'ಬೆಂಕಿ ಕೈಗಳಲ್ಲಿಯೇ ನಿನ್ನ ಮನೆಯ ಕದ ತಟ್ಟುತ್ತಿದ್ದೇನೆ'
ಹಸಿರು ಸೀರೆಯನ್ನೇ ಉಟ್ಟು ನಳನಳಿಸುತ್ತಿದ್ದೆ. ಎಷ್ಟು ಹಸಿರೆಂದರೆ ಭುಜದ ಮೇಲಿದ್ದ ಗಿಳಿ ಕೂಡ ಕಾಣುತ್ತಿರಲಿಲ್ಲ! ಮೈತುಂಬ ಗೂಡುಗಳ ಕಟ್ಟಿಕೊಂಡು ಮೊಟ್ಟೆಯೊಡೆದು ಬರುವ ಪವಾಡಕ್ಕಾಗಿ ಕಾಯುತ್ತಿದ್ದೆ. ಚಿಲಿಪಿಲಿಗಳ ಸಗ್ಗ ಸುಮ್ಮಸುಮ್ಮನೆ ಬರುವುದೇ? ಹಸಿರುಟ್ಟು ಹೂವಾಗಿ ಘಮ್ಮನ್ನೆಬೇಕು, ಹಣ್ಣಾಗಬೇಕು. ಕುಕ್ಕಿ ತಿಂದರೂ ನೋವಾಗದಂತೆ ನಟಿಸಬೇಕು. ಗಿಳಿ ಗೊರವಂಕ ಗಳ ಕಾಯಲು ಹಾವುಗಳನ್ನೇ ಎದುರಿಸಬೇಕು!
ನೀನು ನನ್ನ ನೆರಳಲ್ಲೇ ನಿದ್ದೆ ಮಾಡುತ್ತಿದ್ದವನು. ಕೊಳಲೂದಿದವನು. ಮರಕೋತಿಯಾದವನು. ಹಣ್ಣ ರಸ ಹೀರಿದವನು. ಅದ್ಯಾವ ಮಾಯದಲ್ಲಿ ಹೀಗಾದೆ? ಸೋದರ ಸೋದರಿಯರ ಕೈಕಾಲುಗಳ ಮುರಿದು ಬೆಚ್ಚನೆಯ ಮನೆ ಕಟ್ಟಿಕೊಂಡೆ. ಆಹಾ ! ನೊಂದ ಹಾಳೆಗಳ ಮೇಲೆ ಅಂತಃಕರಣದ ಕವಿತೆ ! ಉರಿ ಉಗುಳುತಿದೆ,ರೋಷಾವೇಶ ಕಾರಿದೆ. ತಂಪು, ನೆರಳಿನ ಪದಗಳನ್ನೆಲ್ಲ ಕಿತ್ತೆಸೆದು ಬರೀ ಬೆಂಕಿ ನಂಜಿನ ಸಮನಾರ್ಥಗಳ ಹೊಸ ನಿಘಂಟನೆ ಹೊಸೆದು ಬಿಟ್ಟೆ.
ಆಗಲು ನಿನ್ನೊಳಗು ಅರ್ಥವಾಗಿರಲಿಲ್ಲ. ಅಂಕೆ ಇರದ ಕಪಿ ಲಂಕೆ ಸುಟ್ಟೀತೆಂದು ಯಾರಿಗೂ ತಿಳಿದಿರಲಿಲ್ಲ. ಅಪ್ಪಿಕೊಳ್ಳಲು ಕೈ ಚಾಚಿದರೆ ಮಾತಲ್ಲೇ ತುಪ್ಪ ಸುರಿಸಿ ಕಡ್ಡಿ ಗೀರಿದ್ದೀಯಾ. ಇದೀಗ ಬೆಂಕಿ ಕೈಗಳಲ್ಲಿಯೇ ನಿನ್ನ ಮನೆಯ ಕದ ತಟ್ಟುತ್ತಿದ್ದೇನೆ.
ಆರಾಮ ಕುರ್ಚಿಯಲ್ಲಿ ಕೂತಿರುವ ನೀನು ಬೆಚ್ಚುತ್ತಿದ್ದೀಯಾ !
✍️ಎಂ.ಆರ್.ಕಮಲ

ಇಂದು ಮನುಷ್ಯ ಆಗಸಕ್ಕೆ ಏಣಿ ಹಾಕುತ್ತಿದ್ದಾನೆ. ಚಂದ್ರಲೋಕಕ್ಕೆ ಕಾಲಿಟ್ಟಾಗಿದೆ. ಮಂಗಳನನ್ನು ಸ್ಪರ್ಶಿಸಿ ಬಂದಾಗಿದೆ. ಕಡಲಾಳದಲ್ಲಿ ಮುಳುಗಿ ಸಾಧನೆ ಮಾಡುತ್ತಿದ್ದಾನೆ. ಭೂಗರ್ಭದೊಳಗೆ ಅಡಗಿ ಕೂತಿರುವ ಕೌತುಕಗಳನ್ನು ಹೊರ ತೆಗೆಯು ತ್ತಿದ್ದಾನೆ. ತಾನು ಯಾರ ಅಂಕೆಗೂ ಸಿಗುವುದಿಲ್ಲ ಎಂಬ ಭ್ರಮಾ ಗೋಡೆ ಕಟ್ಟಿಕೊಂಡಿದ್ದಾನೆ. ತಾನು ನಡೆದಿದ್ದೇ ದಾರಿ ಎಂಬ ಉದ್ಧಟತನದ ಭಾವ ಅವನದಾಗಿದೆ. ಎಲ್ಲವೂ ತನ್ನ ನಿರ್ದೇಶನದಂತೆ ನಡೆಯುತ್ತದೆ ಎಂಬ ಅಹಂ ಅವನಿಗೆ ಯಾವುದರ ಬಗೆಗೂ ಭಯವನ್ನು ಇಲ್ಲವಾಗಿಸಿದೆ. ಪ್ರಯುಕ್ತ ಮನುಷ್ಯತ್ವವನ್ನು ಮರೆಯುತ್ತಿದ್ದಾನೆ. ಪ್ರಕೃತಿಯನ್ನ ತನ್ನ ಅಗತ್ಯಗಳನ್ನು ಪೂರೈಸುವ ಕಣಜವೆಂಬ ಕಲ್ಪನೆಯಲ್ಲಿ ಅಂಧನಾಗುತ್ತಿದ್ದಾನೆ. ಆ ಕತ್ತಲಿನಿಂದ ಅವನು ಪ್ರಜ್ವಲ ಬೆಳಕಿನೆಡೆಗೆ ಹೊರಳದ ಹೊರತು ಆ ಮನುಷ್ಯನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಅಂಶಗಳನ್ನು ಪ್ರಧಾನ ಆಶಯವಾಗಿಸಿ ಕೊಂಡು ಮೂಡಿ ಬಂದ ಕವಿತೆ ಎಂ.ಆರ್. ಕಮಲ ಅವರ ‘ಬೆಂಕಿ ಕೈಗಳಲ್ಲಿಯೆ ನಿನ್ನ ಮನೆ ಕದ ತಟ್ಟುತ್ತಿದ್ದೇನೆ’ ಕವಿತೆ.
ಈ ಕವಿತೆಯಲ್ಲಿ ಮೂರು ಪ್ರಮುಖ ಅಂಶಗಳನ್ನು ಮುನ್ನಲೆಗೆ ತಂದು ಪರಿಸರ ಕಾಳಜಿಯನ್ನು ನಿರೂಪಿಸಿದ್ದಾರೆ. ಒಂದೆಡೆ ಹಸಿರಿನ ಮಹತ್ವ ಸಾರಿದರೇ ಮತ್ತೊಂದೆಡೆ ಮನುಜನ ದುರಾಸೆಗೆ ಘಾಸಿಗೊಳ್ಳುವ ಪ್ರಕೃತಿಯ ಆರ್ಥನಾದ ಕಂಗಳ ಪಸೆ ಹೆಚ್ಚುಸುತ್ತದೆ. ನಾವು ‘ಬಿತ್ತಿದ್ದನ್ನೆ ಬೆಳೆಯು ತ್ತೇವೆ’ ಎಂಬ ನಾಣ್ಣುಡಿಯ ಅರ್ಥ ತುಂಬುತ್ತದೆ. ನಾವು ಪ್ರಕೃತಿಯ ವಿರುದ್ಧ ಹೆಜ್ಜೆ ಇಟ್ಟಿದ್ದೇವೆ. ಅದೀಗ ತನ್ನ ಉಳಿವಿಗಾಗಿ ಮನುಷ್ಯನ ವಿರುದ್ಧ ಯುದ್ಧ ಸಾರುತ್ತಿದೆ. ಅದನ್ನು ಸಹಿಸುವ ಶಕ್ತಿ ಮನುಜನಿಗೆ ಇದೆಯೇ ಎಂಬ ಪ್ರಶ್ನೆಯು ಇಲ್ಲಿದೆ.

