ಹಗಲೆಲ್ಲ ಬಿಡದ ನಿರಂತರ ಒತ್ತಡದ ಕೆಲಸವಿದೆ ಹೆಂಗ ನೆನಪಾಗ್ತೀನಿ
ಇರುಳು ದಣಿದ ಮೈಮನ ನೋವು ಸೆಳೆತವಿದೆ ಹೆಂಗ ನೆನಪಾಗ್ತೀನಿ

ಸಂಸಾರ ನೌಕೆಯ ಪಯಣಿಗರು ನಾವು ಹುಟ್ಟು ಹಾಕುತ್ತಲಿರಬೇಕು
ದಡ ಸೇರಬೇಕಿದೆ ಚಂಡಮಾರತಗಳ ರಭಸವಿದೆ ಹೆಂಗ ನೆನಪಾಗ್ತೀನಿ

ಮರೆತಾಗ ನೆನಪಲ್ಲವೆ ಅಂತೆಲ್ಲ ಹೇಳಿ ಮಾತ ಗಾಳೀಲಿ ತೇಲಿಸುವೆ ನೀನು
ಎಂದೋ ಯಾವಾಗೋ ನಗೆ,ಮಾತು ಮೊರೆತವಿದೆ ಹೆಂಗ ನೆನಪಾಗ್ತೀನಿ

ಬಿಡುವಾದಾಗ ನೀನಿಲ್ಲ ನಿನಿದ್ದಾಗ ನಾನಿಲ್ಲ ನೆಪಗಳೇ ನೂರಾರು ಸಾವಿರ
ಸಮಯ ಅಧಿಪತಿ ಇಲ್ಲಿ ದರ್ಬಾರು ಹರಿತವಿದೆ ಹೆಂಗ ನೆನಪಾಗ್ತೀನಿ

ಒಣಬೇರು ಕೊನರಿ ಚಿಗುರಿ ಹಸಿರಾಗಿ ಮರವಾಗಿ ನೆರಳಾಗಿ ನಿಂತಿದೆ ಅನು
ಹಲವು ಅಹಮ್ಮುಗಳಲಿ ಸಿಲುಕಿ ಪ್ರೀತಿಗೂ ಬರವಿದೆ ಹೆಂಗ ನೆನಪಾಗ್ತೀನಿ

✍️ಅನಸೂಯ ಜಹಗೀರದಾರ
ಕೊಪ್ಪಳ