ಬದುಕಿನ ಬಣ್ಣಗಳನೆಲ್ಲ ಬೆರೆಸಿ
ಬರೆದ ಚಿತ್ತಾರದಲಿ
ಹೂವರಳಿ ನಗುತಿರಲಿ
ಭಾವದಾಸರೆಗೆ ದುಂಬಿಯಿರಲಿ..

ಮಿದು ಪಕಳೆ ಎಳೆ ಮನಸು
ಸೊಗಸು ಸಾಂಗತ್ಯ!
ಮೌನಕೂ ಮಾತಿಗೂ
ಇರಲಿ ‘ಜೊತೆ’ ಯೊಂದು ನಿತ್ಯ…

ಉರಿವ ಸೂರ್ಯನ ತಾಪದಲೂ
ಝರಿಯೊಂದು ಹರಿದಂತೆ
ಹೂವಿನ ಹಾಡಿಗೆ
ಝೇಂಕಾರ ಶ್ರುತಿಗೊಂಡಂತೆ!

ಯುಗಯುಗಾದಿ ಕಳೆದರೂ
ಯುಗಾದಿ ಮರಮರಳಿ ಬಂದಂತೆ
ಆತ್ಮಗಳು ಪಲ್ಲವಿಸಿ
ಭಾವಗಳು ಬೆರೆತಂತೆ..

ಒಲವ ಹಾದಿಯ ಮೇಲೆ
ಮತ್ತೆ ಚಿಮ್ಮಿದೆ ಬೆಳಕು!
ಕನಸೊಂದೇ ಆಗಿರಲು
ಇನ್ನೆಲ್ಲಿಯದು ಅಳುಕು..

ಹೂವಿನೊಂದಿಗೆ ದುಂಬಿ
ಬೆಲ್ಲದೊಂದಿಗೆ ಬೇವು!
ಮೈತ್ರಿ ಮಧುವನು ತುಂಬಿ
ಬೆರೆತು ಬಾಳೋಣ ನಾವು..

✍️ ಡಾ. ಸೌಮ್ಯ ಕೆ.ವಿ.
ಯಲ್ಲಾಪುರ