ಎಷ್ಟೊಂದು ದಿನಗಳಾಯ್ತು
ಮಾರಾಯ,
ನಿನ್ನ ಕೊರಳ ಇನಿ ದನಿಯ
ಕೇಳಿ,ಯಾರು ಒತ್ತಿ ಹಿಡಿದಿದ್ದರೊ
ಏನೋ?
ಯಾವ ರವಿಯು,ಯಾವ ಕವಿಯು
ನಿನಗೆ ಹೇಳಿ ಕಳುಹಿಸಿದ?.
ಮಾವಿನ ಚಿಗುರು,ಬೇವಿನ ಹೂ ಅರಳಿರುವುದು
ಯಾರು ಓಲೆ ಬರೆದು ತಿಳಿಸಿದರು.
ಕಪ್ಪು ಕಾಗೆ ಅಮ್ಮನ ಮಡಿಲಲ್ಲಿ ಬೆಳೆದು
ಕಾಂವ್ ಕಾಂವ್ ಎಂದು ಚೀರದೆ,
ಯಾರ ಬಳಿ ತರಬೇತಿಯ ಪಡೆದು ಬಂದು
ಕುಹು ಕುಹು ಎಂದು ಉಲಿಯತಲಿರುವೆ?.
ಅಪ್ಪ ಅಮ್ಮ, ಬಂಧು ಬಳಗ ಎಲ್ಲರಿಂದಲೂ
ದೂರವಿದ್ದು,ಸಂತೆಯ ಮಾಡುವವರ ನಡುವೆ
ಸುಮ್ಮನಿದ್ದು,ಯಾರನ್ನೋ ಅಮ್ಮನೆಂದು ತಬ್ಬಿರುವಾಗ,
ಒಮ್ಮೆಲೆ ಛೀ ನಡಿ ಎಂದು ಹೊರ ದಬ್ಬಿದಾಗ,
ನೀ ದುಃಖವಾದರೂ ತಡೆದಿದ್ದು ಹೇಗೆ ,ಹೇಳಿ ಹೋಗು.
ಕೊರಳಲಿ, ಕೊಳಲ ತುಂಬಿಸಿಕೊಂಡಿದ್ದರೂ
ರಾಗವ ಮರೆತ ಸನ್ಯಾಸಿಯಂತೆ,ಎಲ್ಲೆಲ್ಲೋ
ಅಲೆದು ,ಅನಾಥ ಮಗುವಂತೆ ಒಬ್ಬನೇ
ಮಲಗೆದ್ದು ಮಾವಿನ ಗಿಡವ ಹುಡುಕಿ ಬಂದ
ನೀನು,ಸಂತನೆ ಇರಬೇಕು.
ಏಕೆಂದರೆ,ಕಪ್ಪೆಗಳೆ ತುಂಬಿರುವ
ಈ ಪ್ರಪಂಚದಲ್ಲಿ
ಸುಮ್ಮನಿರುವುದು,ಒಂದು ತಪಸ್ಸಲ್ಲದೆ
ಮತ್ತಿನೇನು?
ವರ್ಷಕ್ಕೊಮ್ಮೆ ಮಾತ್ರ ಕಾಣುವ ನೀನು
ಭಗ್ನ ಪ್ರೇಮಿಯೆ ಇರಬೇಕು.
ಎಷ್ಟೊಂದು ದಿವಸ ಒಬ್ಬನೇ
ಎಲ್ಲೋ ಕುಳಿತು
ಏನನ್ನೋ ಧ್ಯಾನಿಸುವೆ,
ಯಾರಿಗಾಗಿಯೋ
ಕಾತರಿಸುವೆ.
ಯುಗಾದಿಯ ವಸಂತನೊಂದಿಗೆ
ಕರಾರುವಕ್ಕಾಗಿ ಬರುವ ನೀನು
ಓದಿದ ವಿಜ್ಞಾನ ಯಾವ ಕಾಲೇಜಿನದ್ದು?
ಒಬ್ಬನೇ ಇರಬೇಡ ಮಾರಾಯ,
ಜಗಕೆ ಮರೆವು ಜಾಸ್ತಿ,
ಕೂಗುವುದಾ ಮರೆಯ ಬೇಡ,
ಮತ್ತೆ! ನೀನೂ ಅವಳು
ಗೂಡು ಕಟ್ಟುವುದಾ
ಮರೆಯಬೇಡಿ, ನಿನ್ನ
ಮರಿಗಳನ್ನು ತೊರೆಯಬೇಡಿ.
ಯುಗದ ಆದಿ,
ಜಗದ ಆದಿ,
ಯುಗಾಂತರದ ಆದಿ,
ನಿಮಗೂ ಆಗಲಿ ಮಾದರಿ,
ನೀ ಗೂಡು ಕಟ್ಟುವಂತಾಗಲಿ,
ನಿಮ್ಮ ಮರಿಗಳು ತಬ್ಬಲಿಯಾಗದಿರಲಿ,
ನಿಮ್ಮಗಳ ಕಂಠ ಸದಾ
ಮಾವಿನ ಸಿಹಿಯಿಂದಲೇ
ತುಂಬಿರುವಂತಾಗಲಿ.
ನೀವು ಸದಾ
ಮತ್ತೆ ಮತ್ತೆ! ಹಾಡುವಂತಾಗಲಿ.

✍️ಜ್ಯೋತಿ ಕುಮಾರ್.ಎಂ(ಜೆ.ಕೆ.)
ಶಿಕ್ಷಕರು,ಡಾವಣಗೆರೆ
