ಬಹಳಷ್ಟು ಬಾರಿ
ಪ್ರಯತ್ನಿಸುತ್ತೇನೆ ನಾನು..
ನನ್ನ ನೋವು, ಒತ್ತಡ, ದುಃಖ
ಎದುರಿನವರಿಗೆ ದಾಟಿಸಬಾರದೆಂದು
ಮತ್ತೆ ಮತ್ತೆ ಸೋಲುತ್ತೇನೆ
ಕ್ಷಮಿಸಿಬಿಡು
ನನಗೆ ಅಭಿನಯ ಗೊತ್ತಿಲ್ಲ..
ಸತ್ಯ, ಪ್ರಾಮಾಣಿಕತೆಯನ್ನೇ
ಉಂಡು ಬೆಳೆದುಬಿಟ್ಟೆ
ಕಲಿಯುತ್ತಿರುವೆ
ಸುಳ್ಳು ಹೇಳುವುದನ್ನು!
ಕ್ಷಮಿಸಿಬಿಡು
ಸಿಕ್ಕಿಬೀಳದೇ ಸಂಭಾಳಿಸುವುದೇ ಬರುತ್ತಿಲ್ಲ…
ನೋವು ಕೊಡುವ ಮಾತು
ನಿರ್ಲಕ್ಷ್ಯ ಬೆರೆತ ನಡತೆ
ಹೇಳುವ ಸಬೂಬು
ಮಾಡಿಕೊಳ್ಳುವ ಸಮರ್ಥನೆ
ಚುಚ್ಚಬಹುದು
ಕ್ಷಮಿಸಿಬಿಡು
ಅಮ್ಮ ಹೇಳುವ ಸುಳ್ಳುಗಳಂತೆ ಇವು!
ಕಾಳಜಿ ಮಾಡಲಿಲ್ಲ
ನೆನಪಾಗಿ ಕರೆ ಮಾಡಲಿಲ್ಲ
ಊಟ ತಿಂಡಿ ನೋಡಿಕೊಳ್ಳಲಿಲ್ಲ
ಹೇಗಿದ್ದೀಯಾ… ಕೇಳಲಿಲ್ಲ
ನೋವಾಗಿದೆ ನಿಂಗೆ
ಕ್ಷಮಿಸಿಬಿಡು
ಕಂಕುಳಲ್ಲಿ ಮಗುವಿಟ್ಟುಕೊಂಡು
ಹುಡುಕುತ್ತಾ ಊರಲೆದವಳನ್ನು..!
ಮೊದಲಿನಂತೆ ಮಾತಿಲ್ಲ
ಕಾಯುವ ಕಾತರವಿಲ್ಲ
ನಿನ್ನ ಇರುವಿನ
ಅರಿವೇ ಆಗುವುದಿಲ್ಲ
ಕ್ಷಮಿಸಿಬಿಡು
ಇರುವೆಯೆಂಬ ಭರವಸೆಯ
ತುಂಬಿಕೊಂಡುಬಿಟ್ಟೆ…
ಹೊತ್ತಿಲ್ಲ ಗೊತ್ತಿಲ್ಲ
ಕಳೆದುಕೊಳ್ಳುವ ಭಯವಿಲ್ಲ
ಬೆರಳ ತುದಿಯಲ್ಲಿ
ನೀ ಸಿಗುವಾಗ
ಅನಾದರ ಮಾಡಿಬಿಟ್ಟೆನಾ..?!
ಕ್ಷಮಿಸಿಬಿಡು
ಜೀವಕ್ಕೆ ರೂಢಿಯಾಗಿಬಿಟ್ಟೆ ನೀನು…
ಉಸಿರನ್ನು
ನೆನಪಿಸಿಕೊಳ್ಳುತ್ತಾರಾ ಹೇಳು?!
ಉಸಿರಾಡುತ್ತಾರೆ ಅಷ್ಟೇ
ಉಸಿರನ್ನೇ ಮರೆತು
ಜೀವಿಸಿಬಿಟ್ಟೆ…
ಕ್ಷಮಿಸಿಬಿಡು
ನೀ ನನ್ನ ಉಸಿರಾಗಿಬಿಟ್ಟೆ..!

✍️ಸೌಮ್ಯ ದಯಾನಂದ
ಡಾವಣಗೆರೆ
