ದೇವಾಲಯದ ನಿರ್ಮಾಣದ ಹೊಸ ಸ್ವರೂಪ ನೀಡಿದ ಪ್ರಮುಖ ಅರಸರಲ್ಲಿ ಹೊಯ್ಸಳ ಅರಸರು ಮುಂಚೂಣಿಯಲ್ಲಿದೆ. ಅವರು ನಿರ್ಮಾಣ ಮಾಡಿದ ಹಲವು ಸುಂದರ ದೇವಾಲಯಗಳು ಉತ್ತಮ ಸ್ಥಿತಿಯಲ್ಲಿದ್ದರೆ ಉಳಿದ ಕೆಲವು ದೇವಾಲಯಗಳು ನಿರ್ವಹಣೆ ಇಲ್ಲದೇ ಸೊರಗಿದ್ದು,ಇನ್ನು ಕೆಲವು ದೇವಾಲಯ ಗಳು ಜೀರ್ಣೋದ್ದಾರಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಅವರ ನಿರ್ಮಾಣದ ಹಲವು ದೇವಾಲಯಗಳಿದ್ದು, ಅವುಗಳಲ್ಲಿ ಕಡೂರು ತಾಲ್ಲೂಕಿನ ಚೌಳ ಹಿರಿಯೂರಿನ ಸೋಮೇಶ್ವರ ದೇವಾಲಯ ಸಹ ಒಂದು.
ಇತಿಹಾಸದ ಪುಟದಲ್ಲಿ ಚೌಳ ಹಿರಿಯೂರು ಹೊಯ್ಸಳರಕಾಲದಲ್ಲಿ ಪ್ರಮುಖವಾಗಿ ಕಾಣಿಸಿತ್ತು. ಕ್ರಿ.ಶ.1173 ರ ಎರಡನೇ ವೀರ ಬಲ್ಲಾಳನ ಕಾಲದ ಶಾಸನದಲ್ಲಿ ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ತರೀಕೆರೆ ಪ್ರಾಂತ್ಯದ ಮಹಾ ಪ್ರಧಾನ ಬಪ್ಪಗೌಡ ಇಲ್ಲಿನ ಸೋಮೇಶ್ವರ ದೇವಾಲಯವನ್ನ ಜೀರ್ಣೋದ್ದಾರ ಮಾಡಿದ ಉಲ್ಲೇಖವಿದೆ. ಕ್ರಿ.ಶ.1216 ರಲ್ಲಿ ಹಿರಿಯೂರಿನ ಅಜ್ಜುವಗೌಡ, ಬೊಪ್ಪಗವುಡ, ಚಟ್ಟಗವುಡ ಮತ್ತು ಮಾಕಗವುಡ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ ಉಲ್ಲೇಖವಿದೆ. ಕಾಲ ಕಾಲಕ್ಕೆ ಜೀರ್ಣೋದ್ದಾರಗೊಂಡ ಈ ದೇವಾಲಯ ಈಗಲೂ ಸುಸ್ಥಿತಿಯಲ್ಲಿ ಇರುವುದು ವಿಶೇಷ.
ಸೊಮೇಶ್ವರ ದೇವಾಲಯ

ಸುಮಾರು ಕ್ರಿ.ಶ.12 ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಗರ್ಭಗುಡಿ ಸುಖನಾಸಿ, ನವರಂಗ ಮತ್ತು ಮುಖಮಂಟಪ ಹೊಂದಿದೆ. ದೇವಾಲಯವು ದಕ್ಷಿಣಾಭಿಮುಖವಾ ಗಿದ್ದು, ಗರ್ಭಗುಡಿ ಪೂರ್ವಾಭಿಮುಖವಾಗಿದೆ. ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಸುಮಾರು ಎರಡು ಅಡಿ ಎತ್ತರದ ಸೊಮೇಶ್ವರ ಎಂದು ಕರೆಯುವ ಶಿವ ಲಿಂಗವಿದೆ. ಸುಖನಾಸಿಯ ಬಾಗಿಲುವಾಡದ ಎರಡೂ ಬದಿಯಲ್ಲಿ ಜಾಲಂದ್ರ ಗಳಿದ್ದರೆ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ.
