ಪುಸ್ತಕದ ನಡುವಿನ ಯಾವುದೋ ಒಂದು ಪುಟ ದಿಂದ ಓದಲು ಪ್ರಾರಂಭಿಸುತ್ತೀರೆಂದು ಭಾವಿಸಿ… ಕೆಲವು ಪುಟಗಳನ್ನು ಓದಿ ಮುಚ್ಚಿಡುತ್ತೀರಿ. ಮುಂದೆಂದೋ ಮತ್ತೆ ಮುಂದಿನ ಬೇರಾವುದೋ ಪುಟಗಳನ್ನು ಓದುವ ಅವಕಾಶ.. ಕುತೂಹಲ, ಊಹೆ.. ವಿಸ್ಮಯ ಈ ಎಲ್ಲವುಗಳಿಂದ ಕೂಡಿದ ಒಂದು ಭಾವ ನಿಮ್ಮನ್ನು ತಟ್ಟುವುದು ಖರೆ. ಓದಿದ ನಾಲ್ಕು ಪುಟಗಳಿಂದಲೇ ನಿಮಗೆ ಆ ಪುಸ್ತಕ ಆಪ್ತ ವಾಗಲೂಬಹುದು. ಇಷ್ಟವಾಗದೇ ಹೋಗಲೂ ಬಹುದು! ಈ ರೀತಿ ನಾನು ದಿನಾ ಅನೇಕ ಪುಸ್ತಕಗಳನ್ನು ಓದುತ್ತೇನೆ ಎಂದರೆ ನಿಮಗೆ ಅಚ್ಚರಿಯಾದೀತು..!!

ನಾನು ಹೇಳುತ್ತಿರುವುದು ಪುಸ್ತಕಗಳ ಬಗ್ಗೆ ಆದರೂ ನಿಜಾರ್ಥದಲ್ಲಿ ಅವು ನಿರ್ಜೀವ ಪುಸ್ತಕ ಗಳಲ್ಲ.. ನನ್ನನ್ನು ಭೇಟಿಯಾಗುವ ರೋಗಿಗಳ ಹಣೆಪಟ್ಟಿ ಹೊತ್ತ ಜೀವಂತ ಮಾನವರು! ಪ್ರತಿ ಯೊಬ್ಬರೂ ಒಂದು ನಿಗೂಢ ಪುಸ್ತಕವೇ ನನಗೆ!
ವೈದ್ಯರಾಗಿ ಚಿಕಿತ್ಸೆಗೆ ಬರುವ ಪ್ರತೀ ರೋಗಿಯನ್ನೂ ಅವರ ಕಾಯಿಲೆಯ ಮೂಲಕವಷ್ಟೇ ಗುರುತಿಸಿ ಕಳುಹಿಸಿಬಿಡಲೂಬಹುದು. ಆದರೆ ಕಳೆದ 23   ವರ್ಷಗಳಲ್ಲಿ ನನ್ನ ಪರಿಧಿಗೆ ಬಂದ ರೋಗಿಗಳನ್ನು ಹಚ್ಚಿಕೊಂಡು ಮಾತನಾಡುವುದು ಹೆಚ್ಚುಗಾರಿಕೆ ಯೋ ಅಧಿಕ ಪ್ರಸಂಗವೋ ಏನೇ ಇರಲಿ ಬಿಳಿ ಕೋಟಿನ ಕತೆಗಳಲ್ಲಿ ಇಣುಕಿ ಹಾಕುವವರೆಲ್ಲ ಅಂತಹ ನಿಜವಾದ ಪಾತ್ರಗಳೇ.

ಕಣ್ಣಿನ ವೈದ್ಯೆಯಾಗಿರುವುದರಿಂದ ನನ್ನನ್ನು ಭೇಟಿ ಮಾಡುವವರಲ್ಲಿ ವೃದ್ಧರ ಸಂಖ್ಯೆ ಹೆಚ್ಚು. ತುಸು ವಿರಾಮವಾಗಿ ನಾಕು ಮಾತು ಹಂಚಿಕೊಳ್ಳುವ ಹುಕಿ ಬಹುತೇಕರಿಗೆ. ಬಾಳ ದಾರಿಯಲ್ಲಿ ಏರಿಳಿತ ಗಳಿಂದ ಹದವಾಗಿ ಪಕ್ವಗೊಂಡ ಅವರ ಮಾತು ಗಳೆಂದರೆ ಕುತೂಹಲ ನನಗೆ. ಈ ಹಿರಿಯ ಮಹಿಳೆಗೆ ಎಪ್ಪತ್ತರ ಅಂಚು.ಆರ್ಥಿಕ ಸ್ಥಿತಿ ಉತ್ತಮ ವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿತ್ತು. ಹೆಸರು ಶಕುಂತಲಾ ಎಂದು ಇಟ್ಟುಕೊಳ್ಳೋಣ.. ಜೋಯಿಡಾದ ಯಾವುದೋ ಹಳ್ಳಿಯಲ್ಲಿ ಅವರ ಮನೆ ತೋಟ ಇದೆಯಂತೆ. ಕಣ್ಣಿನ ಸಮಸ್ಯೆ ಯೊಂದರ ನಿಮಿತ್ತ ನಾವು ಮೂರ್ನಾಲ್ಕು ಸಲ ಭೇಟಿಯಾದೆವು. ಹಾಗೆ ಕೆಲವು ವಿಚಾರಗಳನ್ನು ನಾವು ಹಂಚಿಕೊಂಡೆವು.

ಶಕುಂತಲಾ ಒಂಟಿಯಾಗಿ ಮನೆ, ತೋಟ ನೋಡಿ ಕೊಂಡಿದ್ದಾರೆ. ಪತಿ ತೀರಿ ಹೋಗಿ ಹತ್ತು ವರ್ಷ ದಾಟಿದೆ. ನಾಲ್ಕು ಮಕ್ಕಳು: ಮೂರು ಗಂಡು ಓರ್ವ ಮಗಳು..ಎಲ್ಲ ದೊಡ್ಡ ಸಿಟಿಗಳಲ್ಲಿ ಸೆಟಲ್‌ ಆಗಿದ್ದಾರೆ, ಚೆನ್ನಾಗಿ ದುಡಿಯುತ್ತಾರೆ.ಮೊಮ್ಮಕ್ಕಳು ಒಳ್ಳೊಳ್ಳೆಯ ಕೋರ್ಸುಗಳಲ್ಲಿ ಚಿನ್ನದ ಪದಕ ಪಡೆಯುವಷ್ಟು ಪ್ರತಿಭಾನ್ವಿತರು. ಎಲ್ಲ ಸರಿ; ಆದರೆ ರಜೆಯಲ್ಲೂ ಊರಿಗೆ ತಲೆ ಹಾಕುವುದಿಲ್ಲ.ಸಿಟಿಯ ಜೀವನ ರೂಢಿಯಾದವರಿಗೆ ಹಳ್ಳಿಯ ಮೂಲೆ ಯಲ್ಲಿ ಎಂತಹ ಆಕರ್ಷಣೆ? ಹಾಗೆಂದು ಅಲ್ಲಿ ಹೋಗಿ ಉಳಿಯುವುದು ಇವರಿಗೂ ಪಥ್ಯವಲ್ಲ. ಎಷ್ಟು ಹೆಣಗಾಡಿ ಮಕ್ಕಳನ್ನು ದೊಡ್ಡ ಮಾಡಿರು ತ್ತೇವೆ! ಆದರೆ ವರ್ಷಕ್ಕೆ ನಾಲ್ಕು ದಿನ ಮುಖ ತೋರಿಸುವುದಕ್ಕೂ ಅವರಿಗೆ ಪುರುಸೊತ್ತಿಲ್ಲ.. ಅಥವಾ ಮನಸ್ಸಿಲ್ಲ!

ಎಲ್ಲ ಊರು ಮನೆಯ ಅಜ್ಜಿಯಂದಿರ ಸಾಮಾನ್ಯ ಕಥೆಯೇ ಇದು.. ಘಟ್ಟದ ಮೇಲಿನ ಸುಮಾರು ಊರುಗಳು ಇಂದು ವೃದ್ಧಾಶ್ರಮವೇ ಎಂಬ ವಿಷಾದ ಭಾವದೊಂದಿಗೆ ಸುಮ್ಮನಾಗಿದ್ದರು ಶಕುಂತಲಾ. ಇದು ಎರಡು ವರ್ಷದ ಹಿಂದಿನ ಮಾತು.ಒಂಟಿತನ, ಪ್ರಾಮುಖ್ಯತೆ ಇಲ್ಲದಿರುವುದು, ಜೀವನದಲ್ಲಿ ನಿರಾಸಕ್ತಿ ಇವು ಶಕುಂತಲಾರನ್ನು ಖಿನ್ನತೆಯೆಡೆಗೆ ತಳ್ಳಹೊರಟಿದ್ದವು. ನಿಮ್ಮಿಷ್ಟದ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿ ಕೊಂಡು ಆಕ್ಟಿವ್‌ ಆಗಿರಿ ಎಂದು ಹುರಿದುಂಬಿಸಿ ಕಳುಹಿಸಿದ್ದೆ..

