ಚುಮುಚುಮುಗುಡುತ್ತಾ ಬಂದೇಬಿಟ್ಟಿತು ಮಾಗಿಯ ಚಳಿ
ಹೊರತೆಗೆಯಬೇಕು ಎತ್ತಿಟ್ಟಿದ್ದ ಬೆಚ್ಚಗಿನ ಕಂಬಳಿ
ಚಳಿಯ ನಡುಕದಲಿ ಹೊರಟಿದೆ ಮನದ ನೆನಪಿನ ದಿಬ್ಬಣ
ಅಲೆದಲೆಯುತ್ತಾ ಹೋಗಿ ನಿಂತಿದೆ ಬಾಲ್ಯಕ್ಕೆ ಪಯಣ.

ಭುವನವೆಲ್ಲಾ ಹೊದ್ದು ನಿಂತಿದೆ ಮಬ್ಬು ಮಂಜಿನ ಕಾವಳ
ಸೂರ್ಯಕಿರಣ ಸೋಕಿ ಕರಗಿದ ತುಷಾರ ಶ್ವೇತ ಧವಳ
ಗಿಡಮರ ಹುಲ್ಲುಹಾಸುಗಳಿಗೆ ಪೋಣಿಸಿದ ಹಿಮಮಣಿ
ರವಿರಶ್ಮಿ ಕಾವಿಗೆ ನಾಚಿ ಕರಗುತಾ ಮೂಡುತಲಿದೆ ಇಬ್ಬನಿ

ಗದಗದಗುಡಿಸುತಲಿದೆ ಬೀಸಿರುವ ಥಂಡಿ ಕುಳಿರ್ಗಾಳಿ
ಹೆಂಚಿನಸಂದು ಕಿಟಕಿಗಳ ಕದಗಳ ನಡುವಿಂದಿದರ ಧಾಳಿ
ಹಂಡೆಯೊಲೆಯುರಿ ಮುಂದೆ ಬೆಂಕಿ ಕಾಸಲು ಪಾಳಿ
ಅಡಿಗೆಮನೆಯ ಬೆಚ್ಚಗಿನ ಮೂಲೆ ಕರೆಯುತಿದೆ ಕೂಗಿ.

ಬಿಸಿಬಿಸಿಯಾದ ಕಾಫಿ ಕುಡಿಯಲು ಕುಳಿತ ಮಕ್ಕಳಸಾಲು
ಸ್ವರ್ಗವೇ ಧರೆಗೆ! ಗುಟುಕು ಗುಟುಕಾಗಿ ಇಳಿಯಲು
ಗರಿ ಗರಿ ಬಿಸಿ ತಿಂಡಿಗಳು ಅಮ್ಮ ಮಾಡಿಕೊಡುತಿರಲು
ಅವೇ ಶಕ್ತಿ ನಮಗೆ ಗಡ ಗಡ ಚಳಿಯನು ತಡೆಯಲು.

ಮಾಗಿ ಚಳಿಯೆಂದರೆ ನಿನ್ನ ಮರೆಯಬಹುದೇ ಅವರೆ
ಬಾಯಿಗೆ ರುಚಿ ರುಚಿಯಾಗಿ ಬಗೆ ಬಗೆ ತರಹಾವರೆ.
ಕಾಳು ಬಿಡಿಸಲು ಮನೆಮಂದಿ ಸುತ್ತ ಕುಳಿತ ಹೊತ್ತು
ಹಾಡು ಹಾಸ್ಯ ಹರಟೆ ಕೇಕೆ ನಗೆಗಳ ಗಮ್ಮತ್ತು.

ಮಾಗಿ ಚಳಿಗಾಲವೆಂದರೆ ಉಣ್ಣೆಬಟ್ಟೆಗಳ ಪ್ರದರ್ಶನ
ಅಜ್ಜಿಯೊಡನೆ ಮಾಡುವ ಬಲವಂತ ಮಾಘಸ್ನಾನ
ಹಬ್ಬ ಷಷ್ಠಿ ಜಾತ್ರೆ ತೇರು ಕೋಸಂಬರಿ ರಸಾಯನ
ಮಣಿಸರ ಬಳೆ ಟೇಪುಗಳ ಖರೀದಿ ಸಂಕಲನ.

ಚಳಿಗಾಲದಲಿ ಅಜ್ಜಿ ಹೇಳುತ್ತಿದ್ದ ಕಥೆಗಳ ನೆನಪು
ತಲೆ ತುಂಬಾ ಹಾಕಿದ ಮುಸುಕು ಅಚ್ಚರಿ ಕಣ್ಣಹೊಳಪು
ಹದಿಹರೆಯದಿ ಚಳಿಯ ಹಿಮ್ಮೇಳದಿ ಕಾಣುವಾ ಕನಸು
ಕುದುರೆ ಮೇಲಿನ ರಾಜಕುಮಾರನ ನೋಡೋ ಮನಸು.

ಜೀವನದ ದೊಡ್ಡ ನಿಧಿ ಅನುರೂಪ ದಾಂಪತ್ಯ
ಮಾಗಿಚಳಿಯಲಿ ಮಗದಷ್ಟು ಆಪ್ಯಾಯ ಸಾಮೀಪ್ಯ
ಹೊಸ ಹೊಸ ಪರಿಭಾಷೆ ಬರೆಯುವ ಸಾಂಗತ್ಯ
ಪ್ರತಿಗಳಿಗೆ ಜೋಡಿಗಳಿಗೆ ಶೃಂಗಾರ ರಸಕಾವ್ಯ.

ಅಂಗಳದಾ ತುಂಬಾ ಹಣ್ಣಾದ ತರಗೆಲೆಗಳ ರಾಶಿ
ಚಳಿಗೆ ಮುರಟಿ ಹೂವಿರದ ಸಸ್ಯ ಬಳ್ಳಿಗಳ ದೃಶ್ಯ
ಬಣ್ಣವಿರದ ಬರಡು ಬಾನಿನಂತಾಗಿಹುದು ಅಂಗಣ
ಮನೆ ಮನಗಳು ಖಾಲಿ ಅನಿಸುತಿದೆ ಏನೋ ಭಣಭಣ.

ಇಂದೆಲ್ಲಿ ಹೋಯ್ತೋ ಆ ಕೊರೆಯುವ ಚಳಿ
ಆರಾಮದ ಹೆಸರಲ್ಲಿ ಪ್ರಕೃತಿಯಿಂದ ದೂರಾದ ಪರಿ
ವಾತಾವರಣವೆಲ್ಲಾ ಲವಲವಿಕೆಯಿರದೆ ನೀರವ
ಮುಸುಕಿದ ಮಂಜಿನ ಪ್ರತಿಫಲನದಂತೆ ಪೇಲವ.

✍️ಸುಜಾತ ರವೀಶ್
ಮೈಸೂರು