ರಾಜ್ಯದಲ್ಲಿ ಇತಿಹಾಸದ ಕೊಂಡಿಯಾಗಿ ಹಲವು ದೇವಾಲಯಗಳು ನಿರ್ಮಾಣವಾದಂತೆ ಜಾನಪದ ಕೊಂಡಿಯನ್ನು ಹೊತ್ತ ಹಲವು ದೇವಾಲಯಗಳು ಇದೆ. ಈ ಎರಡರ ಸಮ್ಮಿಶ್ರಣದಂತೆ ಇರುವ ನಾಡಿನ ಪ್ರಸಿದ್ದ ಶಕ್ತಿ ಸ್ಥಳವೆಂದೇ ಗುರುತಿಸಿಕೊಂಡ ಕ್ಷೇತ್ರವೆಂದರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ರೇಣುಕಾ ಎಲ್ಲಮ್ಮ ದೇವಾಲಯ.
ಇತಿಹಾಸ ಪುಟದಲ್ಲಿ ಸುಮಾರು 10 ಶಾಸನಗಳು ಇಲ್ಲಿ ಸಿಕ್ಕಿದ್ದು ರಾಷ್ಟ್ರಕೂಟರ ಕಾಲದಿಂದಲೇ ಇದು ಗುರುತಿಸಿಕೊಂಡಿತ್ತು. ಕ್ರಿ.ಶ.980 ರಿಂದ 1229 ರ ವರೆಗೂ ಶಾಸನಗಳು ಇದ್ದು, ಕ್ರಿ.ಶ.1730 ರಲ್ಲಿ ಸವಣೂರಿನ ನವಾಬ ನವಲಗುಂದದ ದೇಸಾಯಿ ಮನೆತನಕ್ಕೆ ಹಲವು ಗ್ರಾಮಗಳನ್ನು ದತ್ತಿ ನೀಡಿದ ಉಲ್ಲೇಖವಿದೆ. ಕ್ರಿ.ಶ.1734 ರಲ್ಲಿ ಇಲ್ಲಿ ದೇಸಾಯಿ ಅವರು ಕೋಟೆ ನಿರ್ಮಿಸಿದ ಉಲ್ಲೇಖ ನೋಡ ಬಹುದು. ರಟ್ಟ ವಂಶದ ರಾಜಧಾನಿಯಾಗಿಯೂ ಗುರುತಿಸಿಕೊಂಡಿತ್ತು.
ಸ್ಥಳ ಪುರಾಣದ ಪ್ರಕಾರ ನೀರನ್ನು ತರಲು ತಡ ಮಾಡಿ ಬಂದ ರೇಣುಕಾಳ ಮೇಲೆ ಕೋಪಗೊಂಡ ಜಮದಗ್ನಿ ತೊನ್ನು ಬರುವಂತೆ ಶಪಿಸುತ್ತಾನೆ. ಇದರ ಶಾಪ ವಿಮೋಚನೆಗೆ ಸವದತ್ತಿಯ ಬಳಿ ಈಗಿನ ಎಲ್ಲಮ್ಮನ ಗುಡ್ಡಕ್ಕೆ ಬಂದಾಗ ಇಲ್ಲಿ ನೆಲೆಸಿದ್ದ ಎಕ್ಕಯ್ಯ ಮತ್ತು ಸಿದ್ದಯ್ಯ ಎಂಬ ಸಿದ್ದ ಯೋಗಿಗಳು ಜೋಗಳ ಬಾವಿಯ ನೀರಿನಲ್ಲಿ ಅರಿಶಿನ ತೇಯ್ದ ಲೇಪಿಸಿದ ಕಾರಣ ಅವಳ ಶಾಪ ವಿಮೋಚನೆಯಾ ಯಿತು ಎಂಬ ನಂಬಿಕೆ ಇದೆ. ಇಲ್ಲಿಯೇ ಎಲ್ಲಮ್ಮನಾಗಿ ನೆಲೆಸಿದಳು ಎಂಬ ನಂಬಿಕೆ ಇದೆ. ಹಾಗಾಗಿ ಈ ಗುಡ್ಡಕ್ಕೆ ಎಲ್ಲಮ್ಮನ ಗುಡ್ಡ ಎನ್ನುವ ರೂಢಿ ಇದೆ.

ರಾಷ್ಟ್ರಕೂಟರ ಕಾಲದಲ್ಲಿ ಸುಮಾರು ಒಂಬತ್ತನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ನಂತರ ಕಾಲದಲ್ಲಿ ವಿಸ್ತರಣೆಗೊಂಡಿದೆ. ಗರ್ಭಗುಡಿ ಯಲ್ಲಿ ಎಲ್ಲಮ್ಮನ ಸುಂದರವಾದ ಶಿಲ್ಪವಿದೆ. ಕ್ರಿ.ಶ. 1514 ರಲ್ಲಿ ರಾಯಭಾಗದ ಬೊಮ್ಮಪ್ಪ ನಾಯಕ ಈ ದೇವಾಲಯವನ್ನು ನಿರ್ಮಿಸಿದ ಉಲ್ಲೇಖವಿದೆ. ದೇವಾಲಯಕ್ಕೆ ಡ್ರಾವಿಡ ಶೈಲಿಯ ಶಿಖರವಿದೆ. ದೇವಾಲಯದ ಆವರಣದಲ್ಲಿ ಗಣಪತಿ, ಪರಶು ರಾಮ, ಮಲ್ಲಿಕಾರ್ಜುನ, ಏಕನಾಥ ಮತ್ತು ಸಿದ್ದೇಶ್ವರ ಸ್ವಾಮಿಯ ದೇವಾಲಯಗಳನ್ನು ನೋಡಬಹುದು.

ಮುತ್ತೈದೆ ಹುಣ್ಣಿಮೆಯಲ್ಲಿ ಇಲ್ಲಿ ವಿಶೇಷ ಪೂಜೆ ಗಳು ನಡೆಯಲಿದ್ದು, ಭರತ ಹುಣ್ಣಿಮೆ ಯಲ್ಲಿ ಸವದತ್ತಿ ಜಾತ್ರೆ ನಡೆಯಲ್ಲಿದ್ದು ಉತ್ತರ ಕರ್ನಾಟಕ ದಲ್ಲಿ ನಡೆಯುವ ಅತೀ ದೊಡ್ಡ ಜಾತ್ರೆಯಲ್ಲಿ ಒಂದು. ಲಕ್ಷಕ್ಕೂ ಅಧಿಕ ಮಂದಿ ಸೇರುವ ಉದೋ ಉದೋ ಎಂದು ಕೂಗುತ್ತ ಸಾಗುವ ಜೋಗಿಗಳು ಜೋಗತಿಯರನ್ನು ನೋಡಬಹುದು. ಇಲ್ಲಿ ನವಿಲು ತೀರ್ಥ ಆಣೆಕಟ್ಟಿನಿಂದ ರೇಣುಕಾ ಸಾಗರವಿದ್ದು ಎಲ್ಲಮ್ಮನಿಗ ಶಾಪ ವಿಮೋಚನೆ ಯಾದ ಜೋಗುಳ ಬಾವಿ ಇದೆ. ಇಲ್ಲಿ ಸ್ನಾನ ಮಾಡಿ ಎಲ್ಲಮ್ಮನ ದರ್ಶನ ಮಾಡುವ ಪದ್ದತಿ ಭಕ್ತರಲ್ಲಿದೆ.
ಮುಂಚೆ ಅಸ್ತಿದ್ವದಲ್ಲಿ ಇದ್ದ ದೇವದಾಸಿ ಪದ್ದತಿ ಯನ್ನು ಈಗ ಸರ್ಕಾರ ರದ್ದು ಮಾಡಿದೆ. ಎಲ್ಲಮ್ಮ ನನ್ನು ಫಲವತ್ತತೆಯ ದೇವತೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.ದೇವಿಯನ್ನು ಏಳು ತಾಯಂದಿರಲ್ಲಿ ಒಬ್ಬಳು ಎನ್ನಲಾಗಿದೆ
ಪುರದೇಶ್ವರ ದೇವಾಲಯ
ಇಲ್ಲಿನ ಪುರಾತನ ದೇವಾಲಯವಾದ ಇದು ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಾಣ. ತ್ರಿಕುಟಾಚಲ ದೇವಾಲಯವಿದ್ದು, ಇದು ಮೂರು ಅರ್ಧಮಂಟಪ ಗಳು ಮತ್ತು ಒಂದೇ ನವರಂಗ ಹಾಗೂ ಎರಡು ಮುಖಮಂಟಪವನ್ನು ಹೊಂದಿದೆ. ಮೂರು ಗರ್ಭಗುಡಿಯಲ್ಲೂ ಶಿವಲಿಂಗವಿದೆ. ನವರಂಗದ ಕಂಭಗಳಲ್ಲಿ ಚಾಲುಕ್ಯರ ಶೈಲಿಯ ಕಂಭಗಳಿದ್ದು, ಕದಂಬ ನಾಗರ ಶೈಲಿಯ ಶಿಖರವಿದೆ.
ತಲುಪುವ ಬಗ್ಗೆ : ಈ ದೇವಾಲಯ ಬೆಳಗಾವಿ ಜಿಲ್ಲೆಯ ಸವದತ್ತಿಯಿಂದ ಸುಮಾರು 6 ಕಿ.ಮೀ, ಧಾರವಾಡದಿಂದ ಸುಮಾರು 41 ಕಿ.ಮೀ ದೂರ ದಲ್ಲಿದೆ. ಪ್ರಸಿದ್ದ ಹೂಲಿಯಿಂದ ಕೇವಲ 12 ಕಿ.ಮೀ ದೂರದಲ್ಲಿ ಇದೆ.
✍️ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು
