ರಾಜ್ಯದಲ್ಲಿ ನಿರ್ಮಾಣವಾದ ಹಲವು ಪುರಾತನ ದೇವಾಲಯಗಳು ವಿಜಯನಗರ ಮತ್ತು ಸ್ಥಳೀಯ ಪಾಳೇಗಾರರ ಕಾಲದಲ್ಲಿ ನವೀಕರಣಗೊಂಡವು. ಅಂತಹ ದೇವಾಲಯಗಳ ಸಾಲಿನಲ್ಲಿ ಕಾಣುವ ದೇವಾಲಯವೆಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪದ ಹುಲು ಕುಡಿಯ ವೀರಭದ್ರ ಗುಹಾಂತರ ದೇವಾಲಯ.

ಇತಿಹಾಸ ಪುಟದಲ್ಲಿ ಗಂಗರ ಕಾಲದಿಂದ ಗುರುತಿಸಿ ಕೊಂಡಿದ್ದು ಶಾಸನಗಳಲ್ಲಿ ಹುರುಡಿ – ಪುರುಡಿ – ಪುರ್ ಕುಡಿ –ಪುರ್ಕೋಡಿ ಎಂದೇ ಕರೆಯಲಾಗಿದೆ. ಬೆಟ್ಟದ ಕೆಳಗಿನ ಮಾಡೇಶ್ವರ ಗ್ರಾಮದಲ್ಲಿ ಇರುವ ಗಂಗರ ಕಾಲದ ಮಾಡೇಶ್ವರ ದೇವಾಲಯದ ಸಮೀಪದ ಕ್ರಿ.ಶ.1115 ರ ತಮಿಳು ಶಾಸನದಲ್ಲಿ ಮಣ್ಣೆ ನಾಡಿಗೆ ಸೇರಿದ ಪುರ್ ಕುಡಿ ಬೆಟ್ಟ ಎಂದು ಕರೆಯಲಾಗಿದೆ.ಇಲ್ಲಿನ ದೇವರನ್ನು ಮುಡೀಶ್ವರಂ ಉಡೆ ಯಾರ್ (ಜಟಾಧರದೇವ) ಎಂದು ಬಣ್ಣಿಸ ಲಾಗಿದೆ. ನಂತರ ಕಾಲದಲ್ಲಿ ಇಲ್ಲಿನ ಹುಲುಕುಡಿಯ ನಾಡ ಪ್ರಭುಗಳು ಬೆಟ್ಟದಲಿ ಆಳ್ವಿಕೆ ಆರಂಭಿಸಿದ ನಂತರ ಪ್ರವರ್ಧನಮಾನಕ್ಕೆ ಬಂದಿದ್ದು. ಕ್ರಿ.ಶ. 1367 ರ ಶಾಸನದಲ್ಲಿ ಹುಲುಕುಡಿ ನಾಡಪ್ರಭುಗಳ ಉಲ್ಲೇಖವಿದ್ದು, ಕ್ರಿ.ಶ.1569ರ ವರೆಗೂ ಇವರ ಉಲ್ಲೇಖ ನೋಡಬಹುದು.ಕ್ರಿ.ಶ.1367ರ ಅರಳು ಮಲ್ಲಿಗೆಯಲ್ಲಿನ ಶಾಸನದಲ್ಲಿ ವಿಜಯನಗರದ ಅರಸ ಒಂದನೇ ಬುಕ್ಕರಸನ ಕಾಲದಲ್ಲಿ ಬೊಮ್ಮಯ್ಯ ನಾಯಕ ಮತ್ತು ಅಣ್ಣಪ್ಪನವರು ಹುಲುಕುಡಿ ನಾಡಪ್ರಭು ಬುಮ್ಮರಳಿನಿಗೆ ಗೌಡಿಕೆ ನೀಡಿದ ಉಲ್ಲೇಖವಿದೆ. ಅವರ ಕಾಲದಲ್ಲಿ ಬೆಟ್ಟದ ಮೇಲೆ ಕೋಟೆ ನಿರ್ಮಾಣವಾಗಿದ್ದು, ಇಲ್ಲಿ ವೀರ ಭದ್ರ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ.
ವೀರಭದ್ರ ದೇವಾಲಯ

