ನೀವು ಬರೆದ ನಾಟಕಗಳಿಗೆ ಬಣ್ಣ ಹಚ್ಚಿ, ಹೇಳಿಕೊಟ್ಟ ಮಾತು ಉರುಹೊಡೆದು ರಂಗವೇರುವುದಕ್ಕೆ ಸಾಲುಗಟ್ಟಿದವರಲ್ಲ. ಯಾರೊಂದಿಗೆ ಎಷ್ಟು ಮಾತು, ನಗು, ಯಾವ ಗುಂಪಿನಲ್ಲಿ ಯಾವ ಗೆಳೆಯರು ಎಂಬ ಗುಟ್ಟುಪಟ್ಟನ್ನೆಲ್ಲಾ ಕಲಿಸಬೇಡಿ. ಭಾವ ಚಿತ್ರಗಳ ಸ್ಕ್ಯಾನ್ ಮಾಡಿ, ಯಾರೊಂದಿಗೆ ಹೇಗೆ ನಿಂತಿರಿ, ತಾಲೀಮಿನಲ್ಲಿ ಎಲ್ಲಿ ತಪ್ಪುತ್ತಿದ್ದೀರಿ ಎಂದೆಲ್ಲ ಹೇಳಬೇಡಿ.
ನಮ್ಮನ್ನು ನೀವು ನಿರ್ದೇಶಿಸಬೇಡಿ!!
ನಾವೇನು ಹೆಜ್ಜೆ ಕಲಿಯುತ್ತಿರುವ ಕಂದಮ್ಮಗಳಲ್ಲ. ಏಳು ಬೀಳುಗಳಲಿ ಮುನ್ನಡೆದು, ಸಿಹಿ ಕಹಿ ಉಂಡು ಬದುಕ ಸಿದ್ಧಾಂತ ರೂಪಿಸಿಕೊಂಡಿದ್ದೇವೆ. ಅಡುಗೆ ಮನೆಯ ಕತ್ತಲಲ್ಲೆ ಕಳೆದು, ಹೊತ್ತು ಹೊತ್ತಿಗೆ ಬಡಿಸಿ, ಉಣಿಸಿ ಮನದ ಮಾತುಗಳ ಡಬ್ಬಿ ಗಳಲ್ಲಿ ಮುಚ್ಚಿಟ್ಟಿದ್ದವರು ತೆರೆದಿದ್ದೇವೆ.
ನಮ್ಮನ್ನು ನೀವು ನಿರ್ದೇಶಿಸಬೇಡಿ!!
ನೀವೇ ಅತ್ತರೂ ಎದೆಗಾತುಕೊಂಡು, ಸೋತರೆ ಜೊತೆ ನಿಂತು ನಡೆಸಿದ್ದೇವೆ, ಮಿಡಿದಿದ್ದೇವೆ. ಏಕಾಂಗಿ ನಡೆ ದಿಟ್ಟವಾಗಿರುವಾಗ ಗುಂಪಿನಲ್ಲಿ ಕಟ್ಟಿ ಹಾಕಲು ಯತ್ನಿಸಬೇಡಿ.
ನಮ್ಮನ್ನು ನೀವು ನಿರ್ದೇಶಿಸಬೇಡಿ!!
ಹಾಗೆ ನೋಡಿದರೆ ನೀವೆಂದು ನಮ್ಮೊಂದಿಗೆ ಇರಲೆ ಇಲ್ಲ!!
✍️ಪ್ರೊ.ಎಂ.ಆರ್.ಕಮಲ
ಸ್ತ್ರೀ ಸಂವೇದನೆಗಳನ್ನು ಮೊಗೆ ಮೊಗೆದು ಉಣ ಬಡಿಸುವ ಮಹಿಳಾ ಸಾಹಿತಿಗಳ ಸಾಲಿನಲ್ಲಿ ಪ್ರೊ.ಎಂ.ಆರ್.ಕಮಲ ಕೂಡ ಪ್ರಮುಖ ಸ್ಥಾನ ದಲ್ಲಿ ನಿಲ್ಲುತ್ತಾರೆ. ಇವರ ‘ಕಸೂತಿಯಾದ ನೆನಪುಗಳು’, ‘ಕತ್ತಲು ಹೂವಿನ ಹಾಡು’, ‘ಕಪ್ಪು ಹಕ್ಕಿಯ ಬೆಳಕಿನ ಹಾಡು’, ‘ಸೆರೆಸಿಕ್ಕಿ ಹಾಡುವುದು ಏನೆಂದು ನಾಬಲ್ಲೆ’, ‘ಕೆನ್ನೀಲಿ’, ‘ನೆತ್ತರಲ್ಲಿ ನೆಂದ ಚಂದ್ರ’, ಕೃತಿಗಳು ರಾಷ್ಟ್ರೀಯ ಮತ್ತು ಜಾಗತಿಕ ಸ್ತ್ರೀ ಸಂವೇದನೆಗಳನ್ನು ಕಟ್ಟಿ ಕೊಡುತ್ತವೆ. ಇವರ ‘ಕಸೂತಿಯಾದ ನೆನಪು’ ಕೃತಿ ಹೆಣ್ಣೊಬ್ಬಳು ಹುಟ್ಟಿನಿಂದ ತನ್ನ ಕೊನೆಯ ಕಾಲ ಘಟ್ಟದವರೆಗೂ ಏನೆಲ್ಲಾ ಸವಾಲುಗಳನ್ನು ಎದುರಿಸುವಳು, ಸಂಘರ್ಷಗಳಿಗೆ ಎದುರಾಗಿ ನಿಲ್ಲುವಳು, ಸಂಕಟ, ಅಭದ್ರತೆ, ಅಸಹಾಯಕತೆ ಗಳನ್ನೆಲ್ಲ ಮೆಟ್ಟಿನಿಂತು ಹೇಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವಳು ಮತ್ತು ತನ್ನಂತಹ ಇತರ ಹೆಣ್ಣು ಮಕ್ಕಳನ್ನು ಹರಿದುಂಬಿಸುವಳು ಎಂಬ ಅಂಶಗಳನ್ನು ಹೊತ್ತು ತರುವ ಮೂಲಕ ಹೆಣ್ಣು ಮಕ್ಕಳಿಗೆ ಭರವಸೆಯ ಕೈಗನ್ನಡಿಯಾಗಿ ರಚಿಸಿದ್ದಾರೆ..

