ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನ ನಾಯಕ
ದಾಸ್ಯದಂಧಕಾರವನು ಕತ್ತರಿಸಿದ ವೀರ ವಿಧಾಯಕ
ಕಳೆಗುಂದಿದ ಜನಗಣಕೆ ಕ್ರಾಂತಿ ಕಹಳೆಯೂದಿದ ಕೇಸರಿ
ರಾಷ್ಟ್ರ ನಿರ್ಮಾಣದ ಮುನ್ನಡೆಯ ಸಬಲ ನೀತಿ ಆಚಾರಿ
ಜಾನಕೀನಾಥ ಪ್ರಭಾವತಿ ದಂಪತಿಗಳ ನವಕಾಂತಿ ಕಂದ
ಒಡಿಸಾದ ಕಟಕ್ ತವರೂರಲಿ ಬೇಣೆಗುರುಗಳ ಪ್ರೇರಣಾನಂದ
ಅರವಿಂದ ವಿವೇಕ ಸಾಹಿತ್ಯ ಪ್ರಭಾವಿತ ಯುವ ಛಲವಂತ
ಚಿತ್ತರ ಸ್ಪೂರ್ತಿಯಲಿ ಯುವಪಡೆ ಕಟ್ಟಿದ ಧೈರ್ಯವಂತ
ಸ್ವಾಮಿ ವಿವೇಕಾನಂದರ ವಿಚಾರ ಕ್ರಾಂತಿ ಸುವಿಚಾರಿ
ಉಕ್ಕಿನ ನರ ಕಬ್ಬಿಣದ ಮಾಂಸ ಖಂಡದ ರುವಾರಿ
ಆತ್ಮಾಭಿಮಾನದ ಸ್ವರಾಜ್ಯ ಹೋರಾಟದ ಕ್ರಾಂತಿಕಾರಿ
ಐರೋಪ್ಯದಿ ಭಾರತ ಸ್ವತಂತ್ರಕೆ ಮಾಡಿದವರು ಹೊಸ ದಾರಿ
ಪೋಲೆಂಡ್ ಜರ್ಮನಿ ಇಟಲಿ ದೇಶಗಳಲ್ಲಿ ಭಾರತಪರ ಪ್ರಚಾರ
ಪರತಂತ್ರದಿ ಹಿಂದುಸ್ಥಾನ ಮುಕ್ತಮಾಡುವ ಗುರಿಕಾರ
ಧೀರ ಭಾರತೀಯ ರಾಷ್ಟ್ರೀಯ ಸೇನೆಯ ಹರಿಕಾರ
ಅಂಗ್ರೇಜಿಗರೊಡೆದಾಳುವ ನೀತಿ ಭೇದಿಸಿದ ಹೋರಾಟಗಾರ
ಆಜಾದ್ ಹಿಂದ್ ಸೇನೆಯ ಜೈಹಿಂದ್ ಘೋಷದ ಕ್ಷಾತ್ರತೇಜ
ಗುಡುಗುಡುಗೊ ಸಿಡಿಲ ನೇತಾಜಿ ಅಭಿದಾನಾಂಕಿತ ರವಿತೇಜ
ವಿಮಾನ ಸ್ಫೋಟದಿ ಚಂದ್ರ ಅಸ್ತಂಗವೆಂಬುದು ಎಷ್ಟು ಸತ್ಯ?
ಪಾರತಂತ್ರ್ಯ ಸುಟ್ಟು ಸ್ವಾವಲಂಬನೆಗೆ ಬೋಸ ಮಾರ್ಗ ಪತ್ಯ!

✍️ಸುಹೇಚ ಪರಮವಾಡಿ
(ಸುಭಾಷ್ ಹೇಮಣ್ಣಾ ಚವ್ಹಾಣ)
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ.