ಪರಿಸರ ಎಂದೊಡನೆ ನಮ್ಮ ದೃಷ್ಟಿಯಲ್ಲಿ ಹಾದು ಹೋಗುವ ಬಣ್ಣ ಎಂದರೆ ಹಸಿರು. ಗಿಡ ಮರಗಳೇ ಹಸಿರಿನ ಪ್ರತೀಕವಾಗಿವೆ. “ಹಸಿರಿದ್ದರೆ ಉಸಿರು” “ಉಸಿರಿದ್ದರೆ ನಾವು” “ನಾವಿದ್ದರೆ ನಾಡು” “ನಾಡಿದ್ದರೆ ಜಗತ್ತು” ಹೀಗೆ ಪರಿಸರ ಮತ್ತು ನಮ್ಮ ನಡುವೆ ಅವಿನಾಭಾವ ಸಂಬಂಧವಿದೆ. ಹೆಸರಾಂತ ಸಾಹಿತಿಗಳಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯ ವರು “ನನಗೂ ಪರಿಸರಕ್ಕೂ ಇರುವ ಸಂಬಂಧ ನನ್ನ ತಂದೆ ತಾಯಿ ಹೆಂಡತಿ ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲು ಸಾಧ್ಯವಾಗದಷ್ಟು ನಿಗೂಢವಾದುದು” ಎಂದು ಹೇಳುವ ಮೂಲಕ ಪರಿಸರ ಹಾಗೂ ಮನುಷ್ಯನ ನಡುವಿನ ಬಾಂಧವ್ಯ ದ ಮಹತ್ವವನ್ನು ಸಾರಿದ್ದಾರೆ. ಈ ಮಾತಿನಿಂದ ನಮಗೆ ತಿಳಿದುಬರುವುದೇನೆಂದರೆ ಪರಿಸರ ಹಾಗು ಮಾನವ ಎರಡು ಒಂದರ ಮೇಲೊಂದು ಅವಲಂಬಿತವಾಗಿವೆ ಎಂದು. “ಉಣ್ಣಲು ಅನ್ನ ಬೇಕು” “ಉಸಿರಾಡಲು ಗಾಳಿ ಬೇಕು ” ಇವನ್ನು ಪಡೆಯಲು ಪರಿಸರ ಬೇಕು. ಇದನ್ನು ದೃಢೀಕರಿ ಸುವ ಕಮಲ ಅವರ ಕವಿತೆ ಇದು.

‘ಬೆಂಕಿ ಕೈಗಳಲ್ಲಿಯೇ ನಿನ್ನ ಮನೆಯ ಕದ ತಟ್ಟುತ್ತಿದ್ದೇನೆ’ ಎನ್ನುವ ಶೀರ್ಷಿಕೆಯೇ ಮಾನವ ನಿಗೆ ಒದಗಬಹುದಾದ ಅಪಾಯದ ಮುನ್ಸೂಚನೆ ಯನ್ನು ಪ್ರಕಟಿಸುತ್ತದೆ. ಇದು ಹಸಿರುಟ್ಟು ನಳನಳಿ ಸುತ್ತಿದ್ದ ಮರವೊಂದರ ಸ್ವಗತವಾಗಿದೆ. ಬೆಂಕಿ ಎನ್ನುವ ರೂಪಕವು ಮನುಷ್ಯನ ದುರಾಸೆಯ ಕೂಸಾಗಿದೆ. ನಾವೇ ಹೆತ್ತಿರುವ ಈ ಕೂಸಿನಿಂದ ಹೊರಗೆ ಬರಬಹುದಾದ ಸಾಧಕ ಬಾಧಕಗಳಿಗೆ ನಾವು ಹೊಣೆಗಾರರಲ್ಲವೇ? ಈ ಕಠಿಣ ಸತ್ಯವನ್ನು ಕಮಲ ಅವರು ತಮ್ಮ ಈ ಕವಿತೆ ಯುದ್ದಕ್ಕೂ ಬಿಂಬಿಸುತ್ತ ಸಾಗಿದ್ದಾರೆ. ಈ ಕವಿತೆ ಕವಯತ್ರಿಯ ಪರಿಸರ ಪ್ರೇಮ ಹಾಗೂ ಆಸಕ್ತಿಯ ದ್ಯೋತಕವಾ ಗಿದೆ. ಕಮಲರವರು ಬಾಲ್ಯದಿಂದಲೇ ನಿಸರ್ಗದ ಆರಾಧಕರು. ಇವರ ಕಸೂತಿ ಕೃತಿ ಯಲ್ಲಿನ ಅನೇಕ ಲೇಖನಗಳು ಪರಿಸರ ಮತ್ತು ಕಮಲ ಅವರ ನಡುವಿನ ಅವಿನಭಾವ ಸಂಬಂಧವನ್ನು ವಿವರಿಸು ತ್ತವೆ.

“ಹಸಿರು ಸೀರೆಯನ್ನುಟ್ಟು ನಳ ನಳಿಸುತ್ತಿದ್ದೇನೆ, ಎಷ್ಟು ಹಸಿರೆಂದರೆ ಭುಜದ ಮೇಲಿದ್ದ ಗಿಳಿ ಕೂಡ ಕಾಣುತ್ತಿರಲಿಲ್ಲ” ಎಂಬ ಸಾಲು ಭಾವ ತೀವ್ರತೆಯ ಅರ್ಥವತ್ತಾದ ಸಂದೇಶವನ್ನು ನೀಡುತ್ತದೆ. ಇಂದು ಹಸಿರು ಕಣ್ಣರೆಯಾಗುತ್ತಿದೆ. ಇವುಗಳನ್ನೇ ಅವಲಂಬಿಸಿರುವ ಖಗಮೃಗಗಳು ಆಸರೆಯ ನಲುಮೆಯ ಮಡಿಲು ಇಲ್ಲದೆ ಪರಿತಪಿಸುತ್ತಿವೆ. ಪ್ರಯುಕ್ತ ಅವುಗಳ ಸಂತತಿ ನಾಶವಾಗುತ್ತಿದೆ ಎಂಬ ಕಠಿಣ ಸತ್ಯದ ಮೇಲೆ ಈ ಸಾಲು ಬೆಳಕು ಚೆಲ್ಲುತ್ತದೆ. ಹಸಿರೊಡಲಿನ ಭಾಗ್ಯವನರಿಯದ ಆಸೆ ಬುರುಕ ಮನುಜನ ಕತ್ತಿಗೆ ಕೊರಳು ನೀಡುವ ನಿಸರ್ಗದ ನೋವನ್ನ ಈ ಕವಿತೆ ಹೊರಸೂಸುತ್ತದೆ. ಪ್ರಕೃತಿಯ ರಮಣೀಯನೋಟ ಕಾಣದ ಅಕ್ಷಿ ಗಳಿಗೆ ಸೌಂದರ್ಯೋಪಾಸನೆಯ ಸವಿಯ ರಸದೌತಣ ದೊರೆಯದು ಎಂಬ ವಾಸ್ತವ ಕವಿತೆ ಯಲ್ಲಿ ಅಡಗಿದೆ.

ಗಿಡವನ್ನು ಬೆಳೆದರೆ ಹಲವು ವೈವಿಧ್ಯಮಯ ರೂಪ ಗಳಲ್ಲಿ ಉಪಯುಕ್ತವಾಗುತ್ತದೆ. ಗಿಡ ಮರಗಳಲ್ಲಿ ವಾಸಿಸುವ ಕೀಟಸ್ತೋಮ ಸಸ್ಯಗಳಿಂದಲೇ ಬದುಕುತ್ತವೆ. ಮನುಜರಿಗೆ ನೆರಳಿನ ಆಸರೆ ದೊರೆ ಯುತ್ತದೆ. ಪಕ್ಷಿಗಳು ತಮ್ಮ ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡಿ ತನ್ನ ಜೀವ ಸಂಕುಲವನ್ನು ಕಟ್ಟಿಕೊಳ್ಳುತ್ತವೆ. ಜೊತೆಗೆ ಪಕ್ಷಿಗಳು ಬೀಜ ಪ್ರಸರಣದಲ್ಲಿ ಭಾಗಿಯಾಗಿ ವೃಕ್ಷಗಳನ್ನು ಹೆಚ್ಚಿಸು ತ್ತದೆ. ಅಂತಹ ಬಹುಮುಖಿ ಉಪಯುಕ್ತತೆ ಹೊಂದಿರುವ ಸಸ್ಯ ರಾಶಿಯನ್ನು ಬೆಳೆಸುವ ಮೂಲಕ ನಿಸರ್ಗಶಕ್ತಿ ಕಾಪಾಡುತ್ತವೆ.

ಪ್ರಕೃತಿ ಸಕಲ ಗಣಿ ನಿಕ್ಷೇಪಗಳ ಒಡಲಾಗಿದ್ದರೂ ಮನುಜನ ಲೋಲುಪತೆಗೆ ಸಿಲುಕಿ ಭೂತಾಯಿ ಇಂದು ಬೆತ್ತಲಾಗಿದ್ದಾಳೆ.ಇದ್ದಾಗ ನಿಸರ್ಗದ ಮೌಲ್ಯ ವನ್ನರಿಯದೆ ಅದರ ಮೇಲೆ ಅಟ್ಟಹಾಸ ಮೆರೆದು ಭೂರಮೆಯನ್ನು ಬರಿದು ಮಾಡಿದೆವು. ಈಗ ಪ್ರತಿಕ್ಷಣ ಹತಾಶಭಾವದಲ್ಲಿ ಹಂಬಲಿಸುವಂತಾಗಿದೆ ಎಂಬ ಪಶ್ಚಾತಾಪದ ಬೆಂಕಿಯ ಸಾಲುಗಳಿವು. ಇವು ಕಮಲರವರ ಮೊನಚಾದ ರೂಪಕ ಪ್ರತಿಮೆ ಗಳ ಮೂಲಕ ಧಗಧಗಿಸುತ್ತಿವೆ. ಆಧುನಿಕರಣ ನಗರೀಕರಣಗಳ ಹೆಸರಿನಲ್ಲಿ ಸ್ಪರ್ಧೆಗಿಳಿದಮಾನವ ನಾಳೆಯ ದಿನಗಳ ಬಗ್ಗೆ ಯೋಚಿಸದೆ ನಿಸರ್ಗ ಸಂಪತ್ತನ್ನು ಬರಿದು ಮಾಡುತ್ತಾ ಫಲ ಕೊಡುವ, ಆಶ್ರಯ ನೀಡುವ, ನೆರಳು ನೀಡುವ ಮರಕ್ಕೆ ಕೊಡಲಿ ಪೆಟ್ಟು ಕೊಟ್ಟು ಇದೀಗ ತನ್ನ ಸಮಾಧಿಗೆ ತಾನೇ ಕಟ್ಟಿಗೆಯನ್ನು ಅಣಿಗೊಳಿಸುತ್ತಿದ್ದಾನೆ ಎಂಬ ವಿಷದ ಭಾವ ಕವಿತೆಯಲ್ಲಿ ಕಾಡುತ್ತದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಾಲೊಂದು ಪದೇ ಪದೇ ಕಾಡುತ್ತದೆ. “ನೀವು ಪರಿಸರದ ಅತ್ಯಂತ ಪರಮ ನೀಚ ಶತ್ರುವನ್ನು ನೋಡುವಂತಿದ್ದರೆ ಬಾಗಿಲು ತೆಗೆಯಿರಿ” ಎಂಬ ಸಾಲಿದೆ. ಅದು ಎಲ್ಲರಲ್ಲೂ ಪರಿಸರದ ಆ ಶತ್ರು ಯಾರಿರಬಹುದು? ಎಂಬ ಕುತೂಹಲ ಮೂಡಿಸು ತ್ತದೆ. ವಿಪರ್ಯಾಸವೆಂದರೆ ಆ ಬಾಗಿಲು ತೆರೆದರೆ ಅಲ್ಲಿ ಯಾವ ಶತ್ರುವೂ ಕಾಣುವುದಿಲ್ಲ. ಅಲ್ಲಿ ಕನ್ನಡಿ ಮಾತ್ರ ಇದೆ. ಅಂದರೆ ನಮ್ಮ ಪ್ರತಿಬಿಂಬವೇ ನಮಗೆ ಕಾಣುತ್ತದೆ. ಇದರ ಅರ್ಥ ಪರಿಸರದ ಶತ್ರು ಮನುಷ್ಯ ಎಂಬುದೇ ಆಗಿದೆ.