‘ನಮ್ಮನ್ನು ನೀವು ನಿರ್ದೇಶಿಸಬೇಡಿ‘ ಎಂಬ ಶೀರ್ಷಿಕೆ ಪ್ರೊ.ಎಮ್.ಆರ್. ಕಮಲ ಅವರ ಗದ್ಯಗಂಧಿ ಕವಿತೆಯ ಸಾಲಾಗಿದೆ. ಈ ಶೀರ್ಷಿಕೆ ಹೆಣ್ಣಿನ ಮನೋಬಲವನ್ನು ಅಗಾಧವಾಗಿ ಕಟ್ಟಿ ಕೊಡುತ್ತದೆ. ‘ನಮ್ಮನ್ನು ನಿರ್ದೇಶಿಸಬೇಡಿ’ ಎನ್ನುವಲ್ಲಿ ಸ್ತ್ರೀಯರು ಸ್ವತಃ ನಿರ್ಧಾರಗಳನ್ನು ತೆಗೆದು ಕೊಳ್ಳುವಲ್ಲಿ ಸಮರ್ಥರಿದ್ದಾರೆ ಎಂಬ ಪ್ರತಿಪಾದನೆ ಅಡಕವಾಗಿದೆ. ಇದು ಮಹಿಳಾ ಸಂವೇದನೆ ಮತ್ತು ಸ್ತ್ರೀವಾದಿನೆಲೆಯಲ್ಲಿ ರಚಿತ ಗೊಂಡ ಕವಿತೆಯಾಗಿದ್ದು ಪುರುಷಾಧಿಕಾರ ಮತ್ತು ಪುರುಷಾಡಳಿತದ ವಿರುದ್ಧ ಸಿಡಿದೆದ್ದ ಸಾಲುಗಳನ್ನು ಒಳಗೊಂಡಿದೆ.

ಅನಾದಿ ಕಾಲದಿಂದಲೂ ಸ್ತ್ರೀಯನ್ನು ಈ ಸಮಾಜ ದ್ವಿತೀಯ ಪ್ರಜೆಯನ್ನಾಗಿಯೇ ನಡೆಸಿಕೊಳ್ಳುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಗಂಡನ್ನೇ ಮುಂದು ಮಾಡಿ ಹೆಣ್ಣಿನ ಸ್ವಾತಂತ್ರ್ಯವನ್ನು ಹಾಗೂ ಸಮಾನತೆಯನ್ನು ಹತ್ತಿಕ್ಕಲಾಗುತ್ತಿದೆ. ಇದಕ್ಕೆ ಕುಟುಂಬವಾಗಲಿ ಔದ್ಯೋಗಿಕ ಕ್ಷೇತ್ರವಾಗಲಿ, ಶಿಕ್ಷಣ ಕ್ಷೇತ್ರವಾಗಲಿ, ಸಮಾಜವಾಗಲಿ ಹೊರತಾ ಗಿಲ್ಲ. ಹೆಣ್ಣು ಇದನ್ನೆಲ್ಲ ವಿರೋಧಿಸದೆ ಗಂಡು ಹೇಳಿದ್ದಕ್ಕೆಲ್ಲ ಹೂಂ ಎಂದು ತಲೆಯಾಡಿ ಸುತ್ತಾ ಬಂದಿದ್ದೆ ಕಾರಣವಿರಬಹುದು. “ನೀನು ಹೆಣ್ಣು ನಿನ್ನ ಮಿತಿ ಇಷ್ಟೇ ಇದನ್ನು ದಾಟಬೇಡ” ಎಂಬ ಸಾಮಾಜಿಕ, ಧಾರ್ಮಿಕ ಸಂಕೋಲೆಗಳಲ್ಲಿ ಬಂಧಿಸಿ ಹೆಣ್ಣಿನ ವಾಕ್ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿತ್ತು.

ಇದನ್ನು ವಿರೋಧಿಸಿ ಅನೇಕ ಮಹಿಳೆಯರು ಸಿಡಿದೆದ್ದನ್ನು ನಾವು ಕಾಣಬಹುದು. 12ನೇ ಶತಮಾನದಲ್ಲಿಯೇ ಅಕ್ಕನಂತವರು ಸ್ತ್ರೀವಿಚಾರ ಕ್ರಾಂತಿಗೆ ಕರೆಕೊಟ್ಟರು. ಆದರೂ ಇಂದಿಗೂ ಸ್ತ್ರೀಯರ ಸ್ಥಾನಮಾನಗಳಲ್ಲಿ ಗಮನಾರ್ಹ ಬದಲಾವಣೆಗಳು ಕಾಣದಿರುವುದು ವಿಷಾದದ ಸಂಗತಿ. ಸ್ವಾತಂತ್ರ್ಯ ಹೋರಾಟದಂತಹ ಸಮಯ ದಲ್ಲಿ ಹೆಣ್ಣು ಕೂಡ ಗಂಡಿನೊಂದಿಗೆ ತನ್ನ ಹಕ್ಕಿಗಾಗಿ ಹೋರಾಡಿದ್ದನ್ನು ನಾವು ಮರೆಯುವಂತಿಲ್ಲ.

ಈ ಕವಿತೆಯಲ್ಲಿ ಕಮಲರವರು ಹೆಣ್ಣು ಗಂಡಿಗಿಂತ ಯಾವುದೇ ವಿಚಾರಗಳಲ್ಲಿ ಅಸಮರ್ಥಳಲ್ಲ ಎಂದು ನಿರೂಪಿಸುತ್ತಾರೆ. ಗಂಡು ದೈಹಿಕ ಸಾಮರ್ಥ್ಯದಿಂದ ಕಾರ್ಯ ಸಾಧಿಸುವನಾದರೆ, ಹೆಣ್ಣು ತನ್ನ ನೈತಿಕತೆ ಮತ್ತು ದೃಢ ಮನೋಬಲ ದಿಂದ ಸೂಕ್ಷ್ಮವಾಗಿ ಅವುಗಳನ್ನ ನಿರ್ವಹಿಸುವ ಚಾಣಾಕ್ಷತೆ, ಜಾಣ್ಮೆ, ಕುಶಲತೆ, ಚಾಕಚಕ್ಯತೆ ಹೊಂದಿದ್ದಾಳೆ ಎಂದು ಅಭಿಪ್ರಾಯಪಡುತ್ತಾರೆ. ನೀವು ನಮ್ಮನ್ನು ನಿರ್ದೇಶಿಸಬೇಡಿ ಎಂದು ಪದೇ ಪದೇ ಪುನರಾ ವರ್ತನೆಯಾಗುವ ಸಾಲು ಪುರುಷ ಸಮಾಜಕ್ಕೆ ಎಚ್ಚರಿಕೆ ಸಂದೇಶವಾಗಿ ರವಾನಿಸಲ್ಪ ಡುತ್ತದೆ.ಇದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಉದ್ಯೋಗಿಕ ಕ್ಷೇತ್ರಗಳಲ್ಲಿ ಗಂಡಿನ ಯಜಮಾನ್ಯ ಧೋರಣೆಯನ್ನು ಪ್ರತಿಭಟಿ ಸುತ್ತದೆ. ಇಲ್ಲಿ ಕಮಲ ಅವರು ಸಮಾಜದ ಸಿದ್ಧ ಮಾದರಿ ಗಳನ್ನು ತೊಡೆದು ಹೊಸನೆಲೆಯಲ್ಲಿ ತನ್ನ ವ್ಯಕ್ತಿತ್ವ ಸ್ಥಾಪಿಸಿಕೊಳ್ಳಲು ಸ್ತ್ರೀ ಸಮಾಜಕ್ಕೆ ಕರೆ ಕೊಡುತ್ತಾರೆ. ಸಮಾಜದ ಅರ್ಥಹೀನ ಕಟ್ಟುಪಾಡು ಗಳ ಸಿಕ್ಕುಗಳನ್ನು ಬಿಡಿಸಿಕೊಂಡು ವೈಚಾರಿಕ ವಿಕಸನದೆಡೆಗೆ ಸಾಗಲು ಕವಿತೆ ಹಂಬಲಿಸುತ್ತದೆ.

ಈ ಕವಿತೆ ಪುಟ್ಟದಾಗಿ ಕಂಡರೂ ಸ್ತ್ರೀಸಂವೇದನೆ ಗಳ ಆಗರವಾಗಿದೆ. ಈ ಕವಿತೆಯಲ್ಲಿರುವ ಪ್ರತಿ ಪದ, ಪ್ರತಿ ಸಾಲು ಮಹಿಳಾ ಶಕ್ತಿಯನ್ನು ಅಗಾಧ ವಾಗಿ ಪರಿಚಯಿಸುತ್ತಲೇ ಪುರುಷ ಸಮಾಜಕ್ಕೆ ಹೆಣ್ಣು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಚಾಟಿ ಬೀಸುತ್ತಲೇ ಸಾಗುತ್ತದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಹೆಜ್ಜೆ ಗುರುತುಗಳನ್ನು ಸ್ಥಾಪಿಸುತ್ತಿದ್ದಾಳೆ. ಗಂಡು ಮಾತ್ರ ಮಾಡ ಬಲ್ಲ ಎಂದು ನಂಬಿದ್ದ ಕಡೆಗೆಲ್ಲ ಇವಳು ಕೂಡ ಹೋಗುತ್ತಿದ್ದಾಳೆ. ಇಂದು ಹೆಣ್ಣು ಗಂಡ ಮಕ್ಕಳು ಸಂಸಾರಕಷ್ಟೇ ಸೀಮಿತವಾಗಿಲ್ಲ. ಅವುಗಳೊಟ್ಟಿಗೆ ಬಾಹ್ಯಾಕಾಶ ಯಾನವನ್ನೂ ಮಾಡುತ್ತಿದ್ದಾಳೆ. ಸಾಗರದಡಿ ಸಂಶೋಧನೆಗೂ ಸಿದ್ಧ, ಸೈನಿಕ ಕಾರ್ಯಾಚರಣೆ ಮಾಡಲೂ ಬದ್ಧ. ಮನೆಯಲ್ಲಿ ಕುಳಿತು ತನ್ನವರಿಗಾಗಿ ಪ್ರೀತಿಯ ತುತ್ತನ್ನೂ ಕೂಡ ಉಣಿಸುತ್ತಿದ್ದಾಳೆ. ಅಂದರೆ ಎರಡು ಕಡೆಯೂ ಸಮಾನ ಪ್ರಾಭಲ್ಯ ಸ್ಥಾಪಿಸುವ ಶಕ್ತಿ ಅವಳಗಿದೆ.

ಇಂದು ಹೆಣ್ಣು ಪೂರ್ಣ ಪ್ರಮಾಣದಲ್ಲಿ ಸಾಂವಿಧಾನಿಕ ಸಮಾನತೆ ಮತ್ತು ಸ್ವಾತಂತ್ರ್ಯ ಬಯಸುತ್ತಿದ್ದಾಳೆ. ಮೂಲಭೂತ ಅರಿವನ್ನು ಸಾಧಿಸುತ್ತಿದ್ದಾಳೆ. ಲಿಂಗಾಧಾರಿತವಾಗಿ ಬೇಧವನ್ನು ಮಾಡುತ್ತಿರುವುದನ್ನು ಕಂಡಾಗ ಅವಳಿಗೆ ಸ್ವಾತಂತ್ರ್ಯದ ಅಗತ್ಯ ಎಷ್ಟಿದೆ ಎಂಬುದು ಗಮನಕ್ಕೆ ಬರುತ್ತದೆ.
ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ಸ್ತ್ರೀಯನ್ನ ಅಗೌರವದಿಂದ ಕಾಣುತ್ತಿದ್ದರು. ಅವಳನ್ನು ಬರಹ ದಲ್ಲಿ ತೊಡಗದಂತೆ ನಿರ್ಬಂಧಿಸುತ್ತಿದ್ದರು. ಅದರಿಂದಲೇ ಹೆಣ್ಣು ಗಂಡಿನ ಹೆಸರಿನಲ್ಲಿ ಅಥವಾ ಅನಾಮಧೇಯ ಹೆಸರಿನಲ್ಲಿ ಪತ್ರಿಕೆಗಳಿಗೆ ಬರೆಯು ತ್ತಿದ್ದರು. ಆದರೆ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ನಿರ್ಭಿಡತೆಯಿಂದ ಬರೆಯುತ್ತಿದ್ದಾರೆ. ಗಂಡಿನಷ್ಟೇ ಪ್ರಬಲವಾಗಿ ಎಲ್ಲ ಸಂವೇದನೆಗಳನ್ನ ಕಟ್ಟಿಕೊಡುತ್ತಿದ್ದಾರೆ. ನಾಚಿಕೆ ಸಂಕೋಚ ಎಂಬ ಮಿತಿಯನ್ನ ದಾಟಿ ಪ್ರೀತಿ ಪ್ರೇಮ ವಿರಹ-ಕಾಮ ದಂತಹ ವಿಚಾರಗಳನ್ನು ಬಹಿರಂಗವಾಗಿ ಬರೆಯು ತ್ತಿದ್ದಾಳೆ ಎಂಬುದು ಸಮಾಧಾನಕರ ಸಂಗತಿ ಎಂದು ಭಾವಿಸುವುದಾದರೂ ಎಲ್ಲ ಹೆಣ್ಣು ಮಕ್ಕಳಿಗೂ ಈ ಸ್ವಾತಂತ್ರ್ಯ ಇಂದಿಗೂ ಲಭ್ಯವಿಲ್ಲ ಎಂಬುದು ಕಟು ಸತ್ಯ.

ಇತ್ತೀಚಿಗೆ ಫೇಸ್ಬುಕ್ ನಲ್ಲಿ ಗಂಡಿನ ಹೆಸರಿನಲ್ಲಿ ಹೆಣ್ಣುಮಗಳೊಬ್ಬಳು ಇರುವುದು ನನ್ನ ಗಮನಕ್ಕೆ ಬಂತು. ನಾನು ಅವರನ್ನ ಪ್ರಶ್ನಿಸಿದೆ. ಏಕೆ ಹೀಗೆ ಮೋಸ ಮಾಡುತ್ತಿರುವಿರಿ? ನೀವು ಒಬ್ಬ ಹೆಣ್ಣಾಗಿ ನಿಮ್ಮ ಬಗ್ಗೆ ನಿಮಗೆ ಗೌರವವಿಲ್ಲದಿದ್ದರೆ ಹೇಗೆ? ನಿಮ್ಮದಲ್ಲದ ಅನಾಮದೇಯ ಹೆಸರಿನಲ್ಲಿ ಬರೆಯುವ ಅಗತ್ಯವಾದರೂ ಏನಿದೆ? ನಿಮ್ಮ ಬಗ್ಗೆ ನೀವು ಹೆಮ್ಮೆಪಡಿ,ಆತ್ಮ ಗೌರವದಿಂದ ನೇರವಾಗಿ ಬರೆಯಿರಿ ಈ ಹಿಂಬದಿಯ ಬರಹ ಏಕೆ? ಎಂದಾಗ ಆಕೆ ಹೇಳಿದ್ದನ್ನು ಕೇಳಿ ಆಘಾತವಾಯಿತು. “ನೋಡಿ ಟೀಚರ್, ನನಗೆ ಬರಹ ಎಂದರೆ ತುಂಬಾ ಇಷ್ಟ. ಬಾಲ್ಯದಿಂದಲೂ ನನಗೆ ಸಾಹಿತ್ಯದ ಓದು ಅಧ್ಯಯನ ಉಸಿರಾಗಿತ್ತು. ಆದರೆ ವಿವಾಹದ ನಂತರ ನನ್ನ ಗಂಡ ಮತ್ತು ಅವನ ಮನೆಯವರಿಗೆ ನಾನು ಬರೆಯುವುದು ಕೊಂಚವೂ ಇಷ್ಟವಿಲ್ಲ. ನಿನಗೆ ಮನೆ ಗಂಡ ಮಕ್ಕಳು ಸಂಸಾರ ಬೇಕಾ? ಕಥೆ,ಕವನ ಬರೆಯುವುದು ಬೇಕಾ? ನಿರ್ಧಾರ ಮಾಡು, ನಿನ್ನಿಂದಾಗಿ ಸಮಾಜದಲ್ಲಿ ನಮ್ಮ ಮರ್ಯಾದೆ ಹೋಗುತ್ತದೆ” ಎಂದರು. ಆದರೆ ಬರಹವಿಲ್ಲದೆ ನನಗೆ ಬದುಕೇ ಇಲ್ಲ ಎನಿಸುತ್ತದೆ. ಅದಕ್ಕಾಗಿ ನನ್ನ ಗಂಡನನ್ನು ಕಾಡಿಬೇಡಿ ಗಂಡಿನ ಹೆಸರಿನಲ್ಲಿ ಫೇಸ್ಬುಕ್ ಐಡಿ ಮಾಡಿಕೊಂಡು ಬರೆಯುತ್ತಿರುವೆ ಎಂದಾಗ ಎಲ್ಲಿಗೆ ಬಂತು ಮಹಿಳಾ ಸ್ವಾತಂತ್ರ್ಯ ಎಂದು ಚಿಂತಿಸಲೇ ಬೇಕು ಎನಿಸಿತು. ಗಂಡು ಬರೆಯುವ ಪ್ರೀತಿ-ಪ್ರೇಮ ವಿರಹವನ್ನ ಒಪ್ಪಿಕೊಳ್ಳುವ ಈ ಸಮಾಜ ಹೆಣ್ಣು ಬರೆದರೆ ತಿರಸ್ಕಾರದಿಂದ ಅನುಮಾನ ದೃಷ್ಟಿ ಯಿಂದ ನೋಡುವುದು ವಿಪರ್ಯಾಸವೇ ಸರಿ.

ಹೆಣ್ಣೆಂದರೆ ನೀವು ಬರೆದ ನಾಟಕಗಳಿಗೆ ಬಣ್ಣ ಹಚ್ಚಿ, ಹೇಳಿಕೊಟ್ಟ ಮಾತನ್ನು ಉರು ಹೊಡೆದು ರಂಗವೇರಲು ಸಾಲುಗಟ್ಟಿ ನಿಂತವರಲ್ಲ ಎಂಬ ಕವಿತೆಯ ಸಾಲುಗಳು ನಾಟಕಕ್ಕೆ ಮಾತ್ರ ಸೀಮಿತ ವಾಗಿಲ್ಲ. ಬದುಕೆಂಬ ರಂಗಶಾಲೆಗೆ ಸಂಬಂಧಿಸಿದೆ. ಅವಳ ಅವಕಾಶವನ್ನು ಇವರು ಕಸಿದುಕೊಂಡು ಹೆಸರಿಗೆ ಮಾತ್ರ ಅವಳನ್ನು ಅಂಟಿಸುವುದಕ್ಕೆ ಕವಯಿತ್ರಿ ಪ್ರತಿರೋಧ ತೋರುತ್ತಾರೆ. ಈ ಸಾಲುಗಳು ಮಹಿಳಾ ಸ್ವಾತಂತ್ರ್ಯ ಹರಣವನ್ನು ತೆರೆದಿಡುತ್ತವೆ. ರಾಜಕೀಯವಾಗಿ ಬಂದಾಗ ಹೆಣ್ಣಿಗೆ ತನ್ನ ಅಧಿಕಾರ ಚಲಾಯಿಸುವ ಹಕ್ಕು ಅನುಭವಿ ಸುವ ಸಾಮರ್ಥ್ಯವಿದ್ದಾಗ್ಯೂ ಅವಳ ಹೆಸರಿನಲ್ಲಿ ಗಂಡನೋ, ಅಪ್ಪನೋ, ಮಾವನೋ ಎಲ್ಲವನ್ನು ಅನುಭವಿಸುವ ಪರಿಗೆ ರೋಸಿ ಹೋದ ಕವಯಿತ್ರಿ ಪ್ರಜ್ಞಾಪೂರ್ವಕವಾಗಿ ಪ್ರತಿಭಟಿಸುತ್ತಾರೆ.

ಶತಮಾನಗಳಿಂದ ಇವಳನ್ನು ತುಳಿದು ತನ್ನ ಆಧೀನದಲ್ಲಿ ಇಟ್ಟುಕೊಂಡು ನಿಯಂತ್ರಿಸುವ ಗಂಡಾಡಳಿತವನ್ನು ಈ ಮೇಲಿನಂತೆ ವ್ಯಂಗ್ಯವಾಗಿ ಮಾರ್ಮಿಕವಾದ ದಾಟಿಯಲ್ಲಿ ವಿಡಂಬಿಸಿದ್ದಾರೆ. ಈ ಹಿಂದೆ ಆರ್ಥಿಕವಾಗಿ ಹೆಣ್ಣಿಗೆ ಅಷ್ಟೇನೂ ಸ್ವಾತಂತ್ರ್ಯವಿರಲಿಲ್ಲ.ಅವಳು ದುಡಿಯದಿರುವುದೇ ಇದಕ್ಕೆ ಕಾರಣವಿರಬಹುದು. ಸಂಬಳವಿಲ್ಲದೆ ನಿತ್ಯ ದುಡಿಯುವ ಅವಳ ಬೆವರು ಇವರಿಗೆ ಕಾಣದಷ್ಟು ಕಣ್ಣಿಗೆ ಪೊರೆ ಬಂದಿತ್ತು. ಆದರಿಂದು ಹೆಣ್ಣು ಕೂಡ ಗಂಡಿಗೆ ಸಮಾನಾಗಿ ದುಡಿಯುತ್ತಿದ್ದಾಳೆ. ಆರ್ಥಿಕ ವಿಚಾರಗಳಲ್ಲಿ ಸ್ವಯಂ ನಿರ್ಧಾರ ತೆಗೆದುಕೊಳ್ಳು ವಷ್ಟು ಪ್ರಭುದ್ಧಳಾಗಿದ್ದಾಳೆ. ಸಾಮಾಜಿಕವಾಗಿ ನೋಡಿದಾಗ ಮುಟ್ಟಾದ ಹೆಣ್ಣನ್ನು ಮನೆಯೊಳಗೆ ಬರಬೇಡ ಎಂದು ನಿಯಂತ್ರಿಸುತ್ತಿದ್ದರು. ಯಾವ ಸಂತೋಷವನ್ನು ಅನುಭವಿಸುವ ಸ್ವಾತಂತ್ರ್ಯ ಅವಳಿಗೆ ಇರಲಿಲ್ಲ. ಹೊರಗೆ ಹೋಗಿ ದುಡಿಯು ವಂತೆ ಇರಲಿಲ್ಲ. ನಾಲ್ಕು ಗೋಡೆಗಳ ನಡುವೆ ಜೈಲು ಪಕ್ಷಿಯಾಗಿ ತನ್ನವರಿಗಾಗಿ ಶ್ರಮಿಸುತ್ತಿರ ಬೇಕಿತ್ತು. ಆದರಿಂದ ಮೇಲಿನ ಸಾಲುಗಳು ಉದಿಸಿದವು ಎನ್ನಬಹುದು.

ಈ ಕವಿತೆಯಲ್ಲಿ ಕಮಲ ಅವರು ಹೆಣ್ಣು ಮಕ್ಕಳ ಮಾತು, ನಗು, ಸ್ನೇಹಿತರ ಆಯ್ಕೆ ಎಲ್ಲವೂ ಗಂಡಂದಿರ ಮತ್ತು ಹಿರಿಯರ ಅಣತಿಯಂತೆ ಇರಬೇಕು ಏಕೆ? ಎಂದು ಪ್ರಶ್ನಿಸುತ್ತಾರೆ. ಹೆಣ್ಣು ಗಟ್ಟಿಯಾಗಿ ಮಾತನಾಡುವಂತಿಲ್ಲ, ಗಹಗಹಿಸಿ ನಗುವಂತಿಲ್ಲ ಎನ್ನುತ್ತಾ ಅವಳ ನಡೆ ನುಡಿಗಳನ್ನು ನಿಯಂತ್ರಿಸುವುದನ್ನು ಬಿಡಿ ಎನ್ನುತ್ತಾರೆ. ಗಂಡು ಮಗುವಿಗೆ ಇರುವ ಪ್ರಾಧಾನ್ಯತೆ ಹೆಣ್ಣಿಗೆ ಏಕೆ ಇಲ್ಲ? ಎಲ್ಲಾ ನಿರ್ಬಂಧ ಇವಳಿಗೆ ಮಾತ್ರ ಏಕೆ? ಎಂದು ಸಮಾಜವನ್ನು ಟೀಕಿಸುತ್ತಾರೆ. ಭಾವಚಿತ್ರಕ್ಕೆ ಪೋಸು ಕೊಡಲು ನಿಮ್ಮ ಅಪ್ಪಣೆ ನಮಗೆ ಬೇಕಿಲ್ಲ ನಾವು ಹೀಗೆ ಇರಬೇಕೆಂದು ತಾನು ನಡೆಸುವ ಹುನ್ನಾರ ಮಾಡದಂತೆ ನಮ್ಮ ಸ್ವಂತಿಕೆಯಲ್ಲಿ ಬದುಕಲು ನಮ್ಮನ್ನು ಬಿಡಿ. ನೀವು ನಮ್ಮನ್ನು ನಿರ್ದೇಶಿಸಬೇಡಿ ಎನ್ನುವ ಪದ ನಿಮ್ಮ ಅಭಿಪ್ರಾಯಗಳನ್ನು,ಅನಿಸಿಕೆಗಳನ್ನು,ತತ್ವಸಿದ್ಧಾಂತ ಗಳನ್ನು, ಉದ್ದೇಶಗಳನ್ನು, ಬಲವಂತವಾಗಿ ಹೆಣ್ಣು ಮಕ್ಕಳ ಮೇಲೆ ಹೇರಬೇಡಿ ಎಂಬ ಅರ್ಥವನ್ನು ಹೊಂದಿದೆ. ಪ್ರತಿ ವಿಷಯದಲ್ಲೂ ನಮ್ಮನ್ನು ನಿರ್ದೇಶಿಸಲು ನಾವೇನು ಹೆಜ್ಜೆ ಇಡುತ್ತಿರುವ ಕಂದಮ್ಮಗಳಲ್ಲ ಎನ್ನುವ ಕಮಲ ಅವರು ಹೆಣ್ಣಿನ ಧೈರ್ಯ,ಸಾಹಸವನ್ನು ತೆರೆದಿರುತ್ತಾರೆ. ಹೌದು ಚಿಂತಿಸಿ ನೋಡಿ, ತನ್ನ ಮಕ್ಕಳಿಗೆ ಸರಿಯಾದ ಬಾಳ ದಾರಿಯಲ್ಲಿ ಹೆಜ್ಜೆಇಡಲು ಕಲಿಸು ವಲ್ಲಿ ಇವಳೆ ಮಾರ್ಗದರ್ಶಕಿಯಾಗಿರುವಾಗ ಇವಳಿಗೆ ಬೇರೆಯವರ ಅಗತ್ಯವಿದೆಯೇ ಎನ್ನುತ್ತಾರೆ.

ಇನ್ನು ಮುಂದೆ ಹೋಗಿ ಹೆಣ್ಣು ಬದುಕಿನಲ್ಲಿ ಏನೆಲ್ಲಾ ಏಳು-ಬೀಳುಗಳನ್ನು ಕಂಡರೂ, ಸಿಹಿ ಕಹಿಗಳನ್ನು ಉಂಡರೂ ಧೃತಿಗೆಡದೆ ಅವೆಲ್ಲವನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡಿರುವ ಬಗ್ಗೆ ಹೆಮ್ಮೆಪಡುತ್ತಾರೆ. ಹಿಂದೆ ಹೆಣ್ಣು ಮಕ್ಕಳಿಗೆ ದೈಹಿಕ ಕೆಲಸಗಳನ್ನ ಸೀಮಿತಗೊಳಿಸಿ ಬಹುಮುಖ್ಯವಾಗಿ ಅಡುಗೆ ಕೋಣೆಯೊಳಗೆ ಬಂಧಿಸುತ್ತಿದ್ದರು. ಹೊರಗಿದ್ದ ಜಗತ್ತಿನ ಪರಿವೇ ಇಲ್ಲದಂತೆ ಹೆಣ್ಣು ಬೆಳೆಯು ತ್ತಿದ್ದಳು. ಹಾಗಾಗಿ ಅವಳಿಗೆ ಲೋಕ- ಜ್ಞಾನದ ಕೊರತೆ ಕಾಣುತ್ತಿತ್ತು. ಹೊತ್ತೊತ್ತಿಗೆ ಗಂಡ ಮಕ್ಕಳ ಹಸಿದೊಡಲ ತುಂಬಿಸುವಲ್ಲಿ ಅವಳ ಮನದ ಭಾವನೆಗಳೆಲ್ಲಿ ಬೆಂಕಿಯಲ್ಲಿ ಬೆಂದು ಮುರುಟಿ ಹೋಗುತ್ತಿದ್ದೆವು. ಇದನ್ನೇ ಕಮಲ ಅವರು ಮನದ ಮಾತುಗಳ ಡಬ್ಬಿ ಗಳಲ್ಲಿ ಎಂದು ಉದ್ಘರಿಸಿದ್ದಾರೆ. ಆದರಿಂದ ಹೆಣ್ಣು ಮಕ್ಕಳು ಮೌನ ಮುರಿದು ತನ್ನ ಹಕ್ಕಿಗಾಗಿ, ತನ್ನ ಆಸೆ ಆಕಾಂಕ್ಷೆ ಕನಸುಗಳಿಗಾಗಿ ಹೋರಾಡುತ್ತಿದ್ದಾರೆ. ಇಲ್ಲಿ ಸ್ತ್ರೀಯರ ಜೀವನ ಶೈಲಿಯಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆ ಗಳನ್ನು ಗುರುತಿಸಬಹುದು.

ಹೆಣ್ಣು ಅಬಲೆ, ಅಸಹಾಯಕಳು, ಅಧೀರಳೆಂದು ಹಂಗಿಸುವ ಜನತೆಗೆ ಕವಯಿತ್ರಿ ಹೆಣ್ಣಿಗೆ ನೊಂದಾಗ ಸಾಂತ್ವನದ ಮಡಿಲಾಗುವ ತಾಯ್ತನ, ಸೋತಾಗ ಗೆಲುವು ಸಾಧಿಸಲು ಆತ್ಮಸ್ಥೈರ್ಯ ತುಂಬುವ ಶಕ್ತಿ ಇರುವಾಗ ನೀವದನ್ನು ಗೌರವಿಸುವುದಿಲ್ಲವೇಕೆ? ಅವಳು ಸ್ವತಂತ್ರವಾಗಿ ಎಲ್ಲವನ್ನು ನಿಭಾಯಿಸಲು ಸಶಕ್ತಳಾಗಿದ್ದಾಳೆ. ಅವಳನ್ನು ಏಕಾಂಗಿಯಾಗಿ ಗುರುತಿಸಿಕೊಳ್ಳಲು ಬಿಡದೆ ಗುಂಪಿನಲ್ಲಿ ಬಂಧಿಸುವಿರೇಕೆ? ಎಂದು ಕೋಪ ತೋರುತ್ತಾರೆ.

ಕವಿತೆಯ ಕೊನೆಯ ಸಾಲು ವಿಶೇಷವಾಗಿ ಗಮನ ಸೆಳೆಯುತ್ತದೆ:
“ಹಾಗೇ ನೋಡಿದರೇ ನೀವೆಂದೂ ನಮ್ಮೊಂದಿಗೆ ಇರಲೇ ಇಲ್ಲ”.
ಇಲ್ಲಿ ಹೆಣ್ಣಿನ ಮೇಲಿನ ಶೋಷಣೆ, ದೌರ್ಜನ್ಯ, ದಬ್ಬಾಳಿಕೆ ಗಳಲ್ಲಿ ಪಾಲುದಾರರಾಗಿ ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಹೆಣ್ಣುಮಕ್ಕಳ ನೋವಿಗೆ ಕಾರಣ ಗಂಡು ಮಕ್ಕಳಿಗೆ ಆಗಿದ್ದೀರಿ. ಹೆಣ್ಣಿನ ಕಷ್ಟಕ್ಕೆ ಸ್ಪಂದಿಸದ ನಿಮಗೆ ಅವಳಿಗೆ ಬುದ್ಧಿ ಹೇಳುವ ಅಥವಾ ನಿರ್ದೇಶಿಸುವ,ನಿಯಂತ್ರಿಸುವ ಅಧಿಕಾರ ಇಲ್ಲ ಎಂದು ಕಟುವಾಗಿ ಟೀಕಿಸುವ ಮೂಲಕ ಹೆಣ್ಣಿನ ಪರವಾಗಿ ವಾದಿಸುತ್ತಾರೆ. ಅವಳ ಬಗ್ಗೆ ಕಾಳಜಿ,ಪ್ರೀತಿ ತೋರುತ್ತಾರೆ.

ಒಟ್ಟಿನಲ್ಲಿ ಕಮಲ ಅವರು ಹೆಣ್ಣೆಗೆ ಸ್ವಯಂ ನಿರ್ಧಾರಗಳನ್ನು ತೆಗೆದುಕೊಂಡು ತಾನು ಬಯಸಿ ದಂತೆ ಬದುಕಲು ಕರೆ ಕೊಡುತ್ತಾರೆ. ಇವರ ಈ ಕವಿತೆ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ ಅವರ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರಲಿ ಎಂದು ಆಶಿಸುತ್ತದೆ.
✍️ಅನುಸೂಯ ಯತೀಶ್
