ಪಟ ಪಟನೆ
ಬಡಿದು ಅಪ್ಪಳಿಸುತ್ತಿದ್ದವು..
ಮುಚ್ಚಿದ ಕಿಟಕಿಯ ಗಾಜು
ನನ್ನನ್ನು ಕಾಪಾಡುತ್ತಿತ್ತೋ;
ಅವಕಾಶ ವಂಚಿತ ಮಾಡುತ್ತಿತ್ತೋ?!
ಅದು
ಸುಮ್ಮನೆ ತನ್ನನ್ನು ತಾನು
ಒಡ್ಡಿಕೊಂಡಿತ್ತು

ಬೇರುಬಿಟ್ಟಿರಲಿಲ್ಲ ನಾನು
ಸ್ನೇಹ ಸಂಬಂಧ ಬಳ್ಳಿಗಳು
ಕಾಲಿಗೆ ಉರುಳಾಗಿದ್ದವು..
ಒಳಗಿಳಿಯಲಿಲ್ಲ ನಾನು
ಪ್ರೇಮದ ರೆಕ್ಕೆಗಳು ಬಲವಾಗಿದ್ದವು..
ಪ್ರೀತಿಯುಂಡು
ಉರುಳೂ ಬಿಗಿಯಾಗಿತ್ತು
ಕರ್ತವ್ಯದ ಗಂಟು ಸುತ್ತಿಕೊಂಡು
ಹಾರಿದರೆ ನನ್ನ ಸಾವು,
ಹಾರದಿದ್ದರೆ ಅವನದ್ದು..

ಅವನಲ್ಲಿ ಕಾತರಿಸಿ ಕಾದಿದ್ದ
ಶಬರಿಯಂತೆ..
ತವಕ ಮಿಂಚಾಗಿ
ಎದೆಬಡಿತ ಗುಡುಗಿ
ಅಲ್ಲಿ
ಅವನು ಮಳೆಯಾಗಿರಬೇಕು!
ಇಲ್ಲಿ ಗಾಜಿನ ಮೇಲೆ
ಚಿತ್ತಾರ ಬಿಡಿಸುತ್ತಿವೆ
ಹನಿಗಳು..

ತೆರೆದು ಒಡ್ಡಿಕೊಂಡರೆ
ಚಿಗುರುವ ಭಯ!
ಹಕ್ಕಿ, ಬಳ್ಳಿಗಳ ಸುರುಳಿ ಉರುಳು
ಬಡಿಯುತ್ತಿದ್ದ ಹನಿಗಳು
ಮಾತಾಡುತ್ತಲೇ ಇದ್ದವು
ನನ್ನ ಮೌನಕ್ಕೆ ಕಣ್ಣೀರಾದವು
ಇಳಿದವು ಮೇಲಿಂದ ಕೆಳಗೆ
ಕನಲಿ ಬಳಲಿದವು..

ಅವನ ನಿಟ್ಟುಸಿರು ನಿರಾಸೆ
ಆಸೆ ಕನಸುಗಳು ಕರಗಿ,
ನನ್ನನ್ನು ಇಣುಕಿಣಿಕಿ ನೋಡಿ,
ಗಾಜಿನಾಚೆಯ ನನ್ನನ್ನು
ಕಗೆಟುವ ನಿಜವೆಂದು
ಭ್ರಮಿಸಿ ಸುರಿದುಬಿಟ್ಟವು..
ವಿರಹವನ್ನು ಮಾತಾಡಿದವು
ಹೇಳದೇ ಉಳಿಸಿದ ಮಾತುಗಳನ್ನೂ
ಬಳಿದು ತಂದಿದ್ದವು ಅವು
ಅವನಿಗೂ ತಿಳಿಯದಂತೆ!

ನೀರಿಗುಂಟ ಹರಿದು
ಹೊಳೆಯಾಗಿ ನದಿಯಾಗಿ
ಕಡಲೊಡಲ ಸೇರಿದವು
ಮುತ್ತುಗಳನ್ನು ಕಟ್ಟಿಕೊಂಡವು
ಗೆಜ್ಜೆ ತೊಡಿಸಲು!

ನನ್ನ ಬರುವಿಕೆಗಾಗಿ
ಹಗಲಿರುಳು
ಒಳಗಿಂದ ಹೊರಬಂದು
ತೆರೆಯಾಗಿ, ಹಣೆಗೈಯಾಗಿ
ನೋಡುತ್ತಿವೆ
ದಾರಿ ತಪ್ಪಿಯಾದರೂ
ದಡದತ್ತ ಬಂದರೆ,
ಒಂದೊಮ್ಮೆ ಮುತ್ತಿಟ್ಟ
ಆ ಪಾದಗಳನ್ನು ಸ್ಪರ್ಶಿಸಲು,
ತನ್ನ ಉಪ್ಪು ಕಣ್ಣೀರಲ್ಲಿ
ನನ್ನ ಹುಣ್ಣು ತೊಳೆಯಲು,
ನನ್ನನ್ನು ಹೆಣ್ಣು ಮಾಡಲು!

✍️ಸೌಮ್ಯ ದಯಾನಂದ
ಡಾವಣಗೆರೆ