ಪ್ರಕೃತಿಯ ಮೇಲಿನ ಮನುಜನ ದಾಳಿಯನ್ನು ತೀವ್ರವಾಗಿ ತೀಕ್ಷ್ಣವಾದ ಶಬ್ದ ಭಂಡಾರದಲ್ಲಿ ತರಾಟೆಗೆ ತೆಗೆದುಕೊಳ್ಳುವ ಕಮಲ ಅವರು ವೈವಿಧ್ಯಮಯ ಸ್ವರೂಪಗಳಲ್ಲಿ ಪ್ರಕೃತಿಯ ಮೇಲೆ ಆಗುವ ಮನುಕುಲದ ನಿರಂತರ ದಾಳಿಯನ್ನು ತೆರೆದಿಡುತ್ತಾರೆ. ಇಲ್ಲಿ ಮರವು ಮನುಜನ ಪ್ರತಿಮೆ ಯಲ್ಲಿ, ಮರಗಳ ರೆಂಬೆ ಕೊಂಬೆಗಳು ಮಾನವನ ಕೈಕಾಲುಗಳ ರೂಪಕದಲ್ಲಿ ರೂಪ ಪಡೆದಿವೆ. ಮನುಜ ತನ್ನ ಸ್ವಾರ್ಥ ಸಾಧನೆಗಾಗಿ ಹಸಿರು ಮರ ಗಿಡಗಳನ್ನು ಕಡಿದು ತನ್ನ ಮನೆಯ ಕಿಟಕಿ ಬಾಗಿಲು ಗಳನ್ನಾಗಿ ಮಾಡಿಕೊಳ್ಳುವ ಪರಿಯನ್ನು ಈ ಕವಿತೆ ನಿರೂಪಿಸುತ್ತದೆ. ಮನುಜ ತನ್ನ ಅಭಿವೃದ್ಧಿ ಎಂದು ಭಾವಿಸಿರುವುದು ಮತ್ತೊಂದು ಜೀವಸಂಕುಲದ ಅವನತಿಗೆ ಕಾರಣವಾಗುತ್ತದೆ ಎಂಬಂಶದ ಮೇಲೂ ಕವಿತೆ ಬೆಳಕು ಚೆಲ್ಲುತ್ತದೆ.

ಮರದ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಗುವ ಅನೇಕ ಘಟನೆಗಳನ್ನು ತುಂಬಾ ಸೊಗಸಾಗಿ ರಮ್ಯ ಭಾವ ದಲ್ಲಿ ಕಾವ್ಯ ವಾಗಿಸಿದ್ದಾರೆ. ಮರ ಪಕ್ಷಿಗಳಿಗೆ ಆಶ್ರಯ ತಾಣ ಮಾತ್ರವಲ್ಲ ಗೂಡು ಕಟ್ಟಿ ಮೊಟ್ಟೆ ಇಟ್ಟು ತನ್ನ ಸಂತಾನ ಮುಂದುವರೆಸುವ ವಂಶಾಭಿ ವೃದ್ದಿ ಕೇಂದ್ರ ಸಹ ಆಗಿರುತ್ತದೆ. ಆ ಗೂಡು ಮತ್ತೊಂದು ಜೀವರಾಶಿಯ ಸೃಷ್ಟಿಗೆ ಆಸರೆಯಾಗು ವುದು ಮರಕ್ಕೆ ಪವಾಡದಂತೆ ಭಾಸವಾಗುತ್ತದೆ. ಇದೆಲ್ಲಾ ಸುಖಾಸುಮ್ಮನೆ ಘಟಿಸುವುದಿಲ್ಲ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿಕೊಳ್ಳು ವಲ್ಲಿನ ಮರದ ಸವಾಲುಗಳು ರೋಮಾಂಚನ ಕಾರಿಯಾಗಿ ಮೂಡಿಬಂದಿವೆ.ಪಕ್ಷಿಯೊಂದು ಮರ ವನ್ನರಸಿ ಬರಲು, ಅದು ಇತರ ಜೀವಿಗಳ ಬೇಟೆಗೆ ಸಿಗದಂತೆ ತನ್ನನ್ನು ರಕ್ಷಿಸಿಕೊಳ್ಳಲು ಮರ ಹಸಿರೆಲೆ ಹೊಂದಿರಬೇಕು. ಪಕ್ಷಿಗಳನ್ನು ಸೆಳೆಯಲು ಹಣ್ಣು ಕಾಯಿಗಳು ಮರ ತುಂಬಬೇಕು. ಹೂವಿನ ಸುವಾಸನೆ ಬೇರೆ ಆಕರ್ಷಿಸಬೇಕು. ಪಕ್ಷಿಗಳನ್ನ ಕಾವಲು ಕಾಯಬೇಕು. ಇವೆಲ್ಲ ಪ್ರಕೃತಿ ಸಹಜ ಕ್ರಿಯೆಗಳೇ ಆದರೂ ಕಾವ್ಯದ ಭಾಷೆಯಲ್ಲಿ ಓದುಗರೆದೆ ಹೊಕ್ಕುವಂತೆ ಅಭಿವ್ಯಕ್ತಿಸಿರುವುದು ಕಮಲ ಅವರ ಕಾವ್ಯ ಪ್ರೀತಿ ಮತ್ತು ಕಾವ್ಯವನ್ನು ಉಸಿರಾಡುವ ಅವಳ ಲೇಖನಿಯ ಶಕ್ತಿಯಾಗಿದೆ.
ಈ ಮರದ ಅಳಲು ಕವಿತೆಯಾಗಿ ಅದೇ ಮರದ ಎಲೆಗಳ ಮೇಲೆ ಅಂತಃಕರಣ ಭಾವವನ್ನ ತುಂಬು ತ್ತದೆ ಎನ್ನುವಲ್ಲಿ ಮನುಜನ ದುಷ್ಟ ಕಾರ್ಯಗಳ ಬಗ್ಗೆ ಚಾಟಿಯೂ ಇದೆ. ನನ್ನಿಂದ ಬಹು ಮುಖ್ಯ ಉಪಯೋಗಗಳನ್ನ ಪಡೆದು ಮುಗ್ಧನಾಗಿದ್ದ ನೀನು ಈಗ ನನ್ನ ಸರ್ವನಾಶಕ್ಕೆ ಇಷ್ಟೊಂದು ತಂತ್ರ- ಕುತಂತ್ರಗಳನ್ನು ಹೆಣೆಯುವಂತಹ ಮಟ್ಟಕ್ಕೆ ಇಳಿಯಲು ಹೇಗೆ ಸಾಧ್ಯವಾಯಿತು ? ತನ್ನನ್ನು ಪೊರೆದವರ ವಿರುದ್ಧವೇ ಷಡ್ಯಂತ್ರ ರೂಪಿಸುವ ನಿನ್ನಲ್ಲಿ ಇನ್ನು ಮನುಷ್ಯತ್ವ ಉಳಿದಿದೆಯೇ? ಎಂದು ಮರ ಮನುಷ್ಯನನ್ನು ಪ್ರಶ್ನಿಸುತ್ತದೆ.

“ತನ್ನಿಂದ ಲಾಭ ಪಡೆದು ತನ್ನನ್ನೇ ನೆಲಕ್ಕೆ ಉರುಳಿ ಸುವ ನಿನ್ನ ಕಾರ್ಯ ನನಗೆ ನಿಜಕ್ಕೂ ಅರ್ಥವಾ ಗಲೇ ಇಲ್ಲ ಎನ್ನುವ ಮರದ ಮಾತು ಮನುಷ್ಯನಿಗೆ ಉಪಕಾರ ಸ್ಮರಣೆ ಇಲ್ಲ” ಎನ್ನುವುದನ್ನು ರುಜು- ವಾತು ಮಾಡುತ್ತದೆ. ಇಲ್ಲಿ ಬಳಸಿರುವ ‘ಅಂಕೆ ಇರದ ಕಪಿ ಲಂಕೆ ಸುಟ್ಟಿತು’ ಎಂಬ ನಾಣ್ಣುಡಿಯು ಜನರ ಅತಿರೇಖದ ವರ್ತನೆಗಳನ್ನು ತೆರೆದಿಡುತ್ತದೆ. ನಿನಗೆ ಸಹಾಯ ಮಾಡಲು ಹೊರಟ ನನ್ನನ್ನೇ ದಹಿಸಲು ಹೊರಟ ನಿನ್ನ ವರ್ತನೆಯನ್ನು ನಾನು ಕ್ಷಮಿಸಲಾರೆ ಎಂದು ಕ್ರೋಧವಾಗುವ ಮರ ನನ್ನೊಂದಿಗೆ ತನ್ನ ವಿನಾಶವೂ ಇದೆ ಎಂಬ ಎಚ್ಚರಿಕೆಯ ಗಂಟಾನಾದ ಮೊಳಗಿಸುತ್ತದೆ. ಈ ಕವಿತೆಯ ಕೊನೆಯ ಸಾಲು “ಬೆಂಕಿ ಕೈಗಳಲ್ಲಿ ನಿನ್ನ ಮನೆಯ ಕದ ತಟ್ಟುತ್ತಿದ್ದೇನೆ. ಆರಾಮ ಕುರ್ಚಿ ಯಲ್ಲಿ ಕೂತಿರುವ ನೀನು ಬೆಚ್ಚುತ್ತಿದ್ದೀಯಾ? ಎಂಬ ಕವಿತೆಯ ಸಾಲು ಪ್ರಕೃತಿ ಆಟದ ಮುಂದೆ ಹುಲು ಮಾನವರ ಹವಣಿಕೆಗಳಿಗೆ ಜಾಗವಿಲ್ಲ. ನಿಸರ್ಗದೊಂದಿಗೆ ಹೊಂದಿಕೊಂಡು, ನಾವು ಸಮತೋಲನದ ಬದುಕು ಕಾಯ್ದುಕೊಳ್ಳ ಬೇಕು. ತಿರುಗಿ ಬಿದ್ದರೆ ನಮ್ಮ ಅಳಿವು ನಿಶ್ಚಿತ ಎಂಬ ಭಾವವಿಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ಕೊರೊನ ಕಾಲ ಘಟ್ಟ.

ಕೋವಿಡ್ 19 ಮನುಷ್ಯನಿಗೆ ಪ್ರಾಣದ ಬೆಲೆ, ಪ್ರಕೃತಿಯ ನೆಲೆ, ಆಕ್ಸಿಜನ್ ಅಗತ್ಯತೆಯ ಅರಿವನ್ನು ಬಹುವಾಗಿ ಮೂಡಿಸಿತು. ನಮ್ಮ ಹಿರಿಯರು ಬೆಳೆಸಿ ರಕ್ಷಿಸಿದ ಅರಣ್ಯ ಸಂಪತ್ತನ್ನು ನಾವಿಂದು ಭಕ್ಷಿಸುತ್ತಿದ್ದೇವೆ. ಗಿಡಮರಗಳಿಲ್ಲದೇ ಸಹಜ ಆಮ್ಲಜನಕ ಕೊರತೆ ಯಾದರೇನಂತೆ ಲಕ್ಷ ಲಕ್ಷ ಹಣ ಕೊಟ್ಟು ಪ್ರಾಣ ವಾಯುವನ್ನು ಖರೀದಿಸು ತ್ತೇವೆ ಎಂದು ಬೀಗುತ್ತಿದ್ದ ಬಿಗುಮಾನ ತೋರುತ್ತಿದ್ದ ನಮಗೆ ಬುದ್ದಿ ಕಲಿಸಿದ್ದು ಕರೋನ.

ಈ ಸೋಂಕನಿಂದ ಬಾಧಿತರಾಗಿ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆ ಬೆಡ್ ಗಳಲ್ಲಿ ಸಾಲು ಸಾಲಾಗಿ ಉದುರಿದ ಹೆಣಗಳ ಮೆರವಣಿಗೆ ಆಸ್ಪತ್ರೆಯ ಗೋಡೆಗಳ ಮೇಲೆ ಹೊಸ ಇತಿಹಾಸ ಬರೆದಿರುವು ದನ್ನು ಮರೆಯುವಂತಿಲ್ಲ. ಇವೆಲ್ಲ ಮನುಷ್ಯನಿಗೆ ಪಾಠವಾಗಬೇಕು, ಇಲ್ಲದಿದ್ದರೆ ಸಂಕಷ್ಟ ಮನುಷ್ಯನಿಗೆ ಎದುರಾದರೂ ಆಶ್ಚರ್ಯ ವಿಲ್ಲ. ಇಂತಹ ಜನಪರವಾದ, ಜನಹಿತವಾದ ಕಾವ್ಯ ಸೃಷ್ಠಿಯ ಮೂಲಕ ನಿಸರ್ಗದ ಸಂರಕ್ಷಣೆಗೆ ಕಂಕಣ ಬದ್ಧರಾಗಿ ನಿಲ್ಲಬೇಕೆಂದು ಹಂಬಲಿಸುವ ಕವಯಿತ್ರಿ ಕಮಲ ಅವರ ಕಾವ್ಯವು ಪರಿಸರ ಪ್ರಜ್ಞೆಯ ಸಂಕೇತವಾಗಿಯೂ ಗಮನ ಸೆಳೆಯುತ್ತದೆ.

ಪ್ರಕೃತಿ ಸಂರಕ್ಷಣೆಯ ಅಭಿಲಾಷೆ ಇಂದಿನ ಜನ ಮಾನಸದಲ್ಲಿ ನಶಿಸುತ್ತಿರುವುದು ವಿಪರ್ಯಾಸವೇ ಸರಿ. ಇರುವ ಪರಿಸರ ನಾಶ ಮಾಡಿ ಅಳಿವಿನಂಚಿಗೆ ದಾಪುಗಾಲು ಹಾಕಿ ಮುನ್ನುಗ್ಗುತ್ತಿರುವ ನಮಗೆಲ್ಲ ಮಕ್ಕಳಿಲ್ಲದಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ಗಿಡ- ಮರ ಗಳನ್ನು ಬೆಳೆಸಿ ಮಕ್ಕಳಂತೆ ಸಲಹಿ ಸಾಲು ಮರದ ತಾಯಾದ ತಿಮ್ಮಕ್ಕನಂತವರು ಮಾದರಿ ಯಾಗಬೇಕು.
✍️ಅನುಸೂಯ ಯತೀಶ್
ಬೆಂಗಳೂರು
