ಉರುಳುತಿದೆ ಕಾಲಚಕ್ರ
ದಿನಮಾನದ ರೇಖಾ ಚಿತ್ರ
ಸದ್ದಿಲ್ಲದೆ ದೂಡುತಿದೆ
ತಿರುವುಗಳ ನಡುವೆ.

ಹೊಸ ಬಯಕೆ ಹೊತ್ತು
ಭರವಸೆಯ ಕಿರಣ ಸೂಸಿ
ಎಗ್ಗಿಲ್ಲದೆ ಸಾಗಿದೆ
ಹಮ್ಮು ಬಿಮ್ಮಿಗಿಲ್ಲದ ಗೊಡವೆ.

ನಾವು ಮಾವು ನಾವು ಬೇವು
ನೋವು ನಲಿವು ನಮ್ಮವು
ಹಸಿರು ಕೊಸರು ಜೊತೆಯಲಿ
ಹೂವು ಕಾಯಿ ಹಣ್ಣು ಬೆರೆಯಲಿ.

ಬಿಸಿಲ ತಾಪ ತಣಿಯಲು
ಮಳೆಯ ಕೋಪ ಸರಿಸಲು
ಇಳೆಯ ಬಸಿರು ತುಂಬಿಸಿ
ಕಳೆಯ ತರಲು ಧಾವಿಸಿ.

ಚಿಗುರೆಲೆ ಔತಣಕೆ
ಬಾಯಾರಿದ ನೆಲಕೆ ನೀರುಣಿಸಿ
ಚೈತ್ರಾಗಮನದ ನೀರಿಕ್ಷೆಯಲಿ
ಮಾರಿಕೋಗಿಲೆಯ ಇಂಪಿನ ಉಲಿಯಲಿ.

ದ್ವೇಷ ಪ್ರೀತಿ ಸಮರಸ ಸಾರಲು
ಮತ್ತೆ ಬಂದಿತು ಯುಗಾದಿ
ಹಳೆ ಬೇರಿಗೆ ನವ ಚೈತನ್ಯ
ಕಳೆಗುಂದಿದ ಮನಕೆ ಸೌಜನ್ಯ.

✍️ರೇಷ್ಮಾ ಕಂದಕೂರ
ಶಿಕ್ಷಕಿ,ಸಿಂಧನೂರು