ವಿಶ್ವಆರೋಗ್ಯ ಸಂಸ್ಥೆ 1948 ಎಪ್ರಿಲ್ 7ರಂದು ಸ್ಥಾಪನೆಗೊಂಡ ಸವಿನೆನಪಿಗಾಗಿ ಪ್ರತಿ ವರ್ಷ ಈ ದಿನದಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಿ ಕೊಂಡು ಬಂದಿದ್ದೇವೆ. ‘ನನ್ನ ಆರೋಗ್ಯ ನನ್ನ ಹಕ್ಕು‘ ಎಂಬ ಘೋಷಣಾ ವಾಕ್ಯ ದೊಂದಿಗೆ ಈ ವರ್ಷ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗು ತ್ತಿದೆ. ಆರೋಗ್ಯವೆಂದರೆ ಶಾರೀರಿಕ ಅಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಬಗ್ಗೆ ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಗಮನಕೊಡಬೇಕಾಗಿದೆ.ಆರೋಗ್ಯ ಎಲ್ಲಾ ವಯೋಮಾನದವರಿಗೂ ಮುಖ್ಯವೇ. ಆದಾಗ್ಯೂ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ನಲ್ವತ್ತರ ನಂತರವೂ ಆರೋಗ್ಯ ನಳ ನಳಿಸುವಂತೆ ನೋಡಿ ಕೊಳ್ಳುವುದು ಒಂದು ಸವಾಲೇ ಸರಿ.. ಈ ನಿಟ್ಟಿ ನಲ್ಲಿ ನಲವತ್ತು ನವ ತಾರುಣ್ಯದ ಆರಂಭ ವಾಗಲಿ.. ನಡುಮಧ್ಯಾಹ್ನ ವೆಂಬ ಚಿಂತೆ ಬೇಡ.

ಶ್ಯಾಮಲಾ ಪ್ರೈವೇಟ್ ಬ್ಯಾಂಕಿನ ಉದ್ಯೋಗಿ. ನಲವತ್ತಾರು ವಯಸ್ಸು. ಆಸ್ಪತ್ರೆಗೆ ಬಂದಾಗ ಕಂಗಾಲಾಗಿದ್ದರು. ‘ಡಾಕ್ಟರ್ ನನಗೆ ತಲೆ ಸುತ್ತು, ಕೈ ಕಾಲು ನಡುಕ, ರಾತ್ರಿ ಎಲ್ಲ ನಿದ್ದೆ ಇಲ್ಲ. ಬೆನ್ನಿನಲ್ಲಿ ಚಳಕ್ ಅಂತ ಏನೋ ಏರಿ ಬಂದಂತೆ ಆಗುತ್ತದೆ.’ ಎನ್ನುವಷ್ಟರಲ್ಲಿ ಕಣ್ಣಂಚು ಒದ್ದೆಯಾಗಿತ್ತು.’ತುಂಬಾ ಅಶಕ್ತತೆ- ಕಾಲುಗಳಲ್ಲಿ ಜೀವವೇ ಇಲ್ಲವೇನೋ ಅನ್ನಿಸುತ್ತಿದೆ. ರಾತ್ರಿ ಎದೆ ಹಿಡಿದುಕೊಂಡು ಸತ್ತೇ ಹೋದೆ ನಾನು ಎಂದುಕೊಂಡಿದ್ದೆ’ ಎಂದು ಅಲವತ್ತುಕೊಂಡಿದ್ದರು ಶೇಖರ್. ಇಸಿಜಿ ಮುಂದಾಗಿ ಎಲ್ಲ ಪರೀಕ್ಷೆಗಳೂ ನಾರ್ಮಲ್ ಇದ್ದವು.
‘ಏನಕ್ಕೂ ಸ್ಪಂದಿಸದ ಗಂಡನನ್ನು ಇರುವುದೇ ಹೀಗೆ ಅಂದುಕೊಂಡು ಮಕ್ಕಳ ಭವಿಷ್ಯಕ್ಕಾಗಿ ಹೊರನೋಟಕ್ಕೆ ನಗುನಗುತ್ತಾ ಇದ್ದೆ. ನನಗೆ ಬೇರೆ ಯಾರೊಂದಿಗೋ ಸಂಬಂಧವಿದೆ ಅದಕ್ಕಾಗಿ ಖುಷಿಯಾಗಿದ್ದೇನೆ ಎಂದು ಚುಚ್ಚಿ ಮಾತನಾಡಿ ನೋಯಿಸುತ್ತಿದ್ದಾರೆ ನನ್ನ ಗಂಡ; ಡಾಕ್ಟ್ರೇ ನನ್ನ ನಿಯಂತ್ರಣ ಮೀರಿ ಯಾವಾಗ ಆತ್ಮಹತ್ಯೆ ಮಾಡಿ ಕೊಂಡು ಬಿಡುತ್ತೇನೆ ಅಂತ ಹೆದರಿಕೆಯಾಗುತ್ತಿದೆ.. ಏನಾದ್ರೂ ಗುಳಿಗೆ ಕೊಡಿ…ಪ್ಲೀಸ್..’ ಹೇಳಿಕೊಳ್ಳ- ಲಾಗದೇ ಮುಜುಗರಕ್ಕೊಳಗಾಗಿದ್ದರು ಆ ನಡು ವಯಸ್ಸಿನ ಮಹಿಳೆ! ಅತಿಯಾದ ಮದ್ಯಪಾನ ವ್ಯಸನಿ ಖಿನ್ನತೆಗೆ ಒಳಗಾಗಿದ್ದು, ಭೇಟಿಯಾಗಿದ್ದು ಜೀವಂತವಾಗಿ ಅಲ್ಲ ಶವ ಪರೀಕ್ಷೆಯ ಕೋಣೆ ಯಲ್ಲಿ..!

