ಪಶ್ಚಿಮ ಬಂಗಾಳದ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಜಗತ್ತು ಕಂಡ ಅದ್ಭುತ ಲೇಖಕ, ಕವಿ, ತತ್ವಜ್ಞಾನಿ ಮತ್ತು ಬಹುಶ್ರುತ ವ್ಯಕ್ತಿ.
ನಮ್ಮ ರಾಷ್ಟ್ರಗೀತೆಯಾದ ಜನಗಣಮನವನ್ನು ಬರೆದದ್ದು ರವೀಂದ್ರನಾಥ್ ಟ್ಯಾಗೋರ್ ಅವರೇ.
“ಗುರುದೇವ” ಎಂದು ಅವರನ್ನು ಕರೆದು ಭಾರತೀಯ ಪ್ರಜೆಗಳು ಗೌರವಿಸಿದರು.

ಅವರ ಹಿರಿಮೆಯನ್ನು ಸಾರುವ ಕೆಲ ವಿಶೇಷತೆ ಗಳು ಇಲ್ಲಿವೆ. ತಮ್ಮ ಕೃತಿ “ಗೀತಾಂಜಲಿ” ಎಂಬ ಕವನ ಸಂಕಲನಕ್ಕೆ ಸಾಹಿತ್ಯಕ್ಕಾಗಿನ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಟ್ಯಾಗೋರ್ ಅವರು ಈ ಪ್ರಶಸ್ತಿಗೆ ಭಾಜನರಾದ ಮೊಟ್ಟಮೊದಲ ಯುರೋಪೇತರ ವ್ಯಕ್ತಿ.

ನವೋದಯ ಬಂಗಾಳದ ಪ್ರಮುಖ ವ್ಯಕ್ತಿಯಾ ಗಿದ್ದ ರವೀಂದ್ರನಾಥರು ಬಂಗಾಲದಲ್ಲಿನ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳ ಕಾರಣ ಪುರುಷರು. ಎರಡು ಸಾವಿರಕ್ಕೂ ಹೆಚ್ಚು ಕವನಗಳು, ಗೀತೆಗಳು, ನಾಟಕಗಳನ್ನು ಬರೆದ ರವೀಂದ್ರನಾಥ ಟ್ಯಾಗೋರರು ಕಾವ್ಯ ಮೇಧಾವಿ ಎಂದು ಗುರುತಿಸಿಕೊಂಡವರು. ಸಾರ್ವಕಾಲಿಕ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಅವರು ಬರೆದ ರಾಷ್ಟ್ರಗೀತೆ ಜನಗಣಮನ ಆದರೂ, ಕವಿ ಬಂಕಿಮ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಕವಿತೆಯನ್ನು ಮೊತ್ತ ಮೊದಲು ಸಾರ್ವಜನಿಕ ಸಭೆಯಲ್ಲಿ ಹಾಡಿದವರು ರವೀಂದ್ರ ನಾಥ ಟ್ಯಾಗೋರರು.

ಟ್ಯಾಗೋರರ ಕೃತಿಗಳು ಜಗತ್ತಿನ 50ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿದ್ದು, ಅವರು ಜಾಗತಿಕ ಸಾಹಿತ್ಯದ ಪ್ರತಿಮಾಪುರುಷರಾಗಿ ಗುರುತಿಸಿಕೊಂಡಿದ್ದಾರೆ.

ಓರ್ವ ಅತ್ಯುತ್ತಮ ತತ್ವಜ್ಞಾನಿ ಮತ್ತು ಶಿಕ್ಷಣ ತಜ್ಞರಾಗಿದ್ದ ರವೀಂದ್ರನಾಥ ಟ್ಯಾಗೋರರು ತಮ್ಮ ಕನಸಿನ ಕೂಸಾದ ಶಾಂತಿನಿಕೇತನದಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯವನ್ನು ಕಟ್ಟಿದವರು. ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ನಾಂದಿ ಹಾಡಿದವರು ಟ್ಯಾಗೋರರು.

ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ನುರಿತ ಸಂಗೀತಜ್ಞ ಮತ್ತು ಚಿತ್ರ ಕಲಾವಿದ ಕೂಡ ಆಗಿದ್ದರು. ಟ್ಯಾಗೋರರು ರಚಿಸಿದ ಚಿತ್ರಗಳು ಜಾಗತಿಕವಾಗಿ ಪ್ರದರ್ಶನ ಗೊಂಡಿದ್ದು ಜನ ಮನ್ನಣೆ ಗಳಿಸಿವೆ.

ಸಾಮಾಜಿಕ ಸುಧಾರಣೆಯ ಹರಿಕಾರರಾಗಿದ್ದ ರವೀಂದ್ರನಾಥ ಟ್ಯಾಗೋರರು ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕ್ಕಾಗಿ ಹೋರಾಡಿದರು.
ಟ್ಯಾಗೋರರ ವಿಚಾರಗಳು ಮತ್ತು ಬರಹಗಳಿಂದ ಮಹಾತ್ಮಾಗಾಂಧಿ ಪ್ರಭಾವಿತರಾಗಿದ್ದರು. ತಮ್ಮ ಅಹಿಂಸಾ ಚಳುವಳಿಗೆ ಟ್ಯಾಗೋರರ ತತ್ವಗಳನ್ನು ಅವರು ಅನುಸರಿಸಿದ್ದರು.

ಟ್ಯಾಗೋರರು ಈ ಜಗತ್ತಿನಿಂದ ಕಣ್ಮರೆಯಾಗಿ ಎಂಟು ದಶಕಗಳು ಸಂದು ಹೋದರೂ ಇಂದಿಗೂ ನವ ಪೀಳಿಗೆಯ ಲೇಖಕರು ಕವಿಗಳು ಮತ್ತು ವಿಚಾರವಾದಿಗಳಿಗೆ ಅತ್ಯಂತ ಶ್ರೀಮಂತವಾದ ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಯನ್ನೇ ಅವರು ಬಿಟ್ಟು ಹೋಗಿದ್ದಾರೆ.

ಇದರ ಜೊತೆಗೆ ಭಾರತ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರು ಮಾಡುತ್ತಿದ್ದ ಅನ್ಯಾಯ ಗಳನ್ನು ಖಂಡಿಸಿ ತಮಗೆ ಕೊಡ ಮಾಡಿದ ಸರ್ ಎಂಬ ಬಿರುದನ್ನು ಬ್ರಿಟಿಷ್ ಸರ್ಕಾರಕ್ಕೆ ಮರಳಿಸಿದ ಸ್ವಾಭಿಮಾನಿ ಭಾರತೀಯ ರವೀಂದ್ರನಾಥ್ ಟ್ಯಾಗೋರ್ ಅವರು.
ರವೀಂದ್ರನಾಥ ಟ್ಯಾಗೋರ್ ಅವರು ಭಾರತೀಯ ಸಾಹಿತ್ಯ, ಸಂಸ್ಕೃತಿ ಮತ್ತು ತತ್ವಜ್ಞಾನಕ್ಕೆ ನೀಡಿರುವ ಕಾಣಿಕೆಗಳು ಅತ್ಯಮೂಲ್ಯವಾಗಿದ್ದು, ಗುರುದೇವ ಎಂಬ ಗೌರವಕ್ಕೆ ಪಾತ್ರರಾದ ಏಕಮೇವ ವ್ಯಕ್ತಿ ಟ್ಯಾಗೋರ್ ಅವರು.

ಗುರುಪೂರ್ಣಿಮೆಯ ಈ ದಿನ ಅವರಿಗೆ ಶತಶತ ಪ್ರಣಾಮಗಳನ್ನು ಸಲ್ಲಿಸೋಣ.🙏🙏
✍️ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಜಿ:ಗದಗ
