ಉತ್ಸಾಹದ ಚಿಲುಮೆಯಾಗಿ ಚೌಡಯ್ಯ ದಾನಪುರದಲ್ಲಿ ಗಾವಠಿ ಶಾಲಾ ಶಿಕ್ಷಕ ಹುದ್ದೆಗೆ ಸೇರಿ ಲೇಖರಾಗಿ, ಸಮಾಜ ಸೇವಕ ರಾಗಿ ವೃತ್ತಿ – ಪ್ರವೃತ್ತಿ ಎರಡರಲ್ಲೂ ಕನ್ನಡ ನಾಡು – ನುಡಿಗೆ ಅಮೋಘ ಕೊಡುಗೆ ನೀಡಿರುವ ಬಹುಮುಖ ಪ್ರತಿಭಾ ಸಾಗರ ‘ಜಯದೇವಯ್ಯ ಮಹದೇವಯ್ಯ ಮಠದ’ ರವರು ‘ನಡೆದಾಡುವ ಸಾಹಿತ್ಯ ಜಂಗಮ’ ರೆಂದು ಪ್ರತೀತಿರಾಗಿರುವ, ಜೆ.ಎಮ್ ಎಂದೇ ಖ್ಯಾತಿ ಪಡೆದು ಬರಹಗಾರರಾಗಿ ಜನ ಮಾನಸದಲ್ಲಿ ಹೂವಿನಂತ ಮಧುರ ಮೌಲ್ಯ ಪಸರಿಸಿರುವ ಸದ್ಗುಣ ಸಂಪನ್ನರ ಸರ್ವಾಧ್ಯಕ್ಷತೆಯಲ್ಲಿ ರಾಣೇಬೆನ್ನೂರಿನ ಎ.ಪಿ.ಎಮ್.ಸಿ ಸಮುದಾಯ ಭವನದಲ್ಲಿ ೧೧ – ೧೨ ಪೆಬ್ರವರಿ ೨೦೨೪ರ ಎರಡು ದಿನ ೧೩ ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವ ಪ್ರಯುಕ್ತ ಘನಮಾನ್ಯರ ವೃತ್ತಿ – ಪ್ರವೃತ್ತಿ ಸಮಾಜ ಮುಖಿ ಕಾರ್ಯದ ಮೇಲೆ ಬೆಳಕು ಚೆಲ್ಲುವ ಕಿರುಲೇಖನ)
ನಡೆದಾಡುವ ಸಾಹಿತ್ಯ ಜಂಗಮ ಆದರ್ಶ ಗುರುವರ್ಯ ಜೆ. ಎಮ್. ಮಠದರವರಿಗೆ ಒಲಿದು ಬಂದ ಹಾವೇರಿ ಜಿಲ್ಲಾ ೧೩ ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ (ಸಾರಥ್ಯ) ಘನತೆ.

ಜನಪರ ಲೇಖಕ, ಆದರ್ಶ ಶಿಕ್ಷಕ, ನಡೆದಾಡುವ ಗ್ರಂಥಾಲಯ, ರಾಜ್ಯ ಸಂಪನ್ಮೂಲ ವ್ಯಕ್ತಿ ಜೆ.ಎಮ್.ಮಠದರವರ ಸರ್ವಾಧ್ಯಕ್ಷತೆಯಲ್ಲಿ ೧೩ ನೆ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಭವಪಾಶ ಬಂಧನ ಬಿಡಿಸಿದ ಅಂಬಿಗರ ಚೌಡಯ್ಯ, ಮಹಿಳಾ ಸಶಕ್ತತೆ ಜಗತ್ತಿಗೆ ಸಾರಿದ ಸಂಚಿಯ ಹೊನ್ನಮ್ಮ, ಹಿಂದೂ – ಮುಸ್ಲಿಂ ಭಾವೈಕ್ಯತಾ ಕನ್ನಡದ ಕಬೀರ ಸಂತ ಶಿಶುನಾಳ ಶರೀಫರು, ಕುಲದ ಹಂಗು ಹರಸಿದ ಸಾಮರಸ್ಯ ಸಂತ – ಭಕ್ತ ಶ್ರೇಷ್ಠ ಕನಕದಾಸರು,ವರಕವಿ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕರವರು, ನಾಡೋಜ ಪಾಟೀಲ ಪುಟ್ಟಪ್ಪ, ಮೋಹನ ನಾಗಮ್ಮನವರ, ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಮೊದಲಾದ ವಿದ್ವನ್ಮಣಿ ಮಹನೀಯರುಗಳಿಗೆ ಜನ್ಮ ನೀಡಿದ ಹೆಮ್ಮೆಯ ಜಿಲ್ಲೆ ಹಾವೇರಿ. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಮೈಲಾರ ಮಹದೇವಪ್ಪನವರು, ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾ ಗಿದ್ದ ದಿವಂಗತ ಹಳ್ಳಿಕೇರಿ ಗುದ್ಲೆಪ್ಪನವರ ಸ್ವಾತಂತ್ರ್ಯ ಶೈಕ್ಷಣಿಕ ಕೊಡುಗೆ ಅನನ್ಯವಾ ದದ್ದು.
ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಹಾವೇರಿ ‘ಏಲಕ್ಕಿ ನಗರವೆಂದೆ’ ಖ್ಯಾತಿ ವೆತ್ತಿರುವಂತೆ ಸಾಹಿತ್ಯ – ಸಾಂಸ್ಕೃತಿಕ – ಐತಿಹಾಸಿಕ ಹಿರಿಮೆ ಹೊಂದಿದೆ. ಕನ್ನಡ ಪದ ಗಳಾದ “ಹಾವು” ಮತ್ತು “ಕೇರಿ” ಅಂದರೆ ಕೆರೆ ಎಂದರೆ “ಹಾವುಕೇರಿ” ಎಂಬ ಎರಡು ಪದಗಳಿಂದ ಹಾವೇರಿ ಎಂದಾಗಿದೆ. ಹಾವೇರಿ ಜಿಲ್ಲೆಯು ಗದಗ ಜಿಲ್ಲೆಯನ್ನೊಳಗೊಂಡಂತೆ ಈ ಮೊದಲು ಧಾರವಾಡ ಜಿಲ್ಲೆಯ ಭಾಗ ವಾಗಿತ್ತು. ಇಲ್ಲಿನ ಜನರ ಬೇಡಿಕೆಯಂತೆ ಬಹುದಿನಗಳ ಹೋರಾಟದ ನಂತರ ಧಾರವಾಡ ಜಿಲ್ಲೆಯಿಂದ ವಿಭಜಿಸಲ್ಪಟ್ಟು, ಹಾವೇರಿ ಜಿಲ್ಲೆ 24 ಅಗಸ್ಟ 1997 ರಂದು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಅಂದಿನಿಂದ ಇಂದಿನವರೆಗೆ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ೦೫ ಜನ ದಿಗ್ಗಜ ಅಧ್ಯಕ್ಷರುಗಳ ಸಾಹಿತ್ಯ ಪರಿಚಾರಿಕೆಯಲ್ಲಿ ೧೨ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು, ೦೧ ಮಹಿಳಾ ಸಾಹಿತ್ಯ ಸಮ್ಮೇಳನ ರಸ ಪೂರ್ಣವಾಗಿ ಜನಮಾನಸದಲ್ಲಿ ನಾಡು ನುಡಿ ಸಂಸ್ಕೃತಿಯ ಚಿಂತನೆ ಪ್ರವಹಿಸಿದೆ. ಅವುಗಳ ವಿವರ ಈ ಕೆಳಗಿನಂತೆ ಉಲ್ಲೇಖಿ ಸಬಹುದು.
ಹಾವೇರಿ ಜಿಲ್ಲಾ ೧೨ ಕನ್ನಡ ಸಾಹಿತ್ಯ ಸಮ್ಮೇಳನಗಳ ವ ೦೧ ಮಹಿಳಾ ಸಾಹಿತ್ಯ ಸಮ್ಮೇಳನದ ಕಿರು ನೋಟ:
*ಡಾ. ಕೆ. ಎಚ್. ಮುಕ್ಕಣ್ಣನವರ (೧೯೯೮ – ೨೦೦೧) ರವರ ಅವಧಿಯಲ್ಲಿ ಡಾ. ಬೋಜ ರಾಜ ಪಾಟೀಲ ಸರ್ವಾಧ್ಯಕ್ಷತೆಯಲ್ಲಿ ೦೧ ನೇ ಸಮ್ಮೇಳನವು ೨೧ – ೨೨ ಜನವರಿ ೨೦೦೦ರಂದು ರಾಣೇಬೆನ್ನೂರಲ್ಲಿ,
*೦೨ನೇ ಸಮ್ಮೇಳನವು ೧೬-೧೭ ಮಾರ್ಚ ೨೦೦೧ ರಂದು ಡಾ.ಪುಟ್ಟರಾಜ ಕವಿ ಗವಾಯಿಗಳ ಸಾರಥ್ಯದಲ್ಲಿ ಹಾವೇರಿಯಲ್ಲಿ ಯಶಕಂಡವು.
*ಶ್ರೀ ಎಸ್.ವೈ.ಗುಬ್ಬಣ್ಣನವರ (೨೦೦೧ – ೨೦೦೪) ಇವರ ಕಾಲಾವಧಿಯಲ್ಲಿ ಕಾರಣಾಂತರಗಳಿಂದ ಯಾವುದೆ ಸಮ್ಮೇಳನಗಳು ಜರುಗಿಲ್ಲ.
* ಪ್ರೊ.ಅ.ಸಿ.ಹಿರೇಮಠ (೨೦೦೪- ೨೦೦೮) ಅವಧಿಯಲ್ಲಿ ೦೩ ನೇ ಸಮ್ಮೇಳನನವು ಸಾಹಿತಿ ಎನ್.ಎಸ್.ಜೋಶಿವರ ನೇತೃತ್ವ ದಲ್ಲಿ ಸವಣೂರಲ್ಲಿ ೧೭-೧೮ ಮಾರ್ಚ್ ೨೦೦೮ನೇ ಇಸ್ವಿಯಲ್ಲಿ ಫಲಕಂಡಿತು.
*ಪ್ರೊ. ಮಾರುತಿ ಶಿಡ್ಲಾಪುರ (೨೦೦೮ – ೨೦೧೧) ರವರ ಕಾಲಾವಧಿಯಲ್ಲಿ
* ೦೪ ನೇ ಸಮ್ಮೇಳನವು ಡಾ. ಚನ್ನಕ್ಕ ಪಾವಟೆ ಮುಂದಾಳತ್ವದಲ್ಲಿ ಬಮ್ಮನ ಹಳ್ಳಿಯಲ್ಲಿ ೫ – ೬ ಪೆಬ್ರವರಿ ೨೦೦೯ನೇ ಇಸ್ವಿಯಲ್ಲಿ ಜರುಗಿದೆ.
*೦೫ ನೇ ಸಮ್ಮೇಳನವು ಸಾಹಿತಿ ಬಿ. ಜಿ. ಬಣಕಾರರ ನೇತೃತ್ವದಲ್ಲಿ ಹಿರೇ ಕೆರೂರರಲ್ಲಿ ೧೫ – ೧೬ ಪೆಬ್ರವರಿ ೨೦೧೦ ನೇ ಇಸ್ವಿಯಲ್ಲಿ ಆಯೋಜನೆಗೊಂಡಿತ್ತು.
*೦೬ ನೇ ಸಮ್ಮೇಳನ ಪ್ರೊ.ವಿರೂಪಾಕ್ಷಪ್ಪ ಕೋರಗಲ್ಲರ ಸರ್ವಾಧ್ಯಕ್ಷತೆಯಲ್ಲಿ ೨೩ -೨೪ ನವೆಂಬರ್ ೨೦೧೧ ನೇ ಇಸ್ವಿಯಲ್ಲಿ ಸಂಪನ್ನ ಗೊಂಡವು.
ಪ್ರೊ.ಜಿ.ಬಿ.ಮಾಸಣಗಿ (೨೦೧೧ – ೨೦೧೫) ಅವಧಿಯಲ್ಲಿ
*೦೭ ನೇ ಸಮ್ಮೇಳನವು ವೈಚಾರಿಕ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲರ ಸನ್ನಿಧಿ ಯಲ್ಲಿ ಹೊಸರಿತ್ತಿಯಲ್ಲಿ ೩೦ – ೩೧ ಜನವರಿ ೨೦೧೩ನೇ ಇಸ್ವಿಯಲ್ಲಿ,
*೦೮ ನೇ ಸಮ್ಮೇಳನವು ಪ್ರೊ.ಲಿಂಗರಾಜ ಕಮ್ಮಾರರ ಮುನ್ನಡೆಯಲ್ಲಿ ರಟ್ಟಿಹಳ್ಳಿಯಲ್ಲಿ ೦೭-೦೮ ಪೆಬ್ರವರಿ ೨೦೧೫ನೇ ಇಸ್ವಿಯಲ್ಲಿ ಫಲಶೃತಿಕಂಡವು.
ಪ್ರೊ. ಲಿಂಗಯ್ಯ ಬಿ. ಹಿರೇಮಠರವರ (೨೦೧೫ ರಿಂದ ಇಲ್ಲಿಯವರೆಗೆ) ಅವಧಿ ಯಲ್ಲಿ
*೦೯ ನೇ ಸಮ್ಮೇಳನವು ಸಾಮರಸ್ಯ ಸಾಹಿತಿ ಡಾ. ಮಹೇಶ ಜೋಶಿ ಯವರ ಸರ್ವಾಧ್ಯಕ್ಷತೆಯಲ್ಲಿ ಶಿಗ್ಗಾಂವದಲ್ಲಿ ೧೯ – ೨೦ ಜನವರಿ ೨೦೧೭ ರಲ್ಲಿ,
*೧೦ ನೇ ಸಮ್ಮೇಳನ ಬಂಡಾಯ ಸಾಹಿತಿ ಸತೀಶ ಕುಲಕರ್ಣಿಯವರ ಸರ್ವಾಧ್ಯಕ್ಷತೆ ಯಲ್ಲಿ ಅಕ್ಕಿಆಲೂರಲ್ ೧೬ – ೧೭ ಡಿಸೆಂಬರ್ ೨೦೧೭ರಲ್ಲಿ,
* ಹಾವೇರಿ ಜಿಲ್ಲಾ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನವು ಪ್ರೊ. ಗಿರಿಜಾದೇವಿ ದುರ್ಗದಮಠರ ಮುಖಂಡತ್ವದಲ್ಲಿ ಹಾವೇರಿಯಲ್ಲಿ ೨೪ ಪೆಬ್ರವರಿ ೨೦೧೮ನೇ ಇಸ್ವಿಯಲ್ಲಿ ಜರುಗಿದ್ದು ಐತಿಹಾಸಿಕ ದಾಖಲೆಯಾಗಿದೆ.
*೧೧ ನೇ ಸಮ್ಮೇಳನವು ಸಾಹಿತಿ ಡಾ. ಕೆ. ಎಚ್. ಮುಕ್ಕಣ್ಣವರ ಸರ್ವಾಧ್ಯಕ್ಷತೆಯಲ್ಲಿ ಬ್ಯಾಡಗಿಯಲ್ಲಿ ೧೯-೨೦ ಜನವರಿ ೨೦೧೯ ನೇ ವರ್ಷದಲ್ಲಿ ಜರುಗಿತು.
* ೧೨ ನೇ ಸಮ್ಮೇಳನ ಮಕ್ಕಳ ಸಾಹಿತಿ ಗಂಗಾಧರ ನಂದಿಯವರ ಸರ್ವಾಧ್ಯಕ್ಷತೆ ಯಲ್ಲಿ ಹಾವೇರಿಯಲ್ಲಿ ೨೭ – ೨೮ ಜನವರಿ ೨೦೨೦ ರಂದು ಸಾಂಗೋಪವಾಗಿ ನೇರವೆರಿದೆ.
ಪ್ರಸ್ತುತ ೧೩ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ರಾಣೇಬೆನ್ನೂರಲ್ಲಿ ನಡೆದಾಡುವ ಗ್ರಂಥಾಲಯ ಜೆ.ಎಮ್. ಮಠದರವರ ಸರ್ವಾಧ್ಯಕ್ಷತೆಯಲ್ಲಿ ೨೦೨೪ ರ ಪೆಬ್ರವರಿ ೧೧-೧೨ ರಂದು ಸರ್ವವಿಧದ ತಯಾರಿ ಯಿಂದಾಗಿ ಸಂಭ್ರಮದಿಂದ ಸಾಗಿದೆ. ಆ ಪ್ರಯುಕ್ತ ನಡೆದಾಡುವ ಜಂಗಮ, ಮೌಲಿಕ ಸಾಹಿತಿ, ಮಾನವ್ಯ ಅಂತಃಕರಣದ ಶಿಕ್ಷಕರಾದ ಮಠದ ಗುರುಗಳ ಬದುಕು- ಬರಹದ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಕಿರುಲೇಖನ ಇಲ್ಲಿದೆ.
