ಆ ನೀಲಿ ಬಣ್ಣವೇ
ಹೃದಯದ ಗುಬ್ಬಿಗೂಡನ್ನು
ಸಾಗರವಾಗಿಸಿತ್ತು
ಒಡೆದು ನೋಡಿದರೆ
ಥೇಟ್ ಹಗಲ ಮುಗಿಲು
ಥಳಥಳಿಸುವ ತಾರೆಗಳಿಲ್ಲ
ಕೋಲ್ಮಿಂಚಿಲ್ಲ
ಕಾದು ಕಾದು ಬೆಂದುರಿದ
ಉಲ್ಕೆಗಳಿಲ್ಲ
ಕಡೆಯ ಪಕ್ಷ
ಒಂದು ಬಿಳಿಮುಗಿಲೂ
ಆದರೂ
ಏನೋ ಹೇಳುತ್ತಿದೆ
ಬಾಯ್ಬಿಡದೆಯೂ…
ಕೊನೆಯಿಲ್ಲದ ಪತ್ರವದು
ಎಂದೂ ಮುಗಿಯದ ಓದು
ಈಗಷ್ಟೇ ಹಾರಿ ಹೋದ
ಹಕ್ಕಿಗಳ ರೆಕ್ಕೆ ಗುರುತನ್ನು
ತಡಕಾಡಿದೆ,
ಮಿಸುಕಾಡಿದ್ದು ಹೃದಯ..
ಯಾರದ್ದೋ?!
ದಿನದಿನವೂ
ಹೊಸ ಅರ್ಥ, ಭಾವ, ಪುಳಕ
ನಿರಕ್ಷರ ರಾಗ
ತೆರೆದು ಕೂತಾಗ ನಿರಾಳ
ಎದೆಯುರಿಗೆ ಎಲರು
ಮುದುಡಿದ ಮನಕೆ ನೇವರಿಕೆ
ಸೋಲಿಗೆ ಸೋನೆ
ಕಣ್ಣೀರಿಗೆ ಹೆಗಲು
ಅಕ್ಷರಗಳು ಸಿಗಬಹುದು
ಕೈಗೆ ಮೆತ್ತಿಕೊಂಡು ಕಾಡಬಹುದು
ಬಿಡಿಸದ ಬೆಸುಗೆ
ಸಿಕ್ಕ ಅಕ್ಷರಗಳ ಜೋಡಿಸಿದರೆ
ಬರಿಯ ಜೋಡುನುಡಿ
ಒಮ್ಮೆ ಚುಚ್ಚಿ,
ಮತ್ತೊಮ್ಮೆ ಬೆನ್ನು ತಟ್ಟಿ
ಮಾಯ…
ಮೂಡಿದ ಪ್ರಶ್ನೆಗೆ
ಉತ್ತರವಿದೆ, ಹೇಳುವುದಿಲ್ಲ!
ಕೈಹಿಡಿದು ನಡೆಸುವ ಕಾಳಜಿ
ಸಮಾಧಾನದ ಗಂಧ
ಸ್ಪರ್ಶವಿಲ್ಲದ
ಅಪ್ಪುಗೆಯ ಅನುಭೂತಿ
ಮೋಡದಂತೆ ತೇಲಿ
ಕ್ಷಣಕ್ಕೊಂದು ರೂಪ
ಒಗಟು, ಸೂಚನೆ!
ಸಂಬಂಧಗಳು
ತಬ್ಬಿ ಮಲಗಿವೆ
ಹೆಗಲ ಮೇಲಿನ ಸ್ನೇಹ
ಖುಷಿಯ ಜಾತ್ರೆ ನೋಡಿದೆ
ಪ್ರೀತಿ
ಬೆರಳು ಹಿಡಿದು ನಡೆಸಿದೆ
ಬಣ್ಣದ ಕನಸ ದೋಣಿ ತೇಲಿದೆ
ಇಹಲೋಕಕ್ಕೆ ಕರೆತರುವ
ಚುಚ್ಚುವ ನೆಟ್ಟ ನೋಟಗಳಿವೆ
ಒಮ್ಮೊಮ್ಮೆ ಕೇಳಿಸುತ್ತದೆ
ನಗು! ಅಳು!
ಕೂತಲ್ಲೇ ನಡುಕ
ಹುಚ್ಚೆದ್ದು ಕುಣಿವ ಸಂಭ್ರಮ!
ಒಮ್ಮೆ ಬಣ್ಣದ ಓಕುಳಿ
ಕತ್ತಲೆ ಬೆಳಕು
ಆದರೆ
ಏನೂ ಇರದೆ ಎಲ್ಲಾ ಇರುವ
ಶೂನ್ಯದಂತೆ
ಒಂದು ಖಾಲಿ ಪತ್ರ

✍️ಸೌಮ್ಯ ದಯಾನಂದ
ಡಾವಣಗೆರೆ
