ಬೇವಂತ ಮೋರೆಯಲ್ಲು
ಬೆಲ್ಲದಂತ ನಗೆಯಿದ್ರೆ..
ಅಂದ ಕಂಗಳಿಗೆ ಆನಂದ.
ಇದು ಯುಗಾದಿ ಸೌಂದರ್ಯ.!

ಕಹಿಯಂಥ ಸಂಕಷ್ಟದಲ್ಲು
ಸಿಹಿಯಂಥ ನುಡಿಯಿದ್ರೆ..
ಚೆಂದ ನಿಜ ಕರ್ಣಾನಂದ
ಇದು ಯುಗಾದಿ ಮಾಧುರ್ಯ.!

ಬೆಂಕಿಯಂಥ ಬದುಕಿನಲ್ಲು
ಬೆಳದಿಂಗಳಂಥ ನಡೆಯಿದ್ರೆ
ಗಂಧ ಬಾಳು ಶ್ರೀಗಂಧ
ಇದು ಯುಗಾದಿ ಆಂತರ್ಯ.!

ಕೆಡುಕಿನಂಥ ಕಡೆಯಲ್ಲು
ಕ್ಷಮಿಸುವಂಥ ಗುಣವಿದ್ರೆ
ನಂದ ಹೃನ್ಮನ ಪರಮಾನಂದ
ಇದು ಯುಗಾದಿ ಔದಾರ್ಯ.!

ಬೇವನ್ನು ಬೆಲ್ಲದಲ್ಲಿ ಮೆದ್ದು
ಕಷ್ಟಗಳ ನಗುನಗುತ ಗೆದ್ದು
ಲೋಕ ಬೆಳಗುವ ಆಮೋದ
ಇದು ಯುಗಾದಿ ಚಾತುರ್ಯ.!

ಯುಗಯುಗದಿಂದ ಜಗದಿ
ಸಾಕ್ಷಿಕರಿಸುತಿಹುದು ಯುಗಾದಿ
ಜೀವಜೀವನಗಳ ಸತ್ವ ಸಂಪದ
ಇದು ಸತ್ಯ ತತ್ವಗಳ ತಾತ್ಪರ್ಯ.!

ವಸಂತ ಸಂತಸ ಸಂಭ್ರಮದಿ
ವರ್ಷದಾರಂಭದ ಪಾರುಪತ್ಯ
ಬದುಕಿನ ಮೌಲ್ಯಗಳ ಸಾರಥ್ಯ
ಹೊತ್ತು ನಿಂತ ಓ ಯುಗಾದಿ
ನಿನದೆಂತಹ ರಾಜ ಗಾಂಭೀರ್ಯ.!

ಎ.ಎನ್.ರಮೇಶ್.ಗುಬ್ಬಿ.