ಬೆಲೆ ಬಾಳುವ ಆಭರಣಕೆ ಮನ ಸೋಲದವಳು,
ನನ್ನೊಂದಿಗೆ ಸಮಯವ ಕಳಿಯಿರಿ ಸಾಕೆನುತ, ಬೆಲೆ ಕಟ್ಟಲಾಗದ ಒಡವೆಯೇ ನೀವು ಎಂದವಳು ನನ್ನಾಕೆ.
ಇಚ್ಚೆಯಲ್ಲಿ ಬಡತನವ ಮೆಚ್ಚಿ, ಮನದ ಅರಸಿಯಾದವಳು,
ನನ್ನೆಲ್ಲ ಹುಚ್ಚಾಟಗಳ ಸಹಿಸಿಕೊಂಡು, ಪನ್ನೀರ
ಪ್ರೀತಿಯಲಿ ಮಿಂದವಳು, ಸಾಮಿಪ್ಯದ ಸೊಗಸನ್ನು ಸವಿಯಾಗಿಸಿದವಳು ನನ್ನಾಕೆ
ಮಾಸಿ ಹೋಗುವ ಮೇಲ್ನೋಟದ ರೂಪದ ಕನವರಿಕೆಯಲ್ಲಿದವನಿಗೆ,
ಮಾಸಲಾಗದ ಅಂತರಂಗದ ಸೌಂದರ್ಯವೇ ಮಿಗಿಲೆಂದು ಮನವರಿಕೆಯ ಮಾಡಿಸಿದವಳು ನನ್ನಾಕೆ.
ಮರೆತ ನಗುವನ್ನು ಮರಳಿ ಬಾಳಲ್ಲಿ ತಂದು, ಶ್ವಾಸದಲಿ ವಿಶ್ವಾಸವ-ವಿಶ್ವಾಸದಲ್ಲಿ ಆತ್ಮವಿಶ್ವಾಸವ ಕಾರಂಜಿಗೊಳಿಸಿ- ಜೀವಂತವಾಗಿರಿಸಿದವಳು ನನ್ನಾಕೆ
ಅಕ್ಷರದ ಬರಹಕ್ಕೆ ಸ್ಫೂರ್ತಿಯ ನೀಡಿ,
ಬದುಕಿನ ಹಾಡನ್ನು ಬೆಳಕಲ್ಲಿ ಹಾಡಿ,
ಜೊತೆಯಾದ ಜೀವದೊಲವು, ಹಿತ- ಸಮಹಿತ ಭಾವ ಅವಿಚ್ಛಿನ್ನದ ಇರವು, ಮನೆ-ಮನವ ಬೆಳಗಿಸುತ್ತಿರುವಳು ನನ್ನವಳು, ನನ್ನೆದೆಯ ಹೊಂಗಿರಣದ ಸಿರಿಯವಳು..

✍️ರಾಘವೇಂದ್ರ ಸಿ.ಎಸ್
ಕನ್ನಡ ಉಪನ್ಯಾಸಕರು
ಮೈಸೂರು
