ ಚಾತುರ್ಯದ ಮೂಲಕ ಅನೇಕ ಹಿರಿ-ಕಿರಿಯರಿಗೆ ಗೆಳೆಯರಾದರು. ೧೯೧೪ ರಲ್ಲಿ ಪುಣೆಯ ಫರ್ಗ್ಯೂಸನ್ ಮಹಾವಿದ್ಯಾಲಯಕ್ಕೆ ಪದವಿ ಶಿಕ್ಷಣಕ್ಕಾಗಿ ಹೋದರು. ಆಗ ಕಕ್ಕ ಬಂಡೋಪಂತ ಬೇಂದ್ರೆಯವರ ಆಶ್ರಯ ಪಡೆದು ಅವರ ಪ್ರೀತಿಗೆ ಪಾತ್ರರಾದರು..೧೯೧೫ ರಲ್ಲಿ ‘ಗೆಳೆಯರ ಗುಂಪಿನ‘ ಕನಸು ಕಂಡರು,ಸಾಕಾರಗೊಳಿಸಿದರು.

ಅನೇಕ ಲೇಖಕರನ್ನು ಸೃಷ್ಟಿಸಿದರು. ಧಾರವಾಡದ ಮನೋಹರ ಗ್ರಂಥಮಾಲೆ ಗೆಳೆಯರ ಗುಂಪಿನ ಕೂಸು. ಗೀತೆಯ ‘ಸಖ್ಯ ಯೋಗ‘ ಗೆಳೆಯರ ಗುಂಪಿನ ದರ್ಶನವಾಗಿತ್ತು. ೧೯೧೬ ರಿಂದ ೧೯೧೮ ರ ಅವಧಿಯಲ್ಲಿ ಶ್ರೀ ಅರವಿಂದರ ಸಾಹಿತ್ಯ ವಾಚನಾಭಿರುಚಿ ಹವ್ಯಾಸವಾಯಿತು.ಅರವಿಂದರು ಹಾಗೂ ರವೀಂದ್ರರು ಬೇಂದ್ರೆಯವರ ಎರಡು ಕಣ್ಣು. ಸಾಹಿತ್ಯ ಆನಂದವನ್ನು ಪಡೆದರು. ಇಂಗ್ಲೀಷ್ ಮತ್ತು ಸಂಸ್ಕೃತ ಇವು ಬೇಂದ್ರೆಯವರ ಬಿ.ಎ ಪದವಿಯ ಅಭ್ಯಾಸದ ಪ್ರಮುಖ ವಿಷಯ ಗಳಾಗಿದ್ದವು. ೧೯೧೮ ರಲ್ಲಿ ಬಿ.ಎ ಪದವಿ ಪಡೆದು ಪದವಿಯನ್ನು ಪಡೆದು, ಬೇಂದ್ರೆಯವರು ಧಾರವಾಡಕ್ಕೆ ಮರಳಿ ಬಂದರು. ಕಲಿತ ಶಾಲೆ ಯಾದ ಅಂದಿನ ವಿಕ್ಟೋರಿಯಾ ಶಾಲೆಯಲ್ಲಿ ಶಿಕ್ಷಕರಾದರು, ಅದೇ ಇಂದಿನ ವಿದ್ಯಾರಣ್ಯ ಹೈಸ್ಕೂಲ್. ನಾನು ಆ ಶಾಲೆಯಲ್ಲಿ ೫ ವರ್ಷಗಳ ಕಾಲ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಅವರಿಗೆ ಕಲಿಸಿದ ಗುರುಗಳಾದ ಗುತ್ತಲ ಮಾಸ್ತರ ಅವರು ಬೇಂದ್ರೆಯವರಿಗೆ ಕರೆದು ಮಾಸ್ತರಿಕಿ ಕೊಟ್ಟರು. ಈ ಶಾಲೆಯಲ್ಲಿ ಕೆಲಸ ಮಾಡಿದ ೫ ಜನ ಶಿಕ್ಷಕರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಪಾತ್ರರಾಗಿದ್ದಾರೆ. ಇದೊಂದು ಅಪರೂಪದ ಸಂಗತಿ.

ಬೇಂದ್ರೆಯವರಿಗೆ ಜನ್ಮ ಕೊಟ್ಟ ತಾಯಿ ಮರಾಠಿ ಕಲಿಸಿದಳು. ಆದುದರಿಂದ ಮರಾಠಿ ಬೇಂದ್ರೆ ಯವರ ಮಾತೃ ಭಾಷೆ. ಧಾರವಾಡದ ತಾಯಿ, ಧಾರವಾಡದ ಪ್ರದೇಶ ಭಾಷೆಯಾಗಿರುವ ಕನ್ನಡ ಕಲಿಸಿದಳು ಬೇಂದ್ರೆಯವರಿಗೆ. ಬೇಂದ್ರೆಯವರು ತಮ್ಮ ಕಿವಿಗೆ ಬಿದ್ದ ದಾಸರ ಪದ, ವಚನ, ಪಾರಿ ಜಾತದ ಹಾಡು,ಗೊಂದಲಿಗರ ಗಡಿ ಸಂಬಾಳದ ಹಾಡುಗಳಿಂದ ಚವುಡಿಕೆ ಪದಗಳನ್ನು ಕೇಳಿದರು. ಅವುಗಳ ಲಯ, ಛಂದಸ್ಸು ಧಾಟಿಗಳನ್ನು ತಮ್ಮವನ್ನಾಗಿ ಮಾಡಿಕೊಂಡರು. ಗೀತಗೋವಿಂದ, ಗಂಗಾಲಹರಿ, ಸೌಂದರ್ಯ ಲಹರಿ, ಮೂಕ ಪಂಚಾಶತಿ,ಮಹಾಕವಿ ಕಾಳಿದಾಸ,ರವೀಂದ್ರನಾಥ ಠಾಕೂರ, ಶ್ರೀಅರವಿಂದರ ಹಾಗೂ ಕೀಟ್ಸ ಮತ್ತು ಇಮರ್ಸನ್ ಅವರ ಸಾಹಿತ್ಯ ಓದಿದರು, ಮೆಚ್ಚಿ ಕೊಂಡರು, ಹಚ್ಚಿಕೊಂಡು ಬೆಳೆದರು.’ಕನ್ನಡದ ತಾಯಿ ತಾವರೆಯ ಪರಿಮಳ ಉಂಡು ಬೀರುತಿಹ ಗಾಳಿ’ ಆದರು ವರ ಕವಿ.

ಪುಣೆಯ ವಾಸದಲ್ಲಿ ನವಕವಿ ಎಂದೆನಿಸಿಕೊಂಡು, ಧಾರವಾಡಕ್ಕೆ ಬಂದು ಸಾಹಿತ್ಯ ಸಮ್ಮೇಳನ ಹಾಗೂ ವಿವಿಧ ಸಭೆಗಳಲ್ಲಿ ಕವನ ವಾಚನ ಮಾಡಿ ಜನ ಮೆಚ್ಚುಗೆ ಪಡೆದರು. ಕನ್ನಡದ ಕಾವ್ಯ ಜಗತ್ತು ಕಣ್ದೆಗೆದು ಬೇಂದ್ರೆಯವರನ್ನು ನೋಡಿತು. ಆಗ ಬಳಕೆಯಲ್ಲಿದ್ದ ಷಟ್ಪದಿಛಂದಸ್ಸಿನಲ್ಲಿ ಕವನಗಳನ್ನು ರಚಿಸುವ ಕೌಶಲ್ಯವನ್ನು ಸಾಧಿಸುತ್ತಾ,ಧಾರವಾಡದ ಆಡು ಮಾತಿನ ಗತ್ತುಳ್ಳ ಪದ್ಯಗಳನ್ನು ರಚಿಸಿ,ಹಾಡಿ ರಂಜಿಸಿ ಜನಸಾಮಾನ್ಯರನ್ನು ಗೆದ್ದರು. ೧೯೧೮ ರಿಂದ ಎಳೆಯರ, ಗೆಳೆಯರ ಗುಂಪಿನೊಂದಿಗೆ ಸಾಹಿತ್ಯ ಸಾಧನೆ ಮಾಡತ್ತ ತಾವು ಬೆಳೆದರು. ಅನೇಕರನ್ನು ಬೆಳಸಿದರು. ಗುಂಪಿನ ಸಮಸ್ತ ಸಾಧಕರು ಬೇಂದ್ರೆ ಕಾವ್ಯ ಶಕ್ತಿಯ ವೈಭವವಾದರು ಎಂಬುದು ಸತ್ಯ ಸಂಗತಿ. ಬೇಂದ್ರೆ ಸಾಹಿತ್ಯ ಪ್ರಜ್ಞೆ ಶುದ್ಧ ಭಾರತೀಯವಾದದ್ದು. ನಾಡಿನ ಸತ್ವವನ್ನು ಹಾಡಿನ ಸತ್ವವನ್ನಾಗಿ ಕಂಡ ಪದ್ಯ ‘ಓ ಹಾಡೆ’ ಎಂಬುದು.

‘ಬಿತ್ತಿದರೆ ಬಿತ್ತು ಮುಕ್ಕು ಚಿಕ್ಕೆಯ ಕಾಳು – ಮುತ್ತು ರತನವ ಬಿತ್ತಿ ಮಾಡದಿರು ಹೊಲ ಹಾಳು’

ಎನ್ನುತ್ತದೆ ಕವಿತೆ. ಮುತ್ತು ರತ್ನವನ್ನು ಬಿತ್ತುವುದ ರಿಂದ ಹೊಲ ಹಾಳಾಗುತ್ತದೆ..ಈ ಮಾತು ಉತ್ತರ ಕರ್ನಾಟಕದ ಒಡಪಿನಂತಿದೆ. ಇದರ ತತ್ವ ಬಹಳ ದೊಡ್ಡದಿದೆ.ಒಂದು ಮುಕ್ಕು ಚುಕ್ಕೆಯ ಕಾಳಿಗೆ ನೂರಾರು ಕಾಳು ಕೊಡುವ ಶಕ್ತಿ ಇದೆ.ಇಂತಹ ಶಕ್ತಿ ಕನ್ನಡದ ಶಬ್ದ ಬೀಜಗಳಲ್ಲಿದೆ ಎನ್ನುವದು ಕವಿಯ ಮಾತು.

‘ಮೂಡಲಮನೆಯಾ ಮುತ್ತಿನ ನೀರಿನ’ – ಬೆಳಗು ಕವನದಿಂದ ಜನಪ್ರಿಯರಾದರು ‘ವರಕವಿ’ ಬೇಂದ್ರೆಯವರು.೧೯೨೨ ರಿಂದ ೧೯೮೧ ರ ಅವಧಿ ಯಲ್ಲಿ ೨೯ ಕವನ ಸಂಗ್ರಹಗಳು,೯ ವಿಮರ್ಶಾ ಗ್ರಂಥಗಳು, ೧೪ ನಾಟಕಗಳು, ೧ ಕಥೆ ಹಾಗೂ ಹರಟೆಗಳ ಸಂಗ್ರಹ, ಎರಡು ಉಪನ್ಯಾಸ (ಭಾಷಣ) ಸಂಗ್ರಹಗಳು, ೭ ಅನುವಾದ ಕೃತಿಗಳು, ೫ ಮರಾಠಿ ಗ್ರಂಥಗಳು, ೧ ಇಂಗ್ಲಿಷ್ ಪುಸ್ತಕೆ – ಒಟ್ಟು ೬೭ಗ್ರಂಥಗಳ ಕಾಣಿಕೆ ನೀಡಿದ್ದಾರೆ. ೧೯೩೫ ರಲ್ಲಿ ಕನ್ನಡ ಹಾಗೂ ಇಂಗ್ಲೀಷ್ ವಿಷಯಗಳನ್ನು ಪ್ರಮುಖವಾಗಿ ಅಭ್ಯಸಿಸಿ ಎಂಎ ಪದವಿಯನ್ನು ಪಡೆದು ೧೯೪೪ ರಿಂದ ೧೯೫೬ ರವರೆಗೆ ಸೊಲ್ಲಾ ಪುರದ ಡಿಎವ್ಹಿ ಮಹಾ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿ ಧಾರವಾಡಕ್ಕೆ ಬಂದರು. ೧೯೫೬ ರಿಂದ ೧೯೬೬ರ ವರೆಗೆ ಧಾರವಾಡ ಆಕಾಶವಾಣಿ ಕೇಂದ್ರ ದಲ್ಲಿ ಸಾಹಿತ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

‌‌೧೯೨೯ ರಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬ ಕವನ ಓದಿ ಕನ್ನಡಿಗರನ್ನು ಮಂತ್ರ ಮುಗ್ಧ ಗೊಳಿಸಿದ ಕವಿ ಬೇಂದ್ರೆ.೧೯೪೩ ರಲ್ಲಿ ಶಿವಮೊಗ್ಗೆ ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ‘ಗಾಯತ್ರಿ ಸೂಕ್ತ’ ಎಂಬ ಪದ್ಯ ಓದಿ ಐತಿಹಾಸಿಕ ಭಾಷಣ ಮಾಡಿ ಕನ್ನಡಕ್ಕೊಂದು ಹೊಸ ದಿಕ್ಕು ತೋರಿಸಿದರು. ಅಂಥ ಕವಿಗೆ ೧೯೫೮ ರಲ್ಲಿ ‌’ಅರಳು- ಮರಳು‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ಬೇಂದ್ರೆಯವರು ಸಾಧಿಸಿದ ಕಾವ್ಯ ಸಾಮರಸ್ಯಕ್ಕೆ ೧೯೬೮ ರಲ್ಲಿ ಪದ್ಮಶ್ರೀ ಗೌರವ ಲಭಿಸಿತು. ೧೯೭೩ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ನಾಕುತಂತಿ ಕವನ ಸಂಗ್ರಹಕ್ಕೆ ದೊರೆಯಿತು. ಇದಕ್ಕೆ ಬೇಂದ್ರೆ ಹೇಳುವದು, ಇದು ಭಾರತ ಭಕ್ತಿಯ ವಚನ ಪ್ರಸಾದ. ಭಾರತ ಮಾತೆ ಬೇಂದ್ರೆಗೆ ಮಾಡಿದ ಆಶಿರ್ವಾದ ಎಂದೇ ಹೇಳಬೇಕಾಗುತ್ತದೆ. ಬೇಂದ್ರೆ ಯವರಿಗೆ ಅವರು ಯಾರು? ಅವರಲ್ಲಿ ಯಾವ ಯಾವ ಶಕ್ತಿಗಳು ಕಾರ್ಯ ಮಾಡುತ್ತವೆ ಎಂಬ ಅರಿವು ಅವರಲ್ಲಿತ್ತು. ಅವರ ‘ನಾನು‘ ಎಂಬ ಪದ್ಯ ಈ ರೀತಿ ಹೇಳುತ್ತದೆ.

ವಿಶ್ವ ಮಾತೆಯ ಗರ್ಭಕಮಲಜಾತ-
ಪರಾಗ-ಪರಮಾಣು ಕೀರ್ತಿ ನಾನು!
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು ll೧ ll
ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು!
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು ll೨ll
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು!
ಈ ಐದು ಐದೆಯರ ಪಂಚಪ್ರಾಣಗಳಾಗಿ
ಈ ಜೀವ ದೇಹನಿವನುll೩ll
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತನರನು!
ವಿಶ್ವದೊಳುನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು!ll೪


ಬೇಂದ್ರೆಯವರು ಆರಾಧಿಸುತ್ತಿದ್ದ ಪಂಚಮಾತೆಯ ರೆಂದರೆ ವಿಶ್ವಮಾತೆ, ಭೂಮಾತೆ, ಭರತಮಾತೆ, ಕನ್ನಡದ ತಾಯಿ ಮತ್ತು ಜನ್ಮಕೊಟ್ಟ ತಾಯಿ ಅಂಬಿಕೆ. ಈ ಐದು ಐದೆಯರ ಪಂಚ ಪ್ರಾಣ ಗಳಾಗಿ ಈ ಜೀವ ದೇಹನಿಹನು ಎಂಬ ಮಾತನ್ನು ಈ ಕವಿತೆ ಹೇಳುತ್ತದೆ.

‌‌ಕನ್ನಡದ ಕವಿಗಳಲ್ಲಿ ಪಂಪ ನಾರಾಯಣಪ್ಪನ ನಂತರ ಕನ್ನಡದ ಜೀವಾಳನ್ನು ಹಿಡಿದು,ಭಾಷೆಯ ಜೀವನಾಡಿಯನ್ನು ಮಿಡಿದು, ಕಾವ್ಯ ರಚನೆ ಮಾಡಿದ ಕವಿ ಬೇಂದ್ರೆಯವರು.ತಮ್ಮ ವೈಯಕ್ತಿಕ ಸುಖ-ದುಖ:,ನೋವು-ನಲಿವು, ಪ್ರೀತಿ-ವಿರಹ ಗಳನ್ನು ಕುರಿತು ಭಾವಪೂರ್ಣ ಗೀತಗಳನ್ನು ರಚಿಸಿ ದವರು ಬೇಂದ್ರೆಯವರು. ಬೇಂದ್ರೆಯವರ ಕವನ ಗಳನ್ನು ವಾಚಿಸುವದೇ ಒಂದು ಅನುಭವ ಹಾಗೂ ಆನಂದ. ಬೇಂದ್ರೆಯವರಿಗೆ ಕಾವ್ಯರಚನೆ ಉಸಿರಾಟದಷ್ಟು ಸಹಜವಾಗಿತ್ತು. ಕಾವ್ಯ ರಚನೆ ಯನ್ನು ‘ಕಾವ್ಯೋದ್ಯೋಗ‘ಎಂದು ಕರೆದವರು ಬೇಂದ್ರೆ. ಕಾವ್ಯ+ಉತ್+ಯೋಗ= ಕಾವ್ಯೋದ್ಯೋಗ. ಬೇಂದ್ರೆಯವರ ಕಾವ್ಯಕ್ಕೆ ಒಂದು ಚತುರ್ಮುಖ ಸಿದ್ದಾಂತವಿದೆ. ಐಂದ್ರಿಯಕ ಸೌಂದರ್ಯ, ಕಾಲ್ಪನಿಕ ಸೌಂದರ್ಯ, ಬೌದ್ದಿಕ ಸೌಂದರ್ಯ ಮತ್ತು ಆದರ್ಶ ಸೌಂದರ್ಯ -ಇವೆ ಆ ಚತುರ್ಮುಖ ಗಳು. ಈ ದೃಷ್ಟಿಯಿಂದಲೇ ಬೇಂದ್ರೆ ಯವರು ಕನ್ನಡದ ಪ್ರತಿಯೊಂದು ಶಬ್ದ, ಭಾವ, ವಿಷಯ ಪ್ರಪಂಚವನ್ನು ಅವಲೋಕಿಸಿ ತಮಗೆ ಸಮ್ಮತ ವಾದದ್ದನ್ನೇ ಕವನದಲ್ಲಿ ಅಭಿವ್ಯಕ್ತಪಡಿಸಿದರು. ಬೇಂದ್ರೆ ಕಾವ್ಯ-ಶಬ್ದ, ಭಾವ,ಅರ್ಥ, ವ್ಯುತ್ಪತ್ತಿ, ಪ್ರತಿಭೆ,ಪ್ರಜ್ಞೆ, ಗುರು- ರಸೋವೈಸ: ಎಂಬ ಏಳು ನೆಲೆಗಳಿಂದ ನಿರ್ಮಿತವಾಗಿದೆ.


ಪರಾ,ಪಶ್ಯಂತಿ, ಮಧ್ಯಮಾ ಮತ್ತು ವೈಖರಿ ಎಂದು ‘ವಾಕ್’ ಶಕ್ತಿಯ ನೆಲೆಗಳು. ಪರಾ ಎಂಬುದು ಎಲ್ಲಕ್ಕೂ ಶ್ರೇಷ್ಠ. ಅದರತ್ತ ಶರರೂಪ ವಾಗಿ ಗುರಿ ಹಿಡಿಯಬೇಕು ಕವಿ.ಇದು ಅತಿ ಕಠೋರ ಮಾರ್ಗ. ಈ ಬಗೆಯ ಕಾವ್ಯ ಸಾಧನೆಗೆ ಆಯುರ್ದಾಯವನ್ನು ಕವಿ ಕೇಳಿಕೊಂಡಿದ್ದಾರೆ. “ಪಶ್ಯನ್,ಪಶ್ಯನ್,ಶ್ಯಸನ್, ಜಿಘ್ರನ್” ಮಾರ್ಗ ವಾಗಿ “ಕನ್ನಡಿಯಾಗಿ” ಪರಾವಾಕ್ ಶಕ್ತಿಯ ಪ್ರವೇಶ ಮಾಡಬೇಕು. ಆಗ ಅಲ್ಲಿಯ ಅಂಧಕಾರ ತೊಲಗಿ ಹೋಗಿ ಶುಭವಾಗುತ್ತದೆ. ಮಂಗಲವಾಗು ತ್ತದೆ. ಎಂಬುದು ಅಂಬಿಕಾತನಯದತ್ತರ ಶ್ರದ್ದೆ.
‌ ಬೇಂದ್ರೆಯವರು ಹೇಳಿದ್ದು “ನನ್ನ ಜೀವನ ಹಾಗೂ ನನ್ನ ಕಾವ್ಯ ಒಂದು ಔದುಂಬರ  ಗಾಥೆ!” ಔದುಂಬರ – ಅತಿ ವಿಶಾಲವಾಗಿರುವ ಅತ್ತಿಯ ಮರ. ಅದೊಂದು ದೇವ ವೃಕ್ಷ. ಈ ಗಿಡದ ಹಣ್ಣು ಪ್ರತ್ಯಕ್ಷ. ಆದರೆ ಹೂ ಅಪ್ರತ್ಯಕ್ಷ. ಉದರ ದಲ್ಲಿ ಹೂವನ್ನು ಅಡಗಿಸಿಕೊಂಡು ವಿಪುಲ ವಾದ ಹಣ್ಣುಗಳನ್ನು ಸುರಿಯುತ್ತದೆ ಈ ವೃಕ್ಷ. ದತ್ತ ಭಕ್ತಿ ಪಂಥದಲ್ಲಿ ಈ ವೃಕ್ಷಕ್ಕೆ ಸಾಧನೆಯ ದೃಷ್ಟಿ ಯಿಂದ ಬಹಳ ಮಹತ್ವವಿದೆ. ಈ ಗಿಡದ ತೊಗಟೆ, ಹಾಲು,ಎಲೆ ಮತ್ತು ಹಣ್ಣುಗಳಲ್ಲಿ ರೋಗ ನಿವಾರಕ ಶಕ್ತಿ ಇದೆ ಎಂದು ಭಾರತದ ಆಯುರ್ವೇದ ಶಾಸ್ತ್ರ ಸಾರುತ್ತದೆ. ಈ ಮರದಲ್ಲಿ ಇಂಥ ಶಕ್ತಿ ಬರಬೇಕಾ ದರೆ ಈ ಮಣ್ಣಿನ ಮಹತಿ ಅವರ್ಣನೀಯ.

ಕರ್ನಾಟಕದ ಮಣ್ಣಿನ ಮಗನಾದ ಬೇಂದ್ರೆ- ಧಾರವಾಡದ ತಾಯಿ ನೆಲದ ಸುಪುತ್ರರು. ದತ್ತಾತ್ರೇಯ ಎಂಬ ಅಂಕಿತ ನಾಮ ಧರಿಸಿದ ಬೇಂದ್ರೆ ಕಾವ್ಯ ಸಾಧನೆಯನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಧಾರವಾಡದಲ್ಲಿಯೇ ಮುಗಿಸಿ ದರು. ತನ್ನ ಸಾಧನೆಯ ಹೂಗಳನ್ನು ಗರ್ಭದಲ್ಲಿ ಅಡಗಿಸಿಕೊಂಡು ಅವುಗಳ ಫಲವನ್ನು ಹಾಡು ಮಾಡಿ ಕನ್ನಡಿಗರಿಗಾಗಿ ಹಾಡಿದರು.

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವನೇ ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನಿನ್ನದೆಯು ಕರಗಿದರೆ
ಅದರ ಸವಿಯ ಹಣಿಸು ನನಗೆ’

ಬೇಂದ್ರೆಯವರ ಕಾವ್ಯೋದ್ಯೋಗವನ್ನು ತೋರುವ ಉದಾತ್ತ ಸಾಲುಗಳಿವು.

ತಾಯೆ ಮಾಯೆ ಅಂಬಿಕೆಯೇ ನಿನ್ನ ತನಯದತ್ತನು ನೀನು ಇತ್ತುದಿತ್ತನು.
ನಿನ್ನ ಜನುಮದೊಂದು ಪಾಡು ಹಾಡು ಆಗಿ ಮೂಡಿತು
ನನ್ನ ಕೊರಳ ಹಾಡಿತು.
ಮೂರ್ತಿಗಾಗಿ ಮುಗಿದ ಕೈಯ್ಯ ಗುಡಿಗೆ ಸಲ್ಲುವಂತೆಯೇ
ಎರಡು ಒಂದೆಂಬಂತೆಯೇ.
ಹಾಡಲಾಗಿ ಕವಿಯು ಎಂದು ಜನವು ನನ್ನ ಕರೆದಿದೆ
ನಿನ್ನ ಹೆಸರು ಮರೆಗಿದೆ”.