ಬೆಟ್ಟದ ಮೇಲಿರುವ ಈ ದೇವಾಲಯ ಗುಹಾಂತರ ಸ್ವರೂಪದಲ್ಲಿದೆ. ಗರ್ಭಗುಡಿ ನವರಂಗ ಮತ್ತು ಅಂಕಣ ಹೊಂದಿದ್ದು ಗರ್ಭಗುಡಿಯಲ್ಲಿ ಕಮಲ ಪೀಠದ ಮೇಲೆ ಸುಮಾರು 12ನೇ ಶತ ಮಾನದ ನಾಲ್ಕು ಅಡಿ ಎತ್ತರದ ಸ್ಥಾನಿಕ ಸೌಮ್ಯ ಸ್ವರೂಪಿ ಯಾದ ವೀರಭದ್ರನ ಶಿಲ್ಪವಿದೆ. ಗರ್ಭ ಗುಡಿ ಬಂಡೆಯೊಂದರ ಕೆಳಗೆ ಇದ್ದು, ಪ್ರವೇಶ ದ್ವಾರದಲ್ಲಿ ಮರದಲ್ಲಿ ನಿರ್ಮಿಸದ ಬಾಗಿಲುವಾಡ ಇದೆ. ಲಲಾಟದಲ್ಲಿ ಗಿರಿಜಾ ಕಲ್ಯಾಣದ ಕೆತ್ತನೆ ಇದೆ.

ಶಿವ ಪಾರ್ವತಿಯರ ಜೊತೆಯಲ್ಲಿ ಬ್ರಹ್ಮ ಇದ್ದು ಮಹರ್ಷಿಗಳು ದಾರೆ ಸಮಾರಂಭಕ್ಕೆ ಸಾಕ್ಷಿಯಾ ದಂತೆ ಕೆತ್ತನೆ ಇದೆ. ಚತುರ್ಭುಜಧಾರಿಯಾದ ಶಿವನ ಕೈಗಳಲ್ಲಿ ಡಮರುಗ, ಮೃಗ, ವರದ ಮತ್ತು ಪಾರ್ವತಿಯ ಕೈಯನ್ನು ಹಿಡಿದಿದ್ದು ದ್ವಾರ ಉಳಿದ ಭಾಗಗಳು ಹೂಬಳ್ಳಿಗಳೂ ಆವರಸಿಕೊಂಡಿದೆ. ದ್ವಾರದ ಇಕ್ಕೆಲಗಳಲ್ಲಿ ಗಿರಿಜಾ ಕಲ್ಯಾಣ ಇತರ ಕೆತ್ತನೆಗಳು ಇದ್ದು, ಇದರಲ್ಲಿ ಸ್ತ್ರೀ ಮಗುವನ್ನು ಸೊಂಟದ ಮೇಲೆ ಕೂರಿಸಿಕೊಂಡಿರುವಂತೆ ಇದ್ದು ಸ್ಥಳೀಯವಾಗಿ ಪಾರ್ವತಿಯ ಶಿಲ್ಪ ಎಂದು ಕರೆಯುತ್ತಾರೆ. ಮಕ್ಕಳಿಲ್ಲದವರು ಈ ಶಿಲ್ಪಕ್ಕೆ ಹರಕೆ ಹೊತ್ತರೆ ಮಕ್ಕಳಾಗುವುದು ಎಂಬ ನಂಬಿಕೆ ಇದೆ. ದ್ವಾರದ ಭಾಗವನ್ನು ಹೊರಗೆ ಇರಿಸಲಾಗಿದ್ದು, ಗಿರಿಜಾ ಕಲ್ಯಾಣದ ಕೆತ್ತನೆಗಳ ಮುಂದುವರೆದ ಭಾಗ ಇಲ್ಲಿದೆ.

ನವರಂಗ ಭಾಗದ ಸಹ ಬಂಡೆಯ ಒಳಭಾಗದಲ್ಲಿ ಇದ್ದು ತೆವಳಿಕೊಂಡು ಹೋಗಬೇಕು. ಅರಂಭದಲ್ಲಿ ಸಿಗುವ ಅಂಕಣ ಭಾಗ ಹುಲುಕುಡಿ ನಾಡಪ್ರಭು ಗಳ ಕಾಲದಲ್ಲಿ ಸೇರ್ಪಡೆಗೊಂಡಿದ್ದು ಅವರ ಕಾಲ ದಲ್ಲಿ ನಿರ್ಮಾಣಗೊಂಡ ನಾಲ್ಕು ಕಂಭಗಳಿವೆ. ಅಂಕಣದಲ್ಲಿ ಸುರಂಗ ಮಾರ್ಗವಿದ್ದು, ಇದು ಬೆಟ್ಟ ದ ಕೆಳಗಿನ ಮಾಡೇಶ್ವರದಲ್ಲಿನ ಮುಕ್ಕಣ್ಣೇಶ್ವರ ದೇವಾಲಯಕ್ಕೆ ಹೋಗುತ್ತದೆ ಎನ್ನಲಾಗಿದೆ. ಅಂಕಣದಲ್ಲಿ ಪುರಾತನವಾದ ಎರಡು ನಂದಿ ಶಿಲ್ಪಗಳಿದ್ದು, ನಾಗ ಶಿಲ್ಪಗಳು ಮತ್ತು ಗಣಪತಿ ನಂತರ ಸೇರ್ಪಡೆ. ಕಂಭಗಳು ಸರಳವಾ ಗಿದ್ದು ಅಂಕಣದ ಪ್ರವೇಶದ ಹೊಸ್ತಿಲಿನಲ್ಲಿ ಭಕ್ತ ಕೈ ಮುಗಿಯುತ್ತಿರುವ ಕೆತ್ತನೆ ಇದೆ.
ಪ್ರತಿವರ್ಷದ ರಥಸಪ್ತಮಿಯಂದು ಹಲವು ಕುಟುಂಬಕ್ಕೆ ಮನೆ ದೇವರಾದ ವೀರಭದ್ರನಿಗೆ ಅದ್ದೂರಿ ಜಾತ್ರೆ ನಡೆಯಲಿದ್ದು, ಸುತ್ತ ಮುತ್ತಲ ಗ್ರಾಮದ ಹಲವು ಭಕ್ತರು ಸೇರುತ್ತಾರೆ.

ಇಲ್ಲಿಂದ ಮೇಲೆ ತೆರಳಿದಲ್ಲಿ ಕೋಟೆ ಅವಶೇಷ ಗಳನ್ನು ನೋಡಬಹುದು. ಬೆಟ್ಟದ ಮತ್ತೊಂದು ತುದಿಯಲ್ಲಿ ಅಧುನಿಕ ನಿರ್ಮಾಣದ ಭದ್ರಕಾಳಮ್ಮ ನ ಗುಡಿ ಇದ್ದು ಗರ್ಭಗುಡಿಯಲ್ಲಿ ಸೌಮ್ಯ ಸ್ವರೂಪಿ ಯಾದ ಕಾಳಿಯ ಶಿಲ್ಪವಿದೆ. ಹೊಂದಿಕೊಂಡಂತೆ ಪಕ್ಕದಲ್ಲಿರುವ ಗುಹಾಂತರ ಮಂದಿರದಲ್ಲಿ ಶಿವ ಲಿಂಗವಿದೆ.
ಮಾಡೇಶ್ವರದ ಮುಕ್ಕಣ್ಣೇಶ್ವರ ದೇವಾಲಯ

ಬೆಟ್ಟದಿಂದ ಕೆಳಗೆ ಬಂದು ಮುಂದೆ ಹೋದಲ್ಲಿ ಬೆಟ್ಟದ ಕೆಳಭಾಗದಲ್ಲಿ ಪುರಾತನವಾದ ಸುಮಾರು ಆರನೇ ಶತಮಾನದ ಗಂಗರ ಕಾಲದ ಮಾಡೇಶ್ವರ ದೇವಾಲಯವಿದೆ. ಗುಹಾಂತರ ದೇವಾಲಯವಾದ ಇದು ಗರ್ಭಗುಡಿ ಮತ್ತು ನವರಂಗ ಭಾಗವನ್ನು ಹೊಂದಿದ್ದು, ಬಂಡೆಯ ಕೆಳಗಿರುವ ಗರ್ಭಗುಡಿ ಯಲ್ಲಿ ಪಾಣಿಪೀಠದ ಮೇಲೆ ಪುರಾತನವಾದ ಸುಮಾರು ಮೂರು ಅಡಿ ಎತ್ತರದ ಶಿವಲಿಂಗವಿದೆ. ಮುಕ್ಕಣ್ಣೇಶ್ವರ ಎಂದು ಕರೆಯುವ ಶಿವಲಿಂಗ ಪ್ರಾಚೀನವಾದದ್ದು. ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದ್ದು ಪಂಚ ಶಾಖಾ ಮಾದರಿಯ ದ್ವಾರದಲ್ಲಿ ಉಬ್ಬು ಶಿಲ್ಪಗಳ ಕೆತ್ತನೆಗಳು ಇದ್ದು ಬಸವ, ಆನೆ, ಹಂಸ, ಯಕ್ಷ, ನೃತ್ಯಗಾರರು,ತ್ರಿವಿಕ್ರಮ,ಬಲಿಯ ದಾನ,ವಿಷ್ಣುವಿನ ಚಿಕಣಿ ಶಿಲ್ಪಗಳ ಕೆತ್ತನೆ ನೋಡಬಹುದು. ಮುಂದಿನ ಹಂತದಲ್ಲಿ ಹೂಬಳ್ಳಿಯ ಕೆತ್ತನೆ ಗಮನ ಸೆಳೆಯುತ್ತದೆ.

ನವರಂಗದಲ್ಲಿ ಗಂಗರ ಕಾಲದ ನಾಲ್ಕು ಕಂಭ ಗಳಿದ್ದು ಸರಳವಾಗಿದೆ. ದ್ವಾರಪಟ್ಟಿಕೆ ಸುಂದರವಾ ಗಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ. ಎರಡು ದ್ವಾರಗಳನ್ನು ಕುಬ್ಜರು ಹೊತ್ತಿದಂತೆ ಇದ್ದು ನೃತ್ಯ ಮತ್ತು ವಾದ್ಯಗಾರರ ಕೆತ್ತನೆ ಇದೆ. ಕೆಳಭಾಗ ದಲ್ಲಿ ದ್ವಾರಪಾಲಕರೆ ಕೆತ್ತನೆ ಇದೆ. ಸಮೀಪದ ಬಂಡೆಯಲ್ಲಿ ಸುಮಾರ ಕ್ರಿ.ಶ.1115 ರ ಕಾಲದ ತಮಿಳು ಶಾಸನವಿದೆ.

ಸ್ವಲ್ಪಮುಂದೆ ಸಾಗಿದಲ್ಲಿ ಮಂಟಪದಲ್ಲಿ ಬೃಹತ್ತಾದ ನಂದಿಯಿದ್ದು ಸುಮಾರು ಐದು ಅಡಿ ಎತ್ತರವಿದೆ. ನಂದಿಯಲ್ಲಿನ ಕೊರಳ ಹಾರಗಳು,ಘಂಟೆ,ಕಾಲಿನ ಗೆಜ್ಜೆ ಸರಗಳು ಕಲಾತ್ಮಕವಾಗಿದೆ. ಎದುರು ಭಾಗ ದಲ್ಲಿ ಸಮಿಪದಲ್ಲಿ ಸಿಕ್ಕ ಶಿವಲಿಂಗ ಇರಿಸಲಾಗಿದೆ.
ತಲುಪುವ ಬಗ್ಗೆ : ಹುಲುಕುಡಿ ಬೆಟ್ಟ ಬೆಂಗಳೂರಿ ನಿಂದ ಸುಮಾರು 50 ಕಿ ಮೀ ದೂರವಿದ್ದು, ದೊಡ್ಡ ಬಳ್ಳಾಪುರದಿಂದ ಸುಮಾರು 16 ಕಿ.ಮೀ. ಇದೆ. ದೊಡ್ಡಬೆಳವಂಗಳದಲ್ಲಿ ತಿರುಗಿ ಭಕ್ತರಹಳ್ಳಿಯ ಮೂಲಕ ಹುಲುಕುಡಿ ತಲುಪಬಹುದು. ಬೆಟ್ಟ ಕಡಿದಾಗಿದ್ದು ಸುಮಾರು 2000 ಮೆಟ್ಟಿಲು ಹತ್ತ ಬೇಕಾದ ಕಾರಣ ಬೆಳಗಿನ ಸಮಯ ಒಳ್ಳೆಯದು. ದೇವಾಲಯ ಶುಕ್ರವಾರ, ಭಾನುವಾರ ಮತ್ತು ಮಂಗಳವಾರ ಮಾತ್ರ ತೆರೆದಿರುತ್ತದೆ. ಹುಲುಕುಡಿ ಯ ಬೆಟ್ಟದ ಆರಂಭದಲ್ಲಿಯೇ ಮಾಡೇಶ್ವರ ಗ್ರಾಮಕ್ಕೆ ದಾರಿ ಎಂಬಲ್ಲಿ ತಿರುಗಿ ಮುಕ್ಕಣ್ಣೇಶ್ವರ ದೇವಾಲಯ ತಲುಪಬಹುದು.
✍️ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು
