ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇಯಂ ಕಿವಿವೊಕ್ಕೊಡಂ ಬಿರದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ
ಪಂಪಭಾರತದ ಚತುರ್ಥಾಶ್ವಾಸಂದಲ್ಲಿ ತನ್ನ ತಾಯಿನಾಡು ಬನವಾಸಿಯನ್ನು ಅಮೋಘವಾಗಿ ವರ್ಣನೆ ಮಾಡಿದ್ದಾರೆ. “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯಿ ನಾಡನ್ನು ಹೊಗಳಿದ್ದಾರೆ. ಅಂದರೆ ಅಂಕುಶದಿಂದ ತಿವಿದರೂ ನೆನೆವುದೆನ್ನ ಮನಂ ಬನವಾಸಿ ದೇಶಮಮ್ ಎಂದ ದೇಶಪ್ರೇಮ ಮೆರೆದಿದ್ದಾರೆ.

ಹೌದಲ್ವಾ….ಈ ಪದ್ಯ ಓದುತ್ತಿದ್ದರೆ ನಮ್ಮಲ್ಲೂ ನಮ್ಮ ನಾಡು,ನುಡಿಯ ಬಗ್ಗೆ ಪ್ರೇಮ ಜಾಗೃತ ವಾಗದೆ ಇರದು. ಮೈ ಮನಸ್ಸು ನಾನು ಮರಿ ದುಂಬಿಯಾಗಿ, ಮರಿ ಕೋಗಿಲೆಯಾಗಿ ಜನ್ಮ ಜನ್ಮಕೂ ಇಲ್ಲಿಯೇ ಹುಟ್ಟಿ, ಈ ಸುಂದರ ಪ್ರಕೃತಿ ಮಡಿಲಿನಲ್ಲಿ ಹಾಡಿಕೊಂಡು ಹಾಯಾಗಿ ಇರಬೇಕು ಎನಿಸುತ್ತದೆ. ಇಂತಹ ರಮ್ಯ ಮನಮೋಹಕ ಜಿಲ್ಲೆ ನನ್ನದು.

ಉತ್ತರ ಕನ್ನಡ ಜಿಲ್ಲೆಯ ಹನ್ನೆರಡು ತಾಲೂಕು ಗಳಲ್ಲಿ ವಿಶೇಷ ತಾಲೂಕು ಎಂಬ ಸ್ಥಾನ ಪಡೆದ ತಾಲೂಕು ಸಿರ್ಸಿ. ತಾಯಿ ಶ್ರೀ ಮಾರಿಕಾಂಬೆಯ ಅನುಗ್ರಹದಿಂದ ಲಭಿಸಿದೆ. ಸಿರ್ಸಿ ಜಾತ್ರೆ ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಜಗತ್ಪ್ರಸಿದ್ಧ ಜಾತ್ರೆ ಪ್ರತಿ ಎರಡು ವರ್ಷಕ್ಕೊಮ್ಮೆ ಆಚರಿಸುವುದು ಸಂಪ್ರದಾಯದ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಎಂಬುದನ್ನು ಮರೆಯುವಂತಿಲ್ಲ. ಅಂತಹ ಹಲವಾರು ಐತಿಹಾಸಿಕ ಸ್ಥಳ, ಹಿನ್ನೆಲೆ ಹಾಗೂ ಕಲೆ,ಸಂಸ್ಕೃತಿ ಬಗ್ಗೆ ಅರಿತಷ್ಟು ಕಡಿಮೆಯೆ. ತಾಯಿ ಮಾರಿಕಾಂಬೆಯ ದರ್ಶನಭಾಗ್ಯ ಎಲ್ಲರಿಗೂ ಸಿಗಲಿ. ಶ್ರೀಮಾರಿಕಾಂಬಾ ದೇವಿಯ ದೇವಾಲಯ ಸಿರ್ಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿದ್ದು, ಸುಮಾರು ೧೬ನೇ ಶತಮಾನ ದಿಂದ ಶ್ರೀ ಮಾರಿಕಾಂಬಾ ದೇವಾಲಯವಿದೆ. ೧೯೩೩ರಲ್ಲಿ ಮಹಾತ್ಮಾ ಗಾಂಧೀಜಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಉಲ್ಲೇಖವಿದೆ.
‘ಸಿರ್ಸಿ’ ಎಂಬ ಹೆಸರು ಬರಲು ಕಾರಣ ಹಲವಾರು.
ಸಿರಸಿಯು ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಗಳಲ್ಲಿ ಒಂದಾಗಿದ್ದು ವಾಣಿಜ್ಯ ಕೇಂದ್ರವಾಗಿದೆ. “ಸಿರಸಿ” ಹಾಗೂ “ಶಿರಸಿ” ಎಂದೂ ಎರಡೂ ಹೆಸರಲ್ಲಿ ಕರೆಯಲಾಗುತ್ತದೆ. ಸಿರ್ಸಿಯ ಬಹುತೇಕ ಪ್ರದೇಶವು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಕೂಡಿದ್ದು ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.

‘ಸಿರ್ಸಿ‘ ಎಂಬ ಹೆಸರು ಬರಲು ಪ್ರದೇಶದಲ್ಲಿ ‘ಸಿರಿಸ ಮರಗಳು’ ಇರುವ ಕಾರಣದಿಂದ ಈ ಊರನ್ನು ‘ಸಿರಿಸೆ‘ ಎಂಬ ಹೆಸರಿನಿಂದ ಕರೆಯ- ಲಾಗುತ್ತಿತ್ತು, ಕಾಲಕ್ರಮೇಣ ಇದು ಸಿರಸಿಯಾಗಿ, ಅನಂತರ ‘ಸಿರ್ಸಿ’ಯಾಗಿ ಬಳಕೆಗೆ ಬಂದಿತು. ಸಿರ್ಸಿ ಯನ್ನು ಸೋಂದಾ ಕಾಲದಲ್ಲಿ ಕಲ್ಯಾಣ ಪಟ್ಟಣ ಎಂಬ ಹೆಸರಿನಿಂದ ಸಹ ಕರೆಯುತ್ತಿದ್ದರು ಎಂಬುದರ ಬಗ್ಗೆ ಮಾಹಿತಿಗಳಿವೆ.
ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಸಿರ್ಸಿ ಜಾತ್ರೆಯ ಐತಿಹ್ಯ…
ಅಂದಿನ ವಿರಾಟ ನಗರವಾಗಿದ್ದ ಈಗಿನ ಹಾನಗಲ್ಲಿ ನಲ್ಲಿ ಧರ್ಮರಾಯನು ದೇವಿಯನ್ನು ಆರಾಧಿಸು ತ್ತಿದ್ದನ್ನು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ. ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕೆಲವು ಕಳ್ಳರು ಅಪಹರಿಸಿ ಸಿರ್ಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹ ವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆ ಸಿರ್ಸಿಯ ದೇವಿಕೆರೆ ಎಂದು ಹೆಸರಾಗಿದೆ.

ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಆದರೆ ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಅದರಿಂದ ಬೇಸರ ಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೆ ಸಿರ್ಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ಒಂದು ರಾತ್ರಿ ದೇವಿ ಅವನಿಗೆ “ನಾನು ಮಾರಮ್ಮ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು” ಎಂದು ಹೇಳಿದಂತೆ ಕನಸು ಬಿತ್ತು. ಅವನು ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಭಕ್ತನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಪ್ರಾರ್ಥಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.

ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸಿರ್ಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ ಸೋಂದಾ ಸಂಸ್ಥಾನದ ಮಹಾರಾಜರನ್ನು ಕೇಳಿದರು. ಅದರಂತೆ ಕ್ರಿ.ಶ.೧೬೮೯ರಲ್ಲಿ, ಅಂದರೆ ಶಾಲಿ ವಾಹನ ಶಕೆ ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು, ಮಂಗಳವಾರ ದೇವಿ ಯನ್ನು ಈಗಿನ ಮಾರಿಕಾಂಬಾ ದೇವಸ್ಥಾನ ದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಾರಿಕಾಂಬೆಯ ಜಾತ್ರೆಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೆ ಕೇರಳ, ಆಂದ್ರ, ತೆಲಂಗಾಣ, ಗೋವೆ ಮಹಾರಾಷ್ಟ್ರದಿಂದ ಸರಿಸುಮಾರು ೧೫ ರಿಂದ ೨೦ ಲಕ್ಷ ಜನ ಜಾತ್ರೆಯಲ್ಲಿ ಸೇರಿರುತ್ತಾರೆ.

ಸಿರ್ಸಿ ಶ್ರೀಮಂತ ಸಂಸ್ಕೃತಿಯ ಊರು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಘಟ್ಟದ ಮೆಲಿನ ಒಂದು ಸುಂದರ ನಗರ. ಇದು ಪಶ್ಚಿಮಘಟ್ಟಗಳ ಸಾಲಿನಲ್ಲಿ ಇರುವುದ- ರಿಂದ ಇದು ತನ್ನ ಸುತ್ತಲೂ ಅದೆಷ್ಟೋ ಜಲಪಾತ ಗಳಿಂದ ಸುತ್ತಲ್ಪಟ್ಟಿದೆ. ನಗರದ ಮದ್ಯದಲ್ಲಿ ಅಘನಾಶಿನಿ ನದಿ ಉಗಮವಾಗಿದ್ದರೆ, ಕೆಲವೇ ಮೈಲುಗಳಷ್ಟು ದೂರದಲ್ಲಿ ಶಾಲ್ಮಲೆ ಮತ್ತು ವರದೆಯರು ಸುತ್ತುವರೆದಿದ್ದಾರೆ. ದಟ್ಟ ಅರಣ್ಯ ಅಡಿಕೆ ತೋಟ ಹಚ್ಚ ಹಸುರಿನ ಪ್ರಕೃತಿಯ ಮದ್ಯ ಇದೆ. ಭರತ ನಾಟ್ಯ, ಯಕ್ಷಗಾನ, ಜನಪದ ಕಲೆಗಳು, ನಾಟಿ ವೈದರು, ಸಾಹಿತಿಗಳು ಹೀಗೆ ಹಲವಾರು ವೈವಿಧ್ಯ ಮಯ ಸನ್ನಿವೇಶದ ತವರೂರು.

ಸಿರ್ಸಿ ಎಂದಾಕ್ಷಣ ನಮಗೆ ಮೊದಲು ಬನವಾಸಿ ನೆನಪಿಗೆ ಬರುವುದು. ಪುರಾಣ ಪುಣ್ಯ ಕಥೆಗಳು ಹಾಗೂ ಇತಿಹಾಸದ ಕೆಲ ಪುಟಗಳು ನಮಗೆ ದಾರಿದೀಪವಾಗಿ ತೋರುತ್ತವೆ.
ಮಧುಕೇಶ್ವರ ದೇವಾಲಯದ ಪೌರಾಣಿಕ ಹಿನ್ನಲೆ

ಮೊದಲ ಕನ್ನಡದ ರಾಜ ಮನೆತನ. ಶಾತವಾಹನರ ಉತ್ತರಾಧಿಕಾರಿಗಳು. ೪ ರಿಂದ ೬ ನೇ ಶತಮಾನ ಗಳ ನಡುವೆ ಆಡಳಿತ. ಮಾನವ್ಯ ಗೋತ್ರಕ್ಕೆ ಸೇರಿದ ಹಾರೀತಿಪುತ್ರರು. ಕಾರಣ ಚುಟುವಂಶದ ಸಂಬಂಧಿ ಗಳಿರಬಹುದು. ಬನವಾಸಿ ಆಡಳಿತ ಕೇಂದ್ರ. ಪ್ರಾಚೀನ ಹೆಸರು ಕುಂತಳ. ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಪ್ರದೇಶಗಳು ಆಡಳಿತದ ವ್ಯಾಪ್ತಿಗೆ.

ಸಿರ್ಸಿಯ ಪ್ರಸಿದ್ಧಿಗೆ ಐತಿಹ್ಯ ಸ್ಥಳಗಳಲ್ಲಿ ಒಂದಾದ ಬನವಾಸಿಯು ಇಂದು ಪ್ರವಾಸಿ ತಾಣವಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವೂ ಹೌದು. ಬನವಾಸಿಯು ಸಿರ್ಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಬನವಾಸಿಯ ಮಧುಕೇಶ್ವರ ದೇವಾಲಯವನ್ನು ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರು, ಚಾಲುಕ್ಯರು,ಹೊಯ್ಸಳರ ಕಾಲದಲ್ಲಿ ಕಟ್ಟಲಾಗಿದೆ. ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದ ನೆಂದು ನಂಬಿಕೆ. ಪವಿತ್ರವಾದ ವರದಾ ನದಿಯು ದೇವಾಲಯದ ಎದುರು ಹರಿಯುತ್ತಿದೆ. ಶ್ರೀಮಧುಕೇಶ್ವರ ಇಲ್ಲಿನ ಆರಾಧ್ಯ ದೈವ. ಈ ದೇವಾಲಯವು ಕರ್ನಾಟಕದ ಏಳು ಮುಕ್ತಿಯ ಸ್ಥಳಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ.

ಮಾರ್ಕಾಂಡೇಯ ಪುರಾಣದ ಕಥೆಯ ಪ್ರಕಾರ ಕೃತಯುಗದಲ್ಲಿ ಮಹಾವಿಷ್ಣುವಿನ ಕಿವಿಯಿಂದ ಮಧು, ಕೈಟಭರೆಂಬ ಇಬ್ಬರು ದೈತ್ಯರು ಉತ್ಪತ್ತಿ ಯಾಗುತ್ತಾರೆ. ಅವರು ಈಶ್ವರನನ್ನು ಕುರಿತು ತಪಸ್ಸು ಮಾಡಿ, ವರವನ್ನು ಪಡೆದುಕೊಂಡು ಅಜರಾಮರ ರಾಗುತ್ತಾರೆ. ಕ್ರಮೇಣ ಅವರಲ್ಲಿ ಗರ್ವ ಉಂಟಾಗಿ ಲೋಕ ಕಂಟಕರಾಗುತ್ತಾರೆ. ಭೂಲೋಕಗಳನ್ನೆಲ್ಲ ಜಯಿಸಿ ಬ್ರಹ್ಮನ ಕಾರ್ಯಕ್ಕೆ, ಶಿವನ ಕಾರ್ಯಕ್ಕೆ ತೊಂದರೆಯನ್ನುಂಟು ಮಾಡು ತ್ತಾರೆ. ಆಗ ಬ್ರಹ್ಮ, ವಿಷ್ಣುವಿನಲ್ಲಿ ಮೊರೆಯಿಟ್ಟು ಈ ಲೋಕ ಕಂಟಕ ರಾಕ್ಷಸರನ್ನು ಸಂಹರಿಸಲು ಬೇಡಿಕೊಳ್ಳುತ್ತಾನೆ. ವಿಷ್ಣುವು ಸಮ್ಮತಿಸಿ ಮಧು, ಕೈಟಭರೊಂದಿಗೆ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಅವರೊಡನೆ ಐದು ಸಹಸ್ರ ವರ್ಷಗಳವರೆಗೆ ಯುದ್ಧ ಮಾಡಿದರೂ ಸೋಲಿಸಲಾಗುವುದಿಲ್ಲ. ಕೊನೆಗೆ ವಿಷ್ಣು ಉಪಾಯ ದಿಂದ ಯೋಚಿಸಿ ವರವೇನಾದರೂ ಬೇಕಿದ್ದರೆ ಕೇಳಿ, ಕೊಡುತ್ತೇನೆ ಎಂದಾಗ ಮತಾಂಧರಾದ ದೈತ್ಯರು ನಾವೇ ನಿನಗೆ ವರವನ್ನು ಕೊಡುತ್ತೇವೆ, ಬೇಕಾದರೆ ಕೇಳಿಕೋ ಎಂದು ಹೇಳುತ್ತಾರೆ. ಇದನ್ನೇ ಆಶಿಸಿದ್ದ ವಿಷ್ಣುವು ಹಸನ್ಮುಖದಿಂದ ಹಾಗಾದರೆ ನನ್ನಿಂದ ನೀವು ಹತರಾಗುವ ವರ ಕೊಡಿರೆಂದು ಕೇಳುತ್ತಾನೆ. ಈ ಮಾತನ್ನು ಕೇಳಿ ಗರ ಬಡಿದವರಂತೆ ಆಗಿ ಅಹಂಕಾರವಳಿದು ಮಧು-ಕೈಟಭರು ತಾವಾಗೇ ಇಂತಹ ಪ್ರಸಂಗವನ್ನು ತಂದುಕೊಂಡೆವಲ್ಲ ಎಂದು ಚಿಂತಿಸಿ, ಮರುಗಿ ನಮ್ಮನ್ನು ಸಂಹರಿಸಿ, ನಮ್ಮ ಪ್ರತೀಕವಾಗಿ ಇಲ್ಲಿ ಈಶ್ವರಾಲಯ ನಿರ್ಮಿಸಬೇಕು ಎಂದು ಪ್ರಾರ್ಥಿಸುತ್ತಾರೆ. ಮಹಾವಿಷ್ಣು ಹಾಗೆಯೇ ಆಗಲೆಂದು ಅವರೀರ್ವರನ್ನು ಸಂಹರಿಸಿಬನವಾಸಿ ಯಲ್ಲಿ ಮಧುಕೇಶ್ವರ ದೇವಾಲಯವನ್ನು, ಹಾಗು ಅಲ್ಲಿಂದ 15ಕಿ.ಮೀ. ದೂರದ ಆನವಟ್ಟಿ ಬಳಿ ಕೈಟಭೇಶ್ವರ ದೇವಾಲಯವನ್ನು ನೆಲೆಗೊಳಿಸಿದ ನೆಂಬ ಪ್ರತೀತಿಯಿದೆ. ಈಗಲೂ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ, ಸೊರಬ ತಾಲೂಕು ಆನವಟ್ಟಿಯ ಸಮೀಪ ಕೋಟೆಪುರದಲ್ಲಿ ಕೈಟಭೇಶ್ವರ ದೇವಾಲಯವಿದೆ.ಆದಿಕವಿ ಪಂಪನು, ಪಂಪವನದಲ್ಲಿ ತನ್ನ ಕಾವ್ಯ ಕೃಷಿಯನ್ನು ಪೂರ್ಣ ಗೊಳಿಸಿದ್ದರು ಎಂಬ ಉಲ್ಲೇಖಗಳಿವೆ. ಹೀಗೆಯೇ ಹೊರಟರೆ ಬನವಾಸಿಯನ್ನು ಆಳ್ವಿಕೆ ಮಾಡಿದ ಕದಂಬ ಅರಸರ ಬಗ್ಗೆ ತಿಳಿದುಕೊಂಡಷ್ಟು ಒಳಿತೆಂಬ ಆಶಯ…ವಿಷಯ ಸಂಗ್ರಹಿಸಿ ಒಂದೆಡೆ ಓದಲು ಅನುಕೂಲವಾಗಲೆಂದು, ಇತಿಹಾಸದ ಪುಸ್ತಕಗಳಿಂದ, ಜಾಲತಾಣಗಳಿಂದ ಕಲೆಹಾಕಿ ನೀಡುವ ಪುಟ್ಟ ಪ್ರಯತ್ನವಷ್ಟೇ.
ಮಧುಕೇಶ್ವರ ದೇವಾಲಯದ ವೈಶಿಷ್ಟ್ಯತೆಗಳು
ಮಧುಕೇಶ್ವರ ಲಿಂಗ

ಶ್ರೀ ಮಧುಕೇಶ್ವರ ಲಿಂಗವು ೫.೫ ಅಡಿ ಎತ್ತರ ವಿದ್ದು, ಲಿಂಗದ ಶಿಲೆಯು ಜೇನು ತುಪ್ಪ (ಮಧು) ಬಣ್ಣದಲ್ಲಿದೆ. ಅಂತೆಯೇ ಮಧುಕೇಶ್ವರ ಲಿಂಗ ವೆಂದು ಹೆಸರು. ಇಂತಹ ಕಲ್ಲಿನ ಶಿವಲಿಂಗಗಳು ಅತಿ ವಿರಳ.
ಮಾಯಾದೇವಿ ನಾಟ್ಯಮಂಟಪ

ಗುಡಿಯ ಮುಖಮಂಟಪದ ಮಧ್ಯದಲ್ಲಿ ನಾಟ್ಯ ಮಂಟಪವಿದೆ. ಮಮಕಾರ ರಾಜನ ಮಗಳಾದ ಮಾಯಾದೇವಿ ಶಿವನನ್ನೇ ಒಲಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಾಟ್ಯಸೇವೆ ಮಾಡುತ್ತಿರು ವಾಗ ಅಲ್ಲಮ ಪ್ರಭುವು ಮದ್ದಳೆಕಾರನಾಗಿ ಬಂದು, ಮದ್ದಳೆ ನುಡಿಸಿ ಮಾಯೆಯನ್ನು ಸೋಲಿಸಿದನೆಂದು ಪ್ರಭುಲಿಂಗ ಲೀಲೆಯಲ್ಲಿ ಹೇಳಿದೆ. ಈ ಮಂಟಪದ ದುಂಡಗಿನ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬವು ಏಕ ಕಾಲದಲ್ಲಿ ನೇರವಾಗಿ,ತಲೆ ಕೆಳಗಾಗಿಯೂ ಕಾಣುತ್ತದೆ.
ನಂದಿ ವಿಗ್ರಹ

ನಾಟ್ಯಮಂಟಪದ ಎದುರು ೭.೫ ಅಡಿ ಎತ್ತರದ ಬೃಹತ್ ನಂದಿ ಇದೆ. ಇದು ಹಾನಗಲ್ ಕದಂಬರ ಕಾಲಕ್ಕೆ ಸೇರಿದ್ದಾಗಿದೆ. ಈ ನಂದಿಯು ಎಡಗಣ್ಣಿ ನಿಂದ ಎದುರಿಗೆ ಶಿವನನ್ನು ಬಲಗಣ್ಣಿನಿಂದ ಪಕ್ಕ ದಲ್ಲಿರುವ ಪಾರ್ವತಿ ಗುಡಿಯಲ್ಲಿರುವ ಪಾರ್ವತಿ ಯನ್ನು ನೋಡುತ್ತಿದೆ. ನಂದಿಯನ್ನು ಅತ್ಯಂತ ನುಣುಪಾದ ಬಳಪದ ಕಲ್ಲಿನಿಂದ ಮಾಡಲಾಗಿದೆ.
ಕಲ್ಲು ಮಂಟಪ

ದೇವಾಲಯದ ದಕ್ಷಿಣ ಪಾರ್ಶ್ವದಲ್ಲಿರುವ ಕಲ್ಲಿನ ಮಂಚವು ಗ್ರೆನೈಟ್ ಶಿಲೆಯಿಂದ ಮಾಡಿದ್ದಾಗಿದೆ. ಇದು ಹತ್ತು ತುಂಡು ಕಲ್ಲಿನಿಂದ ಮಾಡಿದುದಾಗಿದೆ. ಇದು ಹೊಳಪಿನಿಂದ ಕೂಡಿದ್ದು ಇದರ ಮೇಲೆ ಶಾಸನಗಳನ್ನು ಕೆತ್ತಲಾಗಿದೆ. ಮಂಚದಮೇಲೆ ಗಿಳಿ, ಸಿಂಹಗಳು,ಆನೆಗಳು,ಛಾವಣಿಯ ಕಮಲಗಳನ್ನು ಕೆತ್ತಲಾಗಿದೆ.ಸೋಂದೆಯ ರಘುನಾಥ ನಾಯಕನು ೧೬೨೮ ರಲ್ಲಿ ಇದನ್ನು ಮಧುಕೇಶ್ವರನಿಗೆ ಅರ್ಪಿಸಿದನು.
ಅರ್ಧಗಣಪತಿ

ಗುಡಿಯ ಬಲಭಾಗಕ್ಕೆ ಅನನ್ಯವಾದ ಅರ್ಧ ಗಣಪತಿಯ ಮೂರ್ತಿಯಿದೆ. ಇದರ ಇನ್ನೊಂದು ಅರ್ಧಭಾಗ ವಾರಣಾಸಿಯಲ್ಲಿದೆಯೆಂದು ನಂಬಲಾಗಿದೆ. ಇದು ಅರ್ಧಾಂಗಿಯಿಲ್ಲದೇ ನಿಂತಿರುವ ಏಕದಂತನ ಬ್ರಹ್ಮಚರ್ಯವನ್ನು ಸಂಕೇತಿಸುತ್ತದೆ.
ಮಧುಕೇಶ್ವರ ದೇವಾಲಯದ ಗರ್ಭಗುಡಿ ಶುಕ ನಾಸಿ, ಮುಖಮಂಟಪಗಳ ಸುತ್ತಲಿನ ಪ್ರದಕ್ಷಿಣಾ ಪಥದ ಎಡಗಡೆ ಇರುವ ಮಹಾವರಣ ಭಸ್ತಿಯಲ್ಲಿ ದೊಡ್ಡದಾದ ಅಷ್ಟದಿಕ್ಪಾಲಕರ ಎಂಟು ಮೂರ್ತಿ ಪತ್ನಿ ವಾಹನಸಮೇತರಾಗಿ ಆಯಾ ದಿಕ್ಕಿಗೆ ಸ್ಥಾನಕ್ಕೆ ಸರಿಯಾಗಿ ಪೂರ್ವಕ್ಕೆ ಇಂದ್ರ, ಆಗ್ನೇಯಕ್ಕೆ ಅಗ್ನಿ, ದಕ್ಷಿಣಕ್ಕೆ-ಯಮ,ನೈಋತ್ಯಕ್ಕೆ ನಿರಋತಿ, ಪಶ್ಚಿಮಕ್ಕೆ ವರುಣ,ವಾಯವ್ಯಕ್ಕೆ-ವಾಯು,ಉತ್ತರಕ್ಕೆ-ಕುಬೇರ, ಈಶಾನ್ಯಕ್ಕೆ-ಈಶಾನಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಿ ದ್ದಾರೆ. ಇದರ ನಡುವೆ ಅಲ್ಲಲ್ಲಿ ಪಾಂಡುರಂಗ, ಕಾಶಿವಿಶ್ವೇಶ್ವರ,ವರದೇಶ್ವರ,ಹಾವಳಿ ಮಧುಕೇಶ್ವರ, ಅಮೃತೇಶ್ವರ, ಕೇದಾರೇಶ್ವರ, ಸಪ್ತಮಾತೃಕೆ, ಚಿಂತಾಮಣಿಯರ ಪಟ್ಟಿ, ನರಸಿಂಹದೇವರ ಗುಡಿ, ವೆಂಕಟರಮಣ, ಅಮೃತಶಿಲೆಯ ರಾಮ-ಲಕ್ಷ್ಮಣ- ಸೀತೆ, ದತ್ತಪಾದುಕೆ, ದುಂಡಿರಾಜ, ಸೂರ್ಯ, ಉಮಾ ಮಹೇಶ್ವರ, ಬಸಲಿಂಗೇಶ್ವರ, ೨ನೇ ಶತಮಾನದ ೫ ಹೆಡೆಯುಳ್ಳ ಆದಿಶೇಷ, ಕೇಶವ, ಉತ್ತರದ್ವಾರ, ಪೂರ್ವದ್ವಾರ, ಚೌಡೇಶ್ವರಿ, ದುರ್ಗೆ- ಪಾರ್ವತಿಯರ ಗುಡಿ,ಸಾಕ್ಷಿ ಗಣಪತಿ, ಚಂಡೇಶ್ವರ, ಕಡಲೆ ಮಾರುತಿ, ಕಬ್ಬು ಮಾರುತಿ, ವೀರಭದ್ರ, ಸದಾಶಿವ, ಕದಂಬೇಶ್ವರ, ತಿಥಿಕಂಠೇಶ್ವರ ಗುಡಿಗಳಿವೆ.
ಮನ್ಮಹಾಸ್ಯಂದನ ರಥೋತ್ಸವ

ರಥೋತ್ಸವವು ಬನವಾಸಿಯ ದೊಡ್ಡ ಹಬ್ಬಗಳಲ್ಲಿ ಒಂದು.ಕಳೆದ ೩೮೦ ವರ್ಷಗಳಿಂದ ಪ್ರತಿ ವರ್ಷ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಎರಡು ದಿನಗಳು ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಉತ್ಸವವನ್ನು ಶಿವಪಾರ್ವತಿಯರ ವಿವಾಹ- ಮಹೋತ್ಸವವೆಂದು ಆಚರಿಸಲಾಗುತ್ತದೆ.ಮತ್ತು ಅದರ ದ್ಯೋತಕವಾಗಿ ಶಿವಶಿವೆಯರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ವಿಶೇಷ ವೆಂದರೆ ರಥದಲ್ಲಿ ಸಾಲಂಕೃತವಾದ ಮಧುಕೇಶ್ವರ, ಪಾರ್ವತಿ ಜೊತೆಗೆ ಗಣಪತಿ, ಸುಬ್ರಹ್ಮಣ್ಯರ ಉತ್ಸವಮೂರ್ತಿಗಳನ್ನು ಸ್ಥಾಪನೆ ದೀಪಾಲಂಕಾರ ಗಳೊಂದಿಗೆ ರಥವನ್ನು ಎಳೆಯಲಾಗುತ್ತದೆ. ಒಟ್ಟಾರೆ ಬನವಾಸಿಯಲ್ಲಿ ೪ ರಥಗಳಿವೆ.
1.ಹಗಲೋತ್ಸವ ರಥ 2. ತಿರುಗುಣಿರಥ 3.ಹೂವಿನ ರಥ 4.ಶ್ರೀಮನ್ಮಹಾಸ್ಯಂದನರಥ ಶ್ರೀಮನ್ಮಹಾಸ್ಯಂದನ ರಥವನ್ನು ‘ದೊಡ್ಡತೇರು‘ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ರಥಗಳಲ್ಲೊಂದು. ಇದನ್ನು ಸೋಂದೆಯ ಅರಸ ಶ್ರೀ ರಾಮಚಂದ್ರ ನಾಯಕ ೧೬೦೮ರಲ್ಲಿ ಮಧುಕೇಶ್ವರ ಉತ್ಸವಕ್ಕೆಂದು ದಾನವಾಗಿ ನೀಡಿದ. ರಥವು ೭೫ ಅಡಿ ಎತ್ತರವಿದ್ದು, ಸುಮಾರು ೧೫೦ ಟನ್ ತೂಕವಿದ್ದು, ೬ ಚಕ್ರಗಳನ್ನ ಹೊಂದಿದೆ. ಈ ರಥವು ಕರ್ನಾಟಕದ ಅತ್ಯಂತ ಹಳೆಯ ರಥಗಳಲ್ಲೊಂದಾಗಿದೆ (೪೦೪ ವರ್ಷದ್ದು).
ಆದಿಕವಿ ಪಂಪನ….ಪಂಪವನ

“ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ”
ಬನವಾಸಿಯಲ್ಲಿ ನೋಡಬೇಕಾದ ಮುಖ್ಯವಾದ ಸ್ಥಳವೆಂದರೆ ಪಂಪವನ. ಇದೊಂದು ಸಣ್ಣ ಸಸ್ಯೋದ್ಯಾನವಾಗಿದ್ದು, ಇಲ್ಲಿ ಅನೇಕ ವಿಧಗಳ ಔಷಧೀಯ ಗಿಡಗಳು ಮತ್ತು ಬಗೆಬಗೆ ಜಾತಿಯ ಮರಗಳನ್ನು ಹೊಂದಿದೆ. ಉದ್ಯಾನವನದಲ್ಲಿ ಶ್ರೀಆದಿಮಧುಕೇಶ್ವರ ದೇವಸ್ಥಾನ, ದೇವಿ ಅಮ್ಮ ನವರ ದೇವಸ್ಥಾನ,ಅಗಸ್ತ್ಯ ಹೊಂಡ ಮತ್ತು ವಸಿಷ್ಠ ತೀರ್ಥಗಳಿವೆ. ಆದಿಕವಿ ಪಂಪ ಇಲ್ಲಿ ಹಲವು ಪುರಾಣಗಳನ್ನು ರಚಿಸಿದ್ದರಿಂದ ಈ ಉದ್ಯಾನ ವನಕ್ಕೆ ಪಂಪವನವೆಂದು ಹೆಸರಿಡಲಾಗಿದೆ. ಕದಂಬರ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬರದ ಪ್ರಯುಕ್ತ ಅವರ ವಂಶದ ದೇವರಾದ ಮಧುಕೇಶ್ವರನನ್ನು ಮೆಚ್ಚಿಸಿ ವರುಣನ ಕೃಪಾಶೀರ್ವಾದ ಪಡೆಯಲು ಇಲ್ಲಿರುವ ಅಗಸ್ತ್ಯ ಹೊಂಡದಿಂದ ನೀರೆತ್ತಿ ತಂದು ಆದಿ ಮಧುಕೇಶ್ವರ ಲಿಂಗವನ್ನು ನೀರಿನಿಂದ ತುಂಬಿಸಿ ಪೂಜೆಗೈದು, ಮಳೆರಾಯನ ಕೃಪೆ ಹೊಂದುತ್ತಿದ್ದರು.ಗತಸಂಗತಿಗೆ ಆಧಾರವಾಗಿ ಇಲ್ಲಿಯ ಮಧುಕೇಶ್ವರ ಲಿಂಗ ನೀರಿನಿಂದ ತುಂಬಿ ಮುಳಗಿಸಬಹುದೆಂಬುದಕ್ಕೆ ನಾಲ್ಕು ಅಡಿ ಆಳದಲ್ಲಿ ಸುತ್ತಲಿನ ಕಲ್ಲಿನ ಭದ್ರ ಗೋಡೆಗಳಿರುವುದೇ ಸಾಕ್ಷಿ.
ಬನವಾಸಿಯನ್ನಾಳಿದ ಕದಂಬರು


ಆಧಾರಗಳು: ಚಂದ್ರವಳ್ಳಿ-ಚಿತ್ರದುರ್ಗ ಜಿಲ್ಲೆ, ಹಲ್ಮಿಡಿ-ಹಾಸನ ಜಿಲ್ಲೆ, ತಾಳಗುಂದ (ಸ್ಥಾನ ಕುಂದೂರು)-ಶಿವಮೊಗ್ಗ ಜಿಲ್ಲೆ,ಹೆಬ್ಬಟ್ಟ,ಮಳವಳ್ಳಿ- ಮಂಡ್ಯ ಜಿಲ್ಲೆ, ಗುಡ್ನಾಪುರಗಳಲ್ಲಿನ ಶಿಲಾಶಾಸನ ಗಳು, ಹಲಸಿ ಬೆಳಗಾವಿ ಜಿಲ್ಲೆ, ಮುತ್ತೂರು, ದೇವಗಿರಿ, ರಾಣೆಬೆನ್ನೂರು ತಾಲ್ಲೂಕು ಸಂಗೊಳ್ಳಿ ಯ ತಾಮ್ರಪಟಗಳು, 2ನೇ ಕಾಳಿದಾಸನ ಕೌಂತಳೇಶ್ವರ ದೌತ್ಯಂ, ತಾಳಗುಂದ, ಬನವಾಸಿ, ಚಿತ್ರದುರ್ಗ, ಹಲಸಿ ಮೊದಲಾದ ಸ್ಥಳಗಳಲ್ಲಿನ ಇವರ ಸ್ಮಾರಕಗಳು.

ಮೂಲಗಳು: ಶಾಂತಿವರ್ಮನ ತಾಳಗುಂದದ ಶಾಸನದಂತೆ ಮಯೂರಶರ್ಮ ಮೂಲಪುರುಷ. ಮನೆಯ ಬಳಿಯ ಕದಂಬ ವೃಕ್ಷದ ಕಾರಣ ಮನೆತನದ ಹೆಸರು ಕದಂಬ ಎಂದಾಯಿತು. ಮಳವಳ್ಳಿ ಶಾಸನದಲ್ಲಿ ಮೊದಲ ಅರಸನನ್ನು ʼದ್ವಿಜೋತ್ತಮʼ ಎಂದು ಉಲ್ಲೇಖ; ಕಾರಣ ವೈದಿಕ ಧರ್ಮಕ್ಕೆ ಸೇರಿದ ಬ್ರಾಹ್ಮಣ ವರ್ಗದವರು.
ಕದಂಬ ಅರಸರ ಕಾಲಾನುಕ್ರಮಣಿಕೆ – (345-525)
ಮಯೂರಶರ್ಮ: (345 – 365)
ಕಂಗವರ್ಮ: (365 – 390)
ಭಗಿರಥವರ್ಮ: (390 – 415)
ರಘುವರ್ಮ: (415 – 435)
ಕಾಕುಸ್ಥವರ್ಮ: (435 – 455)
ಶಾಂತಿವರ್ಮ: (455 – 460)
ಮೃಗೇಶವರ್ಮ: (460 – 480)
ಶಿವಮಾಂಧಾತೃವರ್ಮ: (480 – 485)
ರವಿವರ್ಮ: (485 – 519)
ಹರಿವರ್ಮ: (519 – 525)
ಸಿರ್ಸಿಯ ಇನ್ನೊಂದು ಆಕರ್ಷಣೆ ಸಹಸ್ರಲಿಂಗ ಗಳ ಸರಮಾಲೆ..

ಸಹಸ್ರಲಿಂಗಗಳು ಶಿವನ ಆರಾಧನೆಗೆ ಸ್ಥಾಪಿಸಿದ ಧ್ಯಾನ ಮಾರ್ಗ.

ಸಹಸ್ರಲಿಂಗವು ಸಿರ್ಸಿಯಿಂದ ೧೭ ಕೀ.ಮೀ. ದೂರದಲ್ಲಿದೆ. ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಭಕ್ತಾದಿಗಳು ಬಹಳ ಭಕ್ತಿಯಿಂದ ಶಿವನ ಆರಾಧನೆ ಮಾಡುತ್ತಾರೆ. ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಎಲ್ಲರೂ ಶಿವರಾತ್ರಿಯದಿನದಂದು ಬೆಳಿಗ್ಗೆ ಪೂಜೆಗೆ ಅವಶ್ಯವಿರುವ ಎಲ್ಲ ಸಾಮಗ್ರಿಗಳೊಂದಿಗೆ, ಸ್ವಂತ ವಾಹನ ಮಾಡಿಕೊಂಡು ಹೋಗಿ ಅಲ್ಲೆ ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಪ್ರತಿ ಕಲ್ಲುಬಂಡೆಯ ಮೇಲಿರುವ ಶಿವಲಿಂಗ ಹಾಗೂ ನಂದಿಗೆ ಪೂಜೆ ಸಲ್ಲಿಸಿದ ನೆನಪು.
ಸೋಂದಾಮಠ

ಸಿರ್ಸಿಯಿಂದ 20 ಕಿ.ಮೀ. ದೂರದಲ್ಲಿರುವ ಸೋಂದಾದಲ್ಲಿ (ಇತರೆ ಹೆಸರುಗಳು ಸೋದೆ, ಸ್ವಾದಿ) ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ.
ಉಂಚಳ್ಳಿ ಜಲಪಾತ

೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರ್ಸಿಯಿಂದ ೩೦ ಕಿ.ಮೀ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ.
ಮುಂಡಿಗೆಕೆರೆ ಪಕ್ಷಿಧಾಮ

ಸಿರ್ಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಬಾಡಲಕೊಪ್ಪ ಮಜರೆಯಲ್ಲಿ ರುವ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಪ್ರತಿವರ್ಷ ಸಾವಿರಾರು ಬೆಳ್ಳಕ್ಕಿಗಳು ವಂಶಾಭಿವೃದ್ಧಿಗೆ ಜೂನ್ ತಿಂಗಳಲ್ಲಿ ಬಂದು ನೂರಾರು ಗೂಡುಗಳನ್ನು ಕಟ್ಟಿ ವಾಸಿಸುತ್ತವೆ. ಅಕ್ಟೋಬರ್ ತಿಂಗಳ ಕೊನೆವರೆಗೆ ಸಂತಾನೋತ್ಪತ್ತಿ ಮಾಡಿಕೊಂಡು ಹಾರಿಹೋಗು ತ್ತವೆ. ಸುಮಾರು 0೪ ಎಕರೆ ವಿಸ್ತಾರದ ಈ ಕೆರೆ ಯನ್ನು ಸಂಪೂರ್ಣ ಆವರಿಸಿರುವ ಮುಂಡಿಗೆ ಗಿಡಗಳ ಮೇಲೆಯೇ ಗೂಡು ಕಟ್ಟಿಕೊಳ್ಳುತ್ತವೆ. ಕೆರೆಯ ಪಕ್ಕದಲ್ಲೇ ೪೦ ಅಡಿ ಎತ್ತರದ ವೀಕ್ಷಣಾ ಗೋಪುರ ಸಹ ಇದೆ.
ಮುಸುಕಿನ ಬಾವಿ

ಸದ್ಯ ಸಿರ್ಸಿ ನಗರದ ನಾಡಿಗಲ್ಲಿಯ ಕೊನೆಯಲ್ಲಿ ರುವ ಮುಸುಕಿನ ಬಾವಿಯನ್ನು ೧೭ನೇ ಶತಮಾನ ದಲ್ಲಿ ಸೋದೆಯ ಅರಸ ಸದಾಶಿವರಾಯ ತನ್ನ ಪ್ರೇಯಸಿ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಕಟ್ಟಿಸಿದ್ದನೆಂಬ ಪ್ರತೀತಿಯಿದೆ.
೧೮೫೯ರಿಂದ ಸಿರ್ಸಿ ತಾಲೂಕಾ ಕೇಂದ್ರವಾದದ್ದು, (ಸೋಂದೆಯಿಂದ) ೧೯೭೭ ನಾರ್ತ್ ಕೆನರಾದ ಮರುನಾಮಕರಣವಾಗಿ ಉತ್ತರ ಕನ್ನಡ ಎಂಬ ಹೆಸರು ದಾಖಲಿಸ್ಪಟ್ಟಿತು.

ಅಂದು ಚಾಲ್ತಿಯಲ್ಲಿದ್ದು,ದೊರೆತ ನಾಣ್ಯಗಳು, ಪೊಟಿನ್ ಮತ್ತು ಸೀಸದ ನಾಣ್ಯಗಳು
ಶಾತವಾಹನ, ಚುಟು, ರೋಮನ್ (ಲಿಸಿತಿಸ್, ಡೆಮೆಟ್ರಿಯಸ್, ಟೊಲೆಮಿ, ಆಗಥೊಕ್ಲಿಯಸ್)

ಕ್ರಿ.ಶ. ೧೮೦೧ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವೈದ್ಯ ಪದವಿಧರ ಡಾ.ಫ್ರಾನ್ಸಿಸ್ ಬುಕಾನನ್. ಟಿಪ್ಪೂ ಮರಣಾನಂತರ ಕಂಪನಿಯು ವಶಪಡಿಸಿ ಕೊಂಡ ಮೈಸೂರು ಮತ್ತು ಮಲಬಾರ್ ಪ್ರಾಂತ್ಯ ಗಳಲ್ಲಿ ಪ್ರವಾಸ ಕೈಗೊಂಡನು. ಆತ ತನ್ನ ‘Jorney Through the Northerns Parts of Kanara’ ಹೊತ್ತಿಗೆಯಲ್ಲಿ, ಉತ್ತರ ಕನ್ನಡದ ಸೋಂದಾದ ತಹಶೀಲ್ದಾರನಿರುವ ಒಂದು ಸಣ್ಣ ಹಳ್ಳಿ ‘ಸೆರ್ಸಿ‘ ಎಂದು ದಾಖಲಿಸಿದ್ದಾನೆ. ರಾಯಪ್ಪ ಹುಲೇಕಲ್ ಶಾಲೆ (ಸು.೧೫೦ ವರ್ಷ ಕ್ಕಿಂತ) ಹಳೆಯದು. ಕೇಶವೈನ್ ಬಂಗಲೆ-೧೯೩೧ ರಲ್ಲಿ ಗಾಂಧೀಜಿಯವರು ವಾಸ್ತವ್ಯ ಮಾಡಿದ ಕಟ್ಟಡವೆಂದು ಹೇಳಲಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ‘ಸಿರ್ಸಿ’ ತಾಲೂಕು ಕೇಂದ್ರವಷ್ಟೇ ಅಲ್ಲದೆ, ಜಿಲ್ಲಾಕೇಂದ್ರ ವಾಗಿಯೂ ಪರಿವರ್ತನೆ ಹೊಂದಿದೆ. ಉತ್ತರ ಕನ್ನಡ ಜಿಲ್ಲೆ ಸಮಗ್ರವಾಗಿ ಗೋಚರಿಸಿದರೂ, ಶೈಕ್ಷಣಿಕ ಹಿತದೃಷ್ಟಿ ಯಿಂದ ಸಿರ್ಸಿಯನ್ನು ಇಬ್ಬಾಗಿಸಲಾಗಿದೆ. ಶೈಕ್ಷಣಿಕ ಜಿಲ್ಲೆಯಾಗಿ ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡು ತನ್ನದೇ ಆದ ಛಾಪನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುತ್ತಾ ಬಂದಿದೆ. ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಸಿರ್ಸಿಯು ಕೂಡ ಒಂದೆಂದರೆ ತಪ್ಪಾಗದು. ಸಿರ್ಸಿ ಯಲ್ಲಿ ಕನ್ನಡ (ಹವ್ಯಕ ಕನ್ನಡ), ಕೊಂಕಣಿ, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದು, ಮುಖ್ಯವಾದ ವ್ಯಾವಹಾರಿಕ ಭಾಷೆ ಕನ್ನಡವಾಗಿದೆ. ಯಕ್ಷಗಾನ ಕಲೆ ಆರಾಧಿಸುವ ಕಲಾಕಾರರಿದ್ದು, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸಾಹಿತಿಗಳು, ವಿವಿಧ ರಂಗಗಳಲ್ಲಿ ಮುಂಚೂಣಿಯಲ್ಲಿ ರುವ ಅನೇಕ ಕಲಾವಿದರ ದಂಡೇ ಇದೆ. ನನ್ನ ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟ… ಸಿರ್ಸಿ ತಾಲೂಕು ತನ್ನದೇಯಾದ ವೈವಿಧ್ಯಮಯ ವೈಶಿಷ್ಟ್ಯತೆ ಹೊಂದಿರುವುದರಿಂದ ಇದೊಂದು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.
✍️ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ

VERY KNOWLEDGEABLE AND INFORMATIVE. IT GIVES COMPLETE OUTLOOK ABOUT HISTORY OF SIRSI.
LikeLike
ಅತೀ ಸುಂದರ ಐತಿಹಾಸಿಕ ಮಹತ್ವ ಸಾರುವ ಸುಲಲಿತ ಲೇಖನ ರೀ ಮೇಡಂ ರೀ…..ಶರಣು ಶರಣು
LikeLiked by 1 person
ಶಿರಸಿಯ ಸಮಗ್ರ ಇತಿಹಾಸ ಹೊಂದಿರುವ ಅದ್ಭುತ ಲೇಖನ ಗೆಳತಿ🥰💖
LikeLike
ಸಿರ್ಸಿಯ ಕುರಿತು ನಮಗೆ ತಿಳಿಯದ ಅಪರೂಪದ ವಿಷಯಗಳು,ಚಿತ್ರಸ್ವರೂಪ ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ.ಅಧ್ಯಯನ ಯೋಗ್ಯ ಲೇಖನ..
LikeLiked by 1 person
ಅಧ್ಯಯನಶೀಲವಾದ , ಉತ್ತಮ ಮಾಹಿತಿಗಳುಳ್ಳ ಲೇಖನ. ಅಭಿನಂದನೆಗಳು ಗೆಳತಿ🌹🌹
LikeLiked by 1 person
ಸಿರ್ಸಿಯ ಸಂಪೂರ್ಣ ಇತಿಹಾಸವನ್ನು ಹುಡುಕಿ ಒಂದೆಡೆ ಸಿಗುವಂತೆ ಅರ್ಥಪೂರ್ಣವಾಗಿ ವಿವರಿಸಿದ ನಿಮ್ಮ ಶ್ರಮ ಅಭಿನಂದನಾರ್ಹ…..
LikeLiked by 1 person