ನಡೆದಾಡುವ ಗ್ರಂಥಾಲಯ ಜೆ.ಎಮ್. ಮಠದರವರ ಕೌಟುಂಬಿಕ ಹಿನ್ನೆಲೆ, ಬಾಲ್ಯ ಜೀವನ, ವಿದ್ಯಾಭ್ಯಾಸ – ವೃತ್ತಿಯ ಕಿರು ಪರಿಚಯ

ಸಮಾಜಮುಖಿ ಜೆ. ಎಮ್. ಮಠದ ಅವರ ಪೂರ್ಣ ಹೆಸರು ಜಯದೇವಯ್ಯ ಮಹದೇವಯ್ಯ ಮಠದ. ಬಡತನದ ಬೇಗೆಯಲ್ಲಿ ಗ್ರಾಮೀಣ ಪ್ರದೇಶದ ಕುಟುಂಬ ದಲ್ಲಿ ಬೆಳೆದ ಅವರ ಶಿಕ್ಷಣ ವಾರದನ್ನದ ಆಶ್ರಯದಲ್ಲಿ ನಡೆಯಿತು. ಭಾರತ ಸ್ವಾತಂತ್ರ್ಯ ಚಳುವಳಿ ಕಾವೇರಿದ್ದ ಸಂದರ್ಭದಲ್ಲಿ 25-03-1933 ರಲ್ಲಿ ರಾಣೇ ಬೆನ್ನೂರು ತಾಲೂಕು ಹೊಳೆ ಆನವೇರಿ ಗ್ರಾಮದಲ್ಲಿ ಜನನ. ಮಹದೇವಯ್ಯ ಮತ್ತು ಬಸಮ್ಮ ದಂಪತಿಗಳ ಕಿರಿಯ ಪುತ್ರ. 08-06-1955 ರಲ್ಲಿ ಕಾಟನ್ ಸೇಲ್ ಸೊಸಾಯಿಟಿಯಲ್ಲಿ ಗುಮಾಸ್ತನಾಗಿ ಕೆಲಸ ಆರಂಭಿಸಿದ ಇವರು 10-08-1957 ರಿಂದ ಖಾಸಗಿ ಶಾಲೆಯ ಶಿಕ್ಷಕರಾಗಿ ವೃತ್ತಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದರು. 15-06 -1962 ರಿಂದ 31- 03-1994 ರವರೆಗೆ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ ಶಿಕ್ಷಕ ರಾಗಿ, ಮುಖ್ಯೋಪಾಧ್ಯಾರಾಗಿ ಸೇವೆ ಸಲ್ಲಿಸಿ ದ್ದಾರೆ. ಇವರ ಯಶಸ್ವಿ ವೃತ್ತಿ ಜೀವನದ ಅಸಾಧಾರಣ ಸಾಧನೆ ಶೈಕ್ಷಣಿಕವಾಗಿ ಬೆಳಗು ವಂತೆ ಮಾಡಿದೆ. ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಇವರ ಸಾಧನೆ ಶಿಕ್ಷಕ ಸಮುದಾಯದಲ್ಲಿ ಇಂದಿಗೂ ಜೀವಂತ ಸಾಕ್ಷಿಯಾಗಿ ಉಳಿದುಕೊಂಡದ್ದು, ಇಂದಿನ ಪೀಳಿಗೆವರೆಗೂ ಮುಂದುವರೆದಿದೆ. ಇವರ ಶಿಷ್ಯ ಬಳಗ ಬಹಳ ದೊಡ್ಡದು. ಚೌಡಯ್ಯ ದಾನಪುರ ಗ್ರಾಮದಲ್ಲಿ ಶಿಕ್ಷಕ ವೃತ್ತಿ ಮೈಲಿ ಗಲ್ಲು. ಇವರ ಮನೆಯಲ್ಲಿಯೇ ಇದ್ದು; ಓದಿ ಬೆಳೆದವರು ಇಂದು ಸರ್ಕಾರದ ಗಣನೀಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಗಳಲ್ಲಿ ಸಕ್ರೀಯ ಪಾತ್ರವನ್ನು ನಿಭಾಯಿಸಿ ದ್ದಾರೆ.ಇವರು ತಮ್ಮ 9ನೇ ವಯಸ್ಸಿನಲ್ಲಿಯೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಹೊಳೆ ಆನವೇರಿ, ಮುದೇನೂರು, ಚಳಗೇರಿ ಗ್ರಾಮಗಳಲ್ಲಿ ಶಿಕ್ಷಣ ಪೂರೈಸಿದರು. ಜನ್ಮದಾತೆ ಬಸಮ್ಮ ಅವರ ಮಾತೃ ವಾತ್ಸಲ್ಯ ದಿಂದ ವಂಚಿತರಾದ ಇವರು ಬಡತನದ ಕಾರಣಕ್ಕೆ ಶಿಕ್ಷಣವನ್ನು ನಿಲ್ಲಿಸಬೇಕಾದ ಸಂದರ್ಭ ಎದುರಾದಾಗ ಬಸಮ್ಮ- ಮುರಿಗೆಪ್ಪ ದಂಪತಿಗಳು ಹುಬ್ಬಳ್ಳಿಯಲ್ಲಿ ಆಶ್ರಯ ನೀಡಿ ಶಿಕ್ಷಣದ ಜೊತೆಗೆ ನೈತಿಕ ಆದರ್ಶ ಮೌಲ್ಯ ಗಳನ್ನು ಧಾರೆ ಎರೆದರು. ಸದ್ಗುಣಗಳಿಗೆ ಮಾನ್ಯತೆ ದೊರೆಯುತ್ತದೆ ಎನ್ನಲು ಜೆ.ಎಮ್.ಮಠದ ಅವರ ಜೀವನ ನಡೆದು ಬಂದ ದಾರಿ ಜ್ವಲಂತ ಸಾಕ್ಷಿ. ಇವರು ಶಿಕ್ಷಣ ಕ್ಷೇತ್ರದಲ್ಲಿ ಹೂವಿನ ಹಾಸಿಗೆ ಹಾಸಿದ್ದಾರೆ. ಸಮಾಜಕ್ಕೆ ಹೂವ ತಂದು ಕೊಟ್ಟಿದ್ದೇನೆ ಎಂದು ಹೇಳುವ ಇವರನ್ನು ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಗುರುತಿಸಲು ವಿಪರೀತ ವಿಳಂಬ ಮಾಡಿರು ವುದಂತೂ ಸತ್ಯ. ಏಕೆಂದರೆ ಇವರಲ್ಲಿ ಜಾತಿ ಬಲವಿಲ್ಲ. ಉಘೇ ಉಘೇ ಎನ್ನುವ ಗುಂಪು ಗಾರಿಕೆಯ ದಂಡು ಕಟ್ಟಿಕೊಳ್ಳಲಿಲ್ಲ. ರಾಜಕೀಯ ಬೆಂಬಲ ಮೊದಲೇ ಇಲ್ಲ. ಪ್ರಭಾವ ಬೀರುವ ಉನ್ನತ ಸರ್ಕಾರಿ ಹುದ್ದೆ ಆಯ್ಕೆ ಮಾಡಿಕೊಳ್ಳಲು ಆರ್ಥಿಕ ಶಕ್ತಿ ಕೊರತೆ ಅಡ್ಡಿಯಾಗಿತ್ತು.
ಅನುಭಾವಿ ಜೆ. ಎಮ್. ಮಠದರವರ ವೇಷಭೂಷಣ ಆಹಾರ ವಿಹಾರ ಹವ್ಯಾಸ ವ್ಯಕ್ತಿತ್ವ
ಸಂಘಟನಾ ಚತುರ ಜೆ. ಎಮ್. ಮಠದ ಅಂದರೆ ಸಾಕು, ಬಿಳಿ ಕಚ್ಛೆ ಪಂಜೆ, ಬಿಳಿ ಶರ್ಟ್, ಬಗಲಲ್ಲಿ ಒಂದು ಬ್ಯಾಗು ಹಾಕಿ ಕೊಂಡು ನಡೆದಾಡಿಕೊಂಡು ಓಡಾಡುತ್ತಿರು ತ್ತಾರೆ ಎಂದೇ ಜನರ ಬಾಯಲ್ಲಿ ಬರುವ ಅಮೃತ ವಾಕ್ಯ. ಕೆಲವರು ಅವರನ್ನು ‘ನಡೆದಾಡುವ ಜಂಗಮ’ ಎನ್ನುತ್ತಾರೆ. ಕೆಲವರು ‘ನಡೆದಾಡುವ ದೇವರು’ ಎನ್ನುತ್ತಾರೆ. ಅವರನ್ನು ‘ನಡೆದಾಡುವ ಗ್ರಂಥಾಲಯ’ ಎಂದೂ ಕರೆಯುತ್ತಾರೆ. ಸಮಾಜದ ಮತ್ತು ಶಿಕ್ಷಣದ ಒಳಿತಿಗಾಗಿ ಶ್ರಮಿಸಿದ್ದಾರೆ. ನಿವೃತ್ತಿ ನಂತರವೂ ಮಾನವ ಸಂಪನ್ಮೂಲ ತರಬೇತಿ ನೀಡುವಲ್ಲಿ ನಜೀರ್ ಸಾಬ್ ಗ್ರಾಮೀಣ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ಗ್ರಾಮ ಪಂಚಾಯತಿ ಸದಸ್ಯರಿಗೆ ತರಬೇತಿ ನೀಡಿದ್ದಾರೆ. ಸರಳ ಸಾತ್ವಿಕ ಆಹಾರ ಇವರ ಆರೋಗ್ಯದ ಗುಟ್ಟಾಗಿದೆ. ಬರೆಯುವುದು, ಹಾಡುವುದು, ಚರ್ಮ ವಾದ್ಯಗಳನ್ನು ನುಡಿಸುವುದು ಇವರ ಹವ್ಯಾಸಗಳು. ಬುಲ್ ಬುಲ್ ಸಿತಾರ ನುಡಿಸುವುದು ಇವರಿಗೆ ಅತ್ಯಂತ ಖುಷಿ ಕೊಡುವ ವಾದ್ಯ. ಶಾಲೆಗಳಿಗೆ ಸ್ವಯಂ ಪ್ರೇರಿತವಾಗಿ ಭೇಟಿ ನೀಡಿ, ಮಕ್ಕಳಿಗೆ ಶುದ್ಧ ಅಕ್ಷರ ಬರಹ ಮತ್ತು ಕನ್ನಡದ ಸಂಖ್ಯೆಗಳನ್ನು ಬಳಸುವ ಬಗ್ಗೆ ಬರವಣಿಗೆಯ ಶಕ್ತಿಯನ್ನು ಜಾಗೃತಿ ಮೂಡಿಸಿ ಕನ್ನಡದ ಗಟ್ಟಿತನದ ಶಕ್ತಿಯ ಪರಿಚಯವನ್ನು ಸಾರ್ವತ್ರಿಕಗೊಳಿ ಸಲು ವಯಸ್ಸು 88 ಆದರೂ ಚಿರ ಯುವಕ ನಂತೆ ಪುಟಿದೇಳುವ ಉತ್ಸಾಹ. ಜೆ. ಎಮ್. ಮಠದ ಅವರಿಗೆ ಜೆ. ಎಮ್. ಮಠದ ಅವರೇ ಸರಿ ಸಾಟಿ. ಅತ್ಯಂತ ಸೌಮ್ಯ ಮತ್ತು ಮುಗ್ಧ ಮನೋಭೂಮಿಕೆ ಅವರದು. ಕಪಟವಿಲ್ಲದ ಆಚಾರ ವಿಚಾರಗಳು. ಅವರ ಸೌಮ್ಯ ಸ್ವಭಾವವೇ ಅವರಿಗೆ ಮುಳುವಾದು ದುಂಟು.ಸಾಹಿತ್ಯ ಸೇವೆಯಲ್ಲಿಯೂ ಅನನ್ಯ ಸೇವೆ ಮಾಡಿ, ಸ್ಮರಣೀಯವಾಗಿ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಜೀವನ ದುದ್ದಕ್ಕೂ ಮೌಲ್ಯಗಳ ಅಳವಡಿಕೆ, ಆದರ್ಶಗಳ ಪಾಲನೆ, ನಿಯತ್ತಿನ ಲವಲವಿಕೆಯ ಚಟುವಟಿಕೆಗಳನ್ನು ಮಾಡುತ್ತಲೇ ಇರುವ ಕಾರ್ಯ ವೈಖರಿ ಯುವಕರನ್ನೇ ನಾಚಿಸು ವಂತಿದೆ.
ಉತ್ಸಾಹದ ಕಡಲು ಜೆ. ಎಮ್. ಮಠದ ಗುರುಗಳು ಸಂಘ – ಸಂಸ್ಥೆ ಗಳೊಂದಿಗೆ ಸಾಧಿಸಿರುವ ಅಸಾಧಾರಣ ಕಾರ್ಯ ಚಟುವಟಿಕೆಗಳು
೧೯೭೧ರಲ್ಲಿ ಚೌಡಯ್ಯದಾನಪುರದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಸಂಸ್ಥಾಪಕ ಗೌರವ ಕಾರ್ಯದರ್ಶಿಯಾಗಿ ೨೫ ವರ್ಷಗಳಿಂದ ಅಮೋಘ ಸೇವೆ, ೧೯೭೨ರಲ್ಕಿ ಶಿವದೇವಾ ಯುವಕ ಸಂಘ ಸ್ಥಾಪಕ ಕಾರ್ಯದರ್ಶಿ, ೧೯೭೩ರಲ್ಕಿ ತಾ.ಶಿ. ಶಿ.ಯರ ಸಹಕಾರಿ ಸಂಘದ ಅಧ್ಯಕ್ಷರಾಗಿ ನಿಧಿ ಸಂಗ್ರಹಿಸಿ ಕಟ್ಟಡ ನಿರ್ಮಾಣ, ೧೯೮೬ ರಲ್ಲಿ ಅಖಂಡ ಧಾರವಾಡ ಜಿಲ್ಲಾ ದಕ್ಷಿಣ ಭಾಗದ ಶಿಕ್ಷಕ/ ಕಿಯವರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸ್ಥಾಪಿಸಿ ೧೯೮೮ರಿಂದ ಅಧ್ಯಕ್ಷರಾಗಿ ರಚನಾತ್ಮಕವಾದ ಕಾರ್ಯ ಕಲಾಪಗಳನ್ನು ಮಾಡುತ್ತಿದ್ದಾರೆ. ರಾಜ್ಯ ಸಾಕ್ಷರತಾ ಯೋಜನೆ ಮತ್ತು ಎಸ್.ಐ.ಆರ್. ಡಿ. ಮೈಸೂರು ಸಂಪನ್ಮೂಲ ವ್ಯಕ್ತಿಯಾಗಿ, ರಾಜ್ಯ ಬಾಲ ವಿಕಾಸ ಅಕಾಡೆಮಿಯ ಸದಸ್ಯರಾಗಿ, ಹಾವೇರಿ ಜಿಲ್ಲಾ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ,ಶ್ರೀ ವ್ಹಿ.ಪಿ.ಲದ್ವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಯಾಗಿ, ೨೦೦೩ರಿಂದ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ತಕ್ಷರಾಗಿ, ೨೦೦೯ ರಿಂದ ಚೌಡಯ್ಯದಾನಾಪುರದ ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ ಸಂಸ್ಥಾಪಕರಾಗಿ ತಮ್ಮ ೮೮ ರ ವೃದ್ಧಾಪ್ಯದ ಬಾಳ ಮುತ್ಸಂಜೆಯಲ್ಲೂ ಉತ್ಸಾಹದ ಚಿಲುಮೆಯಾಗಿ ಯುವಜನಾಂಗಕ್ಕೆ ಮಾದರಿ ಯಾಗಿದ್ದಾರೆ.
ಸಮಾಜದಲ್ಲಿರುವ ಅನಿಷ್ಟ, ಅಪಮೌಲ್ಯ ಗಳನ್ನು ಹೊಡೆದಟ್ಟಿದ ಮುಂಚೂಣಿ ಕಾರ್ಯಕರ್ತರಾಗಿ ಮಠದ ಗುರುಗಳು ಬರೆದಿರುವ ನೀತಿಪರ ಗ್ರಂಥಗಳು

೨೦೦೪ರಲ್ಲಿ ದೂರದರ್ಶನ ಚಂದನದ ಬೆಳಗು ಕಾರ್ಯಕ್ರಮದಲ್ಲಿ ವ್ಯಕ್ತಿ ಚಿತ್ರಣ ಸಂದರ್ಶನ ಪ್ರಸಾರ ಕಂಡಿರುವ ಹಿರಿಯ ಜೀವ ಸಾಹಿತ್ಯ ಸೇವೆಯಲ್ಲಿಯೂ ಅನನ್ಯ ಸೇವೆಗೈಯುತ, ಸ್ಮರಣೀಯ ಮೌಲಿಕ ಕೃತಿ ಗಳನ್ನು ರಚಿಸಿದ್ದಾರೆ. ಇವರು ಬರೆದಿರುವ ಕೃತಿಗಳಲ್ಲಿ “ಮೊದಲು ಮಾನವನಾಗು” ಕೃತಿ ಜನಪ್ರೀಯವಾದ ಅವರ ಬರಹಗಳ ಗುಚ್ಛ.

“ಬದುಕು ಚಹಾದ ಬಟ್ಟಲಲ್ಲ” ಕೃತಿಯಲ್ಲಿ ಅದರ ತಲೆ ನಾಮವೇ ಹೇಳು ವಂತೆ ಗಂಭೀರವಾದುದನ್ನು ಅರಗಿಸಿಕೊಳ್ಳ ಬೇಕು ಎಂದು ಸೂಕ್ಷ್ಮವಾಗಿ ನುಡಿಯುತ್ತದೆ.

‘ಹಾಡು ನಿಮ್ಮವು, ಹಾಡುವ ಭಾಗ್ಯ ನನ್ನದು’, ‘ಬಾಲವನ’ ಮಕ್ಕಳ ಕವನ ಸಂಕಲನ, ‘ಚಿಂತನಪರ’ ‘ಕತ್ತಲಿನಿಂದ ಬೆಳಕಿನೆಡೆಗೆ, ‘ಚೌಡಯ್ಯದಾನಪುರ ಕ್ಷೇತ್ರ ಮಹಿಮೆ’, ‘ಬಾಲಕ ಶಿಕ್ಷಕ ಮತ್ತು ಪಾಲಕ‘ ಕೃತಿಗಳು ಪ್ರಕಟಣೆಗೊಂಡು ಓದುಗರ ಮೆಚ್ಚುಗೆ ಗಳಿಸಿವೆ.

ಪ್ರೊ.ಜಿ.ಬಿ.ಮಾಸಣಗಿಯವರು ಮಠದ ರವರ ಷಷ್ಠ್ಯಬ್ದಿ ಸಮಾರಂಭದಲ್ಲಿ ‘ಅರಿವಿನ ಕುರುಹು’ ಅಭಿನಂದನಾ ಗ್ರಂಥ ಅರ್ಪಣೆ ಮಾಡಿದ್ದಾರೆ. ಪತ್ರಿಕೆಗಳಲ್ಲಿ, ದೂರದರ್ಶನ ದಲ್ಲಿ, ಆಕಾಶವಾಣಿ ಯಲ್ಲಿ ವಿವಿಧ ಚಿಂತನ ಬರಹಗಳು ಪ್ರಕಟವಾಗಿವೆ, ಪ್ರಸಾರವಾಗಿವೆ. ಇಂದಿಗೂ ಆಕಾಶವಾಣಿಯಲ್ಲಿ ಬೆಳಗಿನ ಚಿಂತನ ಕಾರ್ಯಕ್ರಮದಲ್ಲಿ ಇವರ ಚಿಂತನ ಧ್ವನಿ ಪ್ರಸಾರವಾಗುವುದನ್ನು ಗಮನಿಸ ಬಹುದು. ಅದೇನೇ ಇರಲಿ, ಜೆ. ಎಮ್. ಮಠದ ಅವರ “ಕತ್ತಲಿಂದ ಬೆಳಕಿನೆಡೆಗೆ” ಕೃತಿ ಎಲ್ಲರಿಗೂ ಅಚ್ಚುಮೆಚ್ಚು.

ನಡೆದಾಡುವ ಸಾಹಿತ್ಯ ಜಂಗಮ ಜೆ. ಎಮ್. ಮಠದರವರ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮಹಾ ಶರಧಿಯ ಕ್ಲುಪ್ತ ಮಾಹಿತಿ.
ಸಾಕ್ಷರತೆ, ಸಾಹಿತ್ಯ ಮತ್ತು ಶೈಕ್ಷಣಿಕ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಧೀ ಶಕ್ತಿಯಾಗಿ ಶೈಕ್ಷಣಿಕ ನೆರವು ನೀಡುತ್ತ, ಚೌಡಯ್ಯ ದಾನ ಪುರ, ಹರನಗಿರಿ, ಹಿರೇಕೆರೂರು, ಕವಲೆತ್ತು, ಗುತ್ತಲ, ಹೊನ್ನತ್ತಿ, ಮೇದೂರು ಮುಂತಾದೆಡೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ಸಂಘಟನೆ ಮಾಡಿದ್ದಾರೆ. ಸೇವಾದಳದಿಂದ ದೇಶಭಕ್ತಿ ಗೀತೆಗಳ ಕಾರ್ಯಾಗಾರ, ಕವಿ ಗೋಷ್ಟಿಗಳ ಆಯೋಜನೆ, ತಾಲೂಕ- ಜಿಲ್ಲಾ -ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಿಲ್ಲಾ ವ್ಯಾಪ್ತಿಯ ಶಿಕ್ಷಕರ ಸಮಾ ವೇಶವನ್ನು ಮಾಡಿದ್ದಾರೆ.ನಗರವಾರ್ತೆ ಸಹಯೋಗದಲ್ಲಿ ‘ನಕ್ಕು ನಗಿಸೋಣ’, ‘ಗೊಂಬೆ ಆಟ’, ‘ಜಾನಪದ’, ಹಾಡುಗಾರಿಕೆ ಪ್ರದರ್ಶನ ಮಾಡಿಸಿದ್ದಾರೆ. ಅಂಗವಿಕರಿಗೆ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಮತದಾನ ಜಾಗೃತಿ ಆಂದೋಲನ ಕರಪತ್ರ ಪ್ರಕಟಣೆ ಮಾಡಿದ್ದಾರೆ. ಕ.ಸಾ.ಪ ಮತ್ತು ಮ.ಸಾ.ಪ ವೇದಿಕೆ ಸಹಯೋಗದಲ್ಲಿ ಶಾಲೆಗೊಂದು ಸಾಹಿತ್ಯ 150ಕ್ಕೂ ಅಧಿಕ ಹಾಗೂ ಶಾಲೆಗೊಂದು ಮೌಲ್ಯ ಶಿಕ್ಷಣ 450ಕ್ಕೂ ಅಧಿಕ ಕಾರ್ಯಕ್ರಮ ನೀಡಿ ಮಕ್ಕಳಲ್ಲಿ ಮೌಲ್ಯ ಮೇಳೈಸಿದ್ದಾರೆ. ಕನ್ನಡ ಭಾಷೆಯಲ್ಲಿ ಉತ್ತಮ ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸಿದ್ದಾರೆ. ಶುದ್ಧ ಬರಹ ಹಾಗೂ ದುಂಡು ಬರಹಕ್ಕೆ ಮಾರ್ಗದರ್ಶನ, ಅರ್ಹರಿಗೆ ವಿಧವಾ ಮತ್ತು ವೃದ್ಧಾಪ್ಯ ವೇತನ ಒದಗಿಸುವಲ್ಲಿ ಸಹಕಾರ ನೀಡಿದ್ದಾರೆ. ಚಿತ್ರ ಕಲಾ ಮೇಳ, ವಚನ ಪಠಣ, ಆರೋಗ್ಯ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದಾರೆ. ಅರವಿಂದ, ಸುಭಾಷ ಚಂದ್ರ ಭೋಸ್, ಬಸವಣ್ಣ, ಅಂಬಿಗರ ಚೌಡಯ್ಯ, ಸರ್ವಜ್ಞ, ವೇಮನ ಹಲವು ಮಹನೀಯರ ಜಯಂತಿ ಆಚರಣೆ ಸಂದರ್ಭಗಳಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ, ಧಾರವಾಡ ಆಕಾಶವಾಣಿ ಯಲ್ಲಿ ಹಲವು ಬಾರಿ ಚಿಂತನ, ಬಾಂದನಿ ಕಾರ್ಯಕ್ರಮ ಹಾಗೂ ಜೀವನ ಸಾಧನೆಯ ಸಂದರ್ಶನ ಬಿತ್ತರಗೊಂಡಿವೆ. ಮಕ್ಕಳು ಮತ್ತು ಮಹಿಳೆಯರಿಗೆ ಮ್ಯಾಟ್ ಹೆಣಿಕೆ, ದಂತಪುಡಿ ತಯಾರಿಕೆ, ಗ್ರಾಮ ಪಂಚಾಯತಿ ಸದಸ್ಯರಿಗೆ, ಪ್ರತಿನಿಧಿಗಳಿಗೆ ತರಬೇತಿ, ಐತಿಹಾಸಿಕ ಪರಂಪರೆಯನ್ನು ಉಳಿಸಲು ಆಂದೋಲನ, ಒಂದು ದಶಕದಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ಉಕ್ತಲೇಖನ, ನಾಡಗೀತೆ ಸ್ಪರ್ಧೆಗಳ ಆಯೋಜನೆ. ಎಪ್ರಿಲ್ ೨೩ರಂದು ವಿಶ್ವಪುಸ್ತಕದಿನಾಚರಣೆ ಯಂದು ‘ಪುಸ್ತಕ ಬೆಳಕು’ ಹಸ್ತ ಪ್ರತಿ ವಿತರಣೆ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು, ವಿಪರೀತ ಟಿ.ವಿ, ಮೊಬೈಲ್ ಬಳಕೆಯಿಂದಾ ಗುವ ದುಷ್ಪರಿಣಾಮ ಬಗ್ಗೆ ಜಾಗೃತಿ ಮಾಹಿತಿ ಯ ಸುದ್ಧಿ ಕೌರವ, ಹೊಸದಿಗಂತ ಪತ್ರಿಕೆ ಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ರೂ.೩೦ ಸಾವಿರ ಧನ ಸಹಾಯ ನೀಡಿದ್ದಾರೆ. ವಿದ್ಯಾರ್ಥಿಗಳ ಶ್ರೇಯೊಭಿವೃದ್ದಿಗಾಗಿ ದಾನಿಗಳಿಂದ ಲಕ್ಷಾಂತರ ರೂಪಾಯಿಗಳ ದತ್ತಿ ಸ್ಥಾಪನೆ ಮಾಡಿಸಿದ್ದಾರೆ. ಬಹುಶೃತ ಸೇವೆಗೈದಿರುವ ಮಠದ ಗುರುಗಳಿಗೆ ೫೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಕೊಡುಗೈ ದಾನಿ ಜೆ. ಎಮ್. ಮಠದ ಅವರ ಬಗ್ಗೆ ಅವರ ಒಡನಾಡಿಗಳು ನುಡಿದಿರುವ ಅಪರೂಪದ ನುಡಿ ತೋರಣ-ಅಭಿಪ್ರಾಯ ಮಾಲೆ
*ಈಶ್ವರ್ ಕಮ್ಮಾರ ಸಂಪಾದಕರು ಮಕ್ಕಳ ಮಂದಿರ ಧಾರವಾಡ ಇವರು ಹೇಳಿರುವಂತೆ ಆದರ್ಶ ಶಿಕ್ಷಕರು ಒಳ್ಳೆಯ ಬರಹಗಾರರು, ಚಿಂತಕರು, ಸಾಕ್ಷರತೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು. ಸಮಾಜದಲ್ಲಿ ಹಾಸು ಹೊಕ್ಕಾಗಿ ಬೆರೆತು ತನ್ನಿಂದಾಗುವ ಅಳಿಲು ಸೇವೆ ಸಲ್ಲಿಸುವುದರಲ್ಲಿ ನಿಪುಣರು ನಿರತರು.
*ಶಿಶು ಸಂಗಮೇಶ ಇವರು ಹೇಳುವ ಪ್ರಕಾರ : ಇಂದಿನ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುವ ಮಾಧ್ಯಮಗಳಿಂದ ಮಕ್ಕಳು ದೂರವಿರಲು ಸತ್ಪಥದಲ್ಲಿ ಸಂಚರಿ ಸುವಂತೆ ಮಾಡಲು ಮಕ್ಕಳ ಸಾಹಿತ್ಯ ಒಂದೇ ದಾರಿದೀಪವಾಗಿದೆ. ದಾರಿ ದೀಪ ತೋರಿಸುವ ಹಿರಿಯರಲ್ಲಿ ಜೆ.ಎಂ.ಮಠದ ಅವರು ಒಬ್ಬರು.
*ಎಸ್.ಡಿ.ನೀಲಣ್ಣನವರ ಅವರ ಹೇಳಿಕೆ ಪ್ರಕಾರ : ಜೆ.ಎಮ್.ಮಠದ ಅವರ ಬಗ್ಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಸರಿಸಾಟಿ ಬೇರಿಲ್ಲ. ಇವರನ್ನು ಜೆಮ್ ಎಂದು ಹಿಂದಿನ ಸಹಾಯಕ ಶಿಕ್ಷಣಾಧಿಕಾರಿ ಎನ್.ಎಮ್. ಜೋಶಿ ಹೇಳಿದ್ದನ್ನು ನಾನು ಸ್ಮರಿಸಿಕೊಳ್ಳು ತ್ತೇನೆ ಎಂದಿದ್ದಾರೆ.
*ರಾಣೇಬೆನ್ನೂರಿನ ಹಿರಿಯ ನಿವೃತ್ತ ಪ್ರಾಧ್ಯಾಪಕರಾಗಿದ್ದ ನಾ.ರಾ.ಜೋಶಿ ಅವರು ಜೆ.ಎಮ್.ಮಠದ ಉತ್ಸವ ಪ್ರಿಯರಾಗದೆ ಜೀವನದ ಮೂಲಭೂತ ತತ್ವವನ್ನು ಅನುಷ್ಠಾನಕ್ಕೆ ತರಲು ನೆರವಾಗುವಂತಹ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಮಠದ ಮಾಡಿದ ಕೆಲಸಗಳನ್ನು ಗುರುತಿಸಿ ನುಡಿದಿದ್ದಾರೆ.
*ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ದಿ.ಎಸ್. ಎಮ್. ವೃಷಬೇಂದ್ರಸ್ವಾಮಿ ಪ್ರಕಾರ : ಜಯದೇವ ಮಠದ ಅವರು ಮೊದಲು ಮಾನವನಾಗು ಎಂದು ಮನ ಸೆಳೆಯು ವಂತಹ ಮಾತುಗಳನ್ನು ಬರಹಕ್ಕೆ ಇಳಿಸುವ ಮೂಲಕ, ನೋಡುವ ಜೀವನದ ದೃಷ್ಟಿ ಶಿಕ್ಷಣದ ಅನುಭವ ಅಭ್ಯಾಸ ಸಾಂದ್ರ ಪರಿಣಾಮವನ್ನು ಅವರ ಬರಹಗಳಲ್ಲಿ ಗುರುತಿಸಬಹುದು ಎಂದಿದ್ದಾರೆ.
ಶ್ರೀ ಎ.ಎಫ್.ಹನುಮರಡ್ಡೇರರವರು ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಿದ್ದವರು; ಜೆ. ಎಂ.ಮಠದರವರೊಂದಿಗೆ ಅತ್ಯಂತ ಸಮೀಪದ ಒಡನಾಟ ಇಟ್ಟುಕೊಂಡಿದ್ದ ವರು. ರಾಜ್ಯ ಪ್ರಶಸ್ತಿ ಪುರಸ್ಕೃತ ಜೆ.ಎಂ. ಮಠದ ಅವರು ಶಿಕ್ಷಣ ಶಿಕ್ಷಕರ ಸಹಕಾರಿ ಸಂಘ ಸಾಕ್ಷರತಾ ಆಂದೋಲನ ಶಾಲಾ ವಿದ್ಯಾರ್ಥಿ ಗಳಿಗೆ ವಚನಗಳ ಕಂಠ ಪಾಠ ಸ್ಪರ್ಧೆ, ಮಕ್ಕಳ ಶಿಬಿರದ ಏರ್ಪಾಡು ಧಾರವಾಡ ಜಿಲ್ಲಾ ದಕ್ಷಿಣ ಭಾಗದ ಶಿಕ್ಷಕ ಶಿಕ್ಷಕಿಯರ ಸಾಹಿತ್ಯ ಮತ್ತು ಕಲಾವೇದಿಕೆ 1986 ರಲ್ಲಿ ಸ್ಥಾಪನೆಯಾಗುವಂತೆ ಶ್ರಮಿಸಿ ಶಿಕ್ಷಕರ 32 ಕೃತಿಗಳನ್ನು ಪ್ರಕಟಣೆ ಮಾಡಿ ದ್ದಾರೆ ಇವೆಲ್ಲ ವುಗಳಲ್ಲಿ ಹೌದನ್ನುವಂತೆ ಉತ್ತಮ ಕಾರ್ಯ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಕನ್ನಡ ಪ್ರೇಮಿ ಮಾನ್ಯ ಜೆ. ಎಮ್. ಮಠದ ಅವರ ಶಿಷ್ಯ ಬಳಗ ಬಹಳಷ್ಟು ದೊಡ್ಡದು.
* ಅವರ ಶಿಷ್ಯ ಸಿಗ್ಲಿ ಫಕೀರೇಶ ಅವರು ಹೀಗೆ ಹೇಳಿದ್ದಾರೆ: ಅಂದು ಜೆ ಎಂ ಮಠದ ಗುರುಗಳು ನೀಡಿದ ಶಿಕ್ಷಣ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶಾರದಮ್ಮನವರು ತಾಯಿಯಂತೆ ನನಗೆ ವಾತ್ಸಲ್ಯ ತೋರಿಸಿದ್ದ ರಿಂದಾಗಿ ಇಂದು ನಾನು ಒಬ್ಬ ಶಿಕ್ಷಕನಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಗುರುಗಳು ಸೇವೆಯಲ್ಲಿ ಅಪಾರ ಅನುಭವ ಪಡೆಯಲು ಶಿಸ್ತು, ಸಮಯ ಪಾಲನೆ, ಕಷ್ಟ ಸಹಿಷ್ಣುತೆ, ವಿದ್ಯಾರ್ಥಿಗಳ ಮೇಲಿನ ಮಮತೆ ಇವೆಲ್ಲವು ಗಳಿಗೆ ಅವರ ಶ್ರೀಮತಿ ಶಾರದಮ್ಮ ಅವರ ನಿಸ್ಪೃಹ ಸಹಕಾರ ಸೇವೆಗಳು ಕಾರಣ ಎಂದರೆ ಅತಿಶಯೋಕ್ತಿಯಲ್ಲ.
*ಶ್ರೀಮತಿ ಗಿರಿಜಾ ಕೊ. ಚಲವಾದಿ ಹೀಗೆ ಹೇಳುತ್ತಾರೆ: ಶ್ರೀ ಜೆ.ಎಂ.ಮಠದ ಗುರುಗಳು ಒಬ್ಬ ವಿಶಿಷ್ಟ ವ್ಯಕ್ತಿ. ಇನ್ನೊಬ್ಬರು ನೋಡಿ ಕಲಿಯಬೇಕಾದ ಅನೇಕ ಗುಣಗಳು ಇವರಲ್ಲಿವೆ. ಸಹನೆ, ಕರುಣೆ, ಸತತ ಪ್ರಾಮಾಣಿಕ ದುಡಿಮೆ ಇನ್ನೊಬ್ಬರ ಮನ ನೋಯದಂತೆ ನಡೆದುಕೊಳ್ಳುವ ರೀತಿ ಇವೆಲ್ಲ ಅವರನ್ನು ಉನ್ನತ ಸ್ಥಾನದಲ್ಲಿರಿಸಿವೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕಾ ದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಬೇಕಾದಂತಹ ವ್ಯಕ್ತಿ.
*ಶ್ರೀ ಗೋಣೆಪ್ಪ ಮೈಲಾರ ಹೇಳುತ್ತಾರೆ: ಜೆ.ಎಂ.ಮಠದರವರಲ್ಲಿ ಒಬ್ಬ ಕಲಾವಿದ ಇದ್ದಾನೆ. ಮುಖ್ಯ ಪಾತ್ರ ಮಾಡಬೇಕಾಗಿದ್ದ ಕಲಾವಿದ ರೊಬ್ಬರಿಗೆ ಸಮಯಕ್ಕೆ ಸರಿಯಾಗಿ “ಬಾಸಿಂಗ ಬಲ” ಎಂಬ ರಂಗಭೂಮಿಯ ನಾಟಕ ಪ್ರದರ್ಶನಕ್ಕೆ ನಟಿಸಲು ಸಾಧ್ಯವಾ ಗದೆ ಹೋದಾಗ ಜೆ.ಎಂ.ಮಠದ ಅವರು ಒಂದೇ ದಿನದಲ್ಲಿ ಆ ಪಾತ್ರದ ಒಟ್ಟು ಶಕ್ತಿ ಯನ್ನು ಓದಿಕೊಂಡು ಅರ್ಥಮಾಡಿ ಕೊಂಡು ಅತ್ಯಂತ ಶಕ್ತಿಶಾಲಿ ಯಾಗಿ ಪಾತ್ರವನ್ನು ಅಭಿನಯಿಸಿ ವೀಕ್ಷಕ ರಿಂದ ಶಹಭಾಸ್ ಗಿರಿ ಪಡೆದಿದ್ದಾರೆ. ಅವರಲ್ಲಿರುವ ನೆನಪಿನ ಶಕ್ತಿಗೆ ಅಂದು ಆಡಿದ ನಾಟಕದ ಪ್ರದರ್ಶನ ಅವರಲ್ಲಿನ ಕಲಾವಿದನನ್ನು ಬಹಿರಂಗ ಮಾಡಿತ್ತು.
*ಜೆ.ಎಮ್.ಮಠದ ಹಿರಿಯ ಪುತ್ರರಾದ ಜೆ.ಎಂ.ರಾಜಶೇಖರರವರು ತಮ್ಮ ತಂದೆಯ ಬಗ್ಗೆ ಹೇಳುವುದೇನೆಂದರೆ: ನನ್ನ ಅಪ್ಪ ನನಗೆ ಸಾಹೇಬ. ನನ್ನ ಅಪ್ಪ ಆದರ್ಶ ಶಿಕ್ಷಕ.ಅವರು ನನಗೆ ಗುರುವಾಗಿ ಅಕ್ಷರ ಕಲಿಸಿದಾಗ ತಂದೆ ಯಾಗಿ ವರ್ತಿಸಲಿಲ್ಲ, ತಂದೆಯಂತೆ ವಾತ್ಸಲ್ಯ ತೋರುವಾಗ ಗುರುವಾಗಿ ಕಾಣಿಸಿಕೊಳ್ಳ ಲಿಲ್ಲ, ಅಂತಹ ಗಟ್ಟಿತನ ಅವರಲ್ಲಿದೆ. ದುಡ್ಡಿನ ಬೆನ್ನಟ್ಟಿ ಓಡಲಿಲ್ಲ, ವಿದ್ಯಾದಾನ ಮಾಡುವುದು ಬಿಡಲಿಲ್ಲ.ಸಜ್ಜನರ ಸಹವಾಸ ಸಾಹಿತ್ಯದೊಡನೆ ಸರಸಾಟ. ಸಮಾಜ ಸೇವೆ ಯಲ್ಲಿ ದಿಟ್ಟ ಹೋರಾಟ. ಅಪರೂಪದ ವ್ಯಕ್ತಿತ್ವವುಳ್ಳ ಮೇಷ್ಟ್ರು ನನ್ನ ತಂದೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ತುಂಬಾ ಚಿಕ್ಕವನಿದ್ದಾಗ ನನ್ನ ತಂದೆ ಜೆ.ಎಂ.ಮಠದ ಅವರು ನಾಟಕದಲ್ಲಿ ಪಾತ್ರವನ್ನು ನಿರ್ವಹಿ ಸಿದ್ದರು. ನಾಟಕದ ಹೆಸರು “ಸೂಳೆಯ ಮಗ”. ಅಂದಿನ ಕಾಲದಲ್ಲಿ ನಾಟಕಗಳನ್ನು ಹಬ್ಬ ಹರಿದಿನಗಳಲ್ಲಿ ಅತ್ಯಂತ ವಿಜೃಂಭಣೆ ಯಿಂದ ಸಂಘಟಿಸುತ್ತಿದ್ದ ಅವಧಿ. ಪಾತ್ರಕ್ಕೆ ಬೇಕಾದ ಎಲ್ಲಾ ವಿವಿಧ ಆಯಾಮಗಳನ್ನು ಬಳಸಿಕೊಂಡು ಅವರು ಅಭಿನಯಿಸಿದ ರೀತಿ ಇಂದಿಗೂ ನನ್ನ ಕಣ್ಣ ಪರದೆಯ ಮೇಲೆ ವಿರಾಜಮಾನ ವಾಗಿದೆ. ದೃಶ್ಯ ಒಂದರಲ್ಲಿ ಶ್ರೀಮಂತ ಪಾತ್ರಧಾರಿ ಬಾರ್ಕೋಲಿನಿಂದ ಹೊಡೆಯುವ ದೃಶ್ಯ ಇದೆ.ಆ ದೃಶ್ಯದಲ್ಲಿ ಬಿದ್ದ ಹೊಡೆತ ಅಸಲಿಯಾಗಿತ್ತು. ಆ ನೋವನ್ನು ಸಹಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಪಾತ್ರವನ್ನು ಅಭಿನಯಿಸಿ ಇಡೀ ಗ್ರಾಮದ ಜನತೆಯ ಅಭಿನಂದನೆಗೆ ಪಾತ್ರವಾಗಿದ್ದರು. ನನ್ನ ತಂದೆಯಲ್ಲಿ ಒಬ್ಬ ಅದೃಷ್ಟವಂತ ಕಲಾವಿದನಿದ್ದಾನೆ. ಈಗಲೂ ಅವರು ಹಿರಿಯ ನಾಗರೀಕರ ಸ್ಪರ್ಧೆಗಳಲ್ಲಿ ಭಾಗ ವಹಿಸಿ ರಾಜ್ಯಮಟ್ಟದವರೆಗೂ ಸಂಚರಿಸಿ ಬಹುಮಾನ ಗಳನ್ನು ಪಡೆದುಕೊಂಡು ಬಂದು ಮನೆಯಲ್ಲಿ ತೋರಿಸಿದಾಗ ಮಗನಾಗಿ ನಾನು ಹೆಮ್ಮೆಪಡುತ್ತೇನೆ.
