ಗಾಢ ತಮದ ಗೂಢ ಕುಹರದಲಿ
ಮುತ್ತಿದ ಕರಿಯ ಕತ್ತಲೆಯಲಿ
ಅಂಗಳದಿ ಮುಂಬೆಳಕ ಹರಡಲು
ಹಚ್ಚೋಣ ಬನ್ನಿ ಮಂಗಳದ ಹಣತೆ
ನಾನು ನೀನೆಂಬ ಸ್ವಾರ್ಥ ಕಡಲಿನಲಿ
ಮೇಲೆದ್ದ ದುರಿತಕಾಲದ ಬಿರುಗಾಳಿ
ಮುಳುಗಿ ಹೋಗುತಿದೆ ಸಜ್ಜನತೆಯ ನಾವೆ
ಉಳಿಸಲು ಹಚ್ಚೋಣ ಭರವಸೆಯ ಹಣತೆ
ಅಹಂಕಾರದ ಪೊರೆ ಕವಿದ ಕಂಗಳು
ಸಿನಿಕತೆಯೇ ಮೈಮನದಿ ಉಸಿರಾಡುತಿರಲು
ಪ್ರೇಮ ಪ್ರೀತಿ ಮಮತೆಯ ಹೊಸ ಗಾಳಿ ತರಲು
ಹಚ್ಚೋಣ ಬನ್ನಿ ಸೌಹಾರ್ದತೆಯ ಹಣತೆ
ಭವಿಷ್ಯದ ದಾರಿ ಮಸುಕಾಗಿ ಕಾಡಿರಲು
ಮುಂದೇನೆಂಬ ಪ್ರಶ್ನೆ ಬೃಹದಾಕಾರವಾಗಿರಲು
ಸಕಲರಿಗೂ ಶುಭವನ್ನೇ ಕೋರುತಲಿ
ಹಚ್ಚೋಣ ಬನ್ನಿ ಮಾನವೀಯತೆಯ ಹಣತೆ

✍️ಸುಜಾತಾ ರವೀಶ್
ಮೈಸೂರು