ಕುರ್ವನ್‌ ಏವ ಇಹ ಕರ್ಮಾಣಿ ಜಿಜೀವಿಶೇಥ ಶತಂ ಸಮಾಃ/
ಏವಂ ತ್ವಯಿ ನಾನ್ಯಥೋ ಅಸ್ತಿ ನ ಕರ್ಮ ಲಿಪ್ಯತೇ ನರಃ/

ನನ್ನ ಮೇಜಿನ ಹಿಂದೆ ಇರುವ ಫಲಕದಲ್ಲಿ ಈಶಾವಾಸ್ಯ ಉಪನಿಷತ್ತಿನ ಈ ಶ್ಲೋಕವಿದೆ. “ಕರ್ಮವನ್ನು ಮಾಡುತ್ತಲೇ ಆಯುಷ್ಯದುದ್ದ ಕ್ಕೂ ಬದುಕುವುದನ್ನು ಬಿಟ್ಟು ಬೇರೆ ಮಾರ್ಗ ವಿಲ್ಲ” ಎಂಬ ತಾತ್ಪರ್ಯದೊಂದಿಗೆ. ಹೋಗುವಾಗ ಶಕುಂತಲಾ ಮೊಬೈಲ್‌ ಕ್ಯಾಮೆರಾದಲ್ಲಿ ಇದರ ಫೋಟೋ ತೆಗೆದುಕೊಂಡಿದ್ದರು. ಆದರೆ ಅದನ್ನು ಇಷ್ಟು ಚೆನ್ನಾಗಿ ಅನ್ವಯಿಸಿಕೊಂಡಿದ್ದಾರೆ ಎಂಬುದು ಇತ್ತಿಚೆಗೆ ನನ್ನ ಗಮನಕ್ಕೆ ಬಂತು.

ಕೆಲ ದಿನಗಳ ಹಿಂದೆ ಮತ್ತೆ ಈ ಪುಸ್ತಕ ಓದುವ ಅವಕಾಶ.. ಅಂದರೆ ಶಕುಂತಲಾ ಅವರ ಭೇಟಿ.. ಅವರ ಮಾತಿನಲ್ಲಿ ನಡಿಗೆಯಲ್ಲಿ ಉತ್ಸಾಹ ಚಿಮ್ಮುತ್ತಿತ್ತು! ಒಂದು ಹೊಸಾ ಐಡಿಯಾದೊಂದಿಗೆ ಹತ್ತುವರ್ಷ ಚಿಕ್ಕವರಾದಂತೆ ಕಾಣುತ್ತಿದ್ದರು! ಅವರ ತೋಟದ ಮನೆಯನ್ನು ಹೋಂ ಸ್ಟೇ ರೂಪಕ್ಕೆ ಮಾರ್ಪಡಿಸುವ ಹೊಸ ವಿಚಾರದಲ್ಲಿದ್ದರು. ಮಕ್ಕಳು ಮೊಮ್ಮಕ್ಕಳು ಹಾಲಿಡೇ ನೆಪದಲ್ಲಿ ಎಲ್ಲೆಲ್ಲೋ ಉಳಿದು ದುಡ್ಡು ಉಡಾಯಿಸುವ ಬದಲು ಹೀಗೇಕೆ ಮಾಡಬಾರದು ಎನಿಸಿತಂತೆ.

ಹೂವಿನ ಗಿಡ ಬೆಳೆಸುವುದರಲ್ಲಿ ಮೊದಲಿನಿಂದ ತುಂಬಾ ಆಸಕ್ತಿ ಅವರಿಗೆ. ಗಾರ್ಡನಿಂಗ್‌ ಮಾಡು ವವರನ್ನು ದುಡ್ಡು ಕೊಟ್ಟು ಕರೆಸಿ ಮನೆಯ ಸುತ್ತ ಚೆನ್ನಾಗಿ ಹೂವಿನ ಗಿಡ,ಲಾನ್‌ ಬೆಳೆಸುತ್ತಿದ್ದಾರೆ.. ಅವರ ತೋಟದಲ್ಲಿ ನೈಸರ್ಗಿಕವಾಗಿ ಮಳೆಗಾಲ ದಲ್ಲಿ ಜಲಪಾತ ರೂಪುಗೊಳ್ಳುತ್ತದೆ. ಅದರ ಅನತಿ ದೂರದಲ್ಲಿ ಒಂದು ಕಾಟೇಜು ಕಟ್ಟಿಸುತ್ತಿದ್ದಾರೆ. ತಮ್ಮ ಮಕ್ಕಳು,ಮೊಮ್ಮಕ್ಕಳು,ಹತ್ತಿರದ ಸಂಬಂಧಿ ಕರಿಗಷ್ಟೇ ವಾಸ್ತವ್ಯಕ್ಕೆ ಅವಕಾಶ, ಸುರಕ್ಷಿತೆಯ ದೃಷ್ಟಿಯಿಂದ.

ಎಲ್ಲೆಲ್ಲೋ ಹೋಗಿ ಮಜ್ಜಿಗೆ ಕಡೆದಿದ್ದು, ಹಿಟ್ಟು ಬೀಸಿದ್ದು, ಸಾಂಪ್ರದಾಯಿಕ ಸೀರೆ ಉಟ್ಟಿದ್ದು ಹೀಗೆ ಫೋಟೋ ತೆಗೆದು ಫೇಸ್‌ ಬುಕ್ಕಿಗೆ ಹಾಕಿಕೊಳ್ತಾ ರಲ್ಲ ಇಲ್ಲೇ ಮಾಡಲಿ ಎಲ್ಲ..ಹಿಂದಿನ ಕಾಲದ ರುಬ್ಬುವ ಕಲ್ಲು, ಹಿಟ್ಟು ಬೀಸುವ ಕಲ್ಲು, ಮಜ್ಜಿಗೆ ಕಡೆಗೋಲು, ಒನಕೆ, ನೇಗಿಲು, ಚೆನ್ನೆಮಣೆ ಇತ್ಯಾದಿ ಒಂದು ಓರಿಯಲ್ಲಿ ನೀಟಾಗಿ ಜೋಡಿಸಿದ್ದಾರಂತೆ. ಈಜು ಕೊಳ, ಉಯ್ಯಾಲೆ.. ಯಾವ ರೆಸಾರ್ಟಿಗೂ ಕಮ್ಮಿಯಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡ ರು. ರಜೆಯಲ್ಲಿ ಮಕ್ಕಳೋ ಮೊಮ್ಮಕ್ಕಳೋ ಬಂದಾಗ ಸಂಪ್ರದಾಯದ ಅಡಿಗೆ, ಮಾಡರ್ನ್‌ ಕುಕಿಂಗ್‌ ಎರಡೂ ಬಲ್ಲವರು ಸಹಾಯಕ್ಕೆ ಬರುತ್ತಾರೆ..

ತೋಟದ ಆದಾಯ ತಕ್ಕಮಟ್ಟಿಗಿದೆ…. ನನ್ನೊಬ್ಬಳಿ ಗೆಷ್ಟು ಖರ್ಚು ಹೇಳಿ… ಮಕ್ಕಳು ಮೊಮ್ಮಕ್ಕಳಿಗೆ ಎಫ್‌.ಡಿ ಮಾಡಿ ಕೊಡುವ ಬದಲು ಒಳ್ಳೆಯ ನೆನಪುಗಳನ್ನು ಉಡುಗೊರೆಯಾಗಿ ಕೊಡುತ್ತೇನೆ ನೋಡಿ ಎಂದರು.

ಅವರೊಂದಿಗೆ ಮಾತನಾಡುವಾಗ ಒಂದು ಪಾಸಿಟಿವ್‌ ಅಲೆ ನನ್ನನ್ನು ತಾಕಿತು. ವಯಸ್ಸೆಷ್ಟೇ ಇರಲಿ ಹೊಸತನ್ನು ಮಾಡುವ ಉಮೇದಿ ಇದ್ದರೆ ತರುಣರೇ ತಾನೇ??

✍️ಡಾ.ಸೌಮ್ಯ ಕೆ.ವಿ.
ನೇತ್ರ ವೈದ್ಯರು
ಯಲ್ಲಾಪುರ