ನಿಷ್ಕಾಮಯೋಗಿ ಆದರ್ಶಗುರು ಜೆ. ಎಮ್. ಮಠದರವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು,ಗೌರವ ಸನ್ಮಾನಗಳು
ತಮ್ಮ ಸೇವೆಯ ಶ್ರದ್ದೆ, ಪ್ರಾಮಾಣಿಕತೆ, ನಿಷ್ಠೆಯ ದ್ಯೋತಕವಾಗಿ ಜೆ. ಎಮ್. ಮಠದ ಅವರ ನಿಯತ್ತಿನ ನೈತಿಕ ಶೈಕ್ಷಣಿಕ ಮೌಲ್ಯ ಗಳನ್ನು ಗುರುತಿಸಿ ಅಂದಿನ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ಶಿಫಾರಸ್ಸಿನ ಅನ್ವಯ 05-09-1986 ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿತ್ತು. ೨೦೦೧ರಲ್ಲಿ ಸಾಹಿತ್ಯ ಪ್ರಚಾರಕ, ೧೯೯೫ ರಲ್ಲಿ ರಾಣೆಬೇನ್ನೂರು ರತ್ನ, ೧೯೯೭ ರಲ್ಲಿ ಸಮುದಾಯ ಸೇವಾ, ಕನ್ನಡನಾಡು-ನುಡಿ – ಸಂಸ್ಕೃತಿಗಾಗಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ೨೦೦೭ರಲ್ಲಿ ಉಡುಪಿಯಲ್ಲಿ ಜರುಗಿದ ಅ.ಭಾ.ಕ.ಸಾ.ಸದಲ್ಲಿ ಗೌರವ ಸನ್ಮಾನ, ೨೦೦೬ರಲ್ಲಿ ತಾಲ್ಲೂಕಾ ಉತ್ಸವ ಪ್ರಶಸ್ತಿ, ೨೦೦೭ರಲ್ಲಿ ಜಿಲ್ಲಾ ಉತ್ತಮ ಮೆಚ್ಚೋಲೆ ಮತ್ತು ಜಿಲ್ಲಾ ಸಾಕ್ಷರತಾ ಪ್ರಶಸ್ತಿ ಅವರ ಹಿರಿಮೆಗೆ ಗರಿ ಮೂಡಿಸಿವೆ. ಅಪರೂಪಕ್ಕೊಮ್ಮೆ ಅರ್ಹರಿಗೆ ದೊರೆಯುವ ಗೌರವ ಸನ್ಮಾನಗಳಿಂದ ಪ್ರಧಾನವಾಗುವ ಪ್ರಶಸ್ತಿಗಳಿಗೆ ಘನತೆಯ ಮೆರುಗು ಸಿಗುತ್ತದೆ. ಅಂತೆಯೇ, ಜೆ.ಎಮ್.ಮಠದ ಅವರಿಗೆ ತೀರಾ ತಡವಾಗಿ ಸರ್ವಾಧ್ಯಕ್ಷ ಗೌರವವನ್ನು ನೀಡಿ ತನಗೆ ತಾನೇ ತನಗೆ ಮೌಲಿಕ ಚಿಂತನೆ ಯನ್ನು ಮಾಡುವ ಶಕ್ತಿ ಇದೆ ಎಂದು ಹೇಳಿ ಕೊಂಡಂತಿದೆ. ಹಾವೇರಿ ಜಿಲ್ಲೆಯಲ್ಲಿ ಜೆ. ಎಮ್. ಮಠದ ಅವರಿಗಿಂತ ಅತ್ಯಂತ ಕಿರಿಯರಿಗೆ ಮತ್ತು ಹೊರ ಜಿಲ್ಲೆಯವರನ್ನು ಕರೆದುಕೊಂಡು ಮಣೆ ಹಾಕಿ ಸರ್ವಾಧ್ಯಕ್ಷರ ಸ್ಥಾನ ಸಿಕ್ಕಿರುವ ಉದಾಹರಣೆ ಗಳಿವೆ. ಸಂಸ್ಕೃತಿ ಚಿಂತಕ, ಸಾಹಿತಿ ಶಿಕ್ಷಕರಾದ ಜೆ. ಎಮ್. ಮಠದರವರಿಗೆ ಹಾವೇರಿ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ತಡವಾಗಿ ಸಂದರೂ; ನ್ಯಾಯೋಚಿತ ಗೌರವಾಧಾರಯುಕ್ತವಾದ ಸ್ಥಾನಮಾನ ಔಚಿತ್ಯಪೂರ್ಣವಾಗಿದೆ. ನಾಡುನ್ನತಿಯ ಹಿರಿಯ ಜೀವಕ್ಕೆ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳು ಅದಷ್ಟು ಬೇಗನೆ ಅರಸಿ ಬರಲಿ ಎಂಬುದು ಈ ಲೇಖನದ ಕಾಳಜಿಯು ಸಹ ಹೌದು.
‘ಮತದಾರರೇ ದೇಶೋದ್ಧಾರಕ್ಕೆ ಮೂಲಾ ಧಾರ’, ‘ಪುಸ್ತಕಗಳ ಓದುಗ ವಾಗ್ಮಿಯಾಗು ವನು’, ‘ದುಡಿ ಸುಖಪಡಿ’,’ಜೀವನ ದರ್ಶನ’, ‘ನಾವೆಲ್ಲರೂ ಒಂದಾಗಿ ಬಾಳೋಣ ಬನ್ನಿ – ನಾವೆಂದು ಹೊಸ ನಾಡ ಕಟ್ಟೋಣ ಬನ್ನಿ’, ‘ಸುಂದರವಾದ ಬದುಕು-ವಿವೇಕದ ಕೊಡುಗೆ’, ‘ಸಮುದಾಯಕ್ಕೆ ಉಪಯುಕ್ತ ವಾದು ದನ್ನು ಮಾಡಿ – ಸಾರ್ಥಕತೆ ಹೊಂದು ವುದಕ್ಕಿಂತ ಅಧಿಕ ಭಾಗ್ಯವಿಲ್ಲ’, ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’, ‘ಮತದಾನಕ್ಕಾಗಿ ಪ್ರತಿಜ್ಞೆಗೈಯ್ಯೋಣ’ ಮುಂತಾದ ಜನಜಾಗೃತಿ ಕರಪತ್ರಗಳನ್ನು ಹೊರಡಿಸಿರುವ ಶ್ರೀ ಜೆ.ಎಮ್. ಮಠದ ಗುರು ಮಹನೀಯರ ಸಾಂಗತ್ಯದಲ್ಲಿ ೧೧-೧೨ ಪೆಬ್ರವರಿ ೨೦೨೪ರ ರವಿವಾರ – ಸೋಮವಾರ ದಿನ ರಾಣೇಬೆನ್ನೂರಿನ ಎ.ಪಿ.ಎಮ್.ಸಿ ಸಮುದಾಯ ಭವನದಲ್ಲಿ ಆಯೋಜನೆಯಾಗಿರುವ ಹಾವೇರಿ ಜಿಲ್ಲಾ ೧೩ ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಸಾಕ್ಷಿ ಪ್ರಜ್ಞೆಯಾಗಲಿ. ಜೈ ಕನ್ನಡ, ಜೈ ಕರ್ನಾಟಕ.

ಸುಭಾಷ್ ಹೇಮಣ್ಣಾ ಚವ್ಹಾಣ, ಶಿಕ್ಷಕ ಸಾಹಿತಿಗಳು, ಪರಮವಾಡಿ ತಾಂಡೆ, ಯಲವಿಗಿ ಅಂಚೆ, ಸವಣೂರು ತಾ, ಹಾವೇರಿ ಜಿಲ್ಲೆ,
