“ನಾನು
ನನ್ನೆಲ್ಲ ಸಣ್ಣತನದ
ಸ್ವಾರ್ಥದ
ಮಾನವೀಯ ಭಾವನೆಗಳ
ಒಂದು ಮೊತ್ತ”
ಇವು ಪ್ರೊ.ಎಂ.ಆರ್. ಕಮಲ ಅವರ “ನಾನು…” ಕವಿತೆಯ ಸಾಲುಗಳು. ಎಲ್ಲರಂತೆ ನಾನು ಮಾನವ ಸಹಜ ಗುಣಗಳ ಗಣಿ ಎನ್ನುವ ಇವರ ನುಡಿಗಳು ಮುಖವಾಡ ರಹಿತ ಮುಖ ವಾಣಿಯಾಗಿವೆ. ಎಂ.ಆರ್.ಕಮಲ ಅವರ ಹೆಸರು ಕನ್ನಡ ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ವಾದುದು. ಲೇಖಕಿಯಾಗಿ, ಕವಯಿತ್ರಿಯಾಗಿ, ಅನುವಾದಕಿ ಯಾಗಿ ಕನ್ನಡ ಸಾರಸ್ವತ ಲೋಕವನ್ನ ಶ್ರೀಮಂತ ಗೊಳಿಸಿದ ಹೆಗ್ಗಳಿಕೆ ಇವರದು. ಜೊತೆಗೆ ವೀಣಾ ವಾದಕಿಯಾಗಿ, ಭರತನಾಟ್ಯ ಕಲಾವಿದೆ ಯಾಗಿಯೂ ಗಮನ ಸೆಳೆದ ಬಹುಮುಖ ಪ್ರತಿಭೆ ಇವರು. ಪ್ರೊ.ಎಂ.ಆರ್.ಕಮಲರವರು ಚಾರಿತ್ರಿಕ ವಾಗಿ ಅಗ್ರ ಮಾನ್ಯವಾದ ಹಾಸನ ಜಿಲ್ಲೆಯ ಅರಸಿಕೆರೆಯ ಮೇಟಿಕುರ್ಕೆಯವರು. ಇವರು ರಾಮಸ್ವಾಮಿ ಮತ್ತು ವಿಶಾಲಾಕ್ಷಿ ದಂಪತಿಗಳ 11 ಮಕ್ಕಳಲ್ಲಿ 10 ನೇಯ ಮಗಳಾಗಿ 27 ಮಾರ್ಚ್ 1959ರಂದು ಜನಿಸಿದರು.

ತಂದೆ ರಾಮಸ್ವಾಮಿ ಬಹುಭಾಷಾ ಪಾರಂಗತರಾ ಗಿದ್ದು, ಗಮಕ ಕಲಾವಿದರಾಗಿದ್ದರು. ಅವರ ಸಾಂಸ್ಕೃತಿಕ, ಸಾಹಿತ್ಯದ ಪ್ರಭಾವವು ಸಹಜವಾಗಿ ಇವರಲ್ಲಿ ಸಾಹಿತ್ಯದೊಲವನ್ನು ಮೂಡಿಸಿತು. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ‘ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನ’ ಕ್ಕಾಗಿ ‘ಬಿ.ಎಂ.ಶ್ರೀ’ ಸ್ವರ್ಣ ಪದಕ ವನ್ನು ಗಳಿಸಿದ ಪ್ರತಿಭಾಶಾಲಿ. ಜೊತೆಗೆ ಫ್ರೆಂಚ್ ಭಾಷೆ ಯಲ್ಲೂ ಕೂಡ ಪದವಿ ಪಡೆದಂತಹ ಹೆಮ್ಮೆ ಇವರದು. ಪತಿ ರಮೇಶ್, ಮಗಳು ಸ್ಪರ್ಶ ಹಾಗೂ ಮಗ ಆಕರ್ಷರೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಇವರು 1981 ರಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿ 2018 ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತ ರಾಗಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದು, ಸಂಪೂರ್ಣವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅವರು ಹಿರಿ-ಕಿರಿ ಬರಹಗಾರರು ಎಂಬ ಭೇದ ತೋರದೇ ಎಲ್ಲರನ್ನೂ ಪ್ರೀತಿಸುವ ಜೀವ ಎಂದರೇ ಉತ್ಪ್ರೇಕ್ಷೆ ಯಾಗದು. ಬಹಳ ಮುಖ್ಯವಾಗಿ ಯುವ ಜನತೆ ಇವರ ಬರಹಗಳಿಗೆ ಮಾರುಹೋಗಿರುವುದು, ಇವರ ಸಾಹಿತ್ಯವನ್ನು ಓದುತ್ತಿರುವುದನ್ನು ನೋಡ ಬಹುದು.

ಪ್ರೊ.ಕಮಲ ಅವರು ಮೊದಲ ಕೃತಿಗೆ ಜಿ.ಎಸ್. ಎಸ್. ಅವರಿಂದ ಮುನ್ನುಡಿ ಬರೆಸಿಕೊಂಡ ಕವಯಿತ್ರಿ. ಈ ಮುನ್ನುಡಿಯಲ್ಲಿ ಕವಿ ಜಿ.ಎಸ್. ಶಿವರುದ್ರಪ್ಪನವರು ಹೀಗೆ ಹೇಳುತ್ತಾರೆ: “ಯಾವುದೇ ಸ್ಪರ್ಧಾತ್ಮಕ ಅಬ್ಬರ ಗಳಿಲ್ಲದ ಒಂದು ಸ್ವಸ್ಥ ಮನಸ್ಥಿತಿಯಲ್ಲಿ ಸುತ್ತಣ ಬದುಕಿನ ಚೆಲುವಿಗೆ ನಲಿವಿಗೆ ಒಲವಿಗೆ ತೆರೆದು ಕೊಳ್ಳುವ ಹೃದಯವಿದೆ” ಎಂದು ಪ್ರಶಂಸಿಸಿ ದ್ದಾರೆ. ಇದಕ್ಕೆ ಪೂರಕವಾಗಿ ಇವರ ಬರಹಗಳು ಪ್ರತಿಷ್ಠೆಯ ಪರಾಕು, ಗೊಡ್ಡು ಆದರ್ಶಗಳ ಮಿತಿಯಿಂದ ಹೊರತಾಗಿ ನೈಜತೆಗೆ ಪ್ರಾಶಸ್ತ್ಯ ನೀಡಿರುವುದನ್ನು ನಾವು ಗಮನಿಸಬಹುದು. ತಮ್ಮ ಬರಹಗಳಲ್ಲಿ ಆಕ್ರೋಶ ವಾಗಲಿ, ಹತಾಶೆಯಾಗಲಿ ವ್ಯಕ್ತವಾಗದಂತೆ ಎಚ್ಚರ ವಹಿಸಿದ್ದಾರೆ.

‘ಶಕುಂತಳೋಪಾಖ್ಯಾನ’, ‘ಜಾಣೆ ಮತ್ತು ಇತರ ಕಥೆಗಳು’, ‘ಹೂವು ಚೆಲ್ಲಿದ ಹಾದಿ’, ‘ಮಾರಿಗುಡಿ’,ಇವರ ಪ್ರಮುಖ ಕವನಸಂಕಲನ ಗಳಾಗಿವೆ.’ಗದ್ಯಗಂಧಿ’,’ನೆಲದಾಸೆ ನಕ್ಷತ್ರಗಳು’ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ರೂಪದಲ್ಲಿ ತೆರೆದುಕೊಂಡ ಕೃತಿಗಳಾಗಿವೆ. ಇವುಗಳಲ್ಲಿ ಇವರ ಕಾವ್ಯಾಭಿವ್ಯಕ್ತಿಯನ್ನ, ಭಾವದೊನಲನ್ನ, ಆಶಯ ಗಳನ್ನು, ಕಾವ್ಯ ಶಕ್ತಿಯನ್ನು ಗುರುತಿಸಬಹುದು.

‘ಕಾಳನಾಮ ಚರಿತೆ’ ಅವರು ತಮ್ಮ ಪ್ರೀತಿಯ ನಾಯಿಯನ್ನು ಕುರಿತು ಬರೆದಂತಹ ಹಗುರ ಹರಟೆಯ ಹಂದರವಾಗಿದೆ. ಈ ಕೃತಿಯನ್ನು ಓದಿವದಾಗ ಒಂದು ಪ್ರಾಣಿಯನ್ನ ಇಷ್ಟೆಲ್ಲಾ ಪ್ರೀತಿಸುತ್ತಾರಾ? ಅದಕ್ಕಾಗಿ ಇಷ್ಟೆಲ್ಲಾ ಕೃತಿಗಳನ್ನು ರಚಿಸು ವರಾ ? ಎಂಬ ಅಚ್ಚರಿಯಾಗುತ್ತದೆ. ಪ್ರಾಣಿ ಪ್ರೇಮ ಬಿತ್ತುವಲ್ಲಿ ಮನುಷ್ಯನನ್ನು ಮೀರಿ ಪ್ರೀತಿ ತೋರುವ ಪ್ರಾಣಿಗಳನ್ನಾ ಬರಹದ ಮೂಲಕ ಜೀವಂತವಾಗಿ ಸುವಲ್ಲಿ ‘ಕಾಳನಾಮ ಚರಿತೆ’ ಪ್ರಮುಖ ಪಾತ್ರ ವಹಿಸುತ್ತದೆ.

