1.ಗಜಾನನ!

ಮಾತೃಭಕ್ತಿಯ ವಿರಾಟ್ ಪ್ರದರ್ಶನ
ಮೂಡಿಸುವ ಭಾವೈಕ್ಯತೆ ಸಂಚಲನ
ಹರಡಿಹ ಪಂಚತತ್ವಗಳ ಸಂಕೀರ್ತನ
ಯುಗಯುಗಕು ಜಗಕೆ ಚಿರನಿದರ್ಶನ
ಸಂಸ್ಕೃತಿ ಸಂಸ್ಕಾರದ ಮೇರು ಗಜಾನನ.!

2. ಮನವಿ!

ಬಂದ ಬಂದ ಗಣೇಶ ಬಂದ
ಎಲ್ಲರೂ ಸರಿದು ಜಾಗಬಿಡಿ
ಮೋಜು ಮಸ್ತಿಗಳ ಸೈಡಿಗಿಡಿ
ಎದೆಯ ಭಕುತಿ ಎದುರುಗಿಡಿ
ಸಂಸ್ಕಾರ ಪ್ರೀತಿ ನೀತಿ ಕಾಪಾಡಿ.!

3.ನಿದರ್ಶನ.!

ಮಣ್ಣಿನಿಂದ ತಳೆವನು ಜನನ
ಗರಿಕೆ ಪತ್ರೆಗಳಿಂದಲೇ ಅರ್ಚನ
ಕಡೆಗೆ ನೀರಿನೊಳಗೆ ವಿಸರ್ಜನ
ಅದೆಷ್ಟು ತತ್ವ ಸಾರಿಹ ಗಜಾನನ
ಪರಿಸರ ಸ್ನೇಹದ ಸತ್ಯನಿದರ್ಶನ.!

4.ವರಸಿದ್ದಿನಾಯಕ.!

ಉಂಡೆ, ಕರಿಗಡುಬು, ಮೋದಕ
ಪ್ರಿಯ ನಮ್ಮ ಈ ಸಿದ್ದಿವಿನಾಯಕ
ಸಕಲ ವಿದ್ಯಾ ಬುದ್ದಿ ಪ್ರದಾಯಕ
ಸತ್ಯ ಸತ್ವ ತತ್ವಗಳ ಅಧಿನಾಯಕ
ಸಮಸ್ತ ಸನ್ಮಂಗಳಗಳ ನಿತ್ಯಕಾರಕ.!

5.ವಿನಂತಿ.!

ಬೇಡವೊ ಬೇಡ ಬಗೆ ಬಗೆ ಬಣ್ಣ
ರಾಸಾಯನಿಕಗಳ ಬಳಸದಿರಣ್ಣ
ಮಣ್ಣಿನ ಗಣಪನೆ ಸಾಕೋ ಅಣ್ಣ
ಇಂದಿನ ಹಬ್ಬದ ಸಂತಸ ಸಡಗರ
ಕೆಡಿಸದಿರಲೆಂದು ನಮ್ಮೀ ಪರಿಸರ.!

✍️ಎ.ಎನ್.ರಮೇಶ್. ಗುಬ್ಬಿ.