ಮನೆ, ಮನದ ಹೊರಗೆ ದೀಪ ಹಚ್ಚಿ ಸುತ್ತಲೂ ವೀಕ್ಷಿಸಿದೆ
ನೋಡಿದವರೆಲ್ಲೆಲ್ಲಾ ದ್ವೇಷ, ವಂಚನೆ, ಮೋಸಗಳ ಕಂಡೆ
ನೋಡಿದಲ್ಲೆಲ್ಲಾ ಅಜ್ಞಾನ, ಭಯ, ದುರಾಭಿಮಾನವನೇ ಕಂಡೆ
ಚಿಂತಿಸಿದೆ, ಈ ದುಷ್ಟರನೆಲ್ಲಾ ಹೇಗೆ ಸಂಹರಿಸಿ ಜಗತ್ತನ್ನು ಉಳಿಸಲೆಂದೇ

ಇಂದೇಕೋ ನನ್ನೊಳಗಿನ ದೀಪ ಹಚ್ಚಿ ಅಂತರಾಳದಲ್ಲಿ ಒಮ್ಮೆ ಇಣುಕಿದೆ
ಕೆಟ್ಟತನಗಳನ್ನೆಲ್ಲಾ ಹೊಂದಿರುವ ಅಸಹಿಷ್ಣು ದುಷ್ಠ ನಾನೇ ಎಂದರಿತೆ
ಒಳಗಣ್ಣು ತೆರೆದು ಸಹಾನುಭೂತಿ, ಪ್ರೀತಿಗಳಿಂದ ಇತರರನ್ನು ಗಮನಿಸಿದೆ
ಅವರಾರೂ ನನ್ನಂತ ಸ್ವಾರ್ಥಿ ಹಾಗು ನೀಚರಲ್ಲವೆಂದು ಮನವರಿಸಿಕೊಂಡೆ.

ಈ ಬೆಳಕಿನ ಹಬ್ಬದಂದು ನನ್ನ ದೀಪದ ಕೆಳಗಿನ ಕತ್ತಲೆಯಲಿ ತಡಕಿದೆ
ನನ್ನ ದೋಷಗಳನು ಹುಡುಕಿ ನಾನೇ ತಿದ್ದಿಕೊಳ್ಳಬೇಕೆಂದು ನಿರ್ಧರಿಸಿದೆ
ಈ ದೃಷ್ಟಿಯಿಂದ ಜಗತ್ತಿನ ಅಂಧಕಾರವೇ ನಶಿಸುವುದೆಂಬ ಸತ್ಯವನು ತಿಳಿದೆ
ಅಂತರಾಳದ ಶುದ್ಧಿಯೇ ಬಾಹ್ಯದ ಬೆಳಕೆಂಬ ಸುನುಡಿಯನು ಅರ್ಥೈಸಿಕೊಂಡೆ.

✍️ಡಾ.ಎಸ್.ಎಮ್.ಶಿವಪ್ರಸಾದ
ಹಿರಿಯ ವಿಜ್ಞಾನಿಗಳು ಹಾಗೂ ಡೀನ್ ಐ.ಐ.ಟಿ.ಧಾರವಾಡ