ಚಂದಕ್ಕಿಂತ ಚಂದ
ಎಷ್ಟು ಚಂದವಾಗಿದೆ
ಅಂದಕ್ಕಿಂತ ಅಂದ
ಎಷ್ಟು ಅಂದವಾಗಿದೆ

ಶ್ರೀರಾಮ ಬರುವ ವೇಳೆ
ಭಕ್ತಿ ಹೂವ ಚೆಲ್ಲಿ ಪ್ರಭುವ
ಮನಸೇ ಸ್ವಾಗತವ ಹೇಳೆ
ಮನ ಮಂದಿರಕೆ ವಿಭುವ

ಹೆಸರಲಿ ರಾಮ ಉಸಿರಲಿ ರಾಮ
ಮನಸಲಿ ರಾಮ ಕನಸಲಿ ರಾಮ
ಜೀವದಲಿ ರಾಮ ಭಾವದಲಿ ರಾಮ
ಗೀತೆಯಲಿ ರಾಮ ಗಾಥೆಯಲಿ ರಾಮ

ಸಂವತ್ಸರಗಳೇ ಸಜ್ಜಾಗಿವೆ ರಾಮ ಬರಲು
ಜನುಮಗಳೇ ಕಳೆದಿವೆ ರಾಮನ ಕಾಣಲು
ಕಣ್ಣಲಿ ರಾಮ ದರುಶನಕೆ ಭಾಗ್ಯ ಹೊನಲು
ಆತ್ಮನ ಸಂತೃಪ್ತಿ ಪ್ರಭುಗೆ ಜ್ಯೋತಿ ಬೆಳಗಲು

ಕಣನ ಕಲ್ಪನೆ ಒಳಗೆ ಕ್ಷಣವಾದರೂ ಬಂದುಬಿಡು
ತೃಣನ ಕಾಲಕೆ ಕಿರು ಉಸಿರೊಳಗೆ ನಿಂತುಬಿಡು
ಅಂತರವೇ ಕಾಣದ ಅಂತರಂಗದಲಿ ನೆಲೆಸಿಬಿಡು
ರಾಮ ಎನ್ನಲು ರೋಮ ರೋಮ ನಿನ್ನ ಬೀಡು

ರಾಮ ರಾಮ ರಾಮ ನಿನ್ನ ಕರೆಯುವ ನಾ ಮಗು ಆತ್ಮ
ರಾಮ ರಾಮ ರಾಮ ನೀನೆನ್ನ ಸ್ವೀಕರಿಸು ಬಾ ಪರಮಾತ್ಮ
ರಾಮ ರಾಮ ರಾಮ ಪಾದಸೇವೆಗೆ ಕರುಣಿಸು ಸಾನಿಧ್ಯ
ರಾಮ ರಾಮ ರಾಮ ನನ್ನ ಅಂತರಂಗದ ದೈವ ಆರಾಧ್ಯ

✍️ಕಾವ್ಯಸುತ
(ಷಣ್ಮುಗಂ ವಿ, ಧಾರವಾಡ)