ಗುರುವೇ ಜಗದಿ ನೀವಿಲ್ಲದಿರುತ್ತಿದ್ದರೆ
ನಮ್ಮ ಈ ಜೀವ ಸ್ವರಗಳೇ ಇರುತಿರಲಿಲ್ಲ
ಸ್ವರಗಳಿದ್ದರೂ ಮಾಧುರ್ಯವಿರುತಿರಲಿಲ್ಲ
ಗುರುವೇ ಇಳೆಯಲಿ ನೀವಿಲ್ಲದಿರುತಿದ್ದರೆ
ನಮ್ಮ ಈ ಭಾವ ಸ್ತರಗಳೇ ಇರುತಿರಲಿಲ್ಲ
ಸ್ತರಗಳಿದ್ದರೂ ಸೌಂದರ್ಯವಿರುತಿರಲಿಲ್ಲ
ಗುರುಗಳೇ ಲೋಕದಲಿ ನೀವಿಲ್ಲದಿರುತಿರೆ
ನಮ್ಮ ಜೀವನಾಧಾರವೇ ಇರುತಿರಲಿಲ್ಲ
ಆಧಾರವಿರುತಿದ್ದರೂ ಔದಾರ್ಯವಿರುತಿರಲಿಲ್ಲ
ಶಿಕ್ಷಕರೇ ನಿಜಕೂ ನೀವಿಲ್ಲದಿರುತ್ತಿದ್ದರೆ
ಬದುಕುಗಳಿಗೆ ಶಿಕ್ಷಣವೇ ಇರುತಿರಲಿಲ್ಲ
ಬುವಿಗೆ ಲಕ್ಷಣವೇ ಇರುತಿರಲಿಲ್ಲ
ಶಿಕ್ಷಕರೇ ಜಗದಲಿ ನೀವಿಲ್ಲದಿರುತ್ತಿದ್ದರೆ
ಅಕ್ಷರಗಳ ಚೆಲುವುಗಳ ಒಲವಿರುತಿರಲಿಲ್ಲ
ಸಾಕ್ಷರತೆ ನಿಲುವು ಬಲವಿರುತಿರಲಿಲ್ಲ
ಶಿಕ್ಷಕರೇ ಧರೆಯಲಿ ನೀವಿಲ್ಲದಿರುತ್ತಿದ್ದರೆ
ಪಾಠ ಪಠ್ಯಗಳ ಕಲಿಕೆಯೇ ಇರುತಿರಲಿಲ್ಲ
ಬಾಳ ಭಾಷ್ಯದ ತಿಳುವಳಿಕೆಯಿರುತಿರಲಿಲ್ಲ
ಶಿಕ್ಷರರೇ ಬಾಳಿಗೆ ನೀವಿಲ್ಲದಿರುತ್ತಿದ್ದರೆ
ಅರಿವು ಅನುಭಾವಗಳೇ ಇರುತಿರಲಿಲ್ಲ
ಸಂಸ್ಕೃತಿ ಸಂಸ್ಕಾರಗಳೇ ಇರುತಿರಲಿಲ್ಲ.!
ನಿಮ್ಮಿಂದಲೇ ಸತ್ಯ ಸತ್ವಗಳ ನಿತ್ಯದರ್ಶನ
ಜ್ನಾನ ವಿಜ್ನಾನ ಸುಜ್ನಾನಗಳ ದಿಗ್ದರ್ಶನ
ಅಡಿಗಡಿಗು ನಡೆನುಡಿಗಳಿಗೆ ಮಾರ್ಗದರ್ಶನ
ಭಾವ ಬೆಳದಿಂಗಳಾಗಿಸುವ ಸ್ವರ ನೀವು
ಜೀವಗಳ ಚೈತನ್ಯಗೊಳಿಸುವ ಕರ ನೀವು
ಜೀವ- ಜೀವನಗಳಿಗೆ ದೈವ ದೈವತ್ವದ ತಾವು
ಓಂಕಾರ, ಸಾಕ್ಷತ್ಕಾರಗಳ ಬೆಳಕು ನೀವು
ನಿಮಗಿದೋ ಶಿಕ್ಷಕರದಿನದ ಶುಭಾಶಯ
ಅನಂತ ಆದರಭಿಮಾನಗಳ ಹೃದ್ಯಕಾವ್ಯ.!
✍️ಎ.ಎನ್.ರಮೇಶ್. ಗುಬ್ಬಿ.
