ವಸಂತಾಗಮನದ ಮೋಹಕ ವಾತಾವರಣ.
ಮರಬಳ್ಳಿಗಳೆಲ್ಲ ಹಸಿರು ಬಣ್ಣ ಹೊದ್ದು, ಭೂದೇವಿಗೆ ಕಟ್ಟಿ ತೋರಣ.
ಅನಿಸಿತು ಮನಸಿಗೆ ಮನ್ಮಥ ಮರಣದ ತಾಪವ ನೀಗಲು ಆಡುವರೆ ಬಣ್ಣದಾಟವ ಈ ಜನ.

ನೀಲ ವಣ೯ದ ತುಂಟ ಕೃಷ್ಣನ ರಮಿಸಲೆಂದು ಕೆಂಪಿನ ರಾಧೆಗೂ ನಿನ್ನದೇ ಬಣ್ಣ ಹಚ್ಚು ಎಂದಳಂತೆ ಮಾತೆ ಯಶೋದೆ.
ಬಳಿಯಲು ಬಣ್ಣವ ಸೇರಿದರೆಲ್ಲ ಕೃಷ್ಣ ಮಿತ್ರರು, ಎರಚುತ ಬಣ್ಣವ ಒಬ್ಬರಿಗೊಬ್ಬರು, ನಕ್ಕುನಲಿದಳು ರಾಧೆ.

ರಾಧಾ ಕೃಷ್ಣರ ನಿಷ್ಕಪಟ ಪ್ರೇಮದ ದ್ಯೋತಕವಾಗಿ ಎರಚುತ ನಲಿವರು. ಬಣ್ಣ ಬಣ್ಣಗಳ ಹಚ್ಚುತ,ಎರಚುತ ನಲಿವರು ಕಲಿಯುಗದಲ್ಲಿ ಪುರುಷರು, ಮಕ್ಕಳು,ಮಹಿಳೆಯರು.

ನರಸಿಂಹ ಅವತಾರನಾಗಿ ಹಿರಣ್ಯ ಕಶ್ಯುಪುವಿನ ಮದಿ೯ಸಿದ ಸುದಿನ
ದುರುಳತನದಲಿ ಕಪಟ ವೇಷ ತೊಟ್ಟು ಉಪಟಳ ಗೈಯುತ್ತಿದ್ದ ಹೋಲಿಕಾ ಳ ದಹಿಸಿದ ದಿನ.

ತಪೋನಿರತ ಕೈಲಾಸಾಧಿಪತಿ ಶಿವನ ಎಚ್ಚರಿಸಲು ದೇವತೆಗಳೆಲ್ಲ ಕಳುಹಿಸಿದರು ಮನ್ಮಥನ.
ಮುಗುದ ಮನ್ಮಥ ಲೋಕಕಲ್ಯಾಣಕ್ಕಾಗಿ ಅಳುಕದೇ ಬಿಟ್ಟ ಸುಮ ಬಾಣ.

ತಪಕೆ ಬಂದೆರಗಿದ ಘಾತದಿಂದ ಏರಿತು ಹರನ ಕೋಪ.
ಎನು,ಎತ್ತ ಯೋಚಿಸದೇ ತೆರೆದ ಮೂರನೇ ಕಣ್ಣ, ಮುಕ್ಕಣ್ಣ ಬೂದಿಯಾದ ಕಾಮಣ್ಣ ಪಾಪ.

ಹರಿಯಿತು ರತಿದೇವಿಯ ಕಣ್ಣೀರು.
ಸತಿಯ ತಾಪ ಪರಿಹಾರಕೆ ಅನಂಗನಾಗಿ ಕಾಣುವನೆಂದು ಹರಸಿದರು.

ಕೆಡುಕನು ಮದಿ೯ಸಿ, ಒಳಿತನು ಬಯಸಿ ಆಡಿರಿ ಎಲ್ಲರೂ ರಂಗಿನ ಆಟವನು.
ಪ್ರಾಕೃತಿಕ ಬಣ್ಣವ ಬಳಸಿರಿ, ತ್ವಚೆಯ ಆರೋಗ್ಯದೆಡೆ ಇರಿಸಿ ಗಮನವನು.

✍️ಶ್ರೀಮತಿ ರೇಖಾ ನಾಡಿಗೇರ 
ಹುಬ್ಬಳ್ಳಿ