ನೂರಾರು ಮಂದಿ ಜಾತ್ರೆಯಲ್ಲಿ ನನ್ನವಳು ಎಲ್ಲಿ
ಪ್ರೀತಿ ಮಾತೊಂದನು ಹೊತ್ತು ತಂದವಳು ಎಲ್ಲಿ

ಮೀನದ ಕಣ್ಣು ಮಿಂಚಂಥ‌ ಕುಡಿ ಹುಬ್ಬುಗಳು
ಕನಸಿನ ಮಲ್ಲಿಗೆ ಹೂ ಮುಡಿಸುವವಳು ಎಲ್ಲಿ

ಹೊತ್ತಿಗೇ ನೇಸರನ ಚುಕ್ಕಿಯಿಟ್ಟಂತೆ ಮುದ್ದುಮೊಗ
ಮಾತು ಮಾತಿಗೆ ಮುಂಗುರುಳು ತೀಡುವವಳು ಎಲ್ಲಿ

ಭಾಷೆಯನೇ ಭಾವದಲಿ ಅದ್ದಿ ತೆಗೆದಂತೆ ಮಾತು
ಕಣ್ಸನ್ನೆಯಲೇ ಸದಾ ಮುಗುಳ್ನಗುವವಳು ಎಲ್ಲಿ

ಎಷ್ಟು ಬಣ್ಣಿಸಿದರೂ ಕೈಗೆಟುಕದ ಸೊಬಗಿನ ಸಿರಿ
ಜಾಲಿ ಸಿಟ್ಟಿಗೆ ಬೈದರೂ ಸರಿ ಮುದ್ದಿಸುವವಳು ಎಲ್ಲಿ

✍️ವೇಣು ಜಾಲಿಬೆಂಚಿ
ರಾಯಚೂರು.