ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು
ನಡು ಮಧ್ಯದಲಿ ಅಡಿಕೆ,ತೆಂಗುಗಳ ಮಡಿಲು
ಸಿರಿಗನ್ನಡದ ಚಪ್ಪರವೇ ನನ್ನ ಜಿಲ್ಲೆ.
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ.
—— ದಿನಕರ ದೇಸಾಯಿ

ಎಂತಹ ಅದ್ಭುತ ಸಾಲುಗಳು, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಲಗೇರಿ ಎಂಬ ಪುಟ್ಟಹಳ್ಳಿಯಲ್ಲಿ ಜನಿಸಿದ ದಿನಕರರ ತಂದೆ ದತ್ತಾತ್ರೇಯ ದೇಸಾಯಿ, ಶಾಲಾ ಮಾಸ್ತರರು. ತಾಯಿ ಅಂಬಿಕಾ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದು ಕೊಂಡ ದಿನಕರರಿಗೆ ಏಕಾಂತ ಜೀವನ, ಪ್ರಕೃತಿ ಸೌಂದರ್ಯ ಮನಸ್ಸಿನ ತುಂಬಾ ತುಂಬಿ ಕೊಂಡಿತ್ತು. ಕಿರಿಯ ವಯಸ್ಸಲ್ಲೇ ಕಾವ್ಯ ಅವರ ಮನದಲ್ಲಿ ಉದಯಿಸತೊಡ ಗಿತು. ಅದಕ್ಕೆ ನೀರೆರೆದು ಪೋಷಿಸಿದವರು ರಂಗರಾವ ಹಿರೇಕೆರೂರು ಎಂಬ ಪಂಡಿತರು. ಅವರ ಮಾರ್ಗದರ್ಶನದಲ್ಲಿ ದಿನಕರರು ವಿವಿಧ ಛಂದಸ್ಸು ಗಳಲ್ಲಿ ಕಾವ್ಯ ರಚಿಸುವುದನ್ನು ಕಲಿತರು. ‘ಚೌಪದಿ’ ಅವರಿಗೆ ಪ್ರಿಯವಾದ ಕಾವ್ಯ ರಚನಾ ಛಂದಸ್ಸು.
ಬಾಬು ಹುಟ್ಟಿದ್ದು ಸಖಿ ಅಂಕೋಲೆಯಲ್ಲಿ /
ಚಿಂತೆಯಿಲ್ಲದೆ ಸಾಯಬೇಕೆಂಬೆ ಅಲ್ಲಿ/
ಅಂಕೋಲೆ ಎನ್ನುವುದು ಕನ್ನಡದ ಕಡಲು /
ಈ ಕಡಲಿನೊಳಗಿರಲಿ ದಿನಕರನ ಒಡಲು.
ದಿನಕರ ದೇಸಾಯಿಯವರು, ಒಟ್ಟು ೧೨ ಕೃತಿಗಳನ್ನು ರಚಿಸಿದ್ದಾರೆ.ಅದರಲ್ಲಿ, ‘ದಿನಕರನ ಚೌಪದಿ‘ ಕೃತಿ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿಗೆ ಆಯ್ಕೆ ಯಾಯಿತು. ಅವರ ಚೌಪದಿಗಳಲ್ಲಿ ಎಲ್ಲಾ ರಸಗಳೂ ಅಡಕವಾಗಿರುತ್ತಿದ್ದವು.

ಬಂಡಾಯ ಸಾಹಿತ್ಯ ಪರಂಪರೆ ಶುರುವಾ ಗುವ ದಶಕಗಳ ಮೊದಲೇ ೧೯೩೧ ರಲ್ಲಿ ‘ಬಾರ್ಡೋಲಿ ಸತ್ಯಾಗ್ರಹ‘ದ ಬಗೆಗೆ, ಚುಟುಕು ಪದ್ಯಗಳನ್ನು ರಚಿಸಿದ್ದರು.ದಿನಕರ ದೇಸಾಯಿಯವರು ಒಬ್ಬ ಕವಿಯಾಗಿ, ಸಾಹಿತಿಯಾಗಿ, ದಾರ್ಶನಿಕರಾಗಿ, ನೇರ ನಿಷ್ಠುರ ವರ್ತಾರರಾಗಿ, ಕಾರ್ಮಿಕ ಸಂಘಟಕ ರಾಗಿ, ಪತ್ರಕರ್ತರಾಗಿ, ರಾಜಕೀಯದಲ್ಲೂ ಸಂಸದರಾಗಿ, ಶಿಕ್ಷಣ ಕ್ರಾಂತಿಯ ಹರಿಕಾರ- ರಾಗಿ, ಜಿಲ್ಲೆಯ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಬೆಳೆದ ಧೀಮಂತ ಪ್ರತಿಭೆ. ಇವರು ಅಂಕೋಲೆಯ ನಾಡಿ ಮಿಡಿತವೆಂದರೂ ತಪ್ಪಾಗದು.ಅಂತಾರಾಷ್ಟ್ರೀಯ ವೇದಿಕೆ ಯಲ್ಲೂ ಕೂಡ ಕಾರ್ಮಿಕರ ಪರವಾದ ನಿಲುವುಗಳನ್ನು ಪ್ರತಿಪಾದಿಸಿದರು. ಉತ್ತರ ಕನ್ನಡ ಜಿಲ್ಲೆಯ ರೈತರನ ಪರ ಹೋರಾಟಕ್ಕೆ ಇಳಿದರು. ‘ಉಳುವವನೇ ಭೂಮಿಯ ಒಡೆಯ’ ತತ್ವಸಾರಿ ಎತ್ತಿಹಿಡಿದರು. ಬ್ರಿಟಿಷರ ಕೋಪಕ್ಕೆ ಗುರಿಯಾದರು. ಬ್ರಿಟಿಷ್ ಸರ್ಕಾರ ಅವರಿಗೆ ಐದು ವರ್ಷ ‘ಗಡೀಪಾರಿನ ಶಿಕ್ಷೆ’ ವಿಧಿಸಿತ್ತು.

ಇವನು ಅಂಕೋಲೆಯವ ಮುದುಕಾಗಿ ಸತ್ತ/
ಇವನ ಕೈಯೊಳಗಿತ್ತು ಚೌಪದಿಯ ಬೆತ್ತ/
ಹಾವಳಿಯನೆಬ್ಬಿಸಿದ ಈ ಬೆತ್ತದಿಂದ ಕಹಿ /
ವಿಡಂಬನ ಗುಳಿಗೆ ಕನ್ನಡಕ ತಂದ.
ಅಂಕೋಲೆಯ ಈ ಮಹಾನ್ ವ್ಯಕ್ತಿ ಇಡೀ ಚುಟುಕು ಇತಿಹಾಸದ ಮೈಲಿಗಲ್ಲಾಗಿ ಮಾರ್ಗದರ್ಶನ ನೀಡುವ ಚೌಪದಿಗಳು ಆದರ್ಶ. ಎಷ್ಟು ಬಣ್ಣಿಸಿದರೂ ಕಡಲಿನಂತೆ ವಿಶಾಲ ಅವರ ದೃಷ್ಟಿಕೋನ. ದಿನಕರ ದೇಸಾಯಿಯವರು, ಅನೇಕ ಸಾಮಾಜಿಕ ಸಮಸ್ಯೆ ಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಮರ್ಥವಾಗಿ ಚುಟುಕುಗಳ ಮೂಲಕ ನೀಡಿದ್ದಾರೆ. ಸಮಯ ಬಂದಾಗ, ತಮ್ಮ ಪರಿಮಿತಿಯಲ್ಲಿ ಅನೇಕ ಜನಪರ ಕಾಳಜಿ ಯಿಂದ ಅನೇಕ ಕಾರ್ಯಗಳನ್ನು ಮಾಡಿ ಅನುಕರಣೀಯರಾಗಿದ್ದಾರೆ. ಆದರ್ಶಮಯ ಜೀವನವನ್ನು ನಡೆಸಿದ ಜನಪರ ಸಾಹಿತಿ, ‘ದಿನಕರ್’ ರವರು, ದಿ: ೦೬/೧೧/೧೯೮೨ ರಂದು ತಮ್ಮ ಕೊನೆಯುಸಿರೆಳೆದರು.

ಅಂಕೋಲಾ ‘ಅಕೊಲಾ’ ಎನ್ನುವ ಮರ ದಿಂದ ಈ ಹೆಸರು ಬಂದಿದೆ.ಇದು ಸತ್ಯಾಗ್ರಹಿ ಗಳ ತವರೂರು. ಸ್ವಾತಂತ್ರ್ಯ ಸಂಗ್ರಾಮ ಭವನ ಅಂಕೋಲೆಯ ಇನ್ನೊಂದು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳ. ೧೯೩೧ರ ಉಪ್ಪಿನ ಸತ್ಯಾಗ್ರಹದಿಂದಾಗಿ ‘ಕರ್ನಾಟಕದ ಬಾರ್ಡೋಲಿ’ ಎಂದು ಪ್ರಸಿದ್ದವಾದ ತಾಲೂಕು ಅಂಕೋಲಾ. ಭಾರತ ಸ್ವಾತಂತ್ರ್ಯ ಹೋರಾಟದ ಅತಿ ಮುಖ್ಯವಾದ ಕಾಲಘಟ್ಟ ದಲ್ಲಿ ೧೯೨೦-೧೯೪೭ ರ ಅವಧಿಯಲ್ಲಿ ತಮ್ಮ ಬದುಕನ್ನು ದೇಶಸೇವೆಗಾಗಿ ಸಮರ್ಪಿ ಸಿಕೊಂಡು ಇತಿಹಾಸದ ಪುಟಗಳಲ್ಲಿ ಅದ್ಭುತ ಚರಿತ್ರೆ ನಿರ್ಮಿಸಿದ ಖ್ಯಾತಿ ಅಂಕೋಲೆಯ ಜನತೆಯದು. ಆ ಬಲಿದಾನದ ಯಶೋ ಗಾಥೆಯ ಶಾಶ್ವತ ನೆನಪಿಗಾಗಿ ಈ ‘ಸ್ವಾತಂತ್ರ್ಯ ಸಂಗ್ರಾಮ ಭವನ’ ಎಂಬ ಕಟ್ಟಡವು ರಾಷ್ಟ್ರೀಯ ಸೌಧದ ರೂಪದಲ್ಲಿ ಅಂಕೊಲಾದ ಕೇಂದ್ರಸ್ಥಾನ ಗಾಂಧಿಮೈದಾನ ದಲ್ಲಿ ತಲೆಯೆತ್ತಿ ನಿಂತಿದೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೀವತೆತ್ತ ಅನೇಕ ಕುಟುಂಬಗಳು ಸ್ವಾತಂತ್ರ್ಯ ಹೋರಾಟಗಾರ ರಾದವರ ಹೆಸರುಗಳು ಚಿರಸ್ಮರಣೀಯ.