‘ಕಸೂತಿ’ ‘ಹೊನ್ನಾವರಿಕೆ’ ‘ಹೊಂಬಳ್ಳಿ’ ‘ಕೊಳದ ಮೇಲಿನ ಗಾಳಿ’ ಅವರ ಜೀವನೋತ್ಸಾಹ ಲವಲವಿಕೆಯ ಪ್ರಬಂಧ ಸಂಕಲನಗಳಾಗಿವೆ. ಇವೆಲ್ಲ ನೋಡಿದಾಗ ಕಮಲ ಅವರು ಯುವ ತಲೆಮಾರಿನವರೆಂಬ ಭಾವ ಮೂಡುತ್ತದೆ. ಇವರ ಈ ಪ್ರಬಂಧಗಳು ಇವರ ಬಾಲ್ಯ, ಬದುಕು, ಬರಹದ ಸಂಪೂರ್ಣ ಚಿತ್ರಣ ವನ್ನು ತೆರೆದಿಡುತ್ತವೆ. ಕಸೂತಿ ಕಮಲರವರ ಆತ್ಮ ಚರಿತ್ರೆಯಾದರೂ ವೈಯಕ್ತಿಕವಾಗಿ ಅದನ್ನು ಅಂಟಿಸಿಕೊಳ್ಳದೆ ಸ್ತ್ರೀ ಲೋಕವನ್ನೇ ಪ್ರತಿನಿಧಿಸು ವಂತೆ ಸ್ತ್ರೀ ಧನಿಯಾಗಿ ಕಸೂತಿಯಾದ ನೆನಪು ಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಅದನ್ನ ಚಿತ್ರಿಸಿ ದ್ದಾರೆ. ಇಲ್ಲಿ ಇವರ ಬಾಲ್ಯ ಬೇರೆಯವರ ಬಾಲ್ಯ ವನ್ನು ನೆನಪಿಸುತ್ತದೆ. ಇವರ ಕೌಟುಂಬಿಕ ವಾತಾವರಣ, ನೆರೆಹೊರೆ, ಗ್ರಾಮೀಣ ಬದುಕಿನ ಅಮೂಲ್ಯ ಸವಿ ನೆನಪು ಗಳು, ಬಾಂಧವ್ಯಗಳು ಎಲ್ಲ ಮಹಿಳೆಯರ ಬದುಕಿನ ಬಿಂಬಗಳಂತೆ ಭಾಸವಾಗುತ್ತವೆ. ಅವರ ಮನದ ನೋವು, ತಲ್ಲಣ ಗಳಿಗೆ ಸ್ಪಂದಿಸುವ ಮೂಲಕ ಹೆಣ್ಣು ಮಕ್ಕಳು ಹೇಗೆ ತಮ್ಮ ಬದುಕನ್ನು ಸ್ವತಂತ್ರವಾಗಿ, ಸ್ವಾಭಿಮಾನದಿಂದ ಕಟ್ಟಿಕೊಂಡು ಗೌರವಯುತ ವಾಗಿ ಜೀವನ ನಡೆಸಬೇಕೆಂಬ ಕಥನಗಳಿವೆ.

ಇವರ ‘ಹೊನ್ನಾವರಿಕೆ‘ ಕೃತಿಯು ಇವರು ವೃತ್ತಿ ಬದುಕಿನಲ್ಲಿ ಅರ್ಜಿಸಿಕೊಂಡ ಅನುಭವಗಳ ಗಾಥೆ ಯಾಗಿದ್ದು ಇಲ್ಲಿ ಮಹಿಳೆಯನ್ನ ಸಮಾಜ ದ್ವಿತೀಯ ಪ್ರಜೆಯಾಗಿ ನೋಡುವುದನ್ನ ಕಟುವಾಗಿ ಪ್ರಶ್ನಿಸುತ್ತಾ ಸ್ತ್ರೀಪರ ಚಿಂತನೆ ಮತ್ತು ವೈಚಾರಿಕ ನೆಲೆಗಳಲ್ಲಿ ವೃತ್ತಿನಿರತ ಮಹಿಳೆಯರ ಸಂವೇದನೆ ಗಳನ್ನ ಕಟ್ಟಿಕೊಟ್ಟಿದ್ದಾರೆ. ಒಂದು ಜವಾಬ್ದಾರಿ ಯುತವಾದ ಹುದ್ದೆಯಲ್ಲಿ ಇದ್ದರೂ ಹೆಣ್ಣು ಹೇಗೆ ಪುರುಷ ಸಮಾಜದಿಂದ ತುಳಿತಕ್ಕೆ ಒಳಗಾಗು ತ್ತಾಳೆ, ತನ್ನ ಹಕ್ಕುಗಳಿಗಾಗಿ ನಿತ್ಯ ಹೋರಾಡುತ್ತಲೇ ಬದುಕಿನೊಂದಿಗೆ ಸಂಘರ್ಷವನ್ನು ಎದುರಿಸಬೇಕಾ ಗುತ್ತದೆ ಎಂಬೆಲ್ಲ ವಿಚಾರಗಳನ್ನ ಈ ಕೃತಿ ತೆರೆದಿಡು ತ್ತದೆ. ವಿದ್ಯಾರ್ಥಿನಿಯರು ಈ ಎಲ್ಲ ಮಿತಿಗಳನ್ನು ಮೀರಿ ಶೈಕ್ಷಣಿಕವಾಗಿ, ಬೌದ್ಧಿಕವಾಗಿ, ಸಾಮಾಜಿಕ ವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಹೇಗೆಲ್ಲಾ ಸಮಾಜಕ್ಕೆ ತೆರೆದುಕೊಳ್ಳಬೇಕು ಎಂಬ ವಿಚಾರ ಗಳನ್ನ ಕುರಿತು ಅಮೂಲಾಗ್ರವಾಗಿ ಚರ್ಚಿಸಿದ್ದಾರೆ.