ನವರಂಗದಲ್ಲಿ ಹೊಯ್ಸಳ ಶೈಲಿಯ ತಿರುಗಣೆಯ ನಾಲ್ಕು ಕಂಭಗಳಿವೆ. ಶಿವನಿಗೆ ಅಭಿಮುಖವಾಗಿ ಎರಡು ನಂದಿ ಇದೆ. ವಿತಾನದಲ್ಲಿ ಕಮಲದ ಕೆತ್ತನೆ ಇದೆ. ನವರಂಗದಲ್ಲಿ ಕಾಲಭೈರವ, ಮಹಿಶಾಸುರ ಮರ್ಧಿನಿ, ಸಪ್ತಮಾತೃಕೆಯ ಶಿಲ್ಪಗಳು, ಗಣಪತಿ, ಸರಸ್ವತಿ ಮತ್ತು ಹರಿಹರನ ಶಿಲ್ಪಗಳಿವೆ. ದೇವಾಲಯದ ಹೊರಭಿತ್ತಿ ಸರಳವಾಗಿದ್ದರೂ ಶಿಖರ ಮಾದರಿಗಳನ್ನು ನೋಡಬಹುದು. ದೇವಾಲಯಕ್ಕೆ ಕದಂಬ ಮಾದರಿಯ ಶಿಖರ ಮಾದರಿಯಾಗಿದ್ದು, ಶಿಖರದ ಮೂರು ಕಡೆ ಬ್ರಹ್ಮನ ಶಿಲ್ಪವಿದೆ.
ಮಾರ್ಚ್ ಮತ್ತು ಏಪ್ರಿಲ್ ಮಾಸದಲ್ಲಿ ಪ್ರತಿ ವರ್ಷ ಇಲ್ಲಿ ರಥೋತ್ಸವ ನಡೆಯಲ್ಲಿದ್ದರೆ, ಶ್ರಾವಣ ಮಾಸ ದಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ.
ಭೋಗ ನಂಜುಂಡೇಶ್ವರ ದೇವಾಲಯ

ಇಲ್ಲಿನ ಮತ್ತೊಂದು ದೇವಾಲಯ. ದೇವಾಲಯದ ಗರ್ಭಗುಡಿಯಲ್ಲಿ ಭೋಗ ನಂಜುಂಡೇಶ್ವರ ಎಂದು ಕರೆಯುವ ಶಿವಲಿಂಗವಿದೆ ಅಲ್ಲದೇ ಮುಡಿಯಪ್ಪ ಮತ್ತು ಮಡಿಹಾಳಪ್ಪರ ಶಿಲ್ಪಗಳಿವೆ.ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯಲಿದೆ.
ಇಲ್ಲಿ ರುದ್ರ ದೇವ ದೇವಾಲಯವೂ ಇದ್ದು ಈ ದೇವಾಲಯವನ್ನು ತರೀಕೆರೆಯ ರುದ್ರಮ್ಮ ಹೆಗ್ಗಡತಿ ನಿರ್ಮಾಣ ಮಾಡಿದ ಉಲ್ಲೇಖವಿದೆ.
ತಲುಪುವ ಬಗ್ಗೆ : ಚೌಳ ಹಿರಿಯೂರು ಕಡೂರಿ ನಿಂದ ಸುಮಾರು 32 ಕಿ.ಮೀ. ದೂರದಲ್ಲಿದ್ದು ಹೊಸದುರ್ಗದಿಂದ ಸುಮಾರು 19 ಕಿ.ಮೀ ದೂರ ದಲ್ಲಿದೆ. ಆಸಂದಿಯಿಂದ ಸುಮಾರು 19 ಕಿ.ಮೀ ದೂರದಲ್ಲಿದೆ.
✍️ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು
