ಹೌದು ಮುಖ್ಯ ನಾವೀಗ ಸರಹದ್ದುಗಳನು ದಾಟಬೇಕಿದೆ
ಈ ಹೃದಯದಲಿ ಬೇರು ಬಿಟ್ಟ ತರತಮಗಳ ಕೀಳಬೇಕಿದೆ

ಕುಲ ಮತ ಧರ್ಮ ಅರ್ಥ ಬೇರಿಲ್ಲ ಪರ್ಯಾಯವಲ್ಲವೆ
ಭೇದ ಎಣಿಸುವ ಮನಸುಗಳನು ಶಾಶ್ವತ ಸುಡಬೇಕಿದೆ

ಸಂತ ಕವಿ ವರೇಣ್ಯರು ಸಾಧು ಸಿಧ್ಧಿ ಪುರುಷ ಮುನಿಗಳು
ಕೊಟ್ಟ ದಿವ್ಯ ಜ್ಞಾನವನು ಜತನದಿಂದ ಕಾಪಾಡಬೇಕಿದೆ

ಇತಿಹಾಸ ದುಃಖಿಸುತ್ತಿದೆ ಪಾಠ ಕಲಿಯದ ಬುಧ್ಧಿ ನೋಡಿ
ಬೆಂಕಿಗೂ ಕನಸಿಗೂ ವ್ಯತ್ಯಾಸವುಂಟು ಗುರುತಿಸಬೇಕಿದೆ

ಏನು ಬಂದರೂ ಒಗ್ಗಟ್ಟಿನಲಿ ಹಿತವಿದೆ ಸರ್ವರೇಳಿಗೆಯೂ
ಜಾಲಿ ಸರ್ವ ಜನಾಂಗದ ಶಾಂತಿಯ ತೋಟ ಬೆಳೆಸಬೇಕಿದೆ

✍️ವೇಣು ಜಾಲಿಬೆಂಚಿ
ರಾಯಚೂರು.