ಅಮ್ಮ ಬಾರೇ ನಮ್ಮಮ್ಮನೇ ನೀನಮ್ಮ

ಶ್ರೀಮಹಿಪತಿದಾಸರು ಈ ಸಾಹಿತ್ಯದಲ್ಲಿ ಆಡು ಭಾಷೆಯ ಪದಗಳನ್ನು ಬಳಿಸಿ ಲಕ್ಷ್ಮಿದೇವಿಯ ಮೇಲೆ ಬರೆದಿದ್ದಾರೆ. ಲಕ್ಷ್ಮಿ ದೇವಿ ತಾಯಿಯಲ್ಲಿ ಮಗನ ನಡುವಿನ ಭಾಂಧವ್ಯದಲ್ಲಿ ಏಕನಿಷ್ಠೆ ಭಕ್ತಿ ಬಗ್ಗೆ ಬೇಡಿಕೊಂಡಿದ್ದಾರೆ.

ಅಮ್ಮಬಾರೆನಮ್ಮಮ್ಮನೆನೀನಮ್ಮ
ಅಮ್ಮಬಾರೆ-ನಮ್ಮಮ್ಮನೆ/ಧ್ರುವ

ಲೋಕಪಾಲಕಿ ಜಗನ್ಮಾತೆ ಲಕ್ಷ್ಮಿ ತಾಯಿಯೇ ನನ್ನ ಹೃದಯಮಂದಿರದಲ್ಲಿ ಬಂದು ನೆಲಿಸು. ಸೃಷ್ಟಿ ಯಲ್ಲಿ ಹುಟ್ಟುವ ಪ್ರತಿ ಜೀವಿಗೆ ತಾಯಿ ಇರುತ್ತಾಳೆ, ಆ ಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಜಗಜ್ಜನನಿ ಅನಂತ ಕಲ್ಪದಲ್ಲೂ ಅವಳು ತಾಯಿ.
ಹೀಗಾಗಿ ಅಕ್ಕರೆಯಿಂದ ನಮ್ಮಮ್ಮನೇ ಬಾರೆ ಎಂದು ಕರೆದಿದ್ದಾರೆ.

ಅಮ್ಮಬಾರೆನಮ್ಮಮ್ಮನೆನೀ
ನಮ್ಮಬೊಮ್ಮನಪಡೆದಮ್ಮನೀಪರ
ಬ್ರಹ್ಮನೀನಹುದಮ್ಮನೀನಮ್ಮ
ಅಮ್ಮಬಾರೆ ನಮ್ಮಮ್ಮನೆ/1

ಮೊದಲ ನುಡಿಯಲ್ಲಿ ಲಕ್ಷ್ಮಿಯನ್ನು ವರ್ಣನೆ ಮಾಡಿದ್ದಾರೆ. ಬ್ರಹ್ಮನನ್ನು ಮಗನಾಗಿ ಪಡೆದಂತ ವಳು ಲಕ್ಷ್ಮಿ ತಾಯಿ.ಇನ್ನು ಸೃಷ್ಟಿ, ಸ್ಥಿತಿ, ಲಯಕರ್ತ ನಾದ ಪಂಚರೂಪಿ ಭಗವಂತನ್ನು ಪತಿಯಾಗಿ ಪಡೆದವಳು ನೀ ಅಮ್ಮ. ಶ್ರೇಷ್ಟವಾದ ವೇದಗಳಿಗೆ ಅಭಿಮಾನಿ, ವೇದ ಬಲ್ಲ ಬ್ರಹ್ಮಜ್ಞಾನಿ ವೇದ ಪ್ರತಿ ಪಾದ್ಯಳಾದವಳು. ನೀನು ನಮ್ಮ ಅಮ್ಮ ನನ್ನ ಹೃದಯ ಮಂಟಪಕ್ಕೆ ಬಾ ಅಮ್ಮ ಎಂದು ಕರೆದಿದ್ದಾರೆ.

ಉಮ್ಮಸವಿದೊಮ್ಮೆಅಮ್ಮೆನಾನಿನ್ನ
ಸುಮ್ಮನಿರುವೆನಾಒಮ್ಮನದಲೆಮ್ಮೆ
ಇಮ್ಮನಡಿಬೇಡೆಅಮ್ಮೆನಾನ-ನಿಮ್ಮ
ಒಮ್ಮೆಅಮ್ಮಿಯಾಲಮೃತ್ಯೆರಿಅಮ್ಮಾ/2

ಎರಡನೇ ನುಡಿಯಲ್ಲಿ ಒಂದು ತಾಯಿ ಮಗುವನ್ನು
ಮುದ್ದಾಡಿದ ಅನುಭವದ ಬಗ್ಗೆ ಹೇಳಿದ್ದಾರೆ. ಮಗು ಅಳುವಾಗ ಮುದ್ದುಕೊಟ್ಟು ರಮಿಸುವ ಬಗೆಯನ್ನ ಹೋಲಿಕೆ ಕೊಟ್ಟು ಹೇಳಿದ್ದಾರೆ. ನೀನು ಸಾಕಷ್ಟು ಸಲ ನನ್ನ ಜೀವನದಲ್ಲಿ ಸಂಕಷ್ಟ ಬಂದಾಗ ರಮಿಸಿ ರುವೆ. ಒಮ್ಮನ ಅಂದರೆ ನಿಷ್ಕಲ್ಮಶ ಮನಸ್ಸಿನ ಭಕ್ತಿ ಕೊಡು ಎಂದು ಹೇಳಿದ್ದಾರೆ. ಇನ್ನು “ಇಮ್ಮನ” ಅಂದರೆ ಎರಡು ಮನಸ್ಸು ಅಂದರೆ ತೋರುವುದು ಒಂದು ರೀತಿ, ಇರುವುದು ಒಂದು ರೀತಿ ಇಂತಹ ಮನಸ್ಸು ಬೇಡ. ಮೃತ್ಯವನ್ನು ಮೀರಿದ ಅಮೃತ ಸಮವಾದ ಜ್ಞಾನ ವೆಂಬಹಾಲನ್ನು ಕೊಡು ಎಂದಿದ್ದಾರೆ.

ಒಮ್ಮೆದಯವೆಂಬಅಮ್ಮನುಣಿಸಮ್ಮಾ
ನಮ್ಮಕರುಣದಾಅಮ್ಮನುಣಿಸಮ್ಮಾ
ಒಮ್ಮೊಮ್ಮುಣಿಸನಮ್ಮಮ್ಮನೀನಮ್ಮಾ
ರಮ್ಮಿಸಿಮಹಿಪತಿಬಾಲಕಗ-ನಿಮ್ಮ/3

ಇನ್ನು ಮೂರನೇ ನುಡಿಯಲ್ಲಿ ತಾಯಿಗೆ ಕೇಳಿದ್ದಾರೆ ಎಂದರೆ ದಯವೆಂಬ ತುತ್ತನ್ನು ಉಣಿಸು, ನಮ್ಮ ಕರುಣಾಮಯಿ ತಾಯಿ ನೀನಮ್ಮ ಒಮ್ಮೆಯಾ ದರೂ ದಯೆಯಿಂದ ಕರುಣೆಯಿಂದ ಈ ನಿನ್ನ ಬಾಲಕ ನಾನು ರಮಿಸಮ್ಮ.

✍️ ಪ್ರಿಯಾ ಪ್ರಾಣೇಶ ಹರಿದಾಸ
ವಿಜಯಪುರ