ಋತುಗಳ ರಾಜ ತಾ ಬಂದ
ಅಂಕುರಕೆ ಆಮಂತ್ರಣವ ತಂದ
ಯುಗಯುಗಗಳ ಆಚೆಯಿಂದ
ಕಾಲಕಾಲಕೆ ಪುನಃಶ್ಚೇತನನೀಡುತ
ಜೀವ ಕಳೆಯ ನೇರ್ಪಡಿಸುತ
ಸಮಚಿತ್ತದಿ ನಾಂದಿ ಹಾಡುತ
ತರುಲತೆಗಳು ಮೈಚಾಚಿ ಪಲ್ಲವಿಸಿ
ಹೊಸಸೃಷ್ಟಿ ಹೊಸಭಾವ ಸೃಜಿಸಿ
ಭೂರಮೆಗೆ ಚಾಮರವ ಬೀಸಿ
ಹಸಿರುಹಾಸು ಸೊಬಗು ಸೂಸಿ
ಉಲ್ಲಾಸ ಉತ್ಸಾಹ ಭರದಿ
ಮೌನದಲಿ ಹೆಜ್ಜೆಯನಿರಿಸಿ
ನಿಸರ್ಗ ರಮ್ಯಮಂದಿರ
ಭಕ್ತಿಭಾವವು ಸುಂದರ
ಗಿಳಿ-ಕೋಗಿಲೆ ಕೊರಳಿನಿಂಚರ
ಜೇನು-ಜೀರುಂಡೆಗಳ ಝೇಂಕಾರ
ಅದುವೇ ನಿಸರ್ಗದ ಓಂಕಾರ
ಹೃನ್ಮನಕೆ ಸಂತಸದ ಸಡಗರ
ವರ್ಷಾರಂಭಕೆ ಹರ್ಷವ ಚೆಲ್ಲುತ
ಬೇವು-ಬೆಲ್ಲ ಸಮಭಾವ ಹಂಚುತ
ಹೂಗೊಂಚಲದ ಘಮ ಘಮ
ಸಂತಸ ಸಂಭ್ರಮದ ಸಮಾಗಮ

✍️ಅಮರ್ಜಾ
(ಅಮರೇಗೌಡ ಪಾಟೀಲ ಜಾಲಿಹಾಳ)
ಕುಷ್ಟಗಿ
