ಯಾಲಕ್ಕಿ ಕಂಪಿನ ಹಲಗೇರಿಯ ಪುಟ್ಟ
ಕನ್ನಡನಾಡುಳಿವಿನ ಕಲಿಯಿವನು ದಿಟ್ಟ
ನಿರ್ಭಿತ ನಿಲುವಲಿ ಭ್ರಷ್ಟತೆಗ್ಹಾಕಿದನು ಮಟ್ಟ
ವೀರ ಕಬ್ಬಿಗ ಶರಣ ಸಂಸ್ಕೃತಿಗನಿವನು ಕಟ್ಟ
ಮಲ್ಲಬ್ಬೆ ಸಿದ್ಧಲಿಂಗರ ಮಡಿಲಿನ ಪಾಪು
ಕರುನಾಡಿನ ಮಣ್ಣಲಿ ಮೂಡಿದೆ ಛಾಪು
ಸಿಗದಿವರ ಧೀಮಂತಿಕೆಯಳೆಯಲು ಮಾಪು
ಮೆಚ್ಚಿದರಂದಿವರ ಸ್ವಯಂಸೇವೆಯನು ಬಾಪು
ಸುವಿಶಾಲ ಹೃದಯದ ಕನ್ನಡ ಕಾವಲಿಗ
ನೆರ ನಡೆ ನುಡಿಯ ಮಗುತನದ ಸೊಗಸಿಗ
ಅಖಂಡ ಕರ್ನಾಟಕದ ಕನಸಿನ ಮನಸಿಗ
ಏಕೀಕರಣ ಚಳುವಳಿಯ ಕನ್ನಡದ ಮನೆಮಗ
ನುಡಿಯಿತಿವರ ಅಂತರಂಗ ಕನ್ನಡ ಮಂತ್ರವನೆ
ಮಾಡಿತಿವರ ಕಲಿತನದ ಹೋರಾಟ ಕನ್ನಡುಳಿಮೆಯನೆ
ಕರುನಾಡಿನ ಅನರ್ಘ್ಯ ರತ್ನ ಅಗಲಿದೆಮಗೆ ನಷ್ಟತಾನೆ
ಕರಮುಗಿದರ್ಪಿಸುವೆ ಪುಟ್ಟಪ್ಪಗೆ ಕವನ ಪುಷ್ಪವನೆ *-ಸುಹೇಚ ಪರಮವಾಡಿ*
✍️ಸುಭಾಷ್ ಹೇಮಣ್ಣಾ ಚವ್ಹಾಣ ಶಿಕ್ಷಕರು, ಹುಬ್ಬಳ್ಳಿ ಶಹರ