ಹೇಳುತ್ತಾ ಹೋದರೆ ಅದೆಷ್ಟೋ ನಿಜ ಜೀವನದ ಘಟನೆಗಳು… ನಲವತ್ತೈದು ಎಂಬ ನಡು ಮಧ್ಯಾಹ್ನದ ತಲ್ಲಣಗಳು.. ಆತಂಕಗಳು.. ಅದುಮಿಟ್ಟ ನೋವುಗಳು.. ಬಚ್ಚಿಟ್ಟ ಬವಣೆಗಳು.. ಹಾರ್ಮೋನ್ ವ್ಯತ್ಯಾಸಗಳಿಂದ ಕಡ್ಡಿಯನ್ನು ಗುಡ್ಡೆ ಮಾಡುತ್ತೇವೋ- ಅಥವಾ ಹರೆಯದ ಆಶಾವಾದ ಕುಸಿಯುತ್ತ ಋಣಾತ್ಮಕತೆಯಿಂದ ಚಿಕ್ಕದನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆಯೋ?? ಅತ್ತ ತರುಣರಲ್ಲದ,ಇತ್ತ ಮುದುಕರಲ್ಲದ ನಡು ಮಧ್ಯದ ವಯಸ್ಸಲ್ಲಿ ಮಾನಸಿಕ ಒತ್ತಡಗಳೆಲ್ಲ ದೈಹಿಕ ಲಕ್ಷಣ ಗಳಂತೆ ಭಾಸವಾಗಿ ಆರೋಗ್ಯದ ಬಗ್ಗೆ ತುಸು ಕಾಳಜಿ ವಹಿಸಿರಪ್ಪ ಎಂಬ ಸಂದೇಶ ಕೊಡುತ್ತಿದೆ.. ಹದಿಹರೆಯದಲ್ಲಿ ಮಾನಸಿಕ ಸಮಸ್ಯೆಗಳು ಉಂಟಾದಂತೆ ನಲವತ್ತೈದರ ಆಜು ಬಾಜು ಮನಸ್ಸು ಗೊಂದಲಕ್ಕೆ ಈಡಾಗುತ್ತದೆ.
ನಲವತ್ತರಿಂದ ಐವತ್ತು ವಯಸ್ಸಿನಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ?
ನಲವತ್ತರ ಬಳಿಕ ಚಯಾಪಚಯ ಕ್ರಿಯೆ ನಿಧಾನ ಗೊಳ್ಳುತ್ತದೆ. ಅಂದರೆ ದೇಹದಲ್ಲಿ ಶಕ್ತಿ ಉತ್ಪಾದನೆ ಯ ಕಾರ್ಯಕ್ಷಮತೆ ಕುಂದುತೊಡಗುತ್ತದೆ. ಮೊದಲಿನಂತೆ ಕೆಲಸ ಮಾಡಿದರೂ ಹೆಚ್ಚಿನ ಕ್ಯಾಲರಿಗಳು ಉಪಯೋಗಕ್ಕೆ ಬಾರದೆ ಕೊಬ್ಬಾಗಿ ಶೇಖರಗೊಳ್ಳುತ್ತದೆ. ಅನಪೇಕ್ಷಿತ ಬೊಜ್ಜು ಬರುವುದು ಹೀಗೆ. ಆಗ ದೇಹಕ್ಕೆ ನಿಶ್ಯಕ್ತಿಯ ಭಾವವೂ ಉಂಟಾಗುತ್ತದೆ. ಕೂದಲುದುರುವುದು, ಚರ್ಮ ಜೋತು ಬೀಳುವುದು,ಮೈಕಟ್ಟು ಕಳೆ ಗುಂದುವುದು ಇವೆಲ್ಲ ಸಹಜ. ತಾರುಣ್ಯದಲ್ಲಿ ಅನಾಯಾಸವಾಗಿ ದೊರೆಯುತ್ತಿದ್ದ ಎಲ್ಲರ ಗಮನ- ಪ್ರಾಮುಖ್ಯತೆ ಈಗ ಕಡಿಮೆಯಾಗುತ್ತಾ ಹೋದಾಗ ನಿರಾಶಾಭಾವ, ಖಿನ್ನತೆ ಮೂಡತೊಡ ಗುತ್ತದೆ.ಶುಗರ್ ಹಾರ್ಟ್ ಸಮಸ್ಯೆಗಳು ಶುರುವಾಗಿ ದೇಹದ ಲವಲವಿಕೆ ಕಡಿಮೆಯಾಗುತ್ತದೆ.
ಮೆನೊಪಾಸ್ ಈಗ ಬೇಗ ಆಗ್ತಿದೆಯಾ??

ನಿಜ ಈಗಿನ ಮಹಿಳೆಯರಲ್ಲಿ ಋತುಬಂಧದ ಲಕ್ಷಣಗಳು ಬೇಗ ತಲೆ ದೋರುತ್ತಿವೆ. ಇದರಿಂದ ಮೈ ಬಿಸಿಯಾಗುವುದು, ರಾತ್ರಿ ಬೆವರುವುದು, ಮೂತ್ರ ನಿಯಂತ್ರಣ ಕಷ್ಟವೆನಿಸುವುದು, ಜನನಾಂಗದಲ್ಲಿ ಒಣಗಿದಂತಾಗುವುದು, ನಿದ್ರಾಹೀನತೆ, ಮೂಡ್ ಏರುಪೇರು ಸಾಮಾನ್ಯ.
ಏನಿದು ಆ್ಯಂಡ್ರೋಪಾಸ್??

ಪುರುಷರಲ್ಲಿ ಸಹ ಹಾರ್ಮೋನಿನ ವಯೋ ಸಹಜ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದು. ಖಿನ್ನತೆ, ಲೈಂಗಿಕ ನಿರಾಸಕ್ತಿ, ಮೂಡ್ ವ್ಯತ್ಯಾಸ ಗಳು, ಅಶಕ್ತತೆ ಇವೇ ಮುಂತಾದ ಲಕ್ಷಣಗಳು ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ತೊಂದರೆ- ಗೀಡಾಗಿಸಬಹುದು.
ಪರಿಹಾರ ಇದ್ದೇ ಇದೆ..

*ಸಮತೂಕದ ಆಹಾರ ಸೇವನೆ ಈಗ ಆದ್ಯತೆ ಯಾಗಲಿ. ಆಹಾರದಿಂದಲೇ ಆರೋಗ್ಯ ಅಲ್ಲವೇ?
*ವ್ಯಾಯಾಮಕ್ಕೆ ಪ್ರತಿ ನಿತ್ಯ ಅರ್ಧ ಗಂಟೆ ಕಡ್ಡಾಯವಾಗಿ ಮೀಸಲಿಡಿ.
*ದುಶ್ಚಟಗಳಿದ್ದರೆ ತೊರೆಯಲು ಇದು ಸಕಾಲ.
*ಆರು ತಿಂಗಳಿಗೆ ಒಮ್ಮೆ ಯಾದರೂ ವೈದ್ಯರನ್ನು ಭೇಟಿ ಮಾಡಿ ಸಂಪೂರ್ಣ ತಪಾಸಣೆಗೆ ಒಳಗಾಗಿ.
*ವಯೋ ಸಹಜ ಬದಲಾವಣೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದು ಉತ್ತಮ.
*ವೈದ್ಯರು ಸಲಹೆ ಮಾಡಿದ ಚಿಕಿತ್ಸೆಗೆ ಬದ್ಧರಾಗಿರಿ.

* ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಮಾನಸಿಕ ಏರುಪೇರನ್ನು ತಹಬಂದಿಗೆ ತರುತ್ತದೆ.
*ಸಂಗಾತಿಯನ್ನು, ರಕ್ತ ಸಂಬಂಧಿಗಳನ್ನು ಹೊರತು ಪಡಿಸಿ ಒಳಗುದಿಯನ್ನು ಹಂಚಿಕೊಳ್ಳಲು ಆಪ್ತ ಸ್ನೇಹಿತರು ಇರಲಿ..
*ಕೊರಗುವುದರ ಬದಲು ನಮಗೆ ಇಷ್ಟವಾದ ಕೆಲಸದಲ್ಲಿ ಬಿಜಿ ಆದರೆ ಬೆಟ್ಟದಂತಹ ಸಮಸ್ಯೆಯೂ ಮಂಜಿನಂತೆ ಕರಗಬಲ್ಲದು.

*ಯೋಗಾಸನ, ಪ್ರಾಣಾಯಾಮ ವ್ಯಾಯಾಮ ಗಳು ಹಾರ್ಮೋನು ಏರುಪೇರಿಗೆ ಒಳ್ಳೆಯ ಪರಿಹಾರ.
*ಯಾವುದನ್ನೂ ತುಂಬಾ ಸೀರಿಯಸ್ ಆಗಿ ತೆಗೆದು ಕೊಳ್ಳುವ ಅವಶ್ಯಕತೆ ಇಲ್ಲ.

* ಮದ್ಯಪಾನ, ಧೂಮಪಾನ ಅಷ್ಟೇ ಅಲ್ಲ ಫೇಸ್‌ಬುಕ್ – ಮೊಬೈಲ್ ಬಳಕೆ ಅತಿಯಾದರೆ ಒಳ್ಳೆಯದಲ್ಲ.
* ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೇ. ಹೊಸದನ್ನು ಕಲಿಯುವ ಹುಮ್ಮಸ್ಸು ಸದಾ ಇರಲಿ.
*ಆಪ್ತಸಮಾಲೋಚನೆ, ಮಾನಸಿಕ ಲಕ್ಷಣಗಳಿಗೆ ವೈದ್ಯಕೀಯ ನೆರವು ಪಡೆಯಲು ಹಿಂಜರಿತ ಬೇಡ.
*ದಂಪತಿಗಳಲ್ಲಿ ದೈಹಿಕ ಆಕರ್ಷಣೆ ಕಡಿಮೆಯಾ ದರೂ ಪರಸ್ಪರ ಪ್ರೀತಿ,ಗೌರವ,ಸ್ನೇಹದ ಭಾವಗಳು ಸಾಂಗತ್ಯವನ್ನು ಸುಂದರವಾಗಿಸುತ್ತದೆ.

* ಪ್ರವಾಸ ಮಾಡುವುದು, ಪುಣ್ಯಕ್ಷೇತ್ರ ದರ್ಶನ ಮನಸ್ಸನ್ನು ನಿರಾಳಗೊಳಿಸುತ್ತದೆ.
*ತನಗಾಗಿ ಸಮಯ ಮೀಸಲಿಡುವುದು ನೆನಪಿರಲಿ.
* ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಅಧ್ಯಾತ್ಮ ಭಜನೆ ಇತ್ಯಾದಿ ಈ ಸಮಯದಲ್ಲಿ ಕೈಹಿಡಿದು ನಡೆಸುತ್ತವೆ.

* ಒಳ್ಳೆಯ ಪುಸ್ತಕಗಳ ಓದು- ಅದರಲ್ಲೂ ವಿಶೇಷ ವಾಗಿ ಆತ್ಮ ಚರಿತ್ರೆಗಳನ್ನು ಓದುವುದು ಬದುಕಿನ ಬಗ್ಗೆ ಭಿನ್ನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಹಕಾರಿ.
*ನಮ್ಮನ್ನು ನಾವು ಪ್ರೀತಿಸುವ, ಮೆಚ್ಚಿಕೊಳ್ಳುವ, ವಾಸ್ತವವನ್ನು ಒಪ್ಪಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
*ನಲವತ್ತರ ಬಳಿಕವೂ ಆರೋಗ್ಯದಿಂದರುವುದು ಉಮೇದಿ ಉಲ್ಲಾಸಗಳ ಗೂಡಾಗಿರುವುದು ಸಾಧ್ಯ. ಮನಸ್ಸಿದ್ದರೆ ಮಾರ್ಗ..!

ಡಾ.ಸೌಮ್ಯ ಕೆ.ವಿ.
ತಜ್ಞ ವೈದ್ಯರು
ತಾಲೂಕು ಆಸ್ಪತ್ರೆ,ಯಲ್ಲಾಪುರ.