ಇವರ ಬರಹಗಳಲ್ಲಿ ನಿಷ್ಠತೆ, ಬದ್ಧತೆ, ಆಳವಾದ ಮತ್ತು ವ್ಯಾಪಕವಾದ ಓದಿನ ಪ್ರಭಾವ ಬೀರುವು ದನ್ನು ಕಾಣಬಹುದು. ಅದರಿಂದಲೇ ಇಂತಹ ಸಂವೇದನಾಶೀಲ ಕಾವ್ಯ ಇವರ ಲೇಖನಿಯಿಂದ ನಮಗೆ ದಕ್ಕಿದೆ. ಮನಸ್ಸಿನ ಯಾತನೆ, ಅಸಹಾಯ ಕತೆ, ಅಸಮಾನತೆಯ ಬೇಗುದಿಗೆ, ನಿರಾಶೆಯ ಕೈ ಚೆಲ್ಲುವಿಕೆಗೆ ಕಮಲ ಅವರ ಬರಹಗಳು ಸಾಂತ್ವನ, ಸಮಾಧಾನ ನೀಡಿ ಭರವಸೆಯ ಬೆಳಕು ಮೂಡಿಸಿ ಸಾಗಬೇಕಾದ ದಾರಿಯನ್ನು ತೋರುತ್ತವೆ. ಈ ನಿಟ್ಟಿನಲ್ಲಿ ಇವರ ಕಾವ್ಯ, ಪ್ರಬಂಧ ಮತ್ತು ಅನುವಾದಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

ಹಿರಿಯ ಲೇಖಕಿಯಾದರೂ ಜೀವನ ಪ್ರೀತಿಯಲ್ಲಿ ಇವರದು ಕುಂದದ ಅದಮ್ಯ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗಿದೆ. ಒಬ್ಬ ಸ್ತ್ರೀ ಯಾಗಿ ಶ್ರೀ ಸಂವೇದನೆಗಳನ್ನು ಬಹಳ ಸೂಕ್ಷ್ಮವಾಗಿ ನವಿರಾದ ಭಾವದಲ್ಲಿ ತೆರೆದಿಡುವ ಇವರ ಬರಹ ಗಳು ಮೃದು ಮಧುರತೆಯನ್ನು ಹೊಂದಿರುತ್ತವೆ. ತಲುಪಿಸಬೇಕಾದ ಸಂದೇಶವನ್ನು ಪುರುಷ ಪ್ರಧಾನ ಸಮಾಜಕ್ಕೆ ನಿಷ್ಠೂರವಾಗಿಯೆ ರವಾನಿಸು ತ್ತಾರೆ. ಹೆಣ್ಣು ಮಕ್ಕಳ ಭಾವನೆಗಳಿಗೆ ಅತಿ ಹೆಚ್ಚು ಮಾನ್ಯತೆ ನೀಡುವ ಇವರ ಬರಹಗಳು ಸ್ತ್ರೀ ಸ್ವಾತಂತ್ರವನ್ನು ಪ್ರತಿಪಾದಿಸುತ್ತವೆ. ಹೆಣ್ಣೆಂದರೆ ಅಡುಗೆ ಮನೆ, ನಿಯಮಗಳ ಸೆರೆಯಾಳು, ಅಸಂಬದ್ಧ ಆಚರಣೆಗಳ ಪಾಲಕಿ, ಯಂತ್ರದಂತೆ ದುಡಿಯುವ ಕಾರ್ಖಾನೆ, ಗಂಡಿನ ಅಡಿಯಾಳು ಎಂಬೆಲ್ಲ ವಿಚಾರಗಳನ್ನ ಸಾರಸಗಟಾಗಿ ತಿರಸ್ಕರಿಸಿ ಮಹಿಳೆಗೂ ಒಂದು ಮನಸ್ಸಿದೆ, ಅವಳಿಗೂ ಭಾವನೆಗಳಿವೆ, ಸಾಧಿಸುವ ಹಂಬಲವಿದೆ, ವಿಶ್ರಾಂತಿಯ ಅಗತ್ಯವಿದೆ, ಕನಸುಗಳನ್ನು ನನಸು ಮಾಡಿಕೊಳ್ಳುವ ತುಡಿತವಿದೆ, ಕುಟುಂಬದೊಂದಿಗೆ ಪ್ರೀತಿ, ವಿಶ್ವಾಸದೊಂದಿಗೆ ಕಾಲ ಕಳೆಯುವ ಆಸೆಯಿದೆ ಎಂಬುದನ್ನ ಪ್ರತಿಪಾದಿಸು ತ್ತಾರೆ. ಹೆಣ್ಣಿಗೆ ಅವಕಾಶ ಮತ್ತು ಸ್ವಾತಂತ್ರ್ಯ ದೊರೆತರೆ ಪುರುಷನಷ್ಟೇ ಸಮಬಲಳು ಎಂಬ ಮಹತ್ವದ ಅಂಶಗಳನ್ನು ಎತ್ತಿ ಹಿಡಿಯುತ್ತ ಅವುಗಳನ್ನೆಲ್ಲ ಪಡೆಯುವಲ್ಲಿ ಹೆಣ್ಣು ಮಕ್ಕಳು ಹಿಂಜರಿಯದೆ ಆತ್ಮಸ್ಥೈರ್ಯದ ಹೆಜ್ಜೆ ಇಡಬೇಕು ಎನ್ನುವ ಅವರು ಸಮಾಜದಲ್ಲಿ ತಮಗಾಗುವ ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕು ಎನ್ನುತ್ತಾರೆ. ಇಂತಹ ಮಹಿಳಾ ಪರ ಚಿಂತನೆಗಳು ಇವರ ಬರಹಗಳ ಪ್ರಮುಖ ಹೈಲೈಟ್ ಆಗಿದೆ. ಇವರು ಆ ಮಹಿಳೆಯರನ್ನು ಕುರಿತು ಚರ್ಚಿಸುವಾಗ ಸುಖ ಸುಮ್ಮನೆ ವಿಷಯ ಪ್ರಸ್ತಾಪಿಸುವುದಿಲ್ಲ ಅದಕ್ಕೆ ಸೂಕ್ತವಾಗಿ ಹೊಂದು ವಂತಹ ಮಹಿಳಾ ಸಾಧಕರನ್ನು ಉಲ್ಲೇಸುತ್ತಾ ಅವರು ಸಾಗಿ ಬಂದ ಹೋರಾಟದ ಬದುಕನ್ನು ಪರಿಚಯಿಸುತ್ತಲೇ ಹೆಣ್ಣು ಮಕ್ಕಳಿಗೆ ಇವರೆಲ್ಲ ಸ್ಪೂರ್ತಿಯಾಗಿ ಸಾಧನೆಯತ್ತ ಕೊಂಡಯ್ಯ ಬೇಕೆಂದು ಆಶಿಸುತ್ತಾರೆ.

ಕಮಲ ಅವರ ಬರಹಗಳ ಮತ್ತೊಂದು ವೈಶಿಷ್ಟ್ಯತೆ ಎಂದರೆ ಇವರ ಗದ್ಯದಲ್ಲೂ ನಾವು ಪದ್ಯದ ಅನುಭವವನ್ನು ಆಸ್ವಾದಿಸಬಹುದು. ಪ್ರತಿಮೆಗಳು ಮತ್ತು ರೂಪಕಗಳಲ್ಲಿ ಬರಹಕ್ಕೆ ಮತ್ತಷ್ಟು ಗಟ್ಟಿತನ ದೊರೆತು ಓದುಗರೆದೆ ಸ್ಪರ್ಶಿಸುತ್ತವೆ. ಸೂಕ್ಷ್ಮಗ್ರಾಹಿ ಯಾದ ಇವರು ಸಮಾಜವನ್ನು ಸುಲಭವಾಗಿ ಓದಬಲ್ಲರು. ಅಷ್ಟೇ ಸರಳವಾಗಿ ಯುವ ಜನಾಂಗದ ಮನಸ್ಸನ್ನು ಸೆಳೆಯಬಲ್ಲರು. ಅದರ ಫಲಶ್ರುತಿ ಯಾಗಿ ಅಸಂಖ್ಯಾತ ಯುವ ಬರಹ ಗಾರರ ಪ್ರೀತಿ ವಿಶ್ವಾಸ ಗಳಿಸಲು ಅವರನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.
ಬಹುಶ್ರುತ ಪ್ರವೀಣೆಯಾದ ಇವರು ಅನುವಾದ ಕ್ಷೇತ್ರದಲ್ಲೂ ಬಹುದೊಡ್ಡ ಸಾಧನೆಯನ್ನು ಮಾಡಿದ ವರು. ನೀಗ್ರೋ ಮತ್ತು ಆಫ್ರಿಕನ್ ಮಹಿಳೆಯರ ಒಂದು ನೂರ ಎರಡು ಕವಿತೆಗಳ ಸಂಪಾದನೆ ಮತ್ತು ಅನುವಾದ ಮಾಡಿ ‘ಕತ್ತಲ ಹೂವಿನ ಹಾಡು’ ಕೃತಿ ರಚಿಸಿ ಅಲ್ಲಿನ ಮಹಿಳೆಯರ ಮನೋಗತವನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.
ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್ ಮತ್ತು ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು ಇವರು ಸಂಪಾದಿಸಿ ಕನ್ನಡಿಕಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿ ಸುವ ಪ್ರಯತ್ನವು ಓದುಗರ ಗಮನ ಮತ್ತು ವಿಮರ್ಶಕರ ಮಾನ್ಯತೆ ಎರಡನ್ನು ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್ ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಕೃತಿಯ ನಾಲ್ಕು ಸಂಪುಟಗಳು ತೆರೆದಿಡುತ್ತವೆ.

‘ನೆತ್ತರಲಿ ನೆಂದ ಚಂದ್ರ‘ ಅನುವಾದ ಕೃತಿಯು ಅರಬ್ ಲೋಕದ ಕವನಗಳ ಅನುವಾದವಾಗಿದ್ದು ಇದರಲ್ಲಿ ಅರಬ್ ಮಹಿಳೆಯರು ಅನುಭವಿಸುವ ತೊಳಲಾಟಗಳು, ತಲ್ಲಣಗಳು, ತುಮುಲಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಂತಹುದೇ ಮತ್ತೊಂದು ಕೃತಿ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಇದರಲ್ಲಿ ಆಫ್ರಿಕನ್ ಮಹಿಳೆಯರು ಗುಲಾಮ ಗಿರಿಯ ವಿರುದ್ಧ ಹೋರಾಟ ನಡೆಸಿ ಬಿಡುಗಡೆಗೆ ಪ್ರಯತ್ನಿಸಿ ದಂತಹ ಕಥಾನಕವನ್ನು ಕಾಣಬಹುದು. ಇವುಗಳ ಜೊತೆಗೆ ರೋಜಾ ಪಾರ್ಕ್ ರ ಆತ್ಮಕಥೆ ‘ನನ್ನ ಕಥೆ‘ಹಾಗೂ ‘ಸೆರೆ ಸಿಕ್ಕಿ ಹಾಡುವುದು ಏನೆಂದು ನಾಬಲ್ಲೆ’ ಎಂಬ ಮಾಯ ಏಂಜಿಯೋ ಅವರ ಆತ್ಮಕಥೆಗಳು ಬಹಳ ಮುಖ್ಯವಾಗಿ ಜಾಗತಿಕ ಸ್ತೀ ಸಂವೇದನೆ ಗಳನ್ನು ಪರಿಚಯಿಸುತ್ತವೆ. ಬಂಗಾಳದ ಮಹತ್ವದ ಕವಿ ಜೀವನಾನಂದರ ಕವಿತೆಗಳು ಇವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ ಸಂಗ್ರಹ. ‘ಜೀರೋ ಪಾಯಿಂಟ್’ ಆಧುನಿಕೋ ತ್ತರ ಬಂಗಾಳಿ ಕವಿಗಳ ಕವಿತೆಗಳನ್ನು ಇತರರೊಂದಿಗೆ ಸೇರಿ ಅನುವಾದಿಸಿರುವ ಕವನ ಸಂಕಲನವಾಗಿದೆ.

ವೃತ್ತಿಯಿಂದ ನಿವೃತ್ತರಾದ ಮೇಲೆ ತಮ್ಮ ಮನೆಯಲ್ಲಿ ‘ಮಾತುಕತೆ‘ ಎಂಬ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಈ ಕಾರ್ಯ ಕ್ರಮದಲ್ಲಿ ಕವಿ, ಕಾವ್ಯ, ಸಮಾಜ, ಸಂಗೀತ, ಸಂಸ್ಕೃತಿ ಇತ್ಯಾದಿ ಪ್ರಕಾರಗಳ ವಿಚಾರ ವಿನಿಮಯ, ಚರ್ಚೆ, ಸಂವಾದ ನಡೆಯುತ್ತದೆ. ಇಲ್ಲಿ ಅನೇಕ ಹಿರಿಕಿರಿ ಕವಿಗಳು ಸಾಹಿತಿಗಳು ಭಾಗವಹಿಸುತ್ತಾರೆ. ಹಾಗೂ ತನ್ನ ವಿಚಾರಗಳನ್ನು ಬರವಣಿಗೆ ಮುಖಾಂತರ ಕಿರಿಯರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.
ಒಬ್ಬ ಶಿಕ್ಷಕಿಯಾಗಿಯೂ ಇವರ ಸಾಧನೆ ಮೆಚ್ಚು ವಂಥದ್ದು. “ವಿದ್ಯಾರ್ಥಿಗಳನ್ನು ಪ್ರೀತಿಯಿಂದ ತಿದ್ದಬೇಕೆ ವಿನಃ ಶಿಕ್ಷೆಯಿಂದಲ್ಲ” ಎನ್ನುವ ಕಮಲರ ವರು ಅವರನ್ನು ಯಾಂತ್ರಿಕ ವಾಗಿ ಬೆಳೆಸದೆ ಭಾವನಾತ್ಮಕವಾಗಿ ಸಜ್ಜುಗೊಳಿಸಬೇಕು ಎನ್ನುತ್ತಾರೆ. ಪ್ರೇರಣಾದಾಯಿ ಚಟುವಟಿಕೆಗಳ ಮೂಲಕ, ಹೊಸ ಹೊಸ ಪ್ರಯೋಗಗಳನ್ನ ತರಗತಿಗಳಲ್ಲಿ ಮಾಡುವ ಮೂಲಕ ವಿದ್ಯಾರ್ಥಿಗಳ ಆಸಕ್ತಿ ಇರುವ ಕಡೆ ಪ್ರೋತ್ಸಾಹಿಸಿ ಅವರಲ್ಲಿರುವ ಸೃಜನಶೀಲತೆಯನ್ನು ಹೊರ ತರುವ ಉದ್ದೇಶ ಇವರದು. ಇಂದು ನಾಡಿನಾದ್ಯಂತ ಇವರ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಿನಿಮಾ, ಕ್ರೀಡೆ, ರಂಗಭೂಮಿ ಸೇರಿದಂತೆ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿಸುತ್ತಾ ಸಾಗುತ್ತಿರುವುದು ಹೆಮ್ಮೆಯ ವಿಷಯ ವಾಗಿದೆ. ಒಟ್ಟಿನಲ್ಲಿ ಎಂ ಆರ್ ಕಮಲ ರವರು ಒಬ್ಬ ಶಿಕ್ಷಕಿ ಯಾಗಿ, ಕವಯತ್ರಿಯಾಗಿ, ಒಬ್ಬ ಲೇಖಕಿಯಾಗಿ ಕನ್ನಡ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣೆಯ ಸಾಧನೆಗೈದ ದಿಟ್ಟ ಮಹಿಳೆ.

ಯಾವುದೇ ಪ್ರಶಸ್ತಿ, ಸನ್ಮಾನ ಬಹುಮಾನಗಳ ಹಿಂದೆ ಬೀಳದೇ ತನ್ನ ಬರಹವು ಸಮಾಜದ ಮೇಲೆ ಬೀರುವ ಪ್ರಭಾವವೇ ಬಹುದೊಡ್ಡ ಪ್ರಶಸ್ತಿ ಎಂದು ತನ್ನ ಪಾಡಿಗೆ ತಾನು ಬರೆಯುತ್ತಾ ಸಾಗುವ ಜೀವವದು. ಇವರಿಗೆ ಸಂದ ಪ್ರಶಸ್ತಿಗಳನೇಕ.
‘ಶಕುಂತಲೋಪಖ್ಯಾನ’,’ಜಾಣೆ ಮತ್ತು ಇತರ ಕವಿತೆಗಳು’ ಕ್ರಮವಾಗಿ ‘ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ‘ ಹಾಗೂ ‘ಮುದ್ದಣ್ಣ ಕಾವ್ಯ ಪ್ರಶಸ್ತಿ‘ ಪಡೆದಿವೆ. ‘ಮಾರಿಬಿಡಿ’ ಸಂಕಲನ ಅಮ್ಮ ಪ್ರಶಸ್ತಿಗೆ ಭಾಜನವಾಗಿದ್ದರೇ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಮಾಸ್ತಿ: ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇವರ ಪುಸ್ತಕ ಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಅನುವಾದ, ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ‘ಎಸ್. ವಿ. ಪರಮೇಶ್ವರ ಭಟ್ಟ’ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ‘ ಯನ್ನು ಕೂಡ ಕಮಲ ಪಡೆದಿದ್ದಾರೆ. ಅರಬ್ ಮಹಿಳಾ ಕಾವ್ಯವನ್ನು ಪರಿಚಯಿಸುವ ಅವರ ‘ನೆತ್ತರಲಿ ನೆಂದ ಚಂದ್ರ‘ ಅನುವಾದ ಕೃತಿ ‘ಎಸ್.ವಿ.ಪರಮೇಶ್ ಭಟ್ಟ ಸಂಸ್ಕರಣ ಪ್ರಶಸ್ತಿ‘ ಪಡೆದಿವೆ.

ಇಷ್ಟೆಲ್ಲ ಸಾಧನೆ ಮಾಡಿರುವಂತಹ ಎಂ.ಆರ್. ಕಮಲ ಅವರ “ಗದ್ಯಗಂದಿ” ಕವಿತೆಗಳು ನನ್ನನ್ನ ಬಹಳಷ್ಟು ಕಾಡಿದವು. ಇವರು ಮುಖಪುಟದಲ್ಲಿ ಪ್ರಕಟಿಸಿದ ಗದ್ಯಗಂಧಿ ಕವಿತೆಯೊಂದನ್ನು ನೋಡಿ ದಾಗ ನನಗೆ ಮತ್ತೆ ಮತ್ತೆ ಓದಬೇಕೆನಿಸಿತು. ಇದು ಇತರ ಅವರ ಬರಹಗಳಿಗಿಂತ ವಿಭಿನ್ನ ಎನಿಸಿತು. ತಕ್ಷಣ ನಾನು ಅವರೊಂದಿಗೆ ಈ ವಿಚಾರಗಳ ಬಗ್ಗೆ ಚರ್ಚಿಸಿದಾಗ ‘ಗದ್ಯಗಂಧಿ’ ಮತ್ತು ‘ನೆಲದಾಸೆಯ ನಕ್ಷತ್ರಗಳು’ ಎಂಬ ಎರಡು ಕೃತಿಗಳು ಇದೇ ಪ್ರಕಾರ ದಲ್ಲಿ ಇರುವುದಾಗಿ ತಿಳಿಸಿದರು. ಇವುಗಳಲ್ಲಿ ವಿಶೇಷವಾದ ಅನೇಕ ಅಂಶಗಳು ಕಂಡುಬಂದವು. ಬಹುಶ ಈ ಪದ್ಯಗಳಲ್ಲಿ ಬಳಸಿರುವ ರೂಪಗಳು ಅಷ್ಟೇ ಪ್ರಧಾನ್ಯತೆ ಪಡೆದಿದ್ದವು ಎನಿಸುತ್ತದೆ. ಪ್ರತಿ ಸಾಲು, ಆಲೋಚನೆ, ವಿಚಾರಗಳಿಗೂ ಅವರು ಬಳಸಿರುವ ಮೆಟಾಫರ್ ಗಳು ಅವುಗಳ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿದವು. ಇಲ್ಲಿ ಕವಯಿತ್ರಿ ವರ್ತಮಾನದ ತಲ್ಲಣಗಳನ್ನು, ಸಂಕಟ ಗಳನ್ನು ಹಿಡಿದಿಡುವಲ್ಲಿ ಉತ್ಕಟವಾದ ಸಂವೇದನೆ ಗಳನ್ನು ಪ್ರಕಟಿಸಲು ರೂಪಕಗಳ ಮೊರೆ ಹೋಗಿ ದ್ದಾರೆ. ಎಲ್ಲಕ್ಕಿಂತ ಹೆಚ್ಚಿನದೆಂದರೆ
“ಕವಿ ರೂಪಕ ಗಳ ಪ್ರಭುವಾಗಿರುವನು, ರೂಪಕ ನಿರ್ಮಿತಿಯನ್ನ ಮಾತ್ರ ಯಾರು ಬೇರೊಬ್ಬರಿಂದ ಕಲಿಯುವುದು ಸಾಧ್ಯವಿಲ್ಲ. ಕವಿಯ ಸೋಪಜ್ಞತೆಗೆ ಅದೊಂದು ಸಾಕ್ಷಿಯು ಹೌದು”
ಎಂದಿರುವ ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಆಚಾರ್ಯರಾದ ಅರಿಸ್ಟಾಟಲ್ ಮಾತನ್ನು ಉಲ್ಲೇಖಿಸುತ್ತಾರೆ. ನಾನು ಆ ದಾರಿಯಲ್ಲಿ ಸಾಗಿದ್ದರ ಪ್ರತಿಫಲಗಳು ಈ ಗದ್ಯಗಂಧಿ ಎಂದಿ ದ್ದಾರೆ. ಇವು ಗದ್ಯಗಳಂತೆ ಕಂಡರೂ ರೂಪಕಗಳು, ಲಯ, ಕಲ್ಪನೆ, ಮೃಧು ಮಧುರತೆಗಳಿಂದಾಗಿ ಪದ್ಯದ ಅನುಭೂತಿಯನ್ನು ನೀಡುತ್ತವೆ. ಇಂತಹ ಪ್ರಕಾರ ಕನ್ನಡಕ್ಕೆ ಹೊಸದಲ್ಲ ಎನ್ನುವ ಕಮಲ ಅವರು ಪದ್ಯ ಗದ್ಯಗಳನ್ನು ಸೇರಿಸುವ ಕ್ರಮ ಚಂಪೂ ಕಾವ್ಯದಿಂದಲೂ ಇರುವುದನ್ನ ಸ್ಮರಿಸು ತ್ತಾರೆ. ಇಲಾಲಿರುವ ಗದ್ಯಗಂಧಿಗಳು ಒಂದು ಘಟನೆ, ಪ್ರಸಂಗ, ಚಿತ್ರ, ಕಥೆಗಳಿಗೆ ಮಾತ್ರ ಸೀಮಿತ ವಾಗಿಲ್ಲ. ಅವು ಓದುಗರ ವಿಭಿನ್ನ ಹೊಳಹುಗಳಲ್ಲಿ ತೆರೆದುಕೊಂಡು ಭಿನ್ನ ವಿಭಿನ್ನ ಆಯಾಮಗಳಲ್ಲಿ ಅರ್ಥೈಸಿಕೊಳ್ಳುತ್ತವೆ.

ಕವಿ ಒಬ್ಬನಿಗೆ ಕಾವ್ಯಕ್ಕೆ ಸ್ಮರಿಸುವ ಅರ್ಥಕ್ಕೆ ಸಮ ಕಾಲಿನತೆಯ ಸ್ಪರ್ಶ ಒದಗಿಸುವಂತೆ ಮಾಡುವ ಕೌಶಲವಿರುತ್ತದೆ ಎರಡು ಭಿನ್ನ ವಿಷಯಗಳಲ್ಲಿ ವಸ್ತುಗಳಲ್ಲಿ ಸದೃಶ ಅಂಶಗಳನ್ನು ಕಾಣುತ್ತಾ ಮೂಡಿಸುವ ಚಿತ್ರವೊಂದಕ್ಕೆ ದರ್ಶನ ಧ್ವನಿ ಪ್ರಾಪ್ತ ವಾದರೆ ಕವಿಯ ಸಾರ್ಥಕತೆ ಕವಿಯ ಸಂವೇದನೆ ರೂಪ ತಾಳುವುದು ರೂಪಕದ ಮೂಲಕವಾದರೂ ರೂಪಕಗಳು ಕಾವ್ಯದ ಅಂಗಗಳೆ ಆಗಿದ್ದರು ಕೆಲವೊಮ್ಮೆ ಹೊರಮೈಗೆ ತೊಡಿಸಿರುವ ಚಿತ್ರ ಗಳಾಗಿ ಬಿಡಬಹುದಾದ ಸಾಧ್ಯತೆಗಳಿವೆ ಎಂಬ ಭಾವ ಕವಯತ್ರಿಯದು.

ವಲಸೆ,ವಿಸ್ಮೃತಿ,ಒಂಟಿತನ, ವೃದ್ಧಾಪ್ಯ, ಮನುಷ್ಯನ ಸೋಗಲಾಡಿತನ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪರಿಣಾಮ, ಅಧಿಕಾರ, ಸಿರಿವಂತಿಕೆ, ನಿರರ್ಥಕತೆ, ಪ್ರೀತಿ, ಆಧ್ಯಾತ್ಮ ನೆನಪು ಗಳು ಪ್ರಸಕ್ತ ರಾಜಕೀಯ ವಿದ್ಯಮಾನ ಇತ್ಯಾದಿ ಗಳು ಕಮಲ ರವರನ್ನು ಬಹುವಾಗಿ ಕಾಡಿ ರೂಪಕಾತ್ಮಕ ಕವಿತೆಗಳನ್ನ ಬರೆಸಿಕೊಂಡಿವೆ. ಇಲ್ಲಿ ಅವರು ಬಳಸಿರುವ ‘ನಾನು’ ಎಂಬುದು ಅವರಿಗೆ ಮಾತ್ರ ಅನ್ವಯವಲ್ಲ. ನಾನು ‘ಅವಳಾ’ಗಿ ಬಿಂಬಿತ ವಾಗಿದೆ. ಅವಳು ಎಲ್ಲ ಸ್ತ್ರೀಯರ ಪ್ರತಿನಿಧಿಯಾಗಿ ದ್ದಾಳೆ.
ಈ ಕವಿತೆಗಳನ್ನು ಧಾರವಾಡದ ರವಿಶಂಕರ್ ಅವರ ಸಂಪಾದಕತ್ವದ ಶ್ರಾವಣ ಬ್ಲಾಗನಲ್ಲಿ ಹದಿನೈದು ದಿನಗಳಿಗೊಮ್ಮೆ ಈ ‘ಗದ್ಯಗಂಧಿ’ ಕವಿತೆಗಳ ‘ಒಳನೋಟ’ವನ್ನ ನಿಮಗೂ ತಲುಪಿಸಲು ಅಂಕಣ ರೂಪದಲ್ಲಿ ಬರೆಯುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ.
✍️ಅನುಸೂಯ ಯತೀಶ್
ಬೆಂಗಳೂರು