ಎಂಬುದಾಗಿ ಸ್ಪಷ್ಟಪಡಿಸಿ ತನ್ನ ಕಾವ್ಯ ಕರ್ತೃತ್ವ ವನ್ನು ತಾಯಿಗೆ ಅರ್ಪಿಸಿ “ಅಂಬಿಕಾತನಯದತ್ತ” ಎಂಬ ಮುದ್ರಿಕೆಯನ್ನು ಬೇಂದ್ರೆಯವರು ಧರಿಸಿ ದರು. ಬೇಂದ್ರೆಯವರಿಗೆ ತಾಯಿ ಎಂಬ ವ್ಯಕ್ತಿ, ತಾಯಿ ಎಂಬ ಪರಿಕಲ್ಪನೆ,ಮಾತೃದೇವೋಭವ ಎಂಬ ಅನುಭಾವ ಬೇರೆ ಬೇರೆ ಅಲ್ಲ; ಎಲ್ಲವೂ ಒಂದೇ- ಸಮರಸವೇ ಜೀವನ!.


“ಹೆಣ್ಣು ಎನ್ನುವ ಮಾತು ತಾಯಿ ಎನ್ನುವ ಮಾತು
ಎರಡಲ್ಲ ಒಂದೆಂದು ತಿಳಿಸಿದಳು.
ಆ ಬಸಿರೆ  ಬ್ರಹ್ಮಾಂಡ, ಹೆಸರಿಗೆ ಪಿಂಡಾಂಡ
ಕುಸುರೀಗೆ ಬೆಲೆ ಎಂದು ಕಲಿಸಿದಳು’

ಈ ಕಲಿಕೆಯ ಮೂಲಕ ಬೇಂದ್ರೆಯವರಿಗೆ ನಾಡಿನ ಸಾವಿರಾರು ಮನೆಗಳಲ್ಲಿ- ಸಾವಿರದ ಮನಗಳಲ್ಲಿ ಸಹೃದಯರ ಸಾಹಿತ್ಯದ ಸ್ವಾಗತವು ಸತತವಾಗಿದೆ.

“ನನ್ನ ತಾಯಿ ಹಾಲು ನೆತ್ತರವ ಕುಡಿದಂಥ ಜೀವಂತ ಮಮತೆ ನಾನು”

ಎಂಬುದಾಗಿ ಬೇಂದ್ರೆಯವರು ಹೇಳಿದ್ದಾರೆ.

ಬೇಂದ್ರೆಯವರಿಗೆ ಜೀವ ಸ್ಪರ್ಶ ಪಡೆದ ಧಾರವಾಡದ ತಾಯಿ ನೆಲದ ಮಹತ್ವ ಅವರು ಬೆಳೆ ಬೆಳೆದಂತೆ ಮನದಟ್ಟಾಯಿತು.ಆದುದರಿಂದ ಅವರು ಧಾರವಾಡದ ತಾಯಿಯನ್ನು ಕುರಿತು ಹಾಡಿದ್ದು ಹೀಗೆ.

“ಧಾರವಾಡದ ತಾಯೇ ನನಗಾಧಾರ ನಿನ್ನದಲ್ಲದಿಲ್ಲ
ಭಾರ ನಿನ್ನ ಮೇಲೆ ಇರಲು, ಯಾರಿಗಾರು ಎಂಬರೇನೇ?
ಅಂಬಿಕಾತನಯನು ನಿನ್ನ ನಂಬಿ ಇನ್ನೂವರೆಗೂ ಇರುವ
‘ಜಂಬ ನೀನೆ ಕಾಯಿ’ ಎಂದು ತುಂಬಿ
ನಿನ್ನಡಿದಾವರೆಗಾದಾ”

ಧಾರವಾಡದ ತಾಯಿ-ರಕ್ಷಕ ದೇವತೆಯಾಗಿರುವ ದುರ್ಗಾಮಾತೆ ಕೊನೆಯವರೆಗೂ ಆತ್ಮಗೌರವ ವನ್ನು ಕಾಪಾಡಿದಳು ಎಂಬ ವಿಶ್ವಾಸವಿತ್ತು.

“ನಾನು ಬರೆದ ಮಹಾಕಾವ್ಯ ಹೃದಯ ವಿವೇಕ”

ಬೇಂದ್ರೆಯವರು ಸಹೃದಯತೆ ಹಾಗೂ ವಿವೇಕ ಪ್ರಜ್ಞೆ ಇವು ಆತ್ಮ ಜ್ಞಾನದ ಲಕ್ಷಣ ಎಂದು ಅರಿತವ ರಾಗಿದ್ದರು.ಅಂಬಿಕಾತನಯದತ್ತರು ವೇದ ಎಂದರೆ – ಜ್ಞಾನ; ದೇವ ಎಂದರೆ-ಪ್ರಕಾಶ,ಅಜ್ಞಾನ ಭಂಧ ಮುಕ್ತಿಯೆ- ಸ್ವಾತಂತ್ರ್ಯ ಮತ್ತು ಸಂಖ್ಯಾ ಜ್ಞಾನವೆ- ಅಮೃತತ್ವ ಎಂದು ಅರಿತವರು. ಹೀಗೆ ಅರಿತು ಬಾಳಿದ ಬಾಳು ಸಾರ್ಥಕ ಎಂದು ಬೇಂದ್ರೆಯವರ ವಿಶ್ವಾಸ.ಈ ಸಾಧನೆಯಲ್ಲಿ ಆತ್ಮಜ್ಞಾನವಾಗುತ್ತದೆ. ಆತ್ಮ ವಾಯು ಹಾಗೂ ಧ್ವನಿ ರೂಪದಲ್ಲಿ ಪ್ರತಿಯೊಬ್ಬರ ಹೃದಯದಲ್ಲಿರುತ್ತಾನೆ ಎಂದು ಹೇಳಲಾಗುತ್ತದೆ. ಈ ಆತ್ಮದ ಧ್ವನಿ- ನಾದವೇ ಆ ದೇಹಿಯ ದೇವ.ಆದುದರಿಂದ ಬೇಂದ್ರೆಯವರು-


“ಕೇಳುವವರ ಕಿವಿಯಾಗಿ
ಹೇಳವರs ದನಿಯಾಗಿ
ಮೈ ಮೈ ಚರ್ಮಾಗಿ
ಮನ ಮನ ಮರ್ಮಾಗಿ
ಮೂಡ್ಯಾನೋ,ನಿದ್ದ್ಯಾಗೆಚ್ಚರವಾಗಿ ಕೂಡ್ಯಾನೋ”

ಎಂಬಲ್ಲಿ ಆತ್ಮ ಶೋಧ ನಡೆಸಿದ‌ ಲಕ್ಷಣವಿದೆ. ಅವರ ಈಹುಡಕಾಟ

“ಅಂತರಂಗದಾ ಶೋಧ ಬೇಕು
ಪರಬ್ರಹ್ಮದಾ ಬೋಧ ಬೇಕು
ಎಂದಿಗೂ ಶ್ರೀ ಗುರುಪಾದ ಬೇಕು
ನಾದ ಬೇಕು,ನಾದ ಬೇಕು,
ತುದಿಮುಟ್ಟಾನೂ ನಾದ ಬೇಕು”
ಹೊರಗಿನ ದೇವರು ಯಾಕ ಬೇಕು
ಒಳಗಿನ ದೇವರು ಸಾಕಬೇಕು

ದೇವನನ್ನು ಅರಿಯಬೇಕಾದರೆ ಕಾವ್ಯ ಸಾಧನೆ ಮಾಡಬೇಕು ಎನ್ನುವುದು ಬೇಂದ್ರೆಯವರ ತತ್ವವಾಗಿತ್ತು.ಏಕಾಂತದಲ್ಲಿ ಕಾವ್ಯ ಸಾಧಕರಾಗಿದ್ದ ಬೇಂದ್ರೆಯವರು ಬಹಿರಂಗದಲ್ಲಿ ಮಾತೆಲ್ಲ ಜ್ಯೋತಿ ಮಾಡಬಲ್ಲ ಮಾತುಗಾರರಾಗಿದ್ದರು.


✍️ಡಾ.ಕೃಷ್ಣ ಕಟ್ಟಿ,ಧಾರವಾಡ.
ವಿಶ್ರಾಂತ ಸಾರ್ವಜನಿಕ ಸಂಪರ್ಕಾಧಿಕಾರಿಗಳು.
ಕನ್ನಡ ವಿಶ್ವ ವಿದ್ಯಾಲಯ, ಹಂಪಿ
ಮೊಬೈಲ್:9448580056