ಏಪ್ರಿಲ್ 13,1930 ಕಾಂಗ್ರೆಸ್ ನಾಯಕ ಎಂ.ಪಿ.ನಾಡಕರ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರ ಯಾತ್ರೆ ಅಂಕೋಲ ಹತ್ತಿರ ಸಮುದ್ರ ತೀರಕ್ಕೆ ಸಾಗಿತ್ತು. ಸಮುದ್ರ ನೀರನ್ನು ಮಡಕೆಯಲ್ಲಿ ತುಂಬಿ, ಉಪ್ಪು ಮಿಶ್ರಿತ ಮರಳನ್ನು ತುಂಬಿಕೊಂಡು ಅಂಕೋಲಾಕ್ಕೆ ಬಂದರು. ಅಂಕೋಲಾದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ರುವ ‘ಪೂಜೆಗೆರೆ‘ಯನ್ನು ಸ್ಥಳವಾಗಿ ಆಯ್ಕೆ ಮಾಡಿ ಜಲಿಯನ್ ವಾಲಾಬಾಗ್ ಹತ್ಯಾ ಕಾಂಡದ ವಾರ್ಷಿಕೋತ್ಸವವಾದ ಏಪ್ರಿಲ್- 13 ರಂದು ಈಚಳುವಳಿಯನ್ನು ಆಯೋಜಿ ಸಲಾಗಿತ್ತು. ಇದು ಕೇವಲ ಉಪ್ಪಿನ ಸತ್ಯಾಗ್ರಹಕ್ಕೆ ಸೀಮಿತವಾಗಿ ರದೆ ‘ಕರ ನಿರಾಕರಣೆ‘ ನೀತಿಗೆ ವಿಸ್ತರಿಸಿದೆ.

ಕಾಂಗ್ರೆಸ್ ನಾಯಕ ರಾದ ಹಮ್ಮಣ್ಣ ಗೋವಿಂದ ನಾಯಕ್ ವಂದಿಗೆ, ಬೊಮ್ಮಯ್ಯ ರಾಕು ಗಾಂವ್ಕರ್ ಬಾಸ್ಗೋಡ್, ವೀರಣ್ಣ ಬೊಮ್ಮಯ್ಯ ನಾಯಕ್ ಕಾಂಗಿಲ್ ಮತ್ತು ಅಂಕೋಲಾದ ಬಸ್ಗೊಡ್ ರಾಮ ನಾಯ್ಕ್ ಅವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ಎಂ.ಪಿ.ನಾಡಕರ್ಣಿ, ಶಾಮರಾವ್ ಶೇಣ್ವಿ, ಸ್ವಾಮಿ ವಿದ್ಯಾನಂದ, ವಂದಿಗೆ ಹಮ್ಮಣ್ಣ ನಾಯಕ, ಶೆಟಗೇರಿ ಜೋಗಿ ನಾಯಕ, ಬಾಸ್ಗೋಡ ಬೊಮ್ಮಯ್ಯ ನಾಯಕ ಮುಂತಾದವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಉಪ್ಪಿನ ಸತ್ಯಾಗ್ರಹ ದೇಶದ ಗಮನ ವನ್ನು ಸೆಳೆಯಿತು. ಹಳ್ಳಿ ಹಳ್ಳಿಗಳಿಗೆ ವಿಸ್ತರಿಸಿದ ಉಪ್ಪಿನ ಸತ್ಯಾಗ್ರಹ ದಲ್ಲಿ ವಂದಿಗೆ, ಶೆಟಗೇರಿ, ಹೊಸ್ಕೇರಿ, ಸೂರ್ವೆ, ಬಾವಿಕೇರಿ, ಹಿಚ್ಕಡ,ಕಣಗೀಲ ಮುಂತಾದ ಗ್ರಾಮಗಳ ನೂರಾರು ಹೋರಾಟಗಾರರು ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತರು. ಜನರ ನಿರಂತರ ಹೋರಾಟದಿಂದ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು. ಅಂಕೋಲೆಯ ಕೀರ್ತಿ ದೇಶಾದ್ಯಂತ ಹರಡಿತು.

ಅಂಕೋಲಾದಲ್ಲಿ ಜನಪ್ರಿಯ ಜಾನಪದ ನೃತ್ಯ ಯಕ್ಷಗಾನ

ಸುಗ್ಗಿ ಕುಣಿತವು ಸ್ಥಳೀಯ ಕಾಲೋಚಿತ ಜಾನಪದ ನೃತ್ಯವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಪ್ರಾರಂಭವಾಗಿದೆ. ಸುಗ್ಗಿ ನರ್ತಕರ ತಂಡ ಗಳು ಭತ್ತದ ಕೊಯ್ಲಿನ ಸಮಯದಲ್ಲಿ “ಹೋಳಿ” ಹಬ್ಬದವರೆಗೆ ಒಂದು ಹಳ್ಳಿ ಯಿಂದ ಮತ್ತೊಂದು ಹಳ್ಳಿಗೆ ತೆರಳಿ ಯಶಸ್ವಿ ಕೊಯ್ಲು ಮಾಡಿ ದೇವರಿಗೆ ಕೃತಜ್ಞತೆ ಸಲ್ಲಿಸಲು ನೃತ್ಯವನ್ನು ಪ್ರದರ್ಶಿಸುತ್ತಾರೆ.

ಸುಗ್ಗಿ ನೃತ್ಯಗಾರರು ಸಾಂಪ್ರದಾಯಿಕ ಉಡುಪುಗಳು ಮತ್ತು ಶಿರಸ್ತ್ರಾಣಗಳನ್ನು ಧರಿಸುತ್ತಾರೆ. ಹಬ್ಬಗಳು ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಬಳಸಲಾದ ನೃತ್ಯವು ಐತಿಹಾಸಿಕ ಹಿನ್ನೆಲೆ ಯನ್ನು ಹೊಂದಿದೆ.

ಮೇ ತಿಂಗಳಲ್ಲಿ ಬುದ್ಧ ಪೂರ್ಣಿಮೆಯಂದು ಬಂಡಿಹಬ್ಬ ಎಂಬ ವಾರ್ಷಿಕ ಮೇಳವನ್ನು ಆಚರಿಸಲಾಗುತ್ತದೆ.ಒಂಬತ್ತು ದಿನಗಳ ಕಾಲ ಆಚರಿಸುವ ಪ್ರಮುಖ ಹಬ್ಬ ಇದಾಗಿದೆ. ಒಂಬತ್ತನೇ ದಿನದಂದು ಶಾಂತ ದುರ್ಗಾ ದೇವಸ್ಥಾನದ ಬಳಿ ಮೇಳವನ್ನು ನಡೆಸ ಲಾಗುತ್ತದೆ ಮತ್ತು ಪಟ್ಟಣ ಮತ್ತು ಗ್ರಾಮದ ಸುತ್ತಮುತ್ತಲಿನ ಜನರು ದೇವಾಲಯಕ್ಕೆ ಆಗಮಿಸಿ ಅದನ್ನು ಆಚರಿಸುತ್ತಾರೆ.
‘ಕಾರ್ತಿಕ‘ ಎಂಬ ಇನ್ನೊಂದು ಹಬ್ಬವನ್ನು ನವೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಐದು ದೇವಾಲಯದ ದೇವತೆಗಳು ಅಂಕೋಲಾ ಪಟ್ಟಣ ದಿಂದ ಪಲಕ್ಕಿಯಲ್ಲಿ ರಾತ್ರಿ ತಂಗುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಹಿಂತಿರುಗುತ್ತಾರೆ.
ದಹಿಂಕಾಲ ಉತ್ಸವದ ಹಿನ್ನಲೆ ಸ್ಮರಣೀಯ

ಮಹಾರಾಷ್ಟ್ರದ ‘ದಹಿ’ ಹಂಡಿಯಲ್ಲಿರುವಂತೆ ಅಂಕೋಲಾದಲ್ಲಿ ‘ದಹಿಕಾಲ ಉತ್ಸವ’ ಕೃಷ್ಣನ ತಮಾಷೆಯ ಮತ್ತು ಚೇಷ್ಟೆಯನ್ನು ಪ್ರಸ್ತುತಪಡಿಸುತ್ತ ಆಚರಿಸಲ್ಪತ್ತದೆ. ದಹಿಂಕಾಲವೆಂದರೆ ‘ಹೆಪ್ಪಿಟ್ಟ ಹಾಲು ಮೊಸರಾಗುವ ಸಮಯ’ ಎಂದು ಅರ್ಥ ವಿದೆ. ಹೀಗೆ ಸಮಾಜದಲ್ಲಿನ ಕೆಟ್ಟ ವಿಚಾರ ಗಳು ತೊಲಗಿ ಸಮಾಜಕ್ಕೆ ಒಳಿತನ್ನು ಮಾಡುವ ಸಮಾಜ ಪ್ರಗತಿ ಪಥದಲ್ಲಿ ಸಾಗ ಬೇಕೆನ್ನುವುದು ‘ದಹಿಂಕಾಲ ಉತ್ಸವ’ ದ ಮುಖ್ಯ ಉದ್ದೇಶವಾಗಿದೆ.

ಈ ಐತಿಹಾಸಿಕ ದಹಿಂಕಾಲ ಉತ್ಸವವು ಎಲ್ಲ ಸಮಾಜದವರನ್ನು ಒಟ್ಟಾಗಿ ಸೇರಿಸಿಕೊಂಡು ಆಚರಿಸಲ್ಪಡುತ್ತದೆ. ದೇವದಾಸಿ ಪದ್ಧತಿ ವಿರೋಧಿಸು ವುದಕ್ಕಾಗಿ ಹುಟ್ಟಿಕೊಂಡ ಆಚರಣೆಯೊಂದು ಸಮುದಾಯದ ಜಾಗೃತಿ ಹಬ್ಬವಾಗಿ ರೂಪಾಂತರ ಗೊಂಡಿದ್ದು ಇತಿಹಾಸ. ಜಿಲ್ಲೆಯ 18 ಸೀಮೆಗಳಲ್ಲಿ ಹರಡಿರುವ ನಾಮಧಾರಿಗಳು ಹಾಗೂ ಇತರ ಸಮುದಾಯದವರು ಈ ಹಬ್ಬಕ್ಕೆ ಆಗಮಿಸಿ ಮೆರುಗು ತಂದರು.

ಈ ಹಿಂದೆ ಪಟ್ಟಣದ ಬಂಡಿ ಬಜಾರ್ ಕಟ್ಟೆ ಯಲ್ಲಿ ಶ್ರೀ ವೆಂಕಟರಮಣ ದೇವರನ್ನು ಪ್ರತಿಷ್ಠಾಪಿಸಿ ದೇವರ ಮುಂದೆ ಒಂದು ಸಮಾಜದವರು ಅರೆ ಬೆತ್ತಲೆಯಾಗಿ ನೃತ್ಯ ಮಾಡುವ ಅಸಹ್ಯಕರ ಸಂಪ್ರದಾಯವಿತ್ತು. ಈ ಸಂಪ್ರದಾಯವನ್ನು ತೊಡೆದು ಹಾಕಲು ಸ್ವಾತಂತ್ರ್ಯ ಪೂರ್ವದಲ್ಲಿ(1946) ಸುಮಾರು 76 ವರ್ಷಗಳ ಹಿಂದೆ ಸಂಕಲ್ಪತೊಟ್ಟ ನಾಮ ಧಾರಿ ಸಮಾಜದವರು ನೃತ್ಯ ಮಾಡುವ ಸಂಪ್ರದಾಯ ಬಹಿಷ್ಕರಿಸಿ ಪೌರಾಣಿಕ ಪ್ರಸಂಗಗಳ ಯಕ್ಷಗಾನವನ್ನು ಆಡಿಸುವುದ ರೊಂದಿಗೆ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದರು. ಈಗಿನ ಯುವಕರ ತಂಡಗಳು ಮಾನವ ಪಿರಮಿಡ್‌ಗಳನ್ನು ನಿರ್ಮಿಸಿ ಹೆಚ್ಚಿನ ನೇತಾಡುವ ಬೆಣ್ಣೆಯನ್ನು ತಲುಪಿ ಅದನ್ನು ಒಡೆಯುತ್ತವೆ. ವಿಶೇಷವಾಗಿ ಅಂಕೋಲಾದ ನಾಮಧಾರಿಗಳಿಗೆ ಈ ಹಬ್ಬ ಅತ್ಯಂತ ಮಹತ್ವದ್ದಾಗಿದೆ.
ಆಹಾರ ಪದ್ದತಿ

ಇಲ್ಲಿಯ ಜನರ ಆಹಾರ ಪದ್ದತಿ ವಿಭಿನ್ನ…
ಸಮುದ್ರ ತೀರದಲ್ಲಿ ವಾಸವಿರುವ ಕಾರಣ ಇಲ್ಲಿಯ ಜನರು ‘ಮೀನು‘ ಪ್ರೀಯರು. ಸಾಮಾನ್ಯವಾಗಿ ಬೇಯಿಸಿದ ಬಿಳಿ ಅನ್ನ (ಕುಚಿಗೆ/ಬೆಣತಿಗೆ) ಮೀನು, ಮತ್ತು ಬಸಳೆ ಸೂಪ್ಪಿನ ಹುಳಗಾ ಮತ್ತು ಸ್ಥಳೀಯ ವಾಗಿ ಕೋಳಿಆಸಿ (ಚಿಕನ್ ಕರಿ)ಮೀನುಗಳನ್ನು ಸಾಕಷ್ಟು ಜಾಸ್ತಿ ಪ್ರಮಾಣದಲ್ಲಿ ಸೇವಿಸು ತ್ತಾರೆ ಮತ್ತು ವಿಶೇಷವಾಗಿ ಕೊಟ್ಟಿರೊಟ್ಟಿ ತಯಾರಿಸುತ್ತಾರೆ.

ಇದನ್ನು ಹಲಸಿನ ಮರದ ಎಲೆಗಳನ್ನು ಬಿದಿರಿನ ಕಡ್ಡಿಗಳಿಂದ ಹೆಣೆದು ಶಂಕುವಿನ ಆಕೃತಿಯ ಒಂದು ಪೂಟ್ಟಣ ತಯಾರು ಮಾಡುತ್ತಾರೆ. ಇದಲ್ಲದೆ ಮೊಗ್ಗೆ ಕಾಯಿ ಕಡುಬು ತಯಾರಿಸುತ್ತಾರೆ. ಇಲ್ಲಿನ ವಿಶೇಷವಾದ ಸಿಹಿತಿಂಡಿ ಕಾಜಮೀಜಿ, ಇದು ಪಾತೋಳಿ ಅರಷಿನ ಎಲೆಯಿಂದ ತಯಾರಿಸುವ ಸಿಹಿ ಪದಾರ್ಥ. ಕುಚಲಕ್ಕಿ ಅನ್ನ, ಮೀನ್ ಸಾರು, ಸಣ್ಣ ಮೀನ್ ಚಟ್ನಿ ಪುಡಿ, ಒಂದು ತರಕಾರಿ ಪಲ್ಯ, ಉಪ್ಪಿನ ಕಾಯಿ ಇಷ್ಟಿದ್ರೆ ಸಾಕು! ಅಕ್ಕಿ ರೊಟ್ಟಿ, ಊರ ಕೋಳಿ ಚಿಕನ್ ಸಾರು ಫೇಮಸ್.

ಕರಿ ಇಷಾಡು ಮಾವಿನ ಹಣ್ಣಿನ ಖ್ಯಾತಿಯ ಅಂಕೋಲಾ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬೆಳೆಯುವ ಕರಿ ಇಷಾಡ್ ಮಾವು ಕೇಂದ್ರ ಸರ್ಕಾರದ ಅಡಿಯಲ್ಲಿ ಭೌಗೋಳಿಕ ಸೂಚ್ಯಂಕ ನೋಂದಣಿಯಿಂದ ಭೌಗೋಳಿಕ ಸೂಚಕ (GI) ಟ್ಯಾಗ್ ಪಡೆದುಕೊಂಡಿದೆ. ಅಲ್ಲದೆ ಇಲ್ಲಿ ತೆಂಗು, ಭತ್ತ, ಅಡಿಕೆ, ಕಾಳು ಮೆಣಸು,ಗೇರ ಹಣ್ಣು ಬೆಳೆವ ತಾಲೂಕು ಎಂದರೆ ಅತಿಶಯೋಕ್ತಿಯಾಗಲಾರದು.
ಸಾಲು ಸಾಲು ದೇವಾಲಯಗಳ ಬೀಡು ಅಂಕೋಲ

ಶಾಂತಾದುರ್ಗಾ ದೇವಿಯು ಅಂಕೋಲಾದ ಜನರಿಗೆ ಗ್ರಾಮ ದೇವತೆಯಾಗಿದೆ. ಇಲ್ಲಿನ ಬಂಡಿ ಹಬ್ಬವು ಧಾರ್ಮಿಕ ಆಚರಣೆಯ ಪ್ರಮುಖ ಉತ್ಸವವಾಗಿದೆ, ‘ಕೊಗ್ರೆ‘ ಬಂಡಿ ಹಬ್ಬವೂ ಪ್ರಮುಖವಾಗಿದೆ.

ಅವರ್ಸಾ ಕಾತ್ಯಾಯಿನಿ ಬಾಣೇಶ್ವರ ದೇವಾಲಯ ಡಬ್ಬು ಮಲಗಿಸಿದ ಹಡಗಿನ ಆಕಾರದಲ್ಲಿದ್ದು ಸಾವಿರಾರುವರ್ಷಗಳ ಇತಿಹಾಸ ಹೊಂದಿದೆ.

ಮರದಕೆತ್ತನೆಗೆ ಹೆಸರಾದ ಮಹಾಮಾಯಾ ದೇವಾಲಯ, ವೆಂಕಟರಮಣ ದೇವಾಲಯ, ಮಾಂಗಟೇ ಗುಡ್ಡ ಇವೆಲ್ಲ ಅಂಕೋಲಾದ ಹಿರಿಮೆಗೆ ಕೈಗನ್ನಡಿಯಾಗಿವೆ.

ಅಂಕೋಲಾ ತಾಲ್ಲೂಕಿನ ಜನಸಂಖ್ಯೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ನಾಡವರು ಬಹು ಸಂಖ್ಯಾತರು. ಹಾಗೇ ಕೋಮಾರ ಪಂಥರು ಹೆಚ್ಚಾಗಿ ಅವರ್ಸಾ, ಭಾವಿಕೇರಿ, ಬೆಲೆಕೇರಿ ಹಾಗೂ ಹಟ್ಟಿಕೇರಿ ಡೊಂಗ್ರಿ ಗ್ರಾಮಗಳಲ್ಲಿ ಇದ್ದಾರೆ. ನಾಮಧಾರಿ ಗಳು ಪಟ್ಟಣದಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ನಾಡವರು ಅಂಕೋಲಾದ ಪ್ರಭಲ ಜಾತಿ ಯಾಗಿದೆ. ಆಗೇರ, ಹಳ್ಳೇರ ಹಾಗೂ ಮುಸ್ಲಿಂ ರಲ್ಲಿ ಉರ್ದು ಸಾಮಾನ್ಯವಾಗಿದೆ. ಅಂಕೋಲೆಯ ಜನಸಾಮಾನ್ಯರಲ್ಲಿ ಕನ್ನಡ ಎಲ್ಲರ ಮೆಚ್ಚಿನ ಭಾಷೆಯಾಗಿದೆ.

ಅಂಕೋಲಾದ ಮಂಜಗುಣಿ ಮಾರ್ಗದಲ್ಲಿ ೮ ಕಿ.ಮೀ. ದೂರದಲ್ಲಿರುವ ಹನಿ ಬೀಚ್, ಬೇಲೇಕೇರಿ ಬೀಚ್ ಸಮುದ್ರ ತೀರಗಳೂ ವಿದೇಶಿ ಪ್ರವಾಸಿಗರ ಆಕರ್ಷಣೆಯ ತಾಣ ವಾಗಿದೆ. ನದಿಭಾಗ ಬೀಚ್, ಬೆಳಂಬಾರ್ ಬೀಚ್, ಶೆಡಿಕುಳಿ ಬೀಚ್, ಗಾಬಿತಕೇಣಿ ಬೀಚ್, ಹೊನ್ನೆಗುಡ್ಡ ಬೀಚ್, ಕೇಣಿ ಬೀಚ್ ಅಲ್ಲದೇ ವಿಭೂತಿ ಜಲಪಾತ ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳಾ- ಗಿವೆ. ಕರಾವಳಿ ಮುಂಜಾವು, ಇಡೀ ಜಿಲ್ಲೆ ಯಾದ್ಯಂತ ಪ್ರಸರಣ ಇರುವ ಸ್ಥಳೀಯ ದಿನಪತ್ರಿಕೆಯಾಗಿದೆ.

ಅಂಕೋಲಾ ಸಾಹಿತಿಗಳನ್ನು, ಕಲಾವಿದರನ್ನ ಜಿಲ್ಲೆಗೆ ಕೊಡುಗೆಯಾಗಿ ಕೊಟ್ಟಿದೆ. ಅವರಲ್ಲಿ ಪ್ರಮುಖರು ಶ್ರೀ ವಿಷ್ಣುನಾಯ್ಕ, ಶ್ರೀ ಶಾಂತಾ ರಾಮ ನಾಯಕ, ಶ್ರೀ ಗೋವಿಂದರಾಯ ಎಚ್.ನಾಯಕ್, ಡಾ.ಎನ್.ಆರ್. ನಾಯಕ್ ಮತ್ತು ಶಾಂತಿ ನಾಯಕ್, ಪ್ರೊ.ಎಂ.ಎಸ್. ಹಬ್ಬು, ಶ್ರೀಮತಿ ಸುನಂದಾ ಪ್ರಕಾಶ್ ಕಡಮೆ, ಪ್ರೊ.ರಾಮಕೃಷ್ಣ ಗುಂಧಿ, ಜಿ.ಯು.ನಾಯಕ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುವ ಹಿರಿಯ ವ್ಯಕ್ತಿಗಳು. ಅಲ್ಲದೆ ಉದಯೋನ್ಮುಖ ಸಾಹಿತಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿ ದ್ದಾರೆ.

ಶ್ರೀಮತಿ ಸುಕ್ರಿ ಬೊಮ್ಮುಗೌಡರವರು ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತರು. ಅವರು ಹಾಲಕ್ಕಿ ಜನಾಂಗಕ್ಕೆ ಸೇರಿದ ಜಾನಪದ ಗಾಯಕಿ. ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ, ಕಲೆಗೆ ಅವರ ಕೊಡುಗೆಗಳು ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುತ್ತಿರುವ ಕೆಲಸಕ್ಕಾಗಿ ಅವರನ್ನು “ನೈಟಿಂಗೇಲ್ ಆಫ್ ಹಲಾಕಿಸ್” ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಬುಡಕಟ್ಟು ಜನಾಂಗದ ಇವರನ್ನು ಭಾರತ ಸರ್ಕಾರ ಗೌರವ ಪೂರ್ವಕವಾಗಿ ‘ಪದ್ಮಶ್ರೀ ಪ್ರಶಸ್ತಿ’ ನೀಡಿ ಗೌರವಿಸಿದೆ.

ಶ್ರೀಮತಿ ತುಳಸಿ ಗೌಡ ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತರು. ಇವರು ಅಂಕೋಲಾ ತಾಲೂಕ ಹೊನ್ನಾಳಿ ಗ್ರಾಮದವರು.ಅವರು ಇಲ್ಲಿಯ ವರೆಗೆ 40,000 ಕ್ಕೂ ಹೆಚ್ಚು ಮರಗಳನ್ನು ಪೋಷಿಸಿದ್ದಾರೆ. 72ರ ಹರೆಯದಲ್ಲೂ ಸಸಿ ಗಳನ್ನು ನೆಟ್ಟು ಅವು ಮರವಾಗಿ ಬೆಳೆಯುವ ವರೆಗೆ ತಮ್ಮ ಮಕ್ಕಳಂತೆ ಪೋಷಿಸುವ ಸಂಕಲ್ಪ ತೊಟ್ಟಿದ್ದಾರೆ. ತುಳಸಿ ಕಳೆದ ಆರು ದಶಕಗಳಿಂದ ಯಾವುದೇ ನಿರೀಕ್ಷೆಗಳಿಲ್ಲದೆ ಇದನ್ನು ಮಾಡುತ್ತಿದ್ದಾರೆ. ತಾನು ನೆಟ್ಟ ಪ್ರತಿ ಯೊಂದು ಸಸಿಯ ಜಾತಿಗಳು, ಪ್ರತಿ ಗಿಡದ ಪ್ರಯೋಜನಗಳು ಮತ್ತು ಅವುಗಳನ್ನು ಬೆಳೆಯಲು ಬೇಕಾದ ನೀರಿನ ಪ್ರಮಾಣದ ಬಗ್ಗೆ ಆಕೆಗೆ ಜ್ಞಾನವಿದೆ. ಸಸ್ಯಗಳ ಬಗ್ಗೆ ಅವರ ಜ್ಞಾನವು ಯಾವುದೇ ಸಸ್ಯಶಾಸ್ತ್ರಜ್ಞ ರಿಗಿಂತ ಕಡಿಮೆಯಿಲ್ಲ. ಇವರಿಗೆ ಭಾರತ ಸರ್ಕಾರ ಗೌರವಪೂರ್ವಕವಾಗಿ ‘ಪದ್ಮಶ್ರೀ ಪ್ರಶಸ್ತಿ’ ನೀಡಿ ಗೌರವಿಸಿದೆ.

ಒಟ್ಟಾರೆಯಾಗಿ ಕರಾವಳಿಯ ಉದ್ದಕ್ಕೂ ಇರುವ ಅಂಕೋಲೆ ಎಂಬ ಈ ಪುಟ್ಟ ಬಾರ್ಡೋಲಿ ಇತಿಹಾಸ ಪುಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವೈವಿಧ್ಯಮಯ ಜನಾಂಗಗಳ ಜೊತೆ ವಿಶಿಷ್ಠವಾದ ಸಾಮ್ಯತೆ ಯನ್ನು ಮೈಗೂಡಿಸಿಕೊಂಡು ರಾಜ್ಯಾದ್ಯಂತ ಹೆಸರುವಾಸಿಯಾದ ಅಂಕೋಲೆಯ ಚರಿತ್ರೆ ಯನ್ನು ಮುಂದಿನ ಪೀಳಿಗೆ ಓದಿ ಅರ್ಥೈಸಿ ಕೊಳ್ಳಲು ಸಾಕಷ್ಟು ಬತ್ತಳಿಕೆಗಳನ್ನು ತನ್ನ ಕಾಲ ಗರ್ಭದಲ್ಲಿ ಬಚ್ಚಿಟ್ಟಿದೆ. ನನ್ನ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ತಾಲೂಕಿಗೆ ಇನ್ನಷ್ಟು ಸಾಧನೆಯ ಹಿರಿಮೆ ಒದಗಲೆಂಬ ಶುಭಾಶಯ…..
✍️ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ

ಬರಹದ ಬಲವರ್ಧನೆಗೆ ಹೊಸ ಹೊಸ ಚಿಂತನೆಗಳು ಅಗತ್ಯ!
ಕರ್ನಾಟಕ ಬಾರ್ಡೋಲಿ ಅಂಕೋಲಾ ಬರಹಕ್ಕೆ ಒಂದು ಅಡಿ ಟಿಪ್ಪಣೆ. ಲೇಖಕಿ ಶಿವಲೀಲಾ ಹುಣಸಗಿ. ಇವರ ಬರಹಗಳನ್ನು ನಾನು ವಾಟ್ಸ್ಯಾಪ್ ನಲ್ಲಿ ಓದಿದ್ದೇ ಹೆಚ್ಚು. ಶಿವಲೀಲಾ ಅವರ ಕವನ ಸಂಕಲಗಳನ್ನು ಓದಿದ್ದೇನೆ. ವಾಸ್ತವಿಕತೆಗೆ ನಿಷ್ಠೆಯುಳ್ಳ ಬರಹಗಳನ್ನು ಸೃಜನಾತ್ಮಕ ಅಭಿವ್ಯಕ್ತಿಯಲ್ಲಿ ಆಪ್ತಗೊಳಿಸುವ ಕಲೆ ಲೇಖಕಿ ಶಿವಲೀಲಾ ಅವರಿಗೆ ಕರಗತ ಎಂದೆನಿಸಿದೆ. ಪ್ರಸ್ತುತ ಲೇಖನ ಸವಿಸ್ತಾರ ವಿವರಣೆಗಳಿಂದ ದಿ.ದಿನಕರ ದೇಸಾಯಿಯವರ ಜೀವನ ವ್ಟತ್ತಾಂತದೊಂದಿಗೆ ಅಂಕೋಲೆಯ ಭೌಗೋಳಿಕ, ಸಾಂಸ್ಕೃತಿಕ, ಹಬ್ಬ ಹರಿದಿನಗಳ ಸ್ಥೂಲ ಪರಿಚಯ ಅಧ್ಯಯನಪೂರ್ಣವಾದುದು. ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಅಂಕೋಲೆಯ ಸಾಹಸಗಾಥೆಯ ಉಲ್ಲೇಖವೂ ಒಳಗೊಂಡಿದೆ. ಇಂಥ ಬರಹಗಳು ವಾಟ್ಸ್ಯಾಪ್ ಫೇಸ್ ಬುಕ್ ಜಾಲತಾಣದ ಇತರ ಮೂಲಗಳಿಂದ ಹರಿದು ಬರುವುದರಿಂದ ಹೆಚ್ಚು ಹೆಚ್ಚು ಓದುಗರನ್ನು ಸೆಳೆದುಕೊಳ್ಳುವುದರಲ್ಲಿ ಅನುಕೂಲವಾಗಿದೆ. ಯಾರೋ ಒಬ್ಬ ವಾಟ್ಸ್ಯಾಪ್ ಗಳಲ್ಲಿ ಬರೆಯೋದು ಬರಹಗಳಲ್ಲ ಅಂದ ನುಡಿಯ ಅಂಧತ್ವದ ನೆನಪಾಗುತ್ತದೆ. ಅಂಥವರ ಬರಹ ಅದೆಷ್ಟು ಮಂದಿಗೆ ತಲುಪಿದೆಯೋ ಗೊತ್ತಿಲ್ಲ ಆದರೆ ಇಂಥವರು ಮಾತ್ರ ತಮ್ಮ ಬರಹಕ್ಕೆ ಜಾಲತಾಣ ಬಳಸಿಕೊಳ್ಳುತ್ತಿರುವುದು ಜಾಣತನ ಎಂದೆನಿಸುತ್ತದೆ. ಒಂದು ಮಾತು ಮಾತ್ರ ನಾನು ಇಲ್ಲಿ ಹೇಳಲೇ ಬೇಕು. ಬರೆಯುವವರು ಇನ್ನಿಷ್ಟು ಸ್ವಂತಿಕೆಯಲ್ಲಿ ಹೊಸ ಹೊಸ ಬರಹಗಳ ಮಾರ್ಗವನ್ನು ಹುಡುಕಿಕೊಳ್ಳಬೇಕು. ಸಾಹಿತ್ಯದಲ್ಲಿ ಮತ್ತು ವೈಚಾರಿಕ ಚಿಂತನೆಯ ಬಲವರ್ಧನೆ ಸಾಧ್ಯವಾದೀತು ಎನ್ನುವುದೇ ನನ್ನ ಆಶಯ! ಡಿ.ಎಸ್ನಾ/೫-೦೧-೨೦೨೪.
LikeLiked by 1 person
ಶಿವಲೀಲಾ ಅವರ ದಿನಕರ ದೇಸಾಯಿ ಮತ್ತು ಅಂಕೋಲ ಕುರಿತು ಬಹಳ ಸೊಗಸಾಗಿ ಮನಮುಟ್ಟುವಂತೆ ಕಲ್ಪನೆ ಚಿತ್ರಣ ಲೇಖನವನ್ನು ರಚಿಸಿದ್ದಾರೆ ಅವರಿಗೆ ಅಭಿನಂದನೆಗಳು
LikeLiked by